Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಪರಿಣಾಮಕಾರಿ ಅನುಷ್ಠಾನ ಮುಖ್ಯ

Saturday, 09.06.2018, 3:05 AM       No Comments

ವ್ಯಷ್ಟಿ, ಸಮಷ್ಟಿಯ ಆಮೂಲಾಗ್ರ ವಿಕಾಸಕ್ಕೆ ಶಿಕ್ಷಣ ಅತ್ಯಂತ ಅವಶ್ಯ. ಅದಕ್ಕೆಂದೆ, ನಮ್ಮ ಸಂವಿಧಾನ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸಿದೆ. ಉಳ್ಳವರು-ಇಲ್ಲದವರು ಎಲ್ಲರಿಗೂ ಶಿಕ್ಷಣ ಎಟುಕಬೇಕು, ಆ ಮೂಲಕ ಜ್ಞಾನಾಧಾರಿತ ಸಮಾಜ ರೂಪುಗೊಳ್ಳಬೇಕು ಎಂಬ ಆಶಯ ಉತ್ತಮವಾದದ್ದೇ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ದಯನೀಯವಾಗಿರುವುದರಿಂದ ಬಹುತೇಕರು ಖಾಸಗಿ, ಅನುದಾನರಹಿತ ಶಾಲೆಗಳತ್ತ ವಾಲುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಈ ಮಾದರಿಯ ಶಾಲೆಗಳ ಶುಲ್ಕ ಬಡ ಮತ್ತು ಮಧ್ಯಮವರ್ಗದವರ ಪಾಲಿಗೆ ದೊಡ್ಡ ಹೊರೆಯೇ ಸರಿ. ಅದಲ್ಲದೆ, ವರ್ಷ ವರ್ಷವೂ ಶುಲ್ಕ ಏರಿಕೆಯಾಗುವುದಲ್ಲದೆ, ಈ ಏರಿಕೆಗೆ ನಿರ್ದಿಷ್ಟ ಮಾನದಂಡವಿಲ್ಲದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಈ ಸಮಸ್ಯೆಗೆ ಉತ್ತರ ಪ್ರದೇಶ ಸರ್ಕಾರ ಮದ್ದರೆದಿದ್ದು, ಅದೇ ಪರಿಹಾರ ಸೂತ್ರವನ್ನು ಮುಂದಿಟ್ಟುಕೊಂಡು, ಶುಲ್ಕ ಹೆಚ್ಚಳ ಹಾವಳಿಗೆ ಅಂಕುಶ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ‘ಸ್ವಂತ ಹಣಕಾಸು ನಿರ್ವಹಣೆಯ ಸ್ವತಂತ್ರ ಶಾಲೆಗಳ

(ಶುಲ್ಕ ನಿಯಂತ್ರಣ) ಕಾಯ್ದೆ 2018’ ಜಾರಿಗೆ ಉತ್ತರ ಪ್ರದೇಶ ಸರ್ಕಾರ ಏಪ್ರಿಲ್​ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಅನ್ವಯ ಖಾಸಗಿ ಶಾಲೆಗಳು ವಾರ್ಷಿಕ ಶೇಕಡ 8 ಮೀರುವಂತೆ ಶುಲ್ಕ ಹೆಚ್ಚಿಸುವಂತಿಲ್ಲ. ಜತೆಗೆ ಕಟ್ಟಡ, ಮೂಲಸೌಕರ್ಯ ವೃದ್ಧಿ ನಿಧಿ ಹೆಸರಿನಲ್ಲಿ ಹೆಚ್ಚಿನ ಶುಲ್ಕವನ್ನೂ ಪಡೆಯುವಂತಿಲ್ಲ. ಅಲ್ಲದೆ, 2017ರಲ್ಲೇ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಲ್ಲಿ ಶುಲ್ಕ ನಿಯಂತ್ರಣ ಕಾಯ್ದೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಆದ್ದರಿಂದ, ಇದೇ ಮಾದರಿಯನ್ನು ದೇಶಾದ್ಯಂತ ಅನುಸರಿಸಿದರೆ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕುವ

ಮೂಲಕ ಪಾಲಕರಿಗೆ ನೆಮ್ಮದಿ ಒದಗಿಸಬಹುದು ಎಂಬ ಚಿಂತನೆ ಕೇಂದ್ರ ಸರ್ಕಾರದ್ದು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತ ಉ.ಪ್ರ. ಕಾಯ್ದೆ ಜಾರಿ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತಿದೆ. ರಾಜ್ಯ ಶಿಕ್ಷಣ ಸಂಸ್ಥೆಗಳನ್ನು ನೇರವಾಗಿ ನಿಯಂತ್ರಿಸಲಾಗದ ಕಾರಣ, ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲು ತಜ್ಞರಿಂದ ಸೂಕ್ತ ಸಲಹೆಗಳನ್ನು ಪಡೆಯುತ್ತಿದೆ.

ಶುಲ್ಕ ನಿಯಂತ್ರಣ ಕಾಯ್ದೆ ಅವಶ್ಯವೂ, ಅನಿವಾರ್ಯವೂ ಆಗಿದ್ದು, ಇಂಥದ್ದೊಂದು ಕಾಯ್ದೆ ಬಂದಲ್ಲಿ ಅಸಂಖ್ಯಾತ ಪಾಲಕರಲ್ಲಿ ಒಂದಿಷ್ಟು ನಿರಾಳಭಾವ ಮೂಡುವುದರಲ್ಲಿ ಸಂದೇಹವಿಲ್ಲ. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಕಾಯ್ದೆಗಳಿದ್ದರೂ, ಸಮಸ್ಯೆಗಳು ಪೂರ್ಣಪ್ರಮಾಣದಲ್ಲಿ ಬಗೆಹರಿದಿಲ್ಲ ಎಂಬುದು ವಾಸ್ತವ. ಕಾನೂನಿನ ಸಣ್ಣಪುಟ್ಟ ಲೋಪಗಳನ್ನು ಬಳಸಿಕೊಂಡು ಮೂಲ ಉದ್ದೇಶಕ್ಕೆ ಚ್ಯುತಿ ತರುವ ಅಥವಾ ಕಾನೂನನ್ನೇ ಉಲ್ಲಂಘಿಸುವಂಥ ನಿದರ್ಶನಗಳನ್ನು ಕಾಣುತ್ತೇವೆ. ಉದಾಹರಣೆಗೆ-ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷಾರಂಭದಲ್ಲಿ ಸಾಮಾನ್ಯವಾಗಿ ಶುಲ್ಕ ನಿಯಮ ಪ್ರಕಟಿಸಲಾಗುತ್ತದೆ. ಆದರೆ ಖಾಸಗಿ ಶಾಲೆಗಳು ಇದನ್ನು ಪಾಲಿಸುವ ಗೋಜಿಗೇ ಹೋಗುವುದಿಲ್ಲ. ಹಾಗಾಗಿ, ಶುಲ್ಕ ನಿಯಂತ್ರಣ ಕಾಯ್ದೆ ಹತ್ತರಲ್ಲಿ ಮತ್ತೊಂದು ಎಂಬಂತಾಗದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಕಾನೂನು ದುರುಪಯೋಗ ಪಡಿಸಿಕೊಳ್ಳುವ ಅಥವಾ ಪಾಲಿಸದವರ ಮೇಲೆ ಕ್ರಮ ಕೈಗೊಳ್ಳುವ ಅವಕಾಶವೂ ಸಂಬಂಧಪಟ್ಟವರಿಗೆ ಇರಬೇಕು. ಒಟ್ಟಾರೆ, ಮಹತ್ತರ ಉದ್ದೇಶದ ಈ ಕಾಯ್ದೆಯ ಲಾಭ ಜನರಿಗೆ ತಲುಪಬೇಕು. ಆಗ ಮಾತ್ರ ಅದಕ್ಕೆ ಸಾರ್ಥಕತೆ. ಉ.ಪ್ರ. ಮಾದರಿಯ ಕುರಿತು ಉಳಿದ ರಾಜ್ಯಗಳು ಚಿಂತನೆ ನಡೆಸಲು ಇದು ಸಕಾಲ.

Leave a Reply

Your email address will not be published. Required fields are marked *

Back To Top