ಆಶಾವಾದಿಗಳಾಗೋಣ, ಬೆಳವಣಿಗೆಯತ್ತ ದೃಷ್ಟಿನೆಡೋಣ…

| ಡಿ.ಮುರಳೀಧರ

ವಿತ್ತೀಯ ಕೊರತೆ ಹಿಗ್ಗುತ್ತಿರುವುದು, ರಫ್ತು ಪ್ರಮಾಣದಲ್ಲಿ ಕುಸಿತ, ತಕ್ಕಷ್ಟು ಪ್ರಮಾಣದಲ್ಲಿ ಸಾಲ ದೊರಕದಿರುವುದು, ಕೃಷಿಕರ ಸಮಸ್ಯೆಗಳು ಮತ್ತು ಜಾಗತಿಕವಾಗಿ ‘ಆರ್ಥಿಕ ರಾಷ್ಟ್ರೀಯತೆ’ ಪರಿಕಲ್ಪನೆ ಗರಿಗೆದರುತ್ತಿರುವುದು… ಹೀಗೆ ಸರ್ಕಾರ ಮುತುವರ್ಜಿವಹಿಸಬೇಕಾದ ಹತ್ತೆಂಟು ಪ್ರಮುಖ ಬಾಬತ್ತುಗಳಿವೆ. ಆದ್ದರಿಂದ ಸರ್ಕಾರ ಭವಿಷ್ಯದತ್ತ ಮುಖಮಾಡಿ ಸಮಸ್ಯೆಗಳನ್ನು ಪರಿಹರಿಸಲಿ.

ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಮುಖ್ಯವೆನಿಸಿರುವ ಎರಡು ಬೆಳವಣಿಗೆಗಳು ಇತ್ತೀಚೆಗೆ ಘಟಿಸಿದವು. ಅಂದಹಾಗೆ ಇವೆರಡು ಪರಸ್ಪರ ಸಂಬಂಧ ಹೊಂದಿದಂಥವು. ಈ ವಿಷಯ ಮಾಧ್ಯಮಗಳಲ್ಲೂ ವ್ಯಾಪಕವಾಗಿ ರ್ಚಚಿಸಲ್ಪಟ್ಟಿತು. ಪ್ರಸಕ್ತ ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಶೇ. 8.2ರಷ್ಟು ಏರಿಕೆ ದಾಖಲಿಸಿದ್ದ ಜಿಡಿಪಿ ಪ್ರಮಾಣ, ಎರಡನೇ ತ್ರೖೆಮಾಸಿಕದ ವೇಳೆಗೆ ನಿರೀಕ್ಷೆಗಿಂತ ಕೆಳಕ್ಕೆ ಅಂದರೆ ಶೇ. 7.1ಕ್ಕೆ ಕುಸಿದಿದೆ. ಇದು ನಿರಾಶಾದಾಯಕ ಸಂಗತಿಯಾಗಿದ್ದುದು ಮಾತ್ರವಲ್ಲ, ಸರ್ಕಾರ ನೀಡಿದ ವಿವರಣೆಗಳೂ ಅಂದುಕೊಂಡಷ್ಟು ವಿಶ್ವಾಸಾರ್ಹವಾಗಿರಲಿಲ್ಲ ಎನ್ನಬೇಕು. ಇದರಿಂದ ಆಗಬಹುದಾದ ಪ್ರಭಾವವನ್ನು ತಗ್ಗಿಸಲೋ ಎಂಬಂತೆ, ಮೂಲಾಧಾರ ವರ್ಷವನ್ನು ಬದಲಿಸುವ ಮೂಲಕ ಯುಪಿಎ ಆಡಳಿತಾವಧಿಯಲ್ಲಿನ ಕಳೆದ ವರ್ಷಗಳ ಕಡಿಮೆ ಮಟ್ಟದ ಜಿಡಿಪಿ ಅಂಕಿ-ಅಂಶಗಳನ್ನು ನೀತಿ ಆಯೋಗ ಘೋಷಿಸಿತು. ಒಟ್ಟಿನಲ್ಲಿ ಕೋಲಾಹಲವೋ ಕೋಲಾಹಲ.

ಇನ್ನು ದೆಹಲಿಯಲ್ಲಿ ನಡೆದ ಬೃಹತ್ ರ್ಯಾಲಿಯ ಕಡೆ ಗಮನ ಹರಿಸೋಣ. ಅಕ್ಕಪಕ್ಕದ ರಾಜ್ಯಗಳ ರೈತರು ಹೀಗೆ ರ್ಯಾಲಿಯಲ್ಲಿ ಭಾಗವಹಿಸಿ ಕೃಷಿಸಾಲ ಮನ್ನಾ ಮಾಡುವಂತೆ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆಗಳು ಸಿಗುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾಯಿತು ಹಾಗೂ ಎಲ್ಲ ಎದುರಾಳಿ ರಾಜಕೀಯ ಪಕ್ಷಗಳಿಂದಲೂ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಈ ರ‍್ಯಾಲಿ ಯಶಸ್ವಿಯಾಯಿತು. ರೈತರ ಇಂಥ ಬೃಹತ್ ರ‍್ಯಾಲಿ ಸರ್ಕಾರಕ್ಕೆ ಒಂದು ಗಂಭೀರ ಸಂದೇಶವನ್ನೇ ರವಾನಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮೊದಲ ತ್ರೖೆಮಾಸಿಕದ ರೀತಿಯಲ್ಲೇ ಜಿಡಿಪಿ ಬಾಬತ್ತಿನಲ್ಲಿ ಮಹತ್ತರ ಸಾಧನೆ ಮತ್ತೊಮ್ಮೆ ದಾಖಲಾಗುತ್ತದೆ ಎಂಬುದಾಗಿ ಬಹಳಷ್ಟು ಮಂದಿಯೇನೂ ನಿರೀಕ್ಷಿಸಿರಲಿಲ್ಲವಾದರೂ, ಎರಡನೇ ತ್ರೖೆಮಾಸಿಕದಲ್ಲಿನ ಸಾಧನೆ ನಿರಾಶಾದಾಯಕವಾಗಿತ್ತು ಎನ್ನಲಡ್ಡಿಯಿಲ್ಲ. ಈ ಸಂಬಂಧವಾಗಿ ಲಭ್ಯವಾಗಿರುವ ಅಂಕಿ-ಅಂಶದ ವಿವರಗಳೂ ಕೊಂಚ ಕಳವಳಕಾರಿಯಾಗಿಯೇ ಇವೆ. ಹಿಂದಿನ ತ್ರೖೆಮಾಸಿಕದಲ್ಲಿ ಹುರುಪಿನ ಬೆಳವಣಿಗೆಯನ್ನು ದಾಖಲಿಸಿದ್ದ ಕೃಷಿ ವಲಯ, ಈ ಬಾರಿ ಇದ್ದಕ್ಕಿದ್ದಂತೆ ಮಂದಗಾಮಿಯಾಗಿ ಹಿಂದೆಬಿದ್ದಿದೆ. ಇದು ದೆಹಲಿಯಲ್ಲಿ ಜರುಗಿದ ರ್ಯಾಲಿಯಲ್ಲಿ ಕೃಷಿಕ ಸಮುದಾಯದವರ ಕುಂದುಕೊರತೆ, ಬೇಗುದಿಗಳೊಂದಿಗೆ ಒಂದು ರೀತಿಯಲ್ಲಿ ತಾಳೆಯಾಗುವಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ವಲಯದ ಬೆಳವಣಿಗೆ ಗತಿ ಕೇವಲ ಶೇ.2.9ರಷ್ಟಿದೆ. ಕೃಷಿ ರಂಗದ ಜಿಡಿಪಿ ಪ್ರಮಾಣ ಕಮ್ಮಿಯಾಗಿದ್ದರೂ, ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಈ ವಲಯವನ್ನೇ ಅವಲಂಬಿಸಿದೆ ಎಂಬುದನ್ನು ಮರೆಯುವಂತಿಲ್ಲ. ಇನ್ನು, ಆರ್ಥಿಕತೆಯ ಇತರ ವಲಯಗಳಲ್ಲಿ ಕೂಡ ಎದುರುಗಾಳಿ ಬೀಸುತ್ತಿರುವಂತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಸೇವಾವಲಯದ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದ್ದುದರಲ್ಲಿ ಸಮಾಧಾನದ ಸಂಗತಿಯೆಂದರೆ, ಒಟ್ಟು ಬಂಡವಾಳ ರಾಶಿ ಶೇ.32ರಷ್ಟಿರುವುದು. ಇದು ಕಳೆದ ಒಂಭತ್ತು ತ್ರೖೆಮಾಸಿಕಗಳಲ್ಲಿ ಹೆಚ್ಚಿನ ಮಟ್ಟದ್ದು. ಬೆಳವಣಿಗೆ ಗತಿ ಮತ್ತೆ ವೇಗ ಗಳಿಸಿಕೊಳ್ಳಬಹುದು ಎಂಬುದನ್ನು ಇದು ಸೂಚಿಸುತ್ತದೆ. ಇನ್ನೊಂದೆಡೆ, ಖರೀದಿ ಸೂಚ್ಯಂಕ 54ರಷ್ಟಿದ್ದು, ಮುಂಬರುವ ತಿಂಗಳುಗಳಲ್ಲಿ ಉತ್ಪಾದನಾ ವಲಯ ಏರುಗತಿ ದಾಖಲಿಸಬಹುದು ಎಂಬುದನ್ನು ಇದು ಹೇಳುತ್ತದೆ. ಇದೀಗ ಮುಗಿದ ಹಬ್ಬಗಳ ಋತು ಬೆಳವಣಿಗೆ ದರದ ಮೇಲೆ ಅಂಥ ಪರಿಣಾಮ ಬೀರದಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಯುತ್ತಿರುವುದು ಮೂರನೇ ತ್ರೖೆಮಾಸಿಕದಲ್ಲಿ ಬೆಳವಣಿಗೆ ದರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಶೇ.7.5ರ ಬೆಳವಣಿಗೆ ದರ ಸಾಧಿಸುವ ಸರ್ಕಾರದ ಆಶಯ ಕಾರ್ಯಸಾಧ್ಯ ಎನಿಸುತ್ತದೆ. ಐಎಲ್​ಎಫ್​ಎಸ್ (ಇನ್​ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವಿಸಸ್) ವಿವಾದದಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ (ಎಂಎಸ್​ಎಂಇ) ರಂಗಕ್ಕೆ ನೀಡಲಾಗುವ ಸಾಲದ ಗಾತ್ರ ಕುಸಿದಿದೆ. ಆದರೆ, ಸಾಲವನ್ನು ಉದಾರಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಈಚೆಗೆ ನಿರ್ಧರಿಸಿರುವುದರಿಂದಾಗಿ ಎಂಎಸ್​ಎಂಇ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಹೀಗಿದ್ದರೂ, ಆರ್ಥಿಕತೆಯಲ್ಲಿನ ಮಂದಗತಿಯು ಬೇಡಿಕೆಯನ್ನು ಕುಂಠಿತಗೊಳಿಸುವ ಸಾಧ್ಯತೆಯೂ ಇಲ್ಲದಿಲ್ಲ.

