ಒತ್ತಡ ನಿವಾರಣೆಗೆ ಯೋಗ

| ಗೋಪಾಲಕೃಷ್ಣ ದೇಲಂಪಾಡಿ

# ನನ್ನ ದೇಹದ ತೂಕ ತುಂಬ ಕಡಿಮೆಯಾಗಿದ್ದು ಹಸಿವೆಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದಕ್ಕೆ ಸಹಕಾರಿಯಾದ ಯೋಗಮುದ್ರೆಗಳನ್ನು ತಿಳಿಸಿ.

| ರಮ್ಯ ಉಪ್ಪಿನಂಗಡಿ

ಯೋಗವು ಎಲ್ಲ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ. ದೇಹದ ತೂಕ ಹೆಚ್ಚಲು ಕೆಲವು ವ್ಯಾಯಾಮಗಳು, ಯೋಗಾಸನಗಳು, ಮುದ್ರೆಗಳು ಸಹಕಾರಿಯಾಗುತ್ತವೆ. ಒಮ್ಮೆ ನಿಮ್ಮ ಕುಟುಂಬವೈದ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಗಳ ಬಗ್ಗೆ ಪರಿಶೀಲಿಸಿ. ಅಗತ್ಯವಿದ್ದಲ್ಲಿ ಉಪಚಾರ ಪಡೆಯಿರಿ. ಜೊತೆಗೆ ಕೆಳಗೆ ಸೂಚಿಸಿದ ಯೋಗಾಸನ ಹಾಗೂ ಮುದ್ರೆಗಳನ್ನು ಅಭ್ಯಾಸ ಮಾಡಿ. ಅನುವಂಶಿಕವಾಗಿ ದೇಹದ ರಚನೆಯಾಗಿರುತ್ತದೆ. ತೂಕ ಕಡಿಮೆ ಎಂಬ ಚಿಂತೆ ಮಾಡದಿರಿ. ಧ್ಯಾನ, ಪ್ರಾಣಾಯಾಮಗಳ ಅಭ್ಯಾಸ ನಡೆಸಿ. ಹಸಿವೆಯಾದಾಗ ಉತ್ತಮ ಪೋಷಕಾಂಶಯುಕ್ತ ಆಹಾರ ಸೇವಿಸಿ. ನಿಯತವಾದ ವ್ಯಾಯಾಮಗಳನ್ನು ಅಭ್ಯಾಸ ಮಾಡಿದಾಗ ಹಸಿವು ಉಂಟಾಗುತ್ತದೆ. ಆಹಾರಸೇವನೆ ಮಾಡುವಾಗ ಬಾಯಿಮುಚ್ಚಿ ಜಗಿದು ಸೇವಿಸಿ. ಲಾಲಾರಸವು ಆಹಾರಕ್ಕೆ ಬೆರಕೆಯಾಗಿ ಹೊಟ್ಟೆಗೆ ಸೇರಿದರೆ ಸಮರ್ಪಕ ಜೀರ್ಣ ಹಾಗೂ ಹಸಿವು ಉಂಟಾಗುತ್ತದೆ.

ಸೂಚಿತ ಆಸನಗಳು: ದಿನಕ್ಕೆ ಮೂರು ಬಾರಿ ಪರ್ವತಾಸನ, ಉತ್ಥಿತ ಪದ್ಮಾಸನ, ಶಶಾಂಕಾಸನ, ಮಕರಾಸನ, ಭುಜಂಗಾಸನ, ಪವನಮುಕ್ತಾಸನ, ಸರ್ವಾಂಗಾಸನ, ಪಾದಹಸ್ತಾಸನ, ಶವಾಸನ ಮಾಡಿ.

ಸೂಚಿತ ಮುದ್ರೆಗಳು: ಪೃಥ್ವಿಮುದ್ರೆಯಲ್ಲಿ 108 ಬಾರಿ ಓಂ ಶ್ರೀಂ ಭೂದೇವ್ಯೈ ನಮಃ ಎಂದು ಪಠಿಸಿ. ಹೃದಯಮುದ್ರೆ, ಪ್ರಾಣಮುದ್ರೆಗಳ ಅಭ್ಯಾಸ ನಡೆಸಿ.

# ನನಗೆ ಬೆನ್ನುಹುರಿಯ ಸಮಸ್ಯೆ ಉಂಟಾಗಿದೆ. ನಾಲ್ಕು ವರ್ಷದ ಮಗನನ್ನೂ ಎತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವ ಯೋಗಾಸನ ಮಾಡಬೇಕೆಂದು ತಿಳಿಸಿ.

| ಪ್ರಸನ್ನ ತುಮಕೂರು

ಬೆನ್ನುಮೂಳೆಯ ಸುತ್ತಮುತ್ತಲಿನ ಮಾಂಸಖಂಡಗಳಿಗೆ ಅನಗತ್ಯ ಒತ್ತಡವಾದಾಗ ಬೆನ್ನುಹುರಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತವೆ. ವ್ಯಕ್ತಿಗೆ ಬೆನ್ನುಮೂಳೆ ಹಾಗೂ ಬೆನ್ನುಹುರಿಯ ಸುಸ್ಥಿತಿ ಅಗತ್ಯ. ಬೆನ್ನುಮೂಳೆಯು ಬೆನ್ನುಹುರಿಯ ಸಂರಕ್ಷಣೆಯನ್ನು ಮಾಡುತ್ತದೆ. ಬೆನ್ನುಹುರಿಯು ದೇಹದ ಸಮತೋಲನವನ್ನು ಕಾಪಾಡಿ ದೇಹವನ್ನು ಬೇಕಾದ ರೀತಿಯಲ್ಲಿ ಚಲಿಸುವಂತೆ ಮಾಡುತ್ತದೆ. ಬೆನ್ನುಮೂಳೆಗೆ ಅನಗತ್ಯ ಒತ್ತಡವಾದಾಗ ಅದರ ಆರೋಗ್ಯ ಕ್ಷೀಣಿಸುತ್ತದೆ. ಆಗ ಬೆನ್ನುಹುರಿಯ ರಕ್ಷಣೆ ಮಾಡಲಾಗದೆ ನೋವು ಉಂಟಾಗುತ್ತದೆ.

ಒತ್ತಡದ ಕಾರಣಗಳು: ತಪ್ಪಾದ ಜೀವನಶೈಲಿ, ಕಳಪೆ ಆಹಾರ ಸೇವನೆ, ವ್ಯಾಯಾಮದ ಕೊರತೆ, ತಪ್ಪಾಗಿ ಕುಳಿತುಕೊಳ್ಳುವುದು, ವೃದ್ಧಾಪ್ಯದಲ್ಲಿ ಕೆಲವೊಮ್ಮೆ ಕಂಡುಬರುವ ಉರಿಯೂತದ ಬೆನ್ನುಮೂಳೆಯ ಡಿಸ್ಕ್ ಇತ್ಯಾದಿ. ಉಸಿರಿನ ಗತಿಯೊಂದಿಗೆ ಕೆಲವು ಯೋಗಾಸನಗಳ ಮೂಲಕ ಬೆನ್ನುಹುರಿಯನ್ನು ಬಲಪಡಿಸಬಹುದು. ಆಸನಗಳು ವ್ಯಾಯಾಮಕ್ಕಿಂತ ಭಿನ್ನವಾಗಿದೆ. ಸ್ನಾಯುಗಳನ್ನು ಬಲಪಡಿಸುತ್ತದೆ.

ಸೂಚಿತ ಆಸನಗಳು ಮುದ್ರೆಗಳು: ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧ ಸರ್ವಾಂಗಾಸನ, ತಾಡಾಸನ, ಧನುರಾಸನ, ವಕ್ರಾಸನ, ಉತ್ಥಿತ ಏಕಪಾದಾಸನ, ಕಟಿ ಚಕ್ರಾಸನ ಹಾಗೂ ನಾಡೀಶುದ್ಧಿ ಪ್ರಾಣಾಯಾಮ. ಮುದ್ರೆಗಳಲ್ಲಿ ಮೇರುದಂಡ ಮುದ್ರೆ, ವಾಯುಮುದ್ರೆ, ಪ್ರಾಣಮುದ್ರೆಗಳ ಅಭ್ಯಾಸ ನಡೆಸಿ.