ಯುವಜನಾಂಗದಲ್ಲಿ ನರೇಂದ್ರನಾಥನ ಭರವಸೆ

ಯೌವನ ಜೀವನದ ವಸಂತಕಾಲ! ಬದುಕಿನ ಶಕ್ತಿಯುತ ಅವಧಿ, ಸ್ವಾತಂತ್ರ್ಯವೆಂಬ ಹೊಣೆಗಾರಿಕೆಗೆ ಘನತೆಯನ್ನು ದೊರಕಿಸಿಕೊಳ್ಳಬೇಕಾದ ಅಮೃತಘಳಿಗೆ. ಅಂದು ರಾಷ್ಟ್ರಾಭ್ಯುದಯಕ್ಕೆ ಪ್ರಾಣ ತೆರಲು ವಿವೇಕಾನಂದರು ಸಿದ್ಧರಿದ್ದರು. ನಾವಿಂದು ರಾಷ್ಟ್ರಾಭ್ಯುದಯಕ್ಕೆ ಬದುಕಬೇಕಿದೆ! ನಾವು ತಲೆಎತ್ತಿ ನಿಲ್ಲುವ ಹಾಗೂ ಇತರರ ಸ್ವಾತಂತ್ರ್ಯವನ್ನು ಗೌರವಿಸುವ ಧ್ಯೇಯಕ್ಕೆ ಮಣಿಯಬೇಕಾಗಿದೆ.

ಮಾನವ ಇತಿಹಾಸದಲ್ಲಿ ಗುರುಶಿಷ್ಯರ ಶ್ರೇಷ್ಠ ಸಂಬಂಧವನ್ನು ಉಲ್ಲೇಖಿಸ ಹೊರಟಾಗ ನಮಗೆ ಗೋಚರಿಸುವ ಸರ್ವಸಮ್ಮತ ಉದಾಹರಣೆ ಎಂದರೆ ಶ್ರೀರಾಮಕೃಷ್ಣ-ವಿವೇಕಾನಂದರದ್ದು. ಭಗವಂತನು ಪುರಾಣಪುರುಷನೂ ಹೌದು, ನಿತ್ಯನೂತನನೂ ಹೌದು. ಆದರೆ ಭಗವತತ್ತ್ವದ ಶ್ರವಣ ಹಾಗೂ ಅನುಷ್ಠಾನಕ್ಕೆ ವೃದ್ಧಾಪ್ಯವೇ ಸೂಕ್ತಕಾಲವೆಂದು ಬಹುಸಂಖ್ಯಾತ ಜನರ ಅಭಿಮತ. ಆದರೆ ರಾಮಕೃಷ್ಣರು ಉಪನಿಷತ್​ಗಳು ಪ್ರತಿಪಾದಿಸುವಂತೆ ಬದುಕಿನಲ್ಲಿ ಶ್ರೇಷ್ಠವಾದುದನ್ನು ಸಾಧಿಸಲು ಆರೋಗ್ಯವಂತ ಹಾಗೂ ಯೌವನಭರಿತ ಕಾಲಘಟ್ಟವೇ ಸೂಕ್ತವೆಂದು ತಿಳಿಸುತ್ತ ಸುಮಾರು ಇಪ್ಪತ್ತು ಯುವಕರನ್ನು ಆಧ್ಯಾತ್ಮಿಕ ಸಾಧನೆಗೆ ಪ್ರೇರೇಪಿಸಿದರು. ಮುಂದೆ ಅವರುಗಳು ಶ್ರೀರಾಮಕೃಷ್ಣರ ನೇರ ಶಿಷ್ಯರೆಂದೇ ವಿಶ್ವವಿಖ್ಯಾತರಾದರು.

ಅದ್ಭುತ ಶಿಷ್ಯ ಯುವಕ ನರೇಂದ್ರನಾಥನಾದರೆ ಪರಮಾದ್ಭುತ ಗುರು ಶ್ರೀರಾಮಕೃಷ್ಣರೆಂದೆನಿಸಿದ್ದಾರೆ. ಅವರೀರ್ವರ ಜೀವನಾಧ್ಯಯನ ನಮಗೆ ಹತ್ತಾರು ಮಹತ್ವದ ವಿಷಯಗಳನ್ನು ಅರುಹುತ್ತವೆ. ಆಧ್ಯಾತ್ಮಿಕ ಸಾಮ್ರಾಜ್ಯದ ಮುಂದುವರಿಕೆಗೆ ರಾಮಕೃಷ್ಣರು ದೀಕ್ಷೆ ನೀಡಿ ಮುಂಚೂಣಿಯಲ್ಲಿ ನಿಲ್ಲಿಸಿದ್ದು ಯುವಕ ನರೇಂದ್ರನಾಥನನ್ನು. ಆತನನ್ನು ಲೌಕಿಕ, ಆಧ್ಯಾತ್ಮಿಕ ದೃಷ್ಟಿಕೋನಗಳಿಂದ ಶ್ರೇಷ್ಠಮಟ್ಟದಲ್ಲಿ ಪರಾಮಶಿಸಿದ್ದ ಶ್ರೀರಾಮಕೃಷ್ಣರು ಜಗತ್ತಿನ ಜೀವರ ರಥವನ್ನು ಮುನ್ನಡೆಸಲು ನರೇಂದ್ರನಾಥನಿಗೆ ತಮ್ಮ ತಪಃಶ್ಯಕ್ತಿಯ ಸರ್ವಸ್ವವನ್ನು ಧಾರೆಯೆರೆದದ್ದು ಇತಿಹಾಸ. ಕ್ರಿಸ್ತನ ಬದುಕಿನಲ್ಲಿ ಪೀಟರ್, ಬುದ್ಧನ ಬದುಕಿನಲ್ಲಿ ಆನಂದ ವಹಿಸಿದ ಪಾತ್ರದಂತೆಯೇ ರಾಮಕೃಷ್ಣರ ಧರ್ಮದ ಪುನರುತ್ಥಾನಕ್ಕೆ ನರೇಂದ್ರನಾಥನೇ ಚುಕ್ಕಾಣಿಗನಾದನು.

ಯುವಕ ನರೇಂದ್ರನ ಬಗ್ಗೆ ನಿಖರವಾದ ಹಾಗೂ ನಿಸ್ಸಂದೇಹವಾದ ರಾಮಕೃಷ್ಣರ ಅಭಿಮತ ಅದ್ಭುತವಾದದ್ದು. ಅವರೆನ್ನುತ್ತಾರೆ, ‘ನನ್ನ ನರೇಂದ್ರ ಇದ್ದಾನಲ್ಲ ಇವನು ಅತ್ಯುನ್ನತ ಮಟ್ಟಕ್ಕೆ ಸೇರಿದವನು. ಸ್ವಭಾವತಃ ಪೌರುಷವಂತ. ಅವನ ವ್ಯಕ್ತಿತ್ವದಲ್ಲಿ ಸಂಯಮ, ಧೈರ್ಯ, ಸ್ಥೈರ್ಯ, ತ್ಯಾಗಬುದ್ಧಿ ಮೇಳೈಸಿವೆ. ಆಳವಾದ ಜ್ಞಾನ ಹಾಗೂ ಮಧುರವಾದ ಭಕ್ತಿ ಸಮರಸದಿಂದ ಬೆರೆತಿದೆ. ನನ್ನ ಬಳಿಗೆ ಎಷ್ಟೊಂದು ಜನರು ಬರ್ತಾರೆ. ಆದರೆ ನರೇಂದ್ರನಾಥನಂಥ ವ್ಯಕ್ತಿ ಮತ್ತೊಬ್ಬರಿಲ್ಲ. ನನ್ನ ಬಳಿಗೆ ಬರುವ ಭಕ್ತರ ಸಾಮರ್ಥ್ಯವನ್ನು ನಾನು ತೂಗಿ ನೋಡಿದಾಗ ಅವರಲ್ಲಿ ಕೆಲವರು ಹತ್ತು ದಳಗಳ, ಹದಿನಾರು ದಳಗಳ ಮತ್ತು ನೂರು ದಳಗಳ ಪದ್ಮದಂತೆ ಗೋಚರಿಸುತ್ತಾರೆ. ಆದರೆ ನನ್ನ ನರೇಂದ್ರ ಸಹಸ್ರದಳ ಪದ್ಮ! ಇತರ ಭಕ್ತರು ತಂಬಿಗೆ-ಬಿಂದಿಗೆಗಳಾದರೆ ನರೇಂದ್ರ ದೊಡ್ಡ ಗುಡಾಣ. ಇತರರೆಲ್ಲ ಕೆರೆ ಕುಂಟೆಗಳಾದರೆ ನನ್ನ ನರೇಂದ್ರ ಮಹಾಸರೋವರ’.

ಮುಂದುವರಿದು ಶ್ರೀರಾಮಕೃಷ್ಣರು ಹೇಳುತ್ತಾರೆ-‘ಲೋಕಶಿಕ್ಷಣ ಬಹಳ ಕಠಿಣವಾದ ಕೆಲಸ. ಭಗವಂತ ತನ್ನ ಸಾಕ್ಷಾತ್ಕಾರ ಕೊಟ್ಟು ಆದೇಶವೀಯುವುದಾದರೆ ಮನುಷ್ಯ ಲೋಕಶಿಕ್ಷಣ ಕಾರ್ಯವನ್ನು ಮಾಡಬಲ್ಲ. ನಾರದ, ಶುಕದೇವ ಹಾಗೂ ಶಂಕರಾಚಾರ್ಯರಿಗೆ ಲೋಕಶಿಕ್ಷಣಕ್ಕೆ ಜಗನ್ಮಾತೆಯಿಂದ ಆದೇಶ ದೊರೆತಿತ್ತು. ಇದೀಗ ಅವಳು ನರೇಂದ್ರನಿಗೆ ಆದೇಶ ನೀಡಿದ್ದಾಳೆ. ನರೇಂದ್ರನು ಜನ್ಮ ತಳೆದಿರುವುದೇ ಜಗನ್ಮಾತೆಯ ಕಾರ್ಯ ಸಾಧಿಸಲು. ಯಾರೇ ಆಗಲಿ ನರೇಂದ್ರನ ಕುರಿತಾಗಿ ಲಘುವಾಗಿ ಮಾತನಾಡಿದರೆ, ತಿರಸ್ಕಾರ ತೋರಿದ್ದೇ ಆದರೆ ಅದು ಶಿವನಿಂದೆ ಮಾಡಿದಂತಾಗುತ್ತದೆ, ಎಚ್ಚರ’.

ನರೇಂದ್ರನಾಥನೇ ಭವಿಷ್ಯದಲ್ಲಿ ವಿಶ್ವವಿಖ್ಯಾತರಾದ ಸ್ವಾಮಿ ವಿವೇಕಾನಂದರಾದದ್ದು. ಜಗತ್ತಿನ ಅಭ್ಯುದಯಕ್ಕಾಗಿ ಅವರು ಎಲ್ಲ ಆಯಾಮಗಳಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದು ಸರ್ವವೇದ್ಯವಾದದ್ದು. ಇಂತಹ ಯುವಸಂನ್ಯಾಸಿ ಸ್ವಾಮಿ ವಿವೇಕಾನಂದರು ವಿಶ್ವದಾದ್ಯಂತ ಸಮಾಜ, ಧರ್ಮ, ಅಧ್ಯಾತ್ಮ ಹಾಗೂ ರಾಷ್ಟ್ರೋದ್ಧಾರ ಕುರಿತಾದ ತಮ್ಮ ಶ್ರೇಷ್ಠ ಚಿಂತನೆಗಳಿಂದ ಸಹಸ್ರಾರು ಜನರನ್ನು ಪ್ರಭಾವಗೊಳಿಸಿದರು. ಅವರ ಬಗ್ಗೆ ಕೇಂದ್ರ ಪ್ರಮುಖರ ಅಭಿಪ್ರಾಯಗಳು ಉಲ್ಲೇಖಾರ್ಹ.

ವಿವೇಕಾನಂದರನ್ನು ಕುರಿತು ಸೋದರಿ ನಿವೇದಿತಾ ಹೇಳಿದ್ದು, ‘ವಿವೇಕಾನಂದರ ಎದೆಬಡಿತದಲ್ಲಿ ಭಾರತ ಕೇಳಿಬರುತ್ತಿತ್ತು. ಅವರ ಧಮನಿಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು, ಅವರ ಕನಸು ನನಸುಗಳಲ್ಲಿ ಭಾರತವೇ ತುಂಬಿತ್ತು…’

ಜೊಸೆಫಿನ್ ಮೆಕ್ಲಾಡ್ ಹೇಳಿದ್ದು, ‘‘ನಾನೊಮ್ಮೆ ಸ್ವಾಮಿ ವಿವೇಕಾನಂದರನ್ನು ಕೇಳಿದೆ, ‘ನಿಮ್ಮ ಸೇವೆಗೈಯಲು ನೀವು ನನಗೆ ಸೂಚಿಸುವ ಸವೋತ್ಕೃಷ್ಟ ದಾರಿ ಯಾವುದು?’ ಅದಕ್ಕೆ ಅವರೆಂದರು, ‘ನೀನು ನನ್ನ ಭಾರತವನ್ನು ಪ್ರೀತಿಸು’ ಎಂದು. ಅವರಂಥ ಸಚ್ಚಾರಿತ್ರ್ಯವಂತ ವ್ಯಕ್ತಿತ್ವವನ್ನು ನಾ ಕಾಣೆ. ತಮ್ಮ ಚಾರಿತ್ರ್ಯಶಕ್ತಿಯ ಮೂಲಕ ಅವರು ವ್ಯಕ್ತಿ, ಸಮಾಜ, ದೇಶ ಅಷ್ಟೇಕೆ ವಿಶ್ವವನ್ನೇ ಸಕಾರಾತ್ಮಕವಾಗಿ ಪರಿವರ್ತಿಸುವಷ್ಟು ಸಾಮರ್ಥ್ಯವಂತರಾಗಿದ್ದರು’.

ಮುಂದಿನ ದಿನಗಳಲ್ಲಿ ಜೊಸೆಫಿನ್ ಮೆಕ್ಲಾಡ್ ಭಾರತದ ಅಭ್ಯುದಯಕ್ಕೆ ಸಂಕಲ್ಪಿಸಿ ಕಾರ್ಯಪ್ರವೃತ್ತಳಾದಳು. ನೈಲ್ ನದಿಯ ನೀರಾವರಿ ಯೋಜನೆ ರೂವಾರಿ, ಪಾಶ್ಚಾತ್ಯ ಜಗತ್ತಿನ ಶ್ರೇಷ್ಠ ವಿಜ್ಞಾನಿ ಎನಿಸಿದ್ದ ಸರ್ ವಿಲಿಯಮ್ ವಿಲ್ಲಾರ್​ನನ್ನು ಭಾರತಕ್ಕೆ ಆಹ್ವಾನಿಸಿ ಬಂಗಾಳದ ನೀರಾವರಿ ಯೋಜನೆಗಳನ್ನು ರೂಪಿಸಲು ವಿನಂತಿಸಿದಳು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿವೇದಿತಾಳಿಗೆ ಸಹಾಯಹಸ್ತ ನೀಡಿದಳು, ರಾಮಕೃಷ್ಣ-ವಿವೇಕಾನಂದ ಹಾಗೂ ಭಾರತೀಯ ವೇದಾಂತ ಚಿಂತನೆಗಳು ಜಗತ್ತಿನ ಹಲವು ಭಾಷೆಗಳಲ್ಲಿ ಪ್ರಕಟಗೊಳ್ಳಲು ಸಹಕರಿಸಿದಳು, ಭಾರತದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರಗಳ ಸ್ಥಾಪನೆಗೆ ಮುಂದಾದಳು.

ಸೋದರಿ ಕ್ರಿಸ್ಟಿನ್ ಬರೆಯುತ್ತಾಳೆ, ‘ಭಾರತದ ಬಗ್ಗೆ ನಮಗೆಲ್ಲ ಪ್ರೀತಿ ಹುಟ್ಟಿದ್ದು, ನನ್ನ ಅರಿವಿಗೆ ತಿಳಿದಂತೆ, ಇಂಡಿಯಾ ಎಂಬ ಪದವನ್ನು ಸ್ವಾಮಿ ವಿವೇಕಾನಂದರು ತಮ್ಮ ಅಮೋಘ ಕಂಠಸಿರಿಯಿಂದ ನುಡಿದಾಗ, ತಮ್ಮ ಮಾತೃಭೂಮಿಯ ಹೆಸರನ್ನು ಅವರು ಉಚ್ಚರಿಸುತ್ತಿದ್ದ ವಿಧಾನದಲ್ಲಿ ಪ್ರೀತಿ, ಭಾವೋದ್ವೇಗ, ಹೆಮ್ಮೆ, ಆಕಾಂಕ್ಷೆ, ಆರಾಧನೆ, ಶೌರ್ಯ, ಪ್ರೇಮ ಇವೆಲ್ಲವೂ ಇದ್ದವು!’.

ಸುಪ್ರಸಿದ್ಧ ಚಿಂತಕರು ಹೇಳುವಂತೆ ಬಡವರ ಹಾಗೂ ನಿರ್ಗತಿಕರ ಬಗೆಗಿನ ಅನುಕಂಪ ಕುರಿತಾಗಿ ಸ್ವಾಮಿ ವಿವೇಕಾನಂದರ ನರಮಂಡಲವು ಸಿಸ್ಮೋಗ್ರಾಫಿಗಿಂತ ವೇಗವಾಗಿ ಹಾಗೂ ಯೋಗ್ಯವಾಗಿ ಕೆಲಸ ಮಾಡುತ್ತಿತ್ತು. ಜಗತ್ತಿನ ಇತಿಹಾಸವನ್ನು ಆಮೂಲಾಗ್ರವಾಗಿ ತಿಳಿದಿದ್ದ ಸ್ವಾಮೀಜಿ, ‘ಕಣ್ಣು ಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣಬೇಕು’ ಎಂಬ ಗುರುವಿನಾಣತಿಗೆ ಶಿರಬಾಗಿ ಶ್ರಮಿಸುತ್ತ ಬಂದರು. ಭಾರತದ ಭವ್ಯ ಪರಂಪರೆಯನ್ನು ದಿಗ್ದಿಗಂತಗಳಲ್ಲಿ ನಿರ್ಭಿಡೆಯಿಂದ ಸಾರುತ್ತ ಸಾಗಿದರು. ಅಮೆರಿಕದ ವೇದಿಕೆಯಲ್ಲಿ ಅವರು ಹೇಳಿದ್ದು, ‘ಇಡೀ ಪ್ರಪಂಚದ ಜನರು ತಮ್ಮ ಉಗಮವನ್ನು ಯಾವುದೋ ಪುರಾತನ ಸಿರಿವಂತರಿಂದಲೋ ಶೂರರಿಂದಲೋ ಆಗಿರಬೇಕೆಂದು ಗುರ್ತಿಸುತ್ತಿದ್ದಾಗ, ಹಿಂದೂಗಳು ಮಾತ್ರವೇ ತಮ್ಮ ಉಗಮವನ್ನು ಸಾಧು-ಸಂತರಿಂದ ಎಂದು ಗುರ್ತಿಸಿಕೊಳ್ಳುವಲ್ಲಿ ಹೆಮ್ಮೆಪಡುತ್ತಾರೆ’.

