ಮಡಿಕೇರಿ: ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳ ಪರಿಹಾರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾ ಘಟಕದಿಂದ ೨ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಸೋಮವಾರ ನಡೆಯಿತು.
ಈ ಹಿಂದೆ ಮುಷ್ಕರ ನಡೆಸಿದರೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾನಿರತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಅಕ್ಷತಾ ಬಿ.ಶೆಟ್ಟಿ, ನಾವು ಇಂದು ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದೇವೆ. ಈ ಹಿಂದೆ ಮೊದಲನೇ ಹಂತದಲ್ಲಿ ಹೋರಾಟ ಮಾಡಿ ನಮ್ಮ ಬೇಡಿಕೆ ಈಡೇರಿಸುವಂತೆ ಪರಿಪರಿಯಾಗಿ ವಿನಂತಿ ಮಾಡಿದ್ದೇವೆ. ಸರಕಾರ ಸಮಿತಿ ರಚನೆ ಮಾಡಿ ನಮ್ಮ ಬೇಡಿಕೆ ಈಡೇರಿಸುದಾಗಿ ಹೇಳಿತು. ಮುಂದೆ ಸಮಿತಿ ರಚಿಸಿದರೂ ನಮ್ಮವರೂ ಯಾರನ್ನು ಸಮಿತಿಯಲ್ಲಿ ತೆಗೆದುಕೊಂಡಿಲ್ಲ. ನಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಲಭೂತ ಸೌಲಭ್ಯಗಳೇ ನಮ್ಮಲ್ಲಿ ಇಲ್ಲ. ಹೀಗಿದ್ದಾಗ ಏಕಕಾಲದ ಪ್ರಗತಿ ಕೇಳಿದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಇಂದು ನಮ್ಮಲ್ಲಿ ಮೊಬೈಲ್, ಕಚೇರಿಗಳೇ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಮಾತ್ರವಲ್ಲದೇ ನಮ್ಮ ಬೇಡಿಕೆ ಈಡೇರಿಸುವವರಿಗೆ ಹೋರಾಟದಿಂದ ಹಿಂದೆ ಸರಿಯುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ್, ಖಜಾಂಚಿ ರವಿಚಂದ್ರ, ಉಪಾಧ್ಯಕ್ಷ ಹರೀಶ್ ಕುಮಾರ್ ತಾಲೂಕು ಅಧ್ಯಕ್ಷರುಗಳಾದ ಸಂದೀಪ್ ಶೆಣೈ, ಕೃಷ್ಣ, ಬಸನಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.