ಸಕಲೇಶಪುರ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯೊಂದಿಗೆ ಶಾಮೀಲಾಗಿರುವ ಸಹಕಾರ ಇಲಾಖೆಯ ಸಹಾಯಕ ನೋಂದಣಾಧಿಕಾರಿ ಖಾಲಿದ್ ಅಹಮ್ಮದ್ ಭ್ರಷ್ಟಾಚಾರ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಅರಕಲಗೂಡು ತಾಲೂಕು ಮಾದಲಾಪುರ ಗ್ರಾಮಸ್ಥರು ಗುರುವಾರ ಅಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆರು ತಿಂಗಳ ಹಿಂದೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಿಂದ ಸುಮಾರು 30 ಲಕ್ಷ ರೂ.ಗಳಷ್ಟು ಭ್ರಷ್ಟಚಾರ ನಡೆಸಿರುವ ಬಗ್ಗೆ ದಾಖಲೆ ಸಹಿತ ಅಧಿಕಾರಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಎದುರಿಸುತ್ತಿರುವ ಕಾರ್ಯದರ್ಶಿ ವಿರುದ್ಧ ಸಹಕಾರದ ಸಂಘದ ಆಡಳಿತ ಮಂಡಳಿ ಕಾನೂನು ಪ್ರಕಾರ ಅಮಾನತ್ತು ಮಾಡಲಾಗಿದ್ದು, ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ, ಕಾರ್ಯದರ್ಶಿಯ ದೂರು ಆಧರಿಸಿ ಯಾವುದೇ ವಿಚಾರಣೆ ನಡೆಸದೆ ಅಮಾನತಿಗೆ ಸಹಾಯಕ ನೋಂದಣಾಧಿಕಾರಿ ಖಲೀದ್ ಅಹಮ್ಮದ್ ಹಾಗೂ ಇಲಾಖೆ ನೌಕರ ಮಂಜುನಾಥ್ ಹಣ ಪಡೆದು ತಡೆಯಾಜ್ಞೆ ನೀಡಿದ್ದಾರೆ ಎಂದು ಅಧಿಕಾರಿಯ ವಿರುದ್ಧ ನೇರವಾಗಿ ಆರೋಪಿಸಿದ ಗ್ರಾಮಸ್ಥರು ಕಾರ್ಯಧರ್ಶಿ ಕಟ್ಟಡ ಕಟ್ಟಿರುವುದಾಗಿ 20 ಲಕ್ಷ ರೂ ಖರ್ಚು ತೊರಿಸಿದ್ದಾರೆ. ಆದರೆ, ಸಹಕಾರ ಇಲಾಖೆಯಿಂದ ಗ್ರಾಮದಲ್ಲಿ ಯಾವುದೇ ಕಟ್ಟಡ ನಿರ್ಮಿಸಲಾಗಿಲ್ಲ. ಒಂದು ತಿಂಗಳ ಹಾಲಿನ ಹಣವನ್ನು ಜಮೆ ಮಾಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.
ಇದಲ್ಲದೆ ಹಲವು ಅಕ್ರಮ ಎಸೆಗಿರುವ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿರುವ ಗ್ರಾಮಸ್ಥರ ಮನವಿಗೆ ಸಹಕಾರ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಕಿಮ್ಮತ್ತು ಇಲ್ಲದಾಗಿದೆ. ಕಾರ್ಯದರ್ಶಿ ಅಮಾನತ್ತು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘವನ್ನೇ ಗ್ರಾಮದಲ್ಲಿ ರದ್ದುಗೊಳಿಸುವುದಾಗಿ ಇಲಾಖೆಯ ಇಬ್ಬರು ಅಧಿಕಾರಿಗಳು ಗ್ರಾಮಸ್ಥರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೆ ಒಂದು ದಶಕದಿಂದ ಹಾಲು ಹಾಕಲಾಗುತ್ತಿದ್ದರೂ ಸಂಘದಲ್ಲಿ ದಲಿತರಿಗೆ ಸದಸ್ಯತ್ವ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕಾರ್ಯದರ್ಶಿ ಹಾಗೂ ಆಕೆಯ ಪತಿಯ ವಿರುದ್ಧ ಹಾಲು ಒಕ್ಕೂಟದ ಸದಸ್ಯರು ತೀವ್ರ ಆಕ್ರೋಶ ವ್ಯಕಪಡಿಸಿದರು.
ಈ ವೇಳೆ ಮಾತನಾಡಿದ ನಿಬಂಧಕರು, ಕಾರ್ಯದರ್ಶಿಗೆ ಮನವಿಯಂತೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಸದ್ಯ ಕಾರ್ಯದರ್ಶಿಯ ಅಮಾನತು ತಡೆಯಾಜ್ಞೆಯನ್ನು ತೆರವುಗೊಳಿಸಿ ಅಮಾನತು ಕಾಯಂಗೊಳಿಸಲಾಗಿದೆ. ಕಾರ್ಯದರ್ಶಿ ವಿರುದ್ಧದ ಭ್ರಷ್ಟಚಾರದ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂಬ ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಚೇರಿಯಿಂದೆ ಹಿನ್ನೆಡೆದರು. ಪ್ರತಿಭಟನೆ ನೇತೃತ್ವವನ್ನು ಗ್ರಾಮದ ಮುಖಂಡ ಮಂಜುನಾಥ್, ಸಂಘದ ನಿರ್ದೇಶಕರು ವಹಿಸಿದ್ದರು.