ವಿಜ್ಞಾನದಿಂದ ಗ್ರಾಮಾಭಿವೃದ್ಧಿ

ಬೆಳ್ತಂಗಡಿ: ನಾವು ವಿಜ್ಞಾನದ ದಾಸರಾಗಬಾರದು, ವಿಜ್ಞಾನ ನಮ್ಮ ಅಧೀನವಿರಬೇಕು. ವಿಜ್ಞಾನ ಅಧಿನದಲ್ಲಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ ವತಿಯಿಂದ ಪ್ರಕಟವಾಗಿರುವ ಬಾಲಿಗದ್ದೆ ಡಾ.ಶ್ರೀಧರ ಭಟ್ ಸಂಪಾದಿಸಿರುವ ‘ಗ್ರಾಮೀಣಾಭಿವೃದ್ಧಿ ಕೊಡ್ಗಿ ಚಿಂತನೆಗಳು’ ಗ್ರಂಥ ಬಿಡುಗಡೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಳ್ಳಿಗಳ ಅಭಿವೃದ್ಧಿ ಹೇಗೆ ಮಾಡಬೇಕು ಎಂದು ಚಿಂತಿಸಿದವರು ಕೊಡ್ಗಿಯವರು. ಇದಕ್ಕೆ ಸಮಾನವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಅಭಿವೃದ್ಧಿ ಬಯಸಿ ಕಾರ್ಯನಿರ್ವಹಿಸುತ್ತಿದೆ. ಕೊಡ್ಗಿಯವರ ಚಿಂತನೆಯನ್ನು ಯುವ ಜನಾಂಗ ಮುಂದುವರಿಸುವ ಅಗತ್ಯವಿದೆ ಎಂದರು.

ಎ.ಜಿ. ಕೊಡ್ಗಿ ಮಾತನಾಡಿದರು. ಧರ್ಮಸ್ಥಳ ಸುರೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.
ಡಾ.ಶ್ರೀಧರ ಭಟ್ ಪುಸ್ತಕದ ಮಾಹಿತಿ ನೀಡಿದರು. ಹೇಮಾವತಿ ವಿ.ಹೆಗ್ಗಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು. ಡಾ.ಎಂ.ಪಿ.ಶ್ರೀನಾಥ್ ವಂದಿಸಿದರು. ಧ.ಗ್ರಾ. ಯೋಜನೆಯ ನಿದೇರ್ಶಕ ಪ್ರಕಾಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಕೊಡ್ಗಿ ಕೃಷಿ ಸಂಸ್ಕೃತಿಯ ಭೀಷ್ಮ : ಕೃಷಿ ಋಷಿ ಎ.ಜಿ.ಕೊಡ್ಗಿ ಕೃಷಿಯಲ್ಲಿ ತೊಡಗಿಸಿಕೊಂಡು ಅಪಾರ ಅನುಭವ ಪಡೆದವರು. ಗ್ರಾಮಿಣಾಭಿವೃದ್ಧಿ ಕೊಡ್ಗಿ ಚಿಂತನೆಗಳು ಕೃತಿ ಆಳವಾಗಿ ಅಧ್ಯಯನ ಮಾಡಬೇಕಾದ ಆಕರ ಗ್ರಂಥ. ಕೊಡ್ಗಿಯವರು ಕೃಷಿ ಸಂಸ್ಕೃತಿಯ ಭೀಷ್ಮಾಚಾರ್ಯ. ಕರ್ಣಾಟಕ ಬ್ಯಾಂಕ್ ದತ್ತು ಪಡೆದ ಅಮಾಸೆಬೈಲು ಗ್ರಾಮ ಇಂದು ಪೂರ್ಣ ಸೋಲಾರ್ ಗ್ರಾಮವಾಗಿ ಪರಿವರ್ತನೆಗೊಂಡ ದೇಶದ ಏಕೈಕ ಮಾದರಿ ಗ್ರಾಮ ಎಂದು ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಕೃಷಿ, ಕೈಗಾರಿಕೆಗಳ ವಿಶೇಷ ಆರ್ಥಿಕ ವಲಯ ನಿರ್ಮಾಣವಾದಲ್ಲಿ ಮೂಲಸೌಕರ್ಯಗಳ ಪೂರೈಕೆಯೊಂದಿಗೆ ಎಲ್ಲರಿಗೂ ಉದ್ಯೋಗಾವಕಾಶ ದೊರೆಯುತ್ತದೆ. ಆ ಮೂಲಕ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ತಮ್ಮ ಪುಸ್ತಕದಲ್ಲಿ ಸಲಹೆ ನೀಡಿದ್ದಾರೆ.
ಮಹಾಬಲೇಶ್ವರ ಎಂ.ಎಸ್., ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