PHOTOS| ಸ್ತ್ರೀ ಸಮಾನತೆ, ಸಬಲೀಕರಣದ ವಿಜಯವಾಣಿ ವಾಕಥಾನ್​ಗೆ ಚಾಲನೆ

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಮಹಿಳೆಯರ ಸಮಾನತೆ ಮತ್ತು ಸಬಲೀಕರಣಕ್ಕಾಗಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಆಯೋಜಿಸಿರುವ ವಾಕಥಾನ್​ಗೆ ಇಂದು ಬೆಳಗ್ಗೆ 7.30ರಲ್ಲಿ ಚಾಲನೆ ನೀಡಲಾಯಿತು.

ಲಿಂಗ ಅಸಮಾನತೆಯನ್ನು ಬೇರು ಸಮೇತ ಕಿತ್ತೊಗೆಯಬೇಕೆಂಬ ಉದ್ದೇಶದಿಂದ ‘ಲಿಂಗ ಸಮಾನತೆ ಸಮಾಜ ಸ್ವಾಸ್ಥ್ಯದ ಮೂಲಬೇರು’ ಎಂಬ ಆಶಯದೊಂದಿಗೆ ‘ಬ್ಯಾಲೆನ್ಸ್ ಫಾರ್ ಬೆಟರ್’ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿರುವ ಈ ವಾಕಥಾನ್​ಗೆ ನಟ ಶ್ರೀಮುರಳಿ, ನಟಿ ಹರ್ಷಿಕಾ ಪೂಣಚ್ಚ, ವಿಜಯವಾಣಿ ಪತ್ರಿಕೆ ಸಂಪಾದಕರಾದ ಚನ್ನೇಗೌಡ, ದಿಗ್ವಿಜಯ ನ್ಯೂಸ್​ ಸಂಪಾದಕರಾದ ಸುಭಾಷ್​ ಹೂಗಾರ್​, ವಿಜಯವಾಣಿ ಉಪಾಧ್ಯಕ್ಷರಾದ ಅರುಣ್​, ಬಿಗ್​ ಬಾಸ್​ ಖ್ಯಾತಿಯ ಪ್ರಥಮ್​, ರೂಪಿಕಾ ವಾಕಥಾನ್​ಗೆ ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು.

ವಿಧಾನಸೌಧ ಮುಂಭಾಗದಿಂದ ಹೊರಡುವ ವಾಕಥಾನ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೊನೆಗೊಳ್ಳಲಿದೆ. ಮಾರ್ಗದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಪೂಜಾಕುಣಿತ, ಕಂಸಾಳೆ, ಪಟಕುಣಿತ ಇರಲಿದೆ. ಇದರ ಜತೆಗೆ 50 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ನಟರು, ನಾಗರಿಕರು ವಾಕಥಾನ್​ನಲ್ಲಿ ಭಾಗವಹಿಸಲಿದ್ದಾರೆ.

ವಾಕಥಾನ್‌ಗೆ ಬಿಗ್‌ಬಾಸ್‌ ಖ್ಯಾತಿಯ ಪ್ರಥಮ್‌ ಶುಭಾಶಯ ಕೋರಿದರು.

ಹರ್ಷಿಕಾ ಪೂಣಚ್ಚ ಮಾತನಾಡಿ, ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ವಾಕಥಾನ್‌ಗೆ ಪುರುಷರು ಭಾಗಿಯಾಗಿರುವುದು ಸಂತಸದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ವಾಕಥಾನ್‌ಗೆ ಕಿರುತೆರೆಯ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯ ಕಲಾವಿದರು ತಂಡದ ಸದಸ್ಯರೂ ಸಾಥ್‌ ನೀಡಿದರು. “ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಹಿಂದಿನ ಕಾಲದಲ್ಲಿ ಹೊರಗಡೆ ಹೋಗುವುದಕ್ಕೂ ಒಂದು ರೀತಿಯ ನಿಷೇಧವಿತ್ತು. ಆದರೆ ಈಗ ಎಲ್ಲ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರನ್ನು ಉತ್ತೇಜಿಸುತ್ತಿರುವ ಎಲ್ಲ ಪುರುಷರಿಗೂ ಜೈ,” ಎಂದು ಇಡೀ ತಂಡ ಅಭಿಪ್ರಾಯಪಟ್ಟಿತು.

ವಾಕಾಥಾನ್​ ಪೂರ್ಣಗೊಂಡ ನಂತರ ಬೆಳಗ್ಗೆ 9.30ಕ್ಕೆ ಎಫ್​ಕೆಸಿಸಿಐ ಸಭಾಂಗಣದಲ್ಲಿ ಐವರು ಅಪರೂಪದ ಸಾಧಕಿಯರಿಗೆ ವರ್ಷದ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.