ಇನ್ನು, ಮತ್ತೊಂದು ಚರ್ಚಾವಿಷಯದತ್ತ ಗಮನಿಸೋಣ. ಈ ಹಿಂದಿನ ವರ್ಷಗಳ ಜಿಡಿಪಿ ಅಂಕಿಸಂಖ್ಯೆಯನ್ನು ಕಡಿಮೆಗೊಳಿಸುವ ನೀತಿ ಆಯೋಗದ ನಿರ್ಧಾರ ಜಾಣತನದ್ದಲ್ಲ ಎಂದೇ ಹೇಳಬೇಕು-ಈ ಕ್ರಮಕ್ಕೆ ಅನೇಕ ಸಮರ್ಥನೆಗಳು ಮತ್ತು ವಿವರಣೆಗಳು ಇರಬಹುದಾದರೂ. ಈ ವಿಚಾರದಲ್ಲಿ ಸರ್ಕಾರ ಹೆಚ್ಚುವರಿ ಅಂಕ ಗಳಿಸುವ ಜರೂರತ್ತೇನೂ ಇರಲಿಲ್ಲ. ಈ ಸರ್ಕಾರ ಬಂದು ನಾಲ್ಕೂವರೆ ವರ್ಷವಾಗಿದೆ. ಈ ಹಂತದಲ್ಲಿ ಮುಂದಕ್ಕೆ ನೋಡಬೇಕೆ ವಿನಾ ಹಿಂದಕ್ಕಲ್ಲ. ವಿತ್ತೀಯ ಕೊರತೆ ಹಿಗ್ಗುತ್ತಿರುವುದು, ರಫ್ತು ಪ್ರಮಾಣದಲ್ಲಿ ಕುಸಿತ, ತಕ್ಕಷ್ಟು ಪ್ರಮಾಣದಲ್ಲಿ ಸಾಲ ದೊರಕದಿರುವುದು, ಕೃಷಿಕರ ಸಮಸ್ಯೆಗಳು ಮತ್ತು ಜಾಗತಿಕವಾಗಿ ‘ಆರ್ಥಿಕ ರಾಷ್ಟ್ರೀಯತೆ’ ಪರಿಕಲ್ಪನೆ ಗರಿಗೆದರುತ್ತಿರುವುದು… ಹೀಗೆ ಸರ್ಕಾರ ಮುತುವರ್ಜಿವಹಿಸಬೇಕಾದ ಹತ್ತೆಂಟು ಪ್ರಮುಖ ಬಾಬತ್ತುಗಳಿವೆ. ಇದರ ಬದಲು ಅಹಂವಿಷಯಗಳಲ್ಲಿಯೇ ಕಳೆದುಹೋದರೆ ಪ್ರಯೋಜನವೇನು? ನಿಜ, ಈಗ ಆರ್ಥಿಕ ಬೆಳವಣಿಗೆ ದರದಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಹೀಗಿದ್ದರೂ ಆರ್ಥಿಕತೆಯನ್ನು ಬಾಧಿಸುವ ಅನೇಕ ಸಂಗತಿಗಳಿರುವುದನ್ನು ಮರೆಯಬಾರದು. ಏಕೆಂದರೆ, ಮೇಲ್ನೋಟಕ್ಕೆ ಗೋಚರಿಸದ ಅನೇಕ ಸಂಗತಿಗಳು ಆರ್ಥಿಕತೆಯನ್ನು ಪ್ರಭಾವಿಸಬಲ್ಲವು.

ಕೃಷಿ ರಂಗವು ಅರ್ಥಿಕತೆಗೆ ಭಾರಿ ಸವಾಲನ್ನೇ ಒಡ್ಡಿದೆ ಎನ್ನಬೇಕು. ಕೃಷಿ ಬೆಳೆಗಳ ಬೆಂಬಲಬೆಲೆಯನ್ನು ಪರಿಷ್ಕರಿಸಲಾಗಿದ್ದರೂ ಅದರಿಂದ ರೈತರೇನೂ ಖುಷಿಯಾಗಿಲ್ಲ. ಅವರ ಸಮಸ್ಯೆಗಳು ನೈಜವಾದವು ಎಂಬುದನ್ನು ತಳ್ಳಿಹಾಕಲಾಗದು. ಅನೇಕ ರೈತರಿಗೆ ಸಾಲವನ್ನು ಮರುಪಾವತಿಸಲಾಗುತ್ತಿಲ್ಲ. ಅಂಥವರಲ್ಲಿ ಕೆಲವರು ಆತ್ಮಹತ್ಯೆಯೇ ಪರಿಹಾರ ಎಂದು ಆಲೋಚಿಸುತ್ತಾರೆ. ಹೊಸ ತಲೆಮಾರಿನ ಕೃಷಿಕ ಸಮುದಾಯದ ಆಸೆಆಕಾಂಕ್ಷೆಗಳು ಕೂಡ ಎತ್ತರದಲ್ಲಿಯೇ ಇವೆ. ಕೃಷಿ ಬೆಳೆಗಳಿಗೆ ಲಭಿಸುವ ಬೆಲೆ ಅವರ ನಿರೀಕ್ಷೆಗಳನ್ನು ಈಡೇರಿಸಲಾಗದು