ಪ್ರಕೃತಿ ವಿರುದ್ಧದ ಪ್ರಗತಿ ಮಾರಕ

ಬೀದರ್: ಪ್ರಕೃತಿ ವಿರುದ್ಧವಾಗಿ ನಮ್ಮಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ರೈತರಿಗೆ, ಜನಸಾಮಾನ್ಯರಿಗೆ ಅನೇಕ ಸಮಸ್ಯೆ ಕಾಡುತ್ತಿವೆ ಎಂದು ಭಾರತ ವಿಕಾಸ ಸಂಗಮ ಸಂಸ್ಥಾಪಕರಾದ ನಾಡಿನ ಶ್ರೇಷ್ಠ ಚಿಂತಕ, ಪ್ರಖರ ವಾಗ್ಮಿ ಕೆ.ಎನ್. ಗೋವಿಂದಾಚಾರ್ಯ ಹೇಳಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿಕಾಸ ಅಕಾಡೆಮಿ ಆಶ್ರಯದಲ್ಲಿ ಚಟನಳ್ಳಿ ಹತ್ತಿರದ ಮಹಾದೇವ ನಾಗೂರೆ ತೋಟದಲ್ಲಿ ಶುಕ್ರವಾರ ಪಂಚಗವ್ಯ ಚಿಕಿತ್ಸಾ ಸೇವಾ ಕೇಂದ್ರ ಹಾಗೂ ಪ್ರಶಿಕ್ಷಣ ಕೇಂದ್ರವನ್ನು ಗೋ ಮಾತೆಗೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿ, ಆಕಾಶ, ಗಾಳಿ, ಅಗ್ನಿ, ಜಲ ಮತ್ತು ಭೂಮಿ ಎಂಬ ಪಂಚಭೂತಗಳಲ್ಲಿ ಇಂದು ಅಸಮತೋಲನ ಉಂಟಾಗಿದ್ದೇ ಹಲವು ಸಮಸ್ಯೆಗೆ ಕಾರಣ. ಪರಿಸರ ಮಾಲಿನ್ಯ ಹೆಚ್ಚಾಗಿದೆ. ಬೇಸಾಯ ಹೆಸರಿನಲ್ಲಿ ಮಣ್ಣಿಗೆ ರಸಗೊಬ್ಬರ, ಕ್ರಿಮಿನಾಶಕ ರೂಪದಲ್ಲಿ ವಿಷ ಸೇರಿಸುತ್ತಿದ್ದೇವೆ. ಪ್ರಕೃತಿ ವಿರುದ್ಧದ ವಿಕಾಸ ಯಾವತ್ತೂ ಒಳ್ಳೆ ಫಲಿತಾಂಶ ನೀಡದು ಎಂದರು.
ಇಂದು ಗೋವುಗಳ ಸಂಖ್ಯೆ ತೀರ ಕಡಿಮೆ ಆಗಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಎರಡು ಶತಮಾನ ಹಿಂದಿನವರೆಗೂ ಭಾರತವು ವಿಶ್ವದಲ್ಲಿ ಶ್ರೀಮಂತ ರಾಷ್ಟ್ರವಾಗಿತ್ತು. ಆಗ ದೇಶದ ಜನಸಂಖ್ಯೆ ಮತ್ತು ಗೋವುಗಳ ಸಂಖ್ಯೆಯಲ್ಲಿ ಹೆಚ್ಚಿನ ಅಂತರವಿರಲಿಲ್ಲ. ಈಗ ಸ್ಥಿತಿ ಬದಲಾಗಿದೆ. ಜನರು ವ್ಯಾಪಕ ಹೆಚ್ಚಿದ್ದು, ಗೋವುಗಳು ತೀರ ಕಮ್ಮಿಯಾಗಿವೆ. ಗೋವುಗಳ ಸಂಖ್ಯೆ ಕ್ಷೀಣಿಸಿದ್ದಷ್ಟು ಸಮಾಜ ಮತ್ತು ರೈತರಿಗೆ ಸಮಸ್ಯೆ ಹೆಚ್ಚು ಸುತ್ತಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
ವಿಕಾಸ ಅಕಾಡೆಮಿ ಮುಖ್ಯಸ್ಥ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಭೂ ಮಾತೆ, ಗೋ ಮಾತೆ ಮತ್ತು ಜನ್ಮ ನೀಡಿದ ತಾಯಿ ನಡುವೆ ಅವಿನಾಭಾವ ಸಂಬಂಧವಿದೆ. ಈ ಮೂವರಿಂದಲೇ ಸೃಷ್ಟಿಯ ಕಾರ್ಯ ನಡೆಯುತ್ತಿವೆ. ಈ ಮೂವರ ಕಾಳಜಿಯಿರುವ ಸಮಾಜ ಸುಂದರ, ಸಮೃದ್ಧವಾಗಿರುತ್ತದೆ. ಪರಿವಾರ ಸಂಸ್ಕೃತಿ ಇರುವ ವಿಶ್ವದ ಏಕೈಕ ದೇಶ ಭಾರತ. ಆದರೆ ಇಲ್ಲೂ ಈಗ ಮಾರುಕಟ್ಟೆ ಆಧರಿತ ಸಂಸ್ಕೃತಿ ಬೆಳೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
ಕೃಷಿ ತಜ್ಞ, ಮೆಹಕರ್-ತಡೋಳಾ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ನಾಂದೇಡ್ನ ವಿಷ್ಣು ಭೋಸ್ಲೆ ಅವರು ಪಂಚಗವ್ಯ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ವಿಭಾಗದ ಸಂಚಾಲಕ ಮಹಾದೇವ ನಾಗೂರೆ ಸ್ವಾಗತಿಸಿದರು. ಶಾಂತರೆಡ್ಡಿ, ರವಿ ಶಂಭು ಇತರರಿದ್ದರು.