ಭಾರತವು ಪರಕೀಯರ ಆಡಳಿತಕ್ಕೆ ತುತ್ತಾಗಿ ಸಹಸ್ರ ವರ್ಷಗಳ ದಾಸ್ಯದಿಂದ ನರಳಿದ್ದು ಇತಿಹಾಸ. ಇದಕ್ಕೆ ಸ್ವಾಮೀಜಿ ದೇವರನ್ನು ಹಳಿಯಲಿಲ್ಲ. ಹಣೆಬರಹವನ್ನು ಶಪಿಸಲೂ ಇಲ್ಲ. ಬದಲಾಗಿ ವಾಸ್ತವವನ್ನು ಪೂರ್ವಾಗ್ರಹವಿಲ್ಲದೆ ತೆರೆದಿಟ್ಟರು. ಅವರ ಹಲವು ವರ್ಷಗಳ ದೇಶ ಪರ್ಯಟನೆ ಭಾರತದ ದುಸ್ಥಿತಿಗೆ ಕಾರಣಗಳನ್ನು ಸುಸ್ಪಷ್ಟಗೊಳಿಸಿದವು. ಅವರು ಹೇಳುತ್ತಾರೆ, ‘ನನ್ನ ಭರವಸೆಯಿರುವುದು ಯುವ ಸಮುದಾಯದಲ್ಲಿ, ಆಧುನಿಕ ಜನಾಂಗದಲ್ಲಿ. ಭಾರತವನ್ನು ಮೇಲೆತ್ತುವುದರಲ್ಲಿ ಯುವಜನರರ ಪಾತ್ರ ಹಿರಿದು. ಕೈಗಳನ್ನು ಜೇಬುಗಳಲ್ಲಿ ತುಂಬಿಕೊಂಡು ಯಶಸ್ಸಿನ ಏಣಿಯನ್ನು ಏರಲು ಸಾಧ್ಯವಿಲ್ಲ. ದೌರ್ಬಲ್ಯ ಹಾಗೂ ಹೇಡಿತನಗಳಿಂದ ಭಾರತ ತನ್ನತನವನ್ನೇ ಕಳೆದುಕೊಂಡಿದೆ. ಆಲಸ್ಯವೇ ಎಲ್ಲ ಕೆಡುಕುಗಳ ಮೂಲ. ಕಷ್ಟಪಡದೇ ಇಷ್ಟಪ್ರಾಪ್ತಿಯಿಲ್ಲ… ನಿಮಗೆ ನೀವೇ ಸಹಾಯ ಮಾಡಿಕೊಳ್ಳಲಾಗದಿದ್ದರೆ ನೀವು ಬದುಕಲು ಅನರ್ಹರು. ವ್ಯಕ್ತಿಯಾಗಲಿ, ಸಮಾಜವಾಗಲಿ ಕಡೆಗೆ ರಾಷ್ಟ್ರವೇ ಆಗಲಿ ಉದ್ಧಾರವಾಗಬೇಕಾದರೆ ಉದ್ಯಮಶೀಲತೆ, ಅಸೀಮ ಧೈರ್ಯ, ಅಪಾರ ಶಕ್ತಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಂಪೂರ್ಣ ವಿಧೇಯತೆ ಇರಲೇಬೇಕು. ನಿಮ್ಮ ಭಾಗ್ಯದ ದಿನಗಳನ್ನು ರೂಪಿಸಿಕೊಳ್ಳಬೇಕಾದವರು ನೀವೇ. ನೆನಪಿಡಿ. ಶಿರಬಾಗಿದವನು ಮಾತ್ರವೇ ಸರದಾರನಾಗುತ್ತಾನೆ’.

ಸ್ವಾಮಿ ವಿವೇಕಾನಂದರೇ ಧಗಧಗಿಸಿ ಉರಿಯುತ್ತಿರುವ ರಾಷ್ಟ್ರಭಕ್ತಿಯ ಜ್ವಾಲಾಮುಖಿ ಆಗಿದ್ದರು. ರಾಷ್ಟ್ರಕ್ಕಾಗಿ ತಮ್ಮ ಪ್ರಾಣತ್ಯಾಗಕ್ಕೆ ಸಿದ್ಧರಾಗಿದ್ದ ಅವರು ಅಮೆರಿಕದ ಶ್ರೀಮತಿ ಹೆನ್ರಿರೈಟ್​ರವರಿಗೆ ಹೇಳುತ್ತಾರೆ-‘ನಾನು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ನೂರ್ಮಡಿಗೊಳಿಸಬಯಸುವೆ. ಅದಾಗಲೇ ಕಾರ್ಯಪ್ರವೃತ್ತನಾಗಿರುವ ನನ್ನನ್ನು ಬ್ರಿಟಿಷರು ಗುಂಡಿಟ್ಟುಕೊಲ್ಲಬಹುದೇ? ನಾನದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೇನಾದರೂ ಆದರೆ ಅದು ಬ್ರಿಟಿಷರ ಆಡಳಿತದ ಶವಪೆಟ್ಟಿಗೆಗೆ ಹೊಡೆದ ಮೊದಲ ಮೊಳೆ ಆಗುತ್ತದೆ. ನಾನಂತೂ ನನ್ನ ದೇಶಬಾಂಧವರ ಧಮನಿಧಮನಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ತುಂಬುತ್ತ ಹೋಗುತ್ತೇನೆ’.

ಅಸಂಖ್ಯಾತ ಜನರ ತ್ಯಾಗಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಭಾರತದ ಯುವಜನತೆಯಲ್ಲಿ ಸ್ವಾಮಿ ವಿವೇಕಾನಂದರು ಅಪಾರ ಭರವಸೆ ಇರಿಸಿದ್ದರು. ನಮ್ಮ ಸಮಾಜದಲ್ಲಿ ನಾವು ಕೇವಲ ಇಂಜಿನಿಯರ್, ವೈದ್ಯ, ವಿಜ್ಞಾನಿ, ವ್ಯಾಪಾರಿ, ಶಿಕ್ಷಕ, ಲೆಕ್ಕಪರಿಶೋಧಕ ಎಂದಷ್ಟೇ ಐಡೆಂಟಿಟಿ ಹೊಂದಿದ್ದರೆ ಸಾಲದು. ‘ನಾನೊಬ್ಬ ಸ್ವತಂತ್ರ ಭಾರತದ ಪ್ರಜೆ’ ಎಂಬುದೇ ನಮ್ಮ ಪ್ರಾಥಮಿಕ ವ್ಯಕ್ತಿತ್ವ. ಆಗ ಮಾತ್ರ ನಾವು ನಮ್ಮ ಕರ್ತವ್ಯಗಳಲ್ಲಿ ಸ್ಪೂರ್ತಿ ಹಾಗೂ ತಾದಾತ್ಮ್ಯ ಪಡೆಯಲು ಸಾಧ್ಯ.

ಪೌರತ್ವಕ್ಕೆ ಒಂದು ಯೋಗ್ಯ ಮಾನಸಿಕ ಪ್ರೌಢಿಮೆ ಅತ್ಯಗತ್ಯ. ರಾಷ್ಟ್ರದ ಆಗುಹೋಗುಗಳ ಬಗ್ಗೆ ತಿಳಿವಳಿಕೆ ಹಾಗೂ ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜೀವಂತ ವ್ಯಕ್ತಿತ್ವ ನಮ್ಮದಾಗಬೇಕು. ಸೋಮಾರಿತನ ಹಾಗೂ ನಿಷ್ಕಿ›ಯತೆಗಳು ಯುವಕರಿಗೆ ಶೋಭೆಯಲ್ಲವಷ್ಟೇ ಅಲ್ಲ ರಾಷ್ಟ್ರದ್ರೋಹವೆಂದೇ ಪರಿಗಣಿತವಾಗುತ್ತದೆ. ಯುವಜನತೆ, ‘Our country needs heroes; be heroes’ ಎಂದು ಹೇಳುತ್ತಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಮತದಾನದ ಹಕ್ಕನ್ನು ನೀಡಿದೆ. ಇಂದು ಭಾರತ ಯುವರಾಷ್ಟ್ರ. ಶೇಕಡ 60ರಷ್ಟು ಜನಸಂಖ್ಯೆ 40ರೊಳಗಿನ ವಯೋಮಿತಿಯವರೆಂಬ ಶ್ಲಾಘನೆಯ ಮಾತುಗಳು ವೇದಿಕೆಗಳ ಭಾಷಣಕ್ಕಷ್ಟೇ ಸೀಮಿತವಾಗುತ್ತಿರುವುದು ದುರದೃಷ್ಟಕರ. ದುಷ್ಟರ ಸಂಘಟನೆಯಿಂದ ಉಂಟಾದ ಅನಾಹುತಕ್ಕಿಂತ ಸಜ್ಜನರ ಅಸಂಘಟನೆ ಹಾಗೂ ನಿಷ್ಕಿ›ಯತೆಗಳು ದೇಶಕ್ಕೆ ಮಾರಕವಾಗಿದೆ! ಯುವಜನತೆ ರಾಷ್ಟ್ರದ ಅಭ್ಯುದಯದಲ್ಲಿ ನಿರ್ಲಕ್ಷ್ಯ ತಳೆಯುತ್ತಿರುವುದು ನೋವಿನ ಸಂಗತಿ.

