More

    ಹಿರಿಯರಿಗೆ ಚೈತನ್ಯ ತುಂಬಲು ವಿಕಸನ ಕೇಂದ್ರ: ರಾಜ್ಯದಲ್ಲಿ ಪ್ರಥಮ ಪ್ರಯೋಗ

    | ಗಂಗಾಧರ್ ಬೈರಾಪಟ್ಟಣ ರಾಮನಗರ

    ಗ್ರಾಮೀಣ ಭಾಗದಲ್ಲಿ ಒಂಟಿತನಕ್ಕೆ ಸಿಲುಕಿರುವ ಹಿರಿಯ ಜೀವಗಳ ಆರೈಕೆಗೆ ಅನುಕೂಲವಾಗುವಂತೆ ಅಂಗನವಾಡಿ ಮಾದರಿಯಲ್ಲೇ ವಿಶ್ರಾಂತಿ ಕೇಂದ್ರಗಳನ್ನು ಜಿಪಂ ಮೂಲಕ ತೆರೆಯಲಾಗುತ್ತಿದ್ದು, ರಾಜ್ಯದಲ್ಲಿಯೇ ಪ್ರಥಮ ಪ್ರಯೋಗ ಇದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಯುವ ಸಮುದಾಯ ನಗರ ಪ್ರದೇಶಗಳತ್ತ ತೆರಳುತ್ತಿದ್ದು, ಮನೆಯಲ್ಲಿ ಹಿರಿಯರು ಒಂಟಿಯಾಗಿ ಜೀವನ ನಡೆಸುವಂಥ ಪರಿಸ್ಥಿತಿ ನಿರ್ವಣವಾಗಿದೆ. ಇದರಿಂದಾಗಿ ಒಂಟಿತನ, ಬೇಸರ, ಖಿನ್ನತೆಗೆ ಒಳಗಾಗುತ್ತಿದ್ದು, ಇದರಿಂದ ಹಿರಿಯರನ್ನು ಹೊರತರುವ ಉದ್ದೇಶದಿಂದ ವಿಕಸನ ಕೇಂದ್ರ ತೆರೆಯಲಾಗುತ್ತಿದೆ.

    ಹಿರಿಯರಿಗೆ ನೆಮ್ಮದಿಯಿಂದ ಕಾಲ ಕಳೆಯಲು ಅವಕಾಶ ಮಾಡಿಕೊಡುವ ಜತೆಗೆ, ಆರೋಗ್ಯ ರಕ್ಷಣೆಗೆ ಒತ್ತು ನೀಡುವುದು, ಅನುಭವ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಯೋಜಿತ ರೀತಿಯಲ್ಲಿ ಕಿರಿಯರಿಗೆ ವರ್ಗಾವಣೆ ಮಾಡುವುದು, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆದಾಯ ಗಳಿಸುವುದು, ಕುಟುಂಬದ ಮೇಲೆ ಧನಾತ್ಮಕ ಪರಿಣಾಮ ಉಂಟು ಮಾಡುವುದು, ಸಾಮರ್ಥ್ಯ ವ್ಯರ್ಥವಾಗದಂತೆ ಬಳಸಿಕೊಳ್ಳುವುದು ಈ ಕೇಂದ್ರಗಳ ಸ್ಥಾಪನೆಯ ಪ್ರಾಥಮಿಕ ನಿರೀಕ್ಷೆಗಳಾಗಿವೆ. ರಾಮನಗರ ತಾಲೂಕಿನ ಗೋಪಹಳ್ಳಿ ಗ್ರಾಪಂನ ಹುಚ್ಚಮ್ಮನದೊಡ್ಡಿ ಗ್ರಾಮ, ಸುಗ್ಗನಹಳ್ಳಿ ಗ್ರಾಪಂ ಬೊಮ್ಮಚನಹಳ್ಳಿ ಗ್ರಾಮದಲ್ಲಿ 2ನೇ ಕೇಂದ್ರ ಉದ್ಘಾಟನೆ ಮಾಡಲಾಗಿದೆ.

    ಸರ್ಕಾರಿ ಕಟ್ಟಡಗಳೇ ಕೇಂದ್ರಗಳು: ಕೇಂದ್ರಗಳನ್ನು ಗ್ರಾಮಗಳಲ್ಲಿ ಬಳಕೆ ಮಾಡದೇ ಇರುವ ಕಟ್ಟಡಗಳಲ್ಲಿ ತೆರೆಯಲಾಗುತ್ತಿದೆ. ಗ್ರಾಮದಲ್ಲಿರುವ ಅಂಬೇಡ್ಕರ್ ಭವನ, ಸಮುದಾಯ ಭವನ, ಭಜನಾ ಮಂದಿರ ಸೇರಿ ಇತರ ಯಾವುದೇ ಇಲಾಖೆ ಕಟ್ಟಡಗಳನ್ನು ಜೀಣೋದ್ಧಾರ ಮಾಡಿ ವಿಕಸನ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಪೀಠೋಪಕರಣ, ಟಿವಿ, ಪುಸ್ತಕ, ಕೇರಂ, ಚೆಸ್ ಮೊದಲಾದ ಒಳಾಂಗಣ ಕ್ರೀಡಾ ಸಾಮಗ್ರಿಗಳು, ಶೌಚಾಲಯ, ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುತ್ತಿದೆ. ಇದಕ್ಕಾಗಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಾಪಂ, ದಾನಿಗಳ ಒಗ್ಗೂಡಿಸುವಿಕೆ, ಪ.ಜಾತಿ, ಪಂಗಡ ಪ್ರದೇಶಗಳಿದ್ದಲ್ಲಿ ಶೇ.25ರ ಮೀಸಲು ಅನುದಾನ ಬಳಸಿಕೊಳ್ಳಲಿದೆ. ಶೌಚಗೃಹ ರ್ಯಾಂಪ್​ಗಳನ್ನು ಶೇ.5 ರ ಅನುದಾನದಲ್ಲಿ ನಿರ್ವಿುಸಲಿದೆ.

    ಗ್ರಾಮೀಣ ಹಿರಿಯ ನಾಗರಿಕರ ಅನುಕೂಲಕ್ಕಾಗಿ ವಿಕಸನ ಕೇಂದ್ರ ತೆರೆಯಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಅನುದಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

    | ಇಕ್ರಮ್ ಜಿಪಂ ಸಿಇಒ, ರಾಮನಗರ ಜಿಲ್ಲಾ ಪಂಚಾಯತ್

    ಹಿರಿಯರಿಗಷ್ಟೇ ಸೀಮಿತ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರವೇ ಪ್ರವೇಶವಿದ್ದು, ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ವಿದ್ಯಾರ್ಥಿಗಳು ಪುಸ್ತಕ ವಿಭಾಗ ಬಳಸಿಕೊಳ್ಳಲು ಹಿರಿಯರೊಂದಿಗೆ ಯೋಜಿತ ಸಂವಾದ ನಡೆಸಲು ಅವಕಾಶ ನೀಡಲಾಗಿದೆ.

    ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!; ಕರುಳು ಕಾಯಿಲೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ..

    ಪಠ್ಯ ಪುಸ್ತಕ ವಿವಾದ: ಏನನ್ನು ಸೇರಿಸಲಾಗಿದೆ, ಯಾವುದನ್ನು ಕೈಬಿಡಲಾಗಿದೆ? ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts