ವಿಜಯವಾಡ: ಕೇವಲ ಎರಡು ವಾರದ ಅವಧಿಯಲ್ಲಿ ಇಡೀ ಕುಟುಂಬವನ್ನೇ ಮಹಾಮಾರಿ ಕರೊನಾ ವೈರಸ್ ಬಲಿ ಪಡೆದುಕೊಂಡಿರುವ ಕರುಣಾಜನಕ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಎರಡು ವಾರಗಳ ಹಿಂದೆ ವಿಜಯವಾಡ ಮೂಲದ ಪ್ರಖ್ಯಾತ ವಕೀಲ ಮತ್ತು ಕ್ರೀಡಾ ನಿರ್ವಾಹಕರಾದ ಸುಲ್ತಾನ್ ಮೂಸವಿ ಎಂಬುವರು ಕರೊನಾ ವೈರಸ್ನಿಂದಾಗಿ ತಮ್ಮ ವಯಸ್ಸಾದ ತಾಯಿಯನ್ನು ಕಳೆದುಕೊಂಡರು. ಇದಾದ ಬೆನ್ನಲ್ಲೇ ಕಳೆದ ಶುಕ್ರವಾರ ಸುಲ್ತಾನ ಅವರು ತಮ್ಮ ಪತ್ನಿ ಲುಬ್ನಾ ಮೂಸವಿ ಅವರನ್ನು ಕಳೆದುಕೊಂಡರು. ಅದಾದ ಒಂದು ದಿನದ ಬಳಿಕ 61 ವರ್ಷದ ಸುಲ್ತಾನ ಅವರೇ ಕೋವಿಡ್ನಿಂದಲೇ ಕೊನೆಯುಸಿರೆಳೆದರು. ತಂದೆ ಸಾವಿಗೀಡಾದ ಮಾರನೇ ದಿನವೇ ಮಗ ಜಾವೀದ್ (25) ಸಹ ಕರೊನಾ ಮಹಾಮಾರಿಗೆ ತುತ್ತಾದರು.
ಇದನ್ನೂ ಓದಿ: ಮತದಾನ ಮುಗಿಯುತ್ತಿದ್ದಂತೆ ಶಾಸಕ, ಸಚಿವರ ಫೋನ್ ಸಿಚ್ಡ್ ಆಫ್! ಅಂತಹದ್ದೇನಾಯ್ತು?
ಕಳೆದ ಎರಡೇ ವಾರದಲ್ಲಿ ಸುಲ್ತಾನ್ ಮಗಳು ಹೀನಾ ಇಡೀ ಕುಟುಂಬವನ್ನು ಕಳೆದುಕೊಂಡು ಇದೀಗ ಅನಾಥವಾಗಿದ್ದಾರೆ. ಸಾವಿನ ಬೆನ್ನಲ್ಲೇ ಮೃತ ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುವ ನೆಟ್ಟಿಗರು ಕರೊನಾ ತುಂಬಾ ಅಪಾಯಕಾರಿ, ತುಂಬಾ ಜಾಗೃತರಾಗಿರಿ ಎಂದು ಸಂದೇಶಗಳನ್ನು ರವಾನಿಸುತ್ತಿದ್ದಾರೆ.
ಸುಲ್ತಾನ್, ಲುಬ್ನಾ ಮತ್ತು ಜಾವೀದ್ ಕರೊನಾದಿಂದಾಗಿ ವಿಜಯವಾಡದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಮೂರು ದಿನ ಮೂವರು ಒಬ್ಬರ ಹಿಂದಂತೆ ಪ್ರಾಣ ಬಿಟ್ಟಿದ್ದಾರೆ. ಇಡೀ ಕುಟುಂಬದಲ್ಲಿ ಒಬ್ಬರೇ ಬದುಕುಳಿದಿರುವ ಹೀನಾ ಸದ್ಯ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ.
ಸುಲ್ತಾನ್ ಅವರು ವಿಜಯವಾಡದಲ್ಲಿ ತುಂಬಾ ಪ್ರಖ್ಯಾತಿಯನ್ನು ಹೊಂದಿದ್ದು, ಅವರ ಸಾವು ತುಂಬಲಾರದ ನಷ್ಟ ಎಂದು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಕ್ರೀಡಾ ನಿರ್ವಹಕರು ಆಗಿದ್ದರಿಂದ ಅವರ ಅನೇಕ ಉತ್ತಮ ಕಾರ್ಯಗಳನ್ನು ಮೆಲಕು ಹಾಕಿ ಕಂಬನಿ ಮಿಡಿದಿದ್ದು, ಇಡೀ ಕುಟುಂಬವನ್ನು ಸಾವಿನ ಕೂಪಕ್ಕೆ ನೂಕಿದ ಕರೊನಾವನ್ನು ಶಪಿಸುತ್ತಿದ್ದಾರೆ. (ಏಜೆನ್ಸೀಸ್)
ಈ ಜಿಲ್ಲೇಲಿ ಕರೊನಾ ಕಡಿಮೆ ಆಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಮತ್ತೊಂದು ರೋಗ ವಕ್ಕರಿಸಿದೆ