ಚೀನಾಕ್ಕೆ ಭಾರತದ ರಾಯಭಾರಿಯಾಗಿ ವಿಕ್ರಂ ಮಿಶ್ರಿ ನೇಮಕ

ಬೀಜಿಂಗ್​: ಭಾರತದ ನೂತನ ಚೀನಾ ರಾಯಭಾರಿಯಾಗಿ ಸೋಮವಾರ ವಿಕ್ರಂ ಮಿಶ್ರಿ ಅವರು ನೇಮಕಗೊಂಡಿದ್ದು, ನಂತರ ಚೀನಾದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಭಾರತ-ಚೀನಾ ಒಪ್ಪಂದಗಳ ಸಂಬಂಧ ಚರ್ಚಿಸಿದ್ದಾರೆ.

ಮಿಶ್ರಿ ಅವರು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಯಭಾರಿ ಜನರಲ್​ ಉಪನಿರ್ದೇಶಕ ಹಾಂಗ್​ ಲೀ ಅವರನ್ನು ಭೇಟಿಯಾಗಿ ತಮ್ಮ ಪರಿಚಯಪತ್ರವನ್ನು ನೀಡಿದ್ದಾರೆ. ಅಲ್ಲದೆ, ಚೀನಾದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಗಡಿ ಒಪ್ಪಂದದ ಬಗ್ಗೆ ಚರ್ಚಿಸಿದ್ದಾರೆ.

ಚೀನಾ ವಿದೇಶಾಂಗ ವ್ಯವಹಾರಗಳ ಏಷಿಯನ್​ ವ್ಯವಹಾರಗಳ ನಿರ್ದೇಶಕ ವು ಜಿಯಾಂಘೋ ಅವರ ಬಳಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಿದ್ದಾರೆ ಎಂದು ಭಾರತದ ರಾಯಭಾರಿ ಕಚೇರಿ ಟ್ವೀಟ್​ ಮಾಡಿದೆ.

ವಿಕ್ರಂ ಮಿಶ್ರಿ(54) 1989ನೇ ಬ್ಯಾಚ್​ನ ಐಎಫ್​ಎಸ್​ ಅಧಿಕಾರಿ. ಈ ಹಿಂದೆ ರಾಯಭಾರಿಯಾಗಿದ್ದ ಗೌತಮ್​ ಬಾಂಬಾವಾಲೆ ನವೆಂಬರ್​ನಲ್ಲಿ ನಿವೃತ್ತರಾಗಿದ್ದರು.

ಮಿಶ್ರಿ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯಕಚೇರಿಗಳಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಪ್ರಧಾನಿ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.