More

    ಸ್ತ್ರೀ ಸಬಲೀಕರಣಕ್ಕೆ ಗ್ರಾಮ ಪಂಚಾಯತ್ ಹಣ: ಸ್ಥಳೀಯ ಅನುದಾನದಲ್ಲಿ ಶೇ.5 ಬಳಕೆ; ವಿವಿಧ ಕಾರ್ಯಕ್ರಮ ಆಯೋಜನೆ

    | ವಿಲಾಸ ಮೇಲಗಿರಿ ಬೆಂಗಳೂರು 
    ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಮತ್ತೊಂದು ದೃಢ ಹೆಜ್ಜೆ ಇಟ್ಟಿದ್ದು, ಗ್ರಾಮ ಮಟ್ಟದಿಂದಲೇ ಸ್ತ್ರೀ ಸುರಕ್ಷತೆ, ಸ್ವಾವಲಂಬನೆಗೆ ಅಡಿಪಾಯ ಹಾಕುತ್ತಿದೆ. ಅದಕ್ಕೆ ಪೂರಕವಾಗಿ ಸಂಪನ್ಮೂಲ ವಿನಿಯೋಗಕ್ಕೂ ಮುಂದಾಗಿದೆ.

    ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳಿಗೆ ತಳಮಟ್ಟದಲ್ಲಿ ಸಂಪನ್ಮೂಲ ಸಂಗ್ರಹ ಹಾಗೂ ವಿನಿಯೋಗ ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ಗ್ರಾಮ ಪಂಚಾಯಿತಿಗಳಲ್ಲೇ ಅನುದಾನ ನಿಗದಿಪಡಿಸಿದೆ. ಗ್ರಾಮ ಪಂಚಾಯಿತಿಗಳು ನಿರ್ವಹಿಸುತ್ತಿರುವ ಎಲ್ಲ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನದಲ್ಲಿ ಶೇ.5 ಅನ್ನು ಸ್ತ್ರೀಸಬಲೀಕರಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುವಂತೆ ಸ್ಪಷ್ಟ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದಲ್ಲಿ 6022 ಗ್ರಾಮ ಪಂಚಾಯಿತಿಗಳಿದ್ದು, ಈ ಹಂತದಿಂದಲೇ ಮಹಿಳೆಯರಿಗೆ ಶಕ್ತಿ ತುಂಬುವ ಹಿನ್ನೆಲೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಪೋಷಣೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಮಹಿಳಾ ಗ್ರಾಮಸಭೆ ನಡೆಸಿ ಅಹವಾಲು ಆಲಿಕೆ, ಆರೋಗ್ಯ ರಕ್ಷಣಾ ಕಾರ್ಯಕ್ರಮಗಳ ಅನುಷ್ಠಾನ, ಸ್ವಾಬಲಂಬನೆಗೆ ತರಬೇತಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸ್ಥಳೀಯವಾಗಿಯೇ ಆಯೋಜಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ನಿರ್ದೇಶನ ನೀಡಿದೆ.

    ಅನುದಾನ ಎಲ್ಲಿಂದ?: ಗ್ರಾಮ ಪಂಚಾಯಿತಿಗಳು ನಿರ್ವಹಿಸುತ್ತಿರುವ ಅನಿರ್ಬಂಧಿತ ಹಾಗೂ ಸ್ವಂತ ನಿಧಿಯಲ್ಲಿರುವ ಅನುದಾನದ ಶೇ.5 ಅನ್ನು ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುವಂತೆ ಸ್ಪಷ್ಟ ಆದೇಶ ನೀಡಲಾಗಿದೆ.

    ಸ್ವಂತ ಸಂಪನ್ಮೂಲ ಹೇಗೆ? ಎಷ್ಟು?: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಆದಾಯ ವಾರ್ಷಿಕ ಸುಮಾರು 1600 ಕೋಟಿ ರೂ. ಇದೆ. ಅದರ ಶೇ.5 ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಅನಿರ್ಬಂಧಿತ ಅನುದಾನದಲ್ಲಿ ಶೇ.5 ಸೇರಿ ಒಟ್ಟು ವಾರ್ಷಿಕ 100 ಕೋಟಿ ರೂ. ಮೊತ್ತವನ್ನು ಮಹಿಳಾ ಸಬಲೀರಕರಣಕ್ಕೆ ವ್ಯಯಿಸಲು ಉದ್ದೇಶಿಸಲಾಗಿದೆ.

    ಗ್ರಾಮ ಪಂಚಾಯಿತಿ ಆದಾಯದಲ್ಲಿ ಶೇ.5 ಅನ್ನು ಮಹಿಳಾ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಬಹುತೇಕ ಗ್ರಾಮ ಪಂಚಾಯಿತಿಗಳ ಸ್ವಂತ ಆದಾಯ ಪ್ರಮಾಣ ಕಡಿಮೆ ಇದೆ. ಹಾಗಾಗಿ ಸರ್ಕಾರ ಕೂಡ ತತ್ಸಮಾನ ಅನುದಾನವನ್ನು ನೀಡಬೇಕು.

    | ಚೈತ್ರಾ ಮೋಹನ್, ಅಧ್ಯಕ್ಷರು, ಹಸೂಡಿ ಗ್ರಾಮ ಪಂಚಾಯಿತಿ, ಶಿವಮೊಗ್ಗ ಜಿಲ್ಲೆ

    ಏನೇನು ಮಾಡಲಾಗುತ್ತದೆ?

    • ಮಹಿಳಾ ಗ್ರಾಮಸಭೆಗಳು: ಮಹಿಳಾ ಗ್ರಾಮಸಭೆ ಗಳ ಮೂಲಕ ಮಹಿಳೆಯರ ಕುಂದು- ಕೊರತೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಮಾಗೋಪಾಯ ಹುಡುಕುವ ಪ್ರಯತ್ನ ಆಗಲಿದೆ.
    • ದೌರ್ಜನ್ಯ ಮುಕ್ತ ಅಭಿಯಾನ: ಗ್ರಾಮ ಪಂಚಾಯಿತಿಗಳು ಮಹಿಳೆಯರ ಸಂರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಮಹಿಳಾ ದೌರ್ಜನ್ಯ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳುವ ಜತೆಗೆ ಸುರಕ್ಷತಾ ಕ್ರಮಗಳನ್ನು ತಿಳಿಸಿಕೊಡುವ ಪ್ರಯತ್ನ ಇದರಲ್ಲಿದೆ.
    • ಶಾಲೆ ಬಿಡುವುದಕ್ಕೆ ಕಡಿವಾಣ: ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧ ದಲ್ಲಿಯೇ ಬಿಡುವುದು, ಶಾಲೆಯಿಂದ ಹೊರಗುಳಿಯುವುದು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು. ಈ ಸಂಖ್ಯೆ ಕಡಿಮೆ ಮಾಡಲು ಪೂರಕವಾಗಿ ಕಾರ್ಯಕ್ರಮ ಹಾಗೂ ಬಾಲ್ಯವಿವಾಹ ತಡೆಗೆ ಅರಿವು ಮೂಡಿಸಲಾಗುತ್ತದೆ.
    • ಶುಚಿತ್ವ, ಆರೋಗ್ಯ: ಶುಚಿತ್ವ ಕಾಯ್ದುಕೊಳ್ಳುವ ದೃಷ್ಟಿಯಿಂದ ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬದಲು ಮುಟ್ಟಿನ ಕಪ್ ಬಳಸಲು ಕೂಡ ಈ ಅಭಿಯಾನದಲ್ಲಿ ಪೋ›ತ್ಸಾಹಿಸಲಾಗುತ್ತದೆ. ಅಷ್ಟೇ ಅಲ್ಲ, ಮಹಿಳೆಯರನ್ನು ಬಾಧಿಸಬಹುದಾದ ಪ್ರಮುಖ ಕಾಯಿಲೆಗಳ ಬಗ್ಗೆ ಮಾಹಿತಿ ಹಾಗೂ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ.
    • ಆಂತರಿಕ ದೂರು ಸಮಿತಿ: ಗ್ರಾಪಂ ವ್ಯಾಪ್ತಿಯ ಶಿಕ್ಷಣ ಸಂಸ್ಥೆ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳ ತಡೆಗಟ್ಟಲು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013ರ ಅನ್ವಯ ಆಂತರಿಕ ದೂರು ಸಮಿತಿ ರಚನೆ ಆಗಲಿವೆ.
    • ಕೂಸಿನ ಮನೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು, ದುಡಿಯುವ ಮಹಿಳೆಯರಿಗೆ ಪೂರಕ ವಾತಾವರಣ ಹಾಗೂ ಸೌಕರ್ಯಗಳನ್ನು ಕಲ್ಪಿಸಲು ಕೂಸಿನ ಮನೆ ಹೆಸರಿನಲ್ಲಿ ಶಿಶುಪಾಲನ ಕೇಂದ್ರಗಳನ್ನು ತೆರೆಯಲಾಗುತ್ತದೆ.

     

    ಪ್ರಧಾನಿ ಮೋದಿಯನ್ನು ‘ಖಿಲಾಡಿ ನಂ. 1’ ಎಂದು ಕರೆದ ನಟ ಪ್ರಕಾಶ್ ರಾಜ್

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts