ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮ ಲೆಕ್ಕಿಗರ ಒತ್ತಾಯ

ವಿಜಯಪುರ: ಅನ್ಯ ಇಲಾಖೆ ಕಾರ್ಯಚಟುವಟಿಕೆಗಳ ಒತ್ತಡದಿಂದ ಮುಕ್ತಗೊಳಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳು ಆಗ್ರಹಿಸಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಬುಧವಾರ ತಮ್ಮ ಕರ್ತವ್ಯದಿಂದ ದೂರ ಉಳಿದು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಆವರಣದ ಮುಂದೆ ಸಾಂಕೇತಿಕ ಮುಷ್ಕರ ನಡೆಸಿದರು.
ಸಂಘದ ಅಧ್ಯಕ್ಷ ಆರ್.ಬಿ. ಬಡಿಗೇರ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನ್ಯ ಇಲಾಖೆಯ ಕೆಲಸವನ್ನು ವಹಿಸಲಾಗುತ್ತಿದೆ. ಅದರಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳು ಕೆಲಸದ ಒತ್ತಡವನ್ನು ಅನುಭವಿಸುವಂತಾಗಿದೆ. ರಜೆದಿನಗಳಲ್ಲಿಯೂ ಕೆಲಸದ ಒತ್ತಡ ಅಧಿಕವಾಗಿದ್ದು, ಅದರಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ ಎಂದರು.
ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು ಒಂದು ಸಾವಿರ ರೂ.ಗೆ ಏರಿಕೆ ಮಾಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನಿರ್ಧರಿಸಿದ್ದರು. ಆದರೆ ಸರ್ಕಾರ ಕೇವಲ 300 ರೂ.ಗಳನ್ನು ಮಾತ್ರ ಏರಿಕೆ ಮಾಡಿದೆ. ಅದನ್ನು ಮಾರ್ಪಾಡು ಮಾಡಿ ಕೂಡಲೇ ಪ್ರಯಾಣ ಭತ್ಯೆ ದರವನ್ನು ಒಂದು ಸಾವಿರ ರೂ.ಗೆ ಏರಿಕೆ ಮಾಡುವಂತೆ ಒತ್ತಾಯಿಸಿದರು.
ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ಕಡಿತಗೊಳಿಸಬೇಕು. ರಜೆದಿನದಲ್ಲಿ ಯಾವುದೇ ಹೆಚ್ಚುವರಿ ಕೆಲಸಗಳನ್ನು ನೀಡದಂತೆ ಸ್ಪಷ್ಟ ಸೂಚನೆ ನೀಡಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲಾಖೆಯ ದ್ವಿತೀಯ ದರ್ಜೆ ಸಹಾಯಕ, ಗ್ರಾಮ ಲೆಕ್ಕಿಗರ ಜೇಷ್ಠತೆಯನ್ನು ಒಟ್ಟುಗೂಡಿಸಿ ಪದವಿ ನವೀಕರಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಪರಿಷ್ಕೃತ ಜಾಬ್ ಚಾರ್ಟ್ ನೀಡುವುದು, ಗ್ರಾಮ ಲೆಕ್ಕಿಗರನ್ನು ಕೂಡಲೇ ಕಾಯಂಗೊಳಿಸುವುದು, ಮರಳು ಮಾಫಿಯಾದಿಂದ ಹತ್ಯೆಗೀಡಾಗಿರುವ ಗ್ರಾಮ ಲೆಕ್ಕಾಧಿಕಾರಿ ದಿ.ಸಾಹೇಬ್ ಪಾಟೀಲ ಅವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಲೋಕೂರಿ, ಆರ್.ಎಚ್. ಗೋಸಾಂವಿ, ಬಿ.ಎಸ್. ಪಾಟೀಲ, ಪಿ.ಜೆ. ಕೊಡಹೊನ್ನ, ಆರ್.ಆರ್. ಕಾಂಬಳೆ, ಟಿ.ಎಚ್. ಸಾರವಾನ, ಜಗದೀಶ ಹಂಗರಗಿ, ಎಸ್.ಕೆ. ರಾಠೋಡ, ಎಚ್.ಕೆ. ಬಿಳೇಕುದರಿ, ಎಂ.ಆರ್. ರಾಠೋಡ, ಬಿ.ಬಿ. ಕಮತ, ಶಿವಾನಂದ ಅಂಗಡಿ, ಸಂತೋಷ ವಾಲೀಕಾರ, ಎಸ್.ಪಿ. ಮುಲ್ಲಾ, ವಿಜಯಕುಮಾರ ಅಡಿಹುಡಿ, ಬಿ.ಆರ್. ಶೀಲವಂತ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *