ಅಂದು ಮೋದಿಯವರೊಂದಿಗೆ ಸೆಲ್ಫಿ ತೆಗೆದು ಶೇರ್ ಮಾಡಿದ್ದ ಬಾಕ್ಸರ್​ ವಿಜೇಂದರ್​ ಸಿಂಗ್​ ಇಂದು ತಿರುಗಿ ಬೀಳಲು ಕಾರಣ ಇದು…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಕ್ಸರ್​ ವಿಜೇಂದರ್​ ಸಿಂಗ್​ ನಿಕಟ ಸ್ನೇಹ ಹೊಂದಿದ್ದವರು. ಇವರಿಬ್ಬರೂ ತಮ್ಮ ಟ್ವಿಟರ್​ಗಳಲ್ಲಿ ಕೂಡ ಪರಸ್ಪರ ಸ್ನೇಹಪೂರ್ವಕವಾಗಿ ಟ್ವೀಟ್​ ಮಾಡಿಕೊಂಡಿದ್ದರು. ವಿಜೇಂದರ್​ ಸಿಂಗ್​ ಅವರಿಗೆ ಶುಭಾಶಯ ತಿಳಿಸಿ 2016ರಲ್ಲಿ ಕೂಡ ಮೋದಿಯವರು ಟ್ವೀಟ್​ ಮಾಡಿದ್ದರು. ಅಲ್ಲದೆ ತಾವು ಮೋದಿಯವರ ಜತೆಗೆ ಇರುವ ಫೋಟೋವನ್ನು ವಿಜೇಂದರ್​ ಶೇರ್​ ಮಾಡಿಕೊಂಡಿದ್ದರು.

ಆದರೆ ಈಗ ಕಾಂಗ್ರೆಸ್​ ಸೇರಿರುವ ವಿಜೇಂದರ್​ ಸಿಂಗ್​, ಪ್ರಧಾನಿ ಮೋದಿಯವರು ತುಂಬ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ. ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಟಿಕೆಟ್​ ಪಡೆದಿರುವ ವಿಜೇಂದರ್​ ಅವರು, ಯಾರನ್ನಾದರೂ ಹೊಗಳುವ ಮುನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅವರ ಮುಖವಾಡದ ಹಿಂದೆ ಬೇರೆಯೇ ಇರುತ್ತದೆ ಎಂದು ಹೇಳಿದ್ದಾರೆ.

ಮೋದಿಯವರು 15-20 ಲಕ್ಷ ರೂಪಾಯಿಯನ್ನು ದೇಶದ ಬಡವರ ಖಾತೆಗೆ ಹಾಕುವುದಾಗಿ ಹೇಳಿದ್ದರು. ಇಂದಿಗೂ ಆ ಯುಟ್ಯೂಬ್​ ವಿಡಿಯೋ ನನ್ನ ಬಳಿ ಇದೆ. ಬಡವರು ಅವರನ್ನು ನಂಬಿ ಮತಹಾಕಿದರು. ಆದರೆ ಮೋದಿಯವರು ಸುಳ್ಳು ಹೇಳಿದರು. ಭರವಸೆಯನ್ನು ಈಡೇರಿಸಲಿಲ್ಲ ಎಂದು ಆರೋಪ ಮಾಡಿದ್ದಾರೆ.

ನನ್ನ ದೃಷ್ಟಿಕೋನ, ವಿಚಾರಧಾರೆಗಳು, ಯೋಚಿಸುವ ವಿಧಾನಗಳೆಲ್ಲ ಕಾಂಗ್ರೆಸ್​ ಪಕ್ಷದ ಸಿದ್ಧಾಂತಗಳೊಂದಿಗೆ ಹೊಂದಿಕೆಯಾಗುತ್ತವೆ. ಕಾಂಗ್ರೆಸ್​ ಜನರನ್ನು ಶಿಕ್ಷಿತರನ್ನಾಗಿ ಮಾಡುತ್ತಿದೆ. ಒಳ್ಳೆ ಮುಖಂಡರನ್ನು ಹೊಂದಿದೆ. ಅವರು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಒಳ್ಳೊಳ್ಳೆ ಸಂಗತಿಗಳ ಬಗ್ಗೆ ಮಾತನಾಡುತ್ತಾರೆ. ಹಾಗಾಗೇ ಕಾಂಗ್ರೆಸ್​ ಪಕ್ಷಕ್ಕೆ ಸೇರಿದೆ ಎಂದು ಅವರು ತಿಳಿಸಿದ್ದಾರೆ.