ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ

ಬೆಂಗಳೂರು: ಮಹಾನಗರದ ಜನತೆ ಪ್ರತಿನಿತ್ಯ ಅನುಭವಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ವಿಜಯವಾಣಿ’ ಹಾಗೂ ದಿಗ್ವಿಜಯ 24×7 ನ್ಯೂಸ್’ ಸುದ್ದಿವಾಹಿನಿಯ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ ಶನಿವಾರ

(ಜು. 7) ಮತ್ತೆ ಆರಂಭವಾಗಲಿದೆ.

ಈ ಹಿಂದೆ 198 ವಾರ್ಡ್​ಗಳಲ್ಲೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಕಾರ್ಯಕ್ರಮವನ್ನು ಪುನಃ ಆರಂಭಿಸುವಂತೆ ಓದುಗರಿಂದ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಇನ್ನುಮುಂದೆ ಪ್ರತಿವಾರ ಜನತಾದರ್ಶನ ನಡೆಯಲಿದೆ. ಸ್ಥಳೀಯ ಶಾಸಕರು, ಕಾಪೋರೇಟರ್​ಗಳು, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಸೇರಿ ಬೆಂಗಳೂರು ನಗರಕ್ಕೆ ಸಂಬಂಧಿಸಿದ ಇಲಾಖೆಗಳ ಎಲ್ಲ ಅಧಿಕಾರಿಗಳನ್ನು ಒಂದೇ ವೇದಿಕೆಗೆ ತರುವ ಕಾರ್ಯಕ್ರಮ ಇದಾಗಿದ್ದು, ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ.

ಸ್ಥಳದಲ್ಲೇ ಪರಿಹಾರ: ವಾರ್ಡ್ ಮಟ್ಟದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಜನತಾದರ್ಶನ ಉದ್ದೇಶ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಕಿವಿಯಾಗುವುದಷ್ಟೆ ಅಲ್ಲದೆ, ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಲಿದ್ದಾರೆ. ಕಾರ್ಯಕ್ರಮ ಮುಕ್ತಾಯದ ಬಳಿಕವೂ ಅಲ್ಲಿ ವ್ಯಕ್ತವಾದ ಸಮಸ್ಯೆಗಳು ಬಗೆಹರಿದಿವೆಯೋ ಇಲ್ಲವೋ ಎಂಬುದನ್ನು ‘ವಿಜಯವಾಣಿ’ ಹಾಗೂ ದಿಗ್ವಿಜಯ 247 ನ್ಯೂಸ್’ ವಾಹಿನಿ ತಂಡ ನಿರಂತರವಾಗಿ ಫಾಲೋಅಪ್ ಮಾಡುವ ಮೂಲಕ ಪರಿಹಾರ ದೊರಕಿಸಿಕೊಡಲಿದೆ.

ಜನರ ಮುಖದಲ್ಲಿ ಮಂದಹಾಸ

ವಿಜಯವಾಣಿ ಜನತಾದರ್ಶನಕ್ಕೆ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮೂಲಕ ತೊಂದರೆಗೊಳಗಾದವರ ಮುಖದಲ್ಲಿ ಮಂದಹಾಸ ಮೂಡಿಸಿತ್ತು.