ಔಷಧಿ ಆಧರಿತ ಉದ್ಯಮ ಬಿಡಿ: ಭಾರತ ಕೃಷಿ ಪ್ರಧಾನ ದೇಶ. ಅನ್ನ (ಕೃಷಿ) ಆಧರಿತ ಉದ್ಯಮ ಬೆಳೆಯಬೇಕು. ಈ ಮೂಲಕವೇ ಸಮೃದ್ಧಿ ಕಾಣಬಹುದು. ಆದರೆ ಆಧುನಿಕತೆ, ತಂತ್ರಜ್ಞಾನ ಭರಾಟೆಯಲ್ಲಿ ನಮ್ಮಲ್ಲಿ ಔಷಧಿ ಆಧರಿತ ಉದ್ಯಮ ಬೆಳೆದಿದೆ. ಇದು ರೈತ ಸಮೂಹವನ್ನು ಕಷ್ಟದ ಕೂಪಕ್ಕೆ ತಳ್ಳಿದೆ ಎಂದು ಕೃಷಿ ತಜ್ಞರೂ ಆದ ಮೆಹಕರ್-ತಡೋಳಾ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಹೇಳಿದರು. ಸಾನ್ನಿಧ್ಯ ವಹಿಸಿ ಇಂದಿನ ಕೃಷಿ ಸ್ಥಿತಿಗತಿ ಮೇಲೆ ಅರ್ಥಪೂರ್ಣ ವಿಚಾರ ಮಂಡಿಸಿದ ಅವರು, ನಮ್ಮನ್ನು ಆಳುವವರಲ್ಲಿ ಕೃಷಿ ಬಗ್ಗೆ ಮಾತು ಹೆಚ್ಚು, ಕೃತಿ ಕಮ್ಮಿ ಆಗಿದೆ. ಕೃಷಿ ಹಾಗೂ ರೈತರ ಉದ್ಧಾರದ ಮೂಲ ಎಲ್ಲಿದೆ ಎಂಬುದನ್ನು ಹುಡುಕದೆ ಸರ್ಕಾರ ಯೋಜನೆ ರೂಪಿಸುತ್ತಿದೆ. ಹೀಗಾದರೆ ಕೃಷಿ ಹಾಗೂ ರೈತರ ಸುಧಾರಣೆ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತಿದ್ದರಿಂದ ಹೆಚ್ಚಿನ ಸಮಸ್ಯೆ ವಕ್ಕರಿಸುತ್ತಿವೆ. ಆರೋಗ್ಯಪೂರ್ಣ ಬದುಕಿಗೆ ಎಲ್ಲರೂ ಗೋ ಮಾತೆಯ ಸಾಮೀಪ್ಯ ಬರಬೇಕು. ಪ್ರತಿದಿನ ಒಂದಿಷ್ಟು ಸಮಯವನ್ನಾದರೂ ಗೋ ಮಾತೆ ಸಾನ್ನಿಧ್ಯದಲ್ಲಿ ಕಳೆದರೆ ಅನೇಕ ರೋಗಗಳಿಂದ ದೂರವುಳಿದು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಪಂಚಭೂತಗಳನ್ನು ಅವುಗಳ ಮೂಲ ಸ್ವಭಾವ, ಸ್ವರೂಪದಂತೆ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಅಭಿವೃದ್ಧಿ ಸೇರಿ ಎಲ್ಲ ಚಟುವಟಿಕೆ ಪ್ರಕೃತಿಗೆ ಹತ್ತಿರವಿದ್ದಾಗಲೇ ಜನರಿಗೆ, ಸಮಾಜಕ್ಕೆ ಉತ್ತಮ ಫಲ ಸಿಗಲು ಸಾಧ್ಯ. ಪ್ರಕೃತಿ ವಿರುದ್ಧ ಹೆಜ್ಜೆ ಇಡುವುದು ಎಂದರೆ ವಿನಾಶದತ್ತ ಸಾಗಿದಂತೆ.
|ಕೆ.ಎನ್. ಗೋವಿಂದಾಚಾರ್ಯ
ಭಾರತ ವಿಕಾಸ ಸಂಗಮ ಸಂಸ್ಥಾಪಕ

ಸುಖಿ ಜೀವನ ಬಗ್ಗೆ ಈಗ ಮರು ವ್ಯಾಖ್ಯಾನ ಮಾಡುವ ಸ್ಥಿತಿ ಬಂದಿದೆ. ಕಾರು, ಬಂಗಲೆ, ಚಿನ್ನಾಭರಣ, ಹಣ ಇದ್ದವರು ಸುಖಿಗಳಲ್ಲ. ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ದೆ ಮಾಡಿ ಆರೋಗ್ಯಪೂರ್ಣ ಶರೀರ ಹೊಂದಿದವರೇ ಇಂದು ನಿಜವಾದ ಸುಖಿಗಳು.
|ಶ್ರೀ ರಾಜೇಶ್ವರ ಶಿವಾಚಾರ್ಯ
ಮೆಹಕರ್-ತಡೋಳಾ ಸಂಸ್ಥಾನ