ಸ್ಮಶಾನಕ್ಕಿಲ್ಲ ಜಾಗ, ಶವವಿಟ್ಟು ಪ್ರತಿಭಟನೆ

ಚಿತ್ರದುರ್ಗ: ಶವ ಸಂಸ್ಕಾರಕ್ಕೆ ಸ್ಥಳಾವಕಾಶ ಒದಗಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ತಾಲೂಕಿನ ವಿ.ಪಾಳ್ಯದ ದಲಿತ ಕಾಲನಿ ನಿವಾಸಿಗಳು ಶವ ಇಟ್ಟುಕೊಂಡು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿ ಕರಿಯಣ್ಣ ತೀರ್ಥಹಳ್ಳಿಯಲ್ಲಿ ಶುಕ್ರವಾರ ನಿಧನ ಹೊಂದಿದ್ದರು. ಅಂತಿಮ ಸಂಸ್ಕಾರಕ್ಕಾಗಿ ಅವರ ಗ್ರಾಮಕ್ಕೆ ತರಲಾಗಿತ್ತು. ಆದರೆ, ಗ್ರಾಮದಲ್ಲಿ ಸ್ಮಶಾನವಿಲ್ಲದ್ದರಿಂದಾಗಿ ಎಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ತಿಳಿಯದ ದುಃಖತಪ್ತರು, ಸೂಕ್ತ ಸ್ಥಳಾವಕಾಶಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಕೂಡಲೇ ತಹಸೀಲ್ದಾರ್ ಭೇಟಿ ನೀಡಬೇಕೆಂದು ಪಟ್ಟು ಹಿಡಿದರು.
ಗ್ರಾಮದಲ್ಲಿ ಸಾಕಷ್ಟು ಸರ್ಕಾರಿ ಜಾಗವಿದೆ. ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಮಶಾನಕ್ಕೆಂದು ಜಾಗ ಮಂಜೂರು ಮಾಡದೇ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್ ಇತರರು, ಜಾಗ ಮಂಜೂರಿಗೆ ಸೋಮವಾರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಅಂತಿಮವಾಗಿ ಕೆರೆ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ವಿ.ಪಾಳ್ಯದ ಕರಿಯಣ್ಣ ಹಲವು ವರ್ಷಗಳಿಂದ ತೀರ್ಥಹಳ್ಳಿ ಸಮೀಪದ ತೋಟವೊಂದರಲ್ಲಿ ಕೆಲಸದಲ್ಲಿದ್ದರು.