ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳು ಸಹ ಆಸ್ತಿ ಆದಾಯ ಸಂಗ್ರಹದಲ್ಲಿ ಮುಂದಿವೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ 2024-25ನೇ ಸಾಲಿನಲ್ಲಿ 505 ಕೋಟಿ ರೂ. ಅಧಿಕ ತೆರಿಗೆ ಸಂಗ್ರಹಿಸಿವೆ.
ಪ್ರಸ್ತುತ 5,950 ಗ್ರಾಮ ಪಂಚಾಯಿತಿಗಳಲ್ಲಿ 2022-23ನೇ ಸಾಲಿನಲ್ಲಿ 571 ಕೋಟಿ ರೂ., 2023-24ನೇ ಸಾಲಿನಲ್ಲಿ 767 ಕೋಟಿ ರೂ. ಮತ್ತು 2024-25ನೇ ಸಾಲಿನಲ್ಲಿ 1,272 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡಿವೆ. ಈ ಪೈಕಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಯಿಂದಲೇ ಶೇ.30 ಆಸ್ತಿ ತೆರಿಗೆ ಕ್ರೋಡೀಕರಣವಾಗುತ್ತಿದೆ ಎಂದು ಗ್ರಾಮೀಣಾ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂಕಿಅಂಶಗಳಿಂದ ಬಹಿರಂಗವಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವ 85 ಗ್ರಾಮ ಪಂಚಾಯಿತಿಗಳಿಂದ 296 ಕೋಟಿ ರೂ. ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಇರುವ 101 ಗ್ರಾಮ ಪಂಚಾಯಿತಿಗಳಿಂದ 120 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ.
ಆದರೆ, ರಾಮನಗರ ಜಿಲ್ಲೆ ರಾಮನಗರ ತಾಲೂಕಿನ ಮಂಚನಾಯನಕಹಳ್ಳಿ ಗ್ರಾಮ ಪಂಚಾಯಿತಿ 2024-25ನೇ ಸಾಲಿನಲ್ಲಿ 18.37 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ.
ಬಿಡದಿ ಕೈಗಾರಿಕಾ ಪ್ರದೇಶ ಇದರ ವ್ಯಾಪ್ತಿಯಲ್ಲಿ ಇರುವ ಕಾರಣಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ 18.19 ಕೋಟಿ ರೂ. ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಅನ್ನೇಶ್ವರ ಗ್ರಾಮ ಪಂಚಾಯಿತಿ 15.03 ಕೋಟಿ ರೂ. ಸಂಗ್ರಹ ಮಾಡುವ ಮೂಲಕ 2 ಮತ್ತು 3ನೇ ಸ್ಥಾನದಲ್ಲಿವೆ. ಆದರೆ, 2023-24ನೇ ಸಾಲಿನಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ 16.09 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿ ಇತ್ತು.
ಇದೇ ವೇಳೆ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ 15.51 ಕೋಟಿ ರೂ. ವಸೂಲಿಗೆ ತೃಪ್ತಿಪಟ್ಟು 2ನೇ ಸ್ಥಾನದಲ್ಲಿತ್ತು. ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 350 ಕೈಗಾರಿಕೆಗಳು ಇದ್ದು, ಇದರಿಂದ ಹೆಚ್ಚಿನ ಆದಾಯ ಬರಲಿದೆ. ಅದೇ ರೀತಿಯಾಗಿ ಅನ್ನೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಾರಣಕ್ಕೆ ಅದರ ಖಜಾನೆಗೂ ಹೆಚ್ಚು ಹೆಚ್ಚು ಆಸ್ತಿ ತೆರಿಗೆ ತುಂಬುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾ ಪಂ ಆದಾಯವೂ ಖೋತಾ :
ಕೈರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ತಂದು ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಆರ್ಥಿಕ ವಲಯ ಎಂದು ೋಷಣೆ ಮಾಡಿವೆ. ಈ ಪ್ರದೇಶದ ಅಭಿವೃದ್ಧಿ ಮತ್ತು ತೆರಿಗೆ ಸಂಗ್ರಹವನ್ನು ಕೆಐಎಡಿಬಿಯೇ ವಹಿಸಿಕೊಳ್ಳುವ ಪರಿಣಾಮ ಕೆಲ ಗ್ರಾಮ ಪಂಚಾಯಿತಿಗಳಿಗೆ ಆದಾಯ ಖೋತಾ ಆಗಲಿದೆ. ಮಂಚನಾಯಕನಹಳ್ಳಿ, ಅನ್ನೇಶ್ವರ ಮತ್ತು ಹೆನ್ನಾಗರ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ಆದಾಯಕ್ಕೆ ಕತ್ತರಿ ಬೀಳಲಿದೆ.
ಬಾಕಿ ತೆರಿಗೆಯೂ ಹೆಚ್ಚಿದೆ :
ರಾಜ್ಯದ 5950 ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ಆಗುತ್ತಿರುವ 1272 ಕೋಟಿ ರೂ. ಗಿಂತ ಬಾಕಿ ಇರುವ ಪಾಲು ಹೆಚ್ಚಾಗಿದೆ. ಪ್ರಸ್ತುತ 2657 ಕೋಟಿ ರೂ. ಬಾಕಿ ಉಳಿದಿದೆ. ಇದನ್ನು ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿವೆ.
ರಾಜ್ಯದ ಹೆಚ್ಚು ತೆರಿಗೆ ಸಂಗ್ರಹವಾಗುವ ಮೊದಲ 10 ಗ್ರಾ.ಪಂಚಾಯಿತಿ (ಕೋಟಿ ರೂ.ನಲ್ಲಿ)
————————————————————–
ಜಿಲ್ಲೆ ತಾಲೂಕು ಗ್ರಾ ಪಂ 2024 -25 2023-24 2022-23
—————————————————————-
ರಾಮನಗರ ರಾಮನಗರ ಮಂಚನಾಯಕನಹಳ್ಳಿ 18.37 15.51 11.06
ಬೆಂಗಳೂರು ನಗರ ಆನೇಕಲ್ ಹೆನ್ನಾಗರ 18.19 16.09 6.05
ಬೆಂ. ಗ್ರಾಮಾಂತರ ದೇವನಹಳ್ಳಿ ಅನ್ನೇಶ್ವರ 15.03 10.01 6.11
ಬೆಂಗಳೂರು ನಗರ ಆನೇಕಲ್ ನೇರಲೂರು 10.46 7.97 2.93
ಬೆಂಗಳೂರು ನಗರ ಆನೇಕಲ್ ಯಮರೆ 10.35 7.49 5.48
ಬೆಂಗಳೂರು ನಗರ ಯಲಹಂಕ ಬಂಡಿಕೊಡಗೇಹಳ್ಳಿ 9.10 6.03 3.78
ಬೆಂಗಳೂರು ನಗರ ಆನೇಕಲ್ ಕಲ್ಲುಬಾಳು 8.79 5.34 1.94
ಬೆಂ.ಗ್ರಾಮಾಂತರ ದೇವನಹಳ್ಳಿ ಕನ್ನಮಂಗಲ 8.55 6.13 5.56
ಬೆಂಗಳೂರು ನಗರ ಬೆಂ. ದಕ್ಷಿಣ ಕುಂಬಳಗೋಡು 8.53 5.88 2.28
ಬೆಂಗಳೂರು ನಗರ ಬೆಂ. ಪೂರ್ವ ಸೀಗೆಹಳ್ಳಿ 8.38 6.01 3.05