20.4 C
Bengaluru
Sunday, January 19, 2020

ಪುರಾಣ ಇತಿಹಾಸ… ಸಾಹಿತಿಗಳಿಗೆ ಸುಗ್ರಾಸ

Latest News

ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಕಳೆದ ವಾರ ಪಂಚ್ ಕಾ ಜಾಯ್ ಅಂಕಣದಲ್ಲಿ ದ್ರೌಪದಿ ವಸ್ತ್ರಾಪಹರಣದ ಬಗ್ಗೆ ಬರೆದಿದ್ದೆ. ಬರೆದು ಮುಗಿಸಿದ ನಂತರ ನೆನಪಾದ ಒಂದು ಹಳೆಯ ನಗೆಹನಿಯನ್ನು ಈ ವಾರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದು ಹೀಗಿದೆ. ಮಕ್ಕಳ ಜ್ಞಾನವನ್ನು ಪರೀಕ್ಷಿಸಲು ಶಾಲೆಗೆ ಬಂದ ಇನ್ಸ್ ಪೆಕ್ಟರ್ ಪ್ರಶ್ನೆ ಕೇಳುತ್ತಾರೆ: ‘‘ಮಕ್ಕಳೇ, ದ್ರೌಪದಿ ವಸ್ತ್ರಾಪಹರಣ ಮಾಡಿದ್ದು ಯಾರು?’’. ದುಶ್ಯಾಸನ ಎಂದು ಯಾರಾದರೂ ಹೇಳಬಹುದೆಂದು ನಿರೀಕ್ಷಿಸಿದ್ದ ಇನ್ಸ್​ಪೆಕ್ಟರ್, ಮಕ್ಕಳು ಮೌನವಾಗಿರುವುದನ್ನು ನೋಡಿ ‘‘ಹೆದರಿಕೊಳ್ಳಬೇಡಿ. ತಪ್ಪಾದರೂ ಪರವಾಗಿಲ್ಲ, ಹೇಳಿ’’ ಎಂದು ಉತ್ತೇಜಿಸುತ್ತಾರೆ. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಒಬ್ಬ ಹುಡುಗ ಅಂಜುತ್ತಾ ಎದ್ದು ನಿಂತು ‘‘ವಿಜ್ಞಾನದ ಮೇಷ್ಟ್ರು’’ ಅನ್ನುತ್ತಾನೆ. ಇನ್ಸ್​ಪೆಕ್ಟರ್ ಆಶ್ಚರ್ಯದಿಂದ ಏನು ‘‘ವಿಜ್ಞಾನದ ಮೇಷ್ಟ್ರಾ?’’ ಎಂದಾಗ ಇನ್ನೊಬ್ಬ ಹುಡುಗನಿಂದ ‘‘ಕನ್ನಡ ಮೇಷ್ಟ್ರು ಹುಷಾರಿಲ್ಲ ಅಂತ ರಜೆ ಹಾಕಿದ್ರು. ಅದಕ್ಕೆ ವಿಜ್ಞಾನದ ಮೇಷ್ಟ್ರು ದ್ರೌಪದಿ ವಸ್ತ್ರಾಪಹರಣ ಮಾಡಿದರು ಸಾರ್’’ ಎಂಬ ಸ್ಪಷ್ಟೀಕರಣ ಬರುತ್ತದೆ.

ದ್ರೌಪದಿ ವಸ್ತ್ರಾಪಹರಣವನ್ನು ಮಾತ್ರ ವರ್ಣಿಸಿ ಲೇಖನವನ್ನು ಅಲ್ಲಿಗೆ ನಿಲ್ಲಿಸಿ ನೀವೂ ದ್ರೌಪದಿಗೆ ಅನ್ಯಾಯ ಮಾಡಿದ್ದೀರಿ ಎಂದು ಓದುಗರೊಬ್ಬರು ತಕರಾರು ತೆಗೆದಿದ್ದಾರೆ. ನಿಜ. ಪಾಂಚಾಲಿ ಧರಿಸಿದ ಸೀರೆ ಅಕ್ಷಯವಾಗಿ ಅವಳ ಮಾನ ಉಳಿದ ಸಂಗತಿಯನ್ನು ಕಳೆದ ವಾರವೇ ಬರೆಯಬೇಕಿತ್ತು. ಆದರೆ ಏನು ಮಾಡುವುದು? ನಮ್ಮ ಅಂಕಣ ದ್ರೌಪದಿಯ ವಸ್ತ್ರದ ಹಾಗಲ್ಲವಲ್ಲ. ಅದಕ್ಕೆ ಪದಗಳ ಮಿತಿ ಉಂಟು. ಹೀಗಾಗಿ ಕೃಷ್ಣ ಪರಮಾತ್ಮನ ಕೃಪೆಯಿಂದ ದ್ರೌಪದಿಯ ಸೀರೆ ಬೆಳೆಯುತ್ತಾ ಹೋದದ್ದನ್ನು, ಸೀರೆ ಎಳೆದು ಎಳೆದು ದುಶ್ಯಾಸನ ಸುಸ್ತಾದದ್ದನ್ನು ಬರೆಯಲು ಸಾಧ್ಯವಾಗಲಿಲ್ಲ. ಅಂತೂ ಏನೋ ಒಂದು ನೆಪ ಹೇಳಿ ಈ ವಾರವೂ ಪುರಾಣದ ಬಗ್ಗೆ ಬರೆಯುತ್ತೀರಾ? ನಿಮ್ಮ ಅಂಕಣವನ್ನೂ ಟಿವಿ ಸೀರಿಯಲ್ ಥರ ಎಳೆಯುತ್ತೀರಾ? ಅಂತ ಕೇಳಬೇಡಿ. ಆ ಭಯ ಬೇಡ. ಟಿವಿ ಧಾರಾವಾಹಿಗಳ ಕತೆ ಹಿಗ್ಗಿಸಲಿಕ್ಕೆ ದೊಡ್ಡ ತಂಡವೇ ಇರುತ್ತದೆ. ಅವರೊಂದಿಗೆ ನನ್ನಂಥ ಒಂಟಿ ಲೇಖಕರು ಸ್ಪರ್ಧಿಸಲು ಸಾಧ್ಯವಿಲ್ಲ.

ಎಷ್ಟು ಎಳೆದರೂ ಮುಗಿಯದ

ಟಿವಿ ಧಾರಾವಾಹಿಗಳ ಕಂಡು

ನನಗೊಂದು ಸಂಶಯ

ಸೀರಿಯಲ್ ಅಂದರೆ

ದ್ರೌಪದಿ ಸೀರೆಯಾ?

ಬಾಲ್ಯದಲ್ಲಿ ನಾವು ಪೌರಾಣಿಕ ಕತೆಗಳನ್ನು ಓದುವಾಗ ದೇವರು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವುದು, ಶರೀರವಿಲ್ಲದೆ ಮಾತು ಕೇಳಿಸುವುದು, ದೊನ್ನೆಯಲ್ಲಿ ಮಗು ಬೆಳೆಯುವುದು ಮುಂತಾದವುಗಳೆಲ್ಲ ವಾಸ್ತವದಲ್ಲಿ ಕಾಣಸಿಗದ ಅದ್ಭುತ ರಮ್ಯ ಘಟನೆಗಳು ಅನ್ನಿಸಿ ರೋಚಕ ಅನುಭವ ಸಿಗುತ್ತಿತ್ತು. ಈಗ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಹೊಸ ಆವಿಷ್ಕಾರಗಳಿಂದಾಗಿ ಅಂದು ಫ್ಯಾಂಟಸಿಯಾಗಿದ್ದ ಅನೇಕ ಸಂಗತಿಗಳು ವಾಸ್ತವ ಅನ್ನಿಸತೊಡಗಿವೆ. ಮೊಬೈಲ್​ನಲ್ಲಿ ವಿಡಿಯೊ ಕಾಲ್ ಮಾಡಿದರೆ ಅಮೆರಿಕದಲ್ಲಿ ಇರುವವರು ಕೆಲವೆ ಕ್ಷಣಗಳಲ್ಲಿ ನಮ್ಮ ಮುಂದೆ ಪ್ರತ್ಯಕ್ಷರಾಗುತ್ತಾರೆ. ಕಾರು ಬಿಡುವಾಗ ಗೂಗಲ್ ಮ್ಯಾಪ್ ಹಾಕಿಕೊಂಡರೆ ಇಂಪಾದ ಅಶರೀರವಾಣಿ ಮಾರ್ಗದರ್ಶನ ಮಾಡುತ್ತದೆ.

ಇವೆಲ್ಲ ಅದ್ಭುತವಲ್ಲವೆ? ಪುರಾಣ ಜನರಿಗೆ ಇಷ್ಟವಾಗುತ್ತದೆಂದು ಸದಾ ಅದನ್ನೇ ವಸ್ತುವಾಗಿಟ್ಟುಕೊಂಡು ಬರೆದರೆ ಅಂಥ ಬರವಣಿಗೆ ಏಕತಾನತೆಯ ದೋಷದಿಂದ ಬಳಲುತ್ತದೆ. ಎಲ್ಲರಿಗೂ ತಿಳಿದಿರುವ ಪುರಾಣದ ಕಥೆಯನ್ನು ಯಾವ ಬದಲಾವಣೆಯೂ ಇಲ್ಲದೆ ಹೇಳಿದರೆ ಅದು ಓದುಗರ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ. ಪುರಾಣ ಎಂಬ ಶಬ್ದಕ್ಕೆ ದೀರ್ಘವಾದ ಕೊರೆತ ಎಂಬ ಅರ್ಥವೂ ಇದೆ. ಯಾವ ಸ್ವಾರಸ್ಯವೂ ಇಲ್ಲದೆ ದೀರ್ಘವಾಗಿ ಮಾತನಾಡುವವರಿಗೆ ಕೇಳುಗರು ‘ನಿಮ್ಮ ಪುರಾಣ ಸಾಕು ಮಾಡಿ’ ಅಂತ ಹೇಳುತ್ತಾರೆ. ‘ಇದೊಳ್ಳೆ ರಾಮಾಯಣ ಆಯ್ತಲ್ಲ ಮಾರಾಯ್ರೆ’ ಅನ್ನುವುದೂ ಬೇಸರವನ್ನು ಸೂಚಿಸುವ ಮಾತು.

ಪೌರಾಣಿಕ ಪ್ರಸಂಗಗಳು ಮತ್ತು ಪಾತ್ರಗಳ ಮೂಲಕ ಸಮಕಾಲೀನ ಸಂಗತಿಗಳನ್ನು ಹೇಳಿದರೆ ಅದಕ್ಕೆ ಹೊಸ ಆಯಾಮ ನೀಡಿದಂತಾಗುತ್ತದೆ. ನಮ್ಮ ಅನೇಕ ಲೇಖಕರು ಇದನ್ನು ಮಾಡಿದ್ದಾರೆ. ಉದಾಹರಣೆಗೆ ಬಿ.ಆರ್. ಲಕ್ಷ್ಮಣರಾವ್ ಅವರ ಈ ಕಿರುಗವನವನ್ನು ಓದಿ:

ಬಟ್ಟಂಬಯಲಲ್ಲಿ

ನನ್ನ ಬತ್ತಲೆಗೊಳಿಸುತ್ತಿದ್ದಾನೆ

ಈ ಹೀನ ಹೇಮಂತ!

ನನ್ನ ಮಾನ ಕಾಪಾಡೊ

ಹೇ ವಸಂತ

ಮೊರೆಯಿಟ್ಟಳು

ಪ್ರಕೃತಿ ನೀರೆ.

ಅಗೊ ಒದಗಿ ಬಂತವಳಿಗೆ

ಧಾರೆ ಧಾರೆ

ಹೊಸ ಹಸಿರು ಸೀರೆ.

ಚಳಿಗಾಲದಲ್ಲಿ ಮರಗಳು ಎಲೆ ಉದುರಿಸುವ ಮತ್ತು ವಸಂತದಲ್ಲಿ ಪುನಃ ಚಿಗುರುವ ನಿಸರ್ಗದ ವಿದ್ಯಮಾನದಲ್ಲಿ ಕವಿ ದ್ರೌಪದಿ ವಸ್ತ್ರಾಪಹರಣ ಮತ್ತು ಅಕ್ಷಯ ವಸನ ಎರಡನ್ನೂ ನಮಗೆ ಕಾಣಿಸಿದ್ದಾರೆ.

ಲಕ್ಷ್ಮಣರಾವ್ ಅಂದಾಗ ರಾಮಾಯಣದ ಲಕ್ಷ್ಮಣ ರೇಖೆ ನೆನಪಾಗುತ್ತಿದೆ. ಕಾಂಚನ ಮೃಗದ ರೂಪದಲ್ಲಿದ್ದ ಮಾರೀಚ ರಾಮನ ಬಾಣದಿಂದ ಸಾಯುವಾಗ ರಾಮನ ಧ್ವನಿಯಲ್ಲಿ ‘ಹಾ ಲಕ್ಷ್ಮಣಾ ಹಾ ಸೀತಾ’ ಎಂದು ಕೂಗುತ್ತಾನೆ. ಸೀತೆಗೆ ಅದು ಮಿಮಿಕ್ರಿ ಎಂದು ಗೊತ್ತಾಗುವುದಿಲ್ಲ. ರಾಮನ ರಕ್ಷಣೆಗೆ ಹೋಗುವಂತೆ ಲಕ್ಷ್ಮಣನನ್ನು ಒತ್ತಾಯಿಸುತ್ತಾಳೆ. ಆತ ಸೀತೆಯನ್ನು ಕಾಪಾಡಲು ಕುಟೀರದ ಮುಂದೆ ಮೂರು ಗೆರೆಗಳನ್ನು ಹಾಕಿ ಇದನ್ನು ದಾಟದಿರಿ ಎಂದು ಎಚ್ಚರಿಸಿ ಹೋಗುತ್ತಾನೆ. ಅದು ಲಕ್ಷ್ಮಣ ರೇಖೆ.

ಈ ಕಾಲದ ವಿದ್ಯುತ್ ಬೇಲಿಯ ಹಾಗೆ. ಅದನ್ನು ದಾಟಲು ಪ್ರಯತ್ನಿಸುವವರು ಸಾಯುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಜನಸಾಮಾನ್ಯರು ಇಂಥ ಪೌರಾಣಿಕ ಪ್ರಸಂಗಗಳಿಂದ ಪ್ರಭಾವಿತರಾಗುತ್ತಾರೆ ಅನ್ನುವುದು ಜಾಹೀರಾತುಗಳನ್ನು ಸೃಷ್ಟಿಸುವವರಿಗೆ ಗೊತ್ತಿದೆ. ಆದ್ದರಿಂದಲೆ ಜಿರಲೆಗಳ ಹತೋಟಿಗಾಗಿ ಇರುವ ಒಂದು ಉತ್ಪನ್ನದ ಹೆಸರು ಲಕ್ಷ್ಮಣ ರೇಖಾ! ರಾಮಾಯಣದ ಸೀತಾಪಹರಣದ ಪ್ರಸಂಗವನ್ನು ಕವಿ ಚಂಪಾ ಅವರು ನಾಲ್ಕೇ ಸಾಲುಗಳಲ್ಲಿ ಹೀಗೆ ಬಣ್ಣಿಸಿದ್ದಾರೆ:

ಹೋಗೋ ಮುಂಚೆ ಲಕ್ಷ್ಮಣ

ಗೆರಿ ಹೊಡೆದ.

ಆ ಮ್ಯಾಲೆ ಬಂದ ರಾವಣ

ಲೈನು ಹೊಡೆದ.

ಪೌರಾಣಿಕ ಪ್ರಸಂಗಗಳನ್ನು ಹೊಸ ದೃಷ್ಟಿಕೋನದಿಂದ ನೋಡುವುದು ಹೇಗೆ ಎಂಬುದಕ್ಕೆ ಚಂಪಾ ಅವರ ಈ ಚುಟುಕು ಒಂದು ಅತ್ಯುತ್ತಮ ಉದಾಹರಣೆ. ಚಿನ್ನದ ಜಿಂಕೆಯ ವಿಷಯದಲ್ಲಿ ಸೀತೆ ಗಂಡನ ಮಾತನ್ನು ಕೇಳಿದ್ದರೆ ಅಷ್ಟು ದೊಡ್ಡ ರಾಮಾಯಣವೇ ಆಗುತ್ತಿರಲಿಲ್ಲ. ಗಂಡನ ಮಾತಿಗೆ ಕಿವಿಗೊಡದೆ ಚೆನ್ನಾಗಿ ಕಂಡದ್ದೆಲ್ಲ ಬೇಕೇಬೇಕೆಂದು ಸೀತೆಯ ಹಾಗೆ ಹಠ ಹಿಡಿಯುವ ಸ್ವಭಾವ ಬಹಳಷ್ಟು ಮಹಿಳೆಯರಲ್ಲಿ ಈಗಲೂ ಉಂಟು.

ಪುರಾಣದ ಪ್ರಸಂಗಗಳು ಹಾಗೂ ಪೌರಾಣಿಕ ವ್ಯಕ್ತಿಗಳು ಸಾಹಿತಿಗಳಿಗೆ ಮಾತ್ರವಲ್ಲ ರಾಜಕಾರಣಿಗಳಿಗೂ ಇಷ್ಟ. ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷದ ರಾಜಕಾರಣಿಗಳು ತಮ್ಮನ್ನು ಪಾಂಡವರಿಗೆ ಮತ್ತು ತಮ್ಮ ವಿರೋಧಿಗಳನ್ನು ಕೌರವರಿಗೆ ಹೋಲಿಸಿಕೊಂಡು ಮಾತನಾಡುತ್ತಾರೆ. ಗೆದ್ದ ನಂತರ ಅವರಲ್ಲಿ ಅನೇಕರು ಗೆಲ್ಲಿಸಿದ ಮತದಾರರ ಪಾಲಿಗೆ ದುಷ್ಯಂತರಾಗುವುದು ಪ್ರಜಾಪ್ರಭುತ್ವದ ದುರಂತ. ರಾಜಕಾರಣಿಗಳು ವೋಟಿಗಾಗಿ ಪೌರಾಣಿಕ ವ್ಯಕ್ತಿಗಳನ್ನು ಬಳಸಿಕೊಳ್ಳುವಂತೆ ಸಾಹಿತಿಗಳು ರಾಜಕಾರಣಿಗಳನ್ನು ವಿಡಂಬಿಸಲು ಪುರಾಣದ ಪ್ರಸಂಗಗಳನ್ನು ಉಪಯೋಗಿಸಿಕೊಳ್ಳಬಹುದು. ಇದಕ್ಕೆ ಒಂದು ನಿದರ್ಶನ ನನ್ನ ಈ ಹನಿಗವನ:

ಹಣೆಯ ಮೇಲೆ ಮೂರನೆ ಕಣ್ಣು

ಇರುವ ಆ ಈಶ್ವರನನ್ನು

ಮುಕ್ಕಣ್ಣ ಅನ್ನುವರು

ದೊಡ್ಡ ದೊಡ್ಡ ಹಗರಣಗಳಲ್ಲಿ

ಕೋಟಿಗಟ್ಟಲೆ ಮುಕ್ಕುವವರು

ಆಧುನಿಕ ಮುಕ್ಕಣ್ಣರು!

ಪುರಾಣದ ಹಾಗೆ ಚರಿತ್ರೆಯೂ ಸಾಹಿತ್ಯಕ್ಕೆ ವಸ್ತುವನ್ನು ಒದಗಿಸುತ್ತದೆ. ಚಾರಿತ್ರಿಕ ವ್ಯಕ್ತಿಗಳನ್ನು, ಪ್ರಸಂಗಗಳನ್ನು ವೈಭವೀಕರಿಸಿ ರೋಚಕವಾಗಿ ಬರೆಯುವುದು ಒಂದು ವಿಧಾನ. ಅದೂ ಒಂದು ವರ್ಗದ ಓದುಗರನ್ನು ಆಕರ್ಷಿಸುತ್ತದೆ. ಚಾರಿತ್ರಿಕ ಘಟನೆಗಳು ಹಾಗೂ ವ್ಯಕ್ತಿಗಳ ಮೂಲಕ ಸಮಕಾಲೀನ ಸಂಗತಿಗಳನ್ನು ಧ್ವನಿಸುವಂತೆ ಬರೆಯುವುದು ಇನ್ನೊಂದು ವಿಧಾನ. ಕಾರ್ನಾಡರ ತುಘಲಕ್ ಈ ಬಗೆಯ ನಾಟಕ. ಹನಿಗವನಗಳಲ್ಲೂ ಚಾರಿತ್ರಿಕ ಸಂಗತಿಗಳನ್ನು ಹೇಳಬಹುದು ಅನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಮೊಘಲ್ ಚಕ್ರವರ್ತಿ ಷಹ ಜಹಾನ್​ನ ರಾಣಿ ಮುಮ್ತಾಜ್ ಮಹಲ್ ಅವಳ ಹದಿನಾಲ್ಕನೆ ಹೆರಿಗೆಯಲ್ಲಿ ತೀರಿಹೋಗುತ್ತಾಳೆ.

ಮೃತ ಪತ್ನಿಯ ನೆನಪಿಗಾಗಿ ಷಹ ಜಹಾನ್ ಅಮೃತಶಿಲೆಯಲ್ಲಿ ಕಟ್ಟಿಸಿದ ಗೋರಿ ಆಗ್ರಾದ ತಾಜ್​ವುಹಲ್. ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಅನ್ನಿಸಿಕೊಂಡಿರುವ ತಾಜ್​ವುಹಲ್ ಮೊಘಲ್ ವಾಸ್ತುಶಿಲ್ಪದ ಅತ್ಯುತ್ತಮ ಮಾದರಿ. ಅದು ಅಮರ ಪ್ರೇಮದ ಸಂಕೇತ ಅಂತಲೂ ಅನ್ನಿಸಿಕೊಂಡಿದೆ. ತಾಜ್​ವುಹಲ್ ನೋಡಿದ ಮಹಿಳೆಯರು ‘ಅಬ್ಬಾ! ಹೆಂಡತಿಯ ಮೇಲೆ ಷಹ ಜಹಾನನಿಗೆ ಎಂಥಾ ಪ್ರೀತಿ! ಗಂಡ ಅಂದರೆ ಹೀಗಿರಬೇಕು’ ಅನ್ನುವುದನ್ನು ನಾನು ಕೇಳಿದ್ದೇನೆ. ಆದರೆ ಅವರಿಗೆ ಚರಿತ್ರೆ ಪೂರ್ತಿ ಗೊತ್ತಿಲ್ಲ. ಷಹ ಜಹಾನನ ಮಡದಿ ಮಮ್ತಾಜಳಿಗೆ ಅವಳು ಬದುಕಿರುವಾಗ ಪತಿಯಿಂದ ಸಿಕ್ಕಿದ ಪ್ರೀತಿ ಹೆಚ್ಚೆಂದರೆ 25% ಮಾತ್ರ. ಏಕೆಂದರೆ ದೊರೆ ಷಹ ಜಹಾನನಿಗೆ ನಾಲ್ವರು ಹೆಂಡಿರು. ಸವತಿಯರ ಕಾಟದಲ್ಲಿ ಮಮ್ತಾಜ್ ಎಷ್ಟು ನಲುಗಿದ್ದಳೋ ಏನೋ. ‘ಬದುಕಿದ್ದಾಗ ಮಾರಕ ಸತ್ತ ಮೇಲೆ ಸ್ಮಾರಕ’ ಅನ್ನುವ ಮಾತು ಷಹ ಜಹಾನನಂಥವರಿಗೆ ಚೆನ್ನಾಗಿ ಒಪ್ಪುತ್ತದೆ. ಆ ಮಹಾರಾಜನಿಗೆ ಹೋಲಿಸಿದರೆ ಈ ಡುಂಡಿರಾಜನೇ ಎಷ್ಟೋ ವಾಸಿ. ಯಾಕೆ ಅಂತೀರಾ? ಅದನ್ನು ಚುಟುಕದಲ್ಲೆ ಹೇಳುತ್ತೇನೆ:

ಸತ್ತಮೇಲಲ್ಲವೆ ಷಹ ಜಹಾನ

ಕಟ್ಟಿಸಿದ್ದು ತಾಜಮಹಲ್ಲು?

ಬದುಕಿರುವಾಗಲೆ ನನ್ನ ಹೆಂಡತಿಗೆ

ಕಟ್ಟಿಸಿದ್ದೇನೆ ಹಲ್ಲು!

ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಟಿಪ್ಪು ಸುಲ್ತಾನ್ ಮುಂತಾದವರ ಸಾಹಸವನ್ನು ಹಾಡಿಹೊಗಳುವ ಐತಿಹಾಸಿಕ ಕಾದಂಬರಿಗಳು, ನಾಟಕಗಳು, ಲಾವಣಿಗಳು ಬೇಕಾದಷ್ಟಿವೆ. ಅವುಗಳಲ್ಲಿ ನಿಜ ಸಂಗತಿಗಳೆಷ್ಟು ಲೇಖಕರ ಕಲ್ಪನೆಗಳೆಷ್ಟು ಅನ್ನುವುದು ಚರ್ಚಾಸ್ಪದ. ನಮ್ಮ ರಾಜ್ಯದಲ್ಲಿ ಸರ್ಕಾರ ಬದಲಾದಾಗಲೆಲ್ಲ ಟಿಪ್ಪು ಜಯಂತಿಯ ಆಚರಣೆ ಸರಿಯೋ ತಪ್ಪೋ ಅನ್ನುವ ವಿವಾದ ಭುಗಿಲೇಳುತ್ತದೆ. ಇದನ್ನು ನೋಡಿ ಟಿಪ್ಪುವಿಗೆ ತಾನು ಹುಟ್ಟಿದ್ದೇ ತಪ್ಪು ಅನ್ನಿಸಿರಬಹುದು. ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ನಾನು ಬರೆದಿರುವ ಹಲವಾರು ಹನಿಗವನಗಳಲ್ಲಿ ಒಂದು ಹೀಗಿದೆ.

ಹೆದ್ದಾರಿಯ ಗದ್ದಲ

ಟ್ರಾಫಿಕ್ಕಿಗೆ ಬೆದರಿ

ನಿಂತಲ್ಲೇ ನಿಂತು

ಪ್ರತಿಮೆಯಾಯಿತು

ಚೆನ್ನಮ್ಮನ ಕುದರಿ!

ಇದು ನಾನು ಬೆಳಗಾವಿಯಲ್ಲಿ ವಾಸವಾಗಿದ್ದಾಗ ನಗರದ ಕೇಂದ್ರಭಾಗದಲ್ಲಿರುವ, ಕುದುರೆಯ ಮೇಲೆ ಕುಳಿತ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನು ನೋಡಿ ಬರೆದ ಹನಿಗವನ. ಒಟ್ಟಿನಲ್ಲಿ ಕಾವ್ಯ ಪುರಾಣಗಳ ಹಾಗೆ ಚರಿತ್ರೆಯೂ ಸಾಹಿತಿಗಳಿಗೆ ವಸ್ತುವನ್ನು ಒದಗಿಸುವುದರಿಂದ ಪುರಾಣ ಇತಿಹಾಸ ಸಾಹಿತಿಗಳಿಗೆ ಸುಗ್ರಾಸ ಅನ್ನಬಹುದು.

ಮುಗಿಸುವ ಮುನ್ನ:

ಅಯೋಧ್ಯೆಯ ವಿಷಯದಲ್ಲಿ

ಅತ್ಯತ್ತಮ ತೀರ್ಪು ನೀಡಿದ

ನ್ಯಾಯಾಧೀಶರಿಗೆ ಧನ್ಯವಾದ

ರಾಜಕಾರಣಿಗಳು ಆಗಲೇ

ಮುಂದಿನ ಚುನಾವಣೆಗೆ ಹುಡುಕುತ್ತಿದ್ದಾರೆ ಹೊಸ ವಿವಾದ! 

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...