ಭದ್ರವಾಗಲಿ ಬೇಲಿ

ಸ್ಸಾಂ ರಾಜ್ಯದ 3.29 ಕೋಟಿ ಜನಸಂಖ್ಯೆಯಲ್ಲಿ ಅಕ್ರಮ ವಲಸಿಗರ ಪಾಲೇ ಬರೋಬ್ಬರಿ 40 ಲಕ್ಷದಷ್ಟಿದೆ ಎಂಬ ಅಂಶ ಆಘಾತಕಾರಿಯಷ್ಟೇ ಅಲ್ಲ, ದೇಶದ ಭದ್ರತೆ-ಸುರಕ್ಷತೆ-ಸಾರ್ವಭೌಮತೆಗಳಿಗೆ ಸಂಚಕಾರ ಒದಗದ ರೀತಿಯಲ್ಲಿ ಗಡಿಬೇಲಿಯನ್ನು ಎಷ್ಟರಮಟ್ಟಿಗೆ ಭದ್ರಗೊಳಿಸಬೇಕಿದೆ ಎಂಬುದರ ಕುರಿತಾದ ಎಚ್ಚರಿಕೆಯ ಗಂಟೆಯೂ ಹೌದು. ನಮ್ಮ ಕರ್ನಾಟಕದಲ್ಲಿಯೂ ಇಂಥ ಸಾವಿರಾರು ವಲಸಿಗರಿದ್ದಾರೆ. ನಮ್ಮ ದೇಶದೊಳಗೆ ಕದ್ದು ನುಸುಳಿ, ಸುದೀರ್ಘ ಕಾಲದಿಂದ ಇಲ್ಲೇ ತಳವೂರುವ ಅಕ್ರಮ ವಲಸಿಗರಿಂದಾಗಿ ಭಾರತೀಯ ಅಸ್ಮಿತೆ, ಸಂಸ್ಕೃತಿ-ಪರಂಪರೆ, ಸಾಮಾಜಿಕ ರೀತಿನೀತಿಗಳಲ್ಲಿ ಅನಪೇಕ್ಷಿತ ವ್ಯತ್ಯಯವಾಗುವುದರ ಜತೆಗೆ, ಮೂಲನಿವಾಸಿಗಳು ಮತ್ತು ಅಕ್ರಮ ವಲಸಿಗರ ನಡುವಿನ ಜಟಾಪಟಿಗೂ ಅದು ಕಾರಣವಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಾಜಕೀಯ ಹಿತಾಸಕ್ತಿಗಳು ಅಥವಾ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಇಂಥವರಿಗೆ ಆಧಾರ್ ಗುರುತಿನ ಚೀಟಿಯಂಥ ಮೂಲಭೂತ ದಾಖಲೆಗಳೂ ಸೇರಿದಂತೆ ಹತ್ತು ಹಲವು ಸೌಲಭ್ಯ ಕಲ್ಪಿಸಿಕೊಡುವವರಿಂದಾಗಿ (ಅಕ್ರಮವಾಗಿ ಭಾರತದೊಳಗೆ ನುಸುಳಿರುವ ಲಕ್ಷಾಂತರ ವಲಸಿಗರು ನಕಲಿ ದಾಖಲೆಗಳನ್ನು ನೀಡಿ, ಈ ನೆಲದಲ್ಲಿ ಮತದಾನ ಮಾಡುವ ಹಕ್ಕನ್ನೂ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬರುತ್ತಿದೆ) ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದು ಅಪ್ರಿಯ ಸತ್ಯ. ಆದರೆ ಅದಿನ್ನೂ ಕೆಲವರಿಗೆ ಅರ್ಥವಾಗಿಲ್ಲ ಎಂಬುದೇ ವಿಷಾದನೀಯ!

ಜಾಗತೀಕರಣ, ಉದಾರೀಕಣ, ಉದ್ಯಮ-ಸ್ನೇಹಿ ಮತ್ತು ಹೂಡಿಕೆದಾರ-ಸ್ನೇಹಿ ವಾತಾವರಣ ಇವೇ ಮೊದಲಾದ ಪರಿಕಲ್ಪನೆಗಳಿಗೆ ಮತ್ತು ಸಾಧ್ಯತೆಗಳಿಗೆ ದೇಶ ಒಡ್ಡಿಕೊಂಡಾಗಿನಿಂದ, ವಿದೇಶಿ ಪ್ರಜೆಗಳ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದು ಯಾವುದೇ ಭೂರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಯಲ್ಲಿ ಕಾಣಬರುವ ವಾಡಿಕೆಯ ಬೆಳವಣಿಗೆ. ಆದರೆ, ಉನ್ನತ ಅಧ್ಯಯನಕ್ಕೆಂದೋ, ಪ್ರವಾಸಕ್ಕೆಂದೋ ಭಾರತಕ್ಕೆ ಭೇಟಿ ನೀಡಿದವರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದಿದ್ದರೆ, ಅವರ ಜಾತಕ ಸೋಸಿ ಹೊರತೆಗೆಯುವಂಥ ಸಮರ್ಥ ಉಪಕ್ರಮ ಅಸ್ತಿತ್ವದಲ್ಲಿರಬೇಕು. ಇಲ್ಲವಾದಲ್ಲಿ ಇಂಥವರಲ್ಲಿ ಕುತ್ಸಿತ ಚಿಂತನೆಗಳು ಮನೆಮಾಡಿಕೊಂಡಿದ್ದರೆ ಅಂತಿಮವಾಗಿ ಸಂಕಷ್ಟ ಎದುರಿಸುವುದು ನಾವೇ ಅಲ್ಲವೇ? ನೈಜೀರಿಯಾ ಮೂಲದ ಅನೇಕರು ಭಾರತದಲ್ಲೇ ಇನ್ನೂ ಉಳಿದುಕೊಂಡು ಮಾದಕವಸ್ತು ಮಾರಾಟಜಾಲವನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿರುವ ನಿದರ್ಶನಗಳು ಈ ಮಾತಿಗೆ ಪುಷ್ಟಿನೀಡಬಲ್ಲವು. ಅನೇಕ ರೋಹಿಂಗ್ಯಾ ವಲಸಿಗರು ಐಸಿಸ್ ಮತ್ತು ಇತರೆ ಉಗ್ರಸಂಘಟನೆಗಳೊಂದಿಗೆ ಗುಪ್ತಸಂಬಂಧ ಹೊಂದಿದ್ದು, ಇವರ ಅಸ್ತಿತ್ವ ಮುಂದುವರಿದಲ್ಲಿ ಕೋಮುಗಲಭೆ ಸೇರಿದಂತೆ ಇತರ ವಿಧ್ವಂಸಕ ಕೃತ್ಯಗಳಿಗೆ ಅವರು ಚಿತಾವಣೆ ನೀಡಬಹುದು ಎಂಬ ಕಳವಳದೊಂದಿಗೆ ಕೇಂದ್ರ ಸರ್ಕಾರ, ಅವರನ್ನು ಮ್ಯಾನ್ಮಾರ್​ಗೆ ಗಡಿಪಾರು ಮಾಡುವುದರ ಕುರಿತು ಸವೋಚ್ಚ ನ್ಯಾಯಾಲಯಕ್ಕೆ ಹಿಂದೆ ಕೋರಿಕೆ ಸಲ್ಲಿಸಿದ್ದು ಇಲ್ಲಿ ಸ್ಮರಣೀಯ. ಹೀಗೆ ದೇಶದೊಳಗೆ ನುಸುಳಿಕೊಂಡಿರುವ, ಇಲ್ಲೇ ನೆಲೆಗೊಂಡಿರುವ ಅಕ್ರಮ ವಲಸಿಗರ ಲೆಕ್ಕ ತೆಗೆಯುವುದು ಅನಿವಾರ್ಯ. ಅಸ್ಸಾಂನಲ್ಲಿನ ಇಂಥವರನ್ನು ಗಡಿಪಾರು ಮಾಡಬೇಕೋ ಅಥವಾ ಸವಲತ್ತುಗಳು ಸಿಗದಂತೆ ಮಾಡಿ ಇಲ್ಲೇ ಉಳಿಯಲು ಅವಕಾಶ ಕೊಡಬೇಕೋ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ವನವಾಗಿಲ್ಲ. ಆದರೆ ಹೀಗೆ ಕ್ರಮ ಜರುಗಿಸುವುದಕ್ಕೆ ಮುಂದಾದಲ್ಲಿ, ಅವರನ್ನು ವೋಟ್​ಬ್ಯಾಂಕ್ ರೀತಿಯಲ್ಲಿ ಸಲಹುತ್ತಿರುವವರಿಗೆ ಆಘಾತವಾಗಿ, ಬೇರೆಯದೇ ರೀತಿಯಲ್ಲಿ ಇದಕ್ಕೆ ತಡೆಯೊಡ್ಡಬಹುದು ಎಂಬ ಗ್ರಹಿಕೆಯನ್ನು ಪುರಸ್ಕರಿಸುವ ಅಗತ್ಯವಿಲ್ಲ. ಕಾರಣ, ಯಾವುದೇ ರಾಜಕೀಯ ವ್ಯಕ್ತಿ, ರಾಜಕೀಯ ಪಕ್ಷಕ್ಕಿಂತ ಮಿಗಿಲಾದುದು ದೇಶದ ಹಿತರಕ್ಷಣೆ. ಅದು ಎಲ್ಲರ ಆದ್ಯಕರ್ತವ್ಯವಾಗಬೇಕು.

Leave a Reply

Your email address will not be published. Required fields are marked *