ಎಲ್ಲ ಕಾಲದಲ್ಲಿಯೂ ಯಾವುದೇ ರಾಷ್ಟ್ರಕ್ಕೂ ಶತ್ರುರಾಷ್ಟ್ರವೆಂಬುದು ಇದ್ದೇ ಇರುತ್ತದೆ. ಹೊರಗಿನ ಶತ್ರುವನ್ನು ನಿಯಂತ್ರಿಸಲು ನಾಯಕರು ಖಡ್ಗಗಳನ್ನು, ಶಸ್ತ್ರಗಳನ್ನು ಇತ್ತೀಚಿನ ಬುಲೆಟ್​ಗಳನ್ನು ಬಳಸಿ ಪರಿಸ್ಥಿತಿಯನ್ನು ಹದ್ದುಬಸ್ತು ತರಬಯಸುವುದು ಲೋಕಾರೂಢಿ. ಆದರೆ ಪ್ರಜೆಯಾದವನು ರಾಷ್ಟ್ರನಾಯಕನ ನೈತಿಕ ಸ್ಥೈರ್ಯವನ್ನು ವೃದ್ಧಿಸಬೇಕಾದದ್ದು ತನ್ನ ಬ್ಯಾಲೆಟ್ ಬಲದ ಮೂಲಕ! ಅರ್ಥಾತ್ ಮತ ಚಲಾಯಿಸುವುದರ ಮೂಲಕ. ವಿಶೇಷವಾಗಿ ಜೀವನದಲ್ಲಿ ಪ್ರಥಮವಾಗಿ ಮತ ಚಲಾಯಿಸುತ್ತಿರುವವರಿಗೆ ಮತಚಲಾವಣೆಯ ದಿನವೂ ನಿಜಕ್ಕೂ ‘ಪೌರತ್ವದ ಜನ್ಮದಿನ’ ಅಲ್ಲವೇ?

ಯುವಜನರೇ, ಯೌವನ ಜೀವನದ ವಸಂತಕಾಲ! ಬದುಕಿನ ಶಕ್ತಿಯುತ ಅವಧಿ, ಸ್ವಾತಂತ್ರ್ಯವೆಂಬ ಹೊಣೆಗಾರಿಕೆಗೆ ಘನತೆಯನ್ನು ದೊರಕಿಸಿಕೊಳ್ಳಬೇಕಾದ ಅಮೃತಘಳಿಗೆ. ಅಂದು ರಾಷ್ಟ್ರಾಭ್ಯುದಯಕ್ಕೆ ಪ್ರಾಣ ತೆರಲು ವಿವೇಕಾನಂದರು ಸಿದ್ಧರಿದ್ದರು. ನಾವಿಂದು ರಾಷ್ಟ್ರಾಭ್ಯುದಯಕ್ಕೆ ಬದುಕಬೇಕಿದೆ! ನಾವು ತಲೆಎತ್ತಿ ನಿಲ್ಲುವ ಹಾಗೂ ಇತರರ ಸ್ವಾತಂತ್ರ್ಯವನ್ನು ಗೌರವಿಸುವ ಧ್ಯೇಯಕ್ಕೆ ಮಣಿಯಬೇಕಾಗಿದೆ. ಅರ್ಥಾತ್,”Our youths are not useless, but used less; our youths are not hopeless but hoped less’ ಎಂಬುದನ್ನು ಸಾಕ್ಷಾತ್ತಾಗಿ ಮನವರಿಕೆ ಮಾಡಿಕೊಡಲು ಇದೊಂದು ಸುವರ್ಣಾವಕಾಶವೇ ಸರಿ.

ದೇಶದ ಹಿತದೃಷ್ಟಿಯನ್ನು ಒತ್ತಟ್ಟಿಗಿಟ್ಟು ಕೇವಲ ಜಾತಿ, ಹಣ ಮತ್ತು ಆಮಿಷಗಳೇ ಮೊದಲಾದ ಓಲೈಕೆಗಳಿಗೆ ಒಳಗಾಗಿ ಮತದಾನ ಮಾಡುವುದು ನಿಜಕ್ಕೂ ಅನೈತಿಕ ಹಾಗೂ ಆಘಾತಕಾರಿಯಲ್ಲವೆ? ನೆನಪಿಡಿ ನಿಮ್ಮ ಮತದಾನ ದೇಶಕ್ಕೆ ವರದಾನ!

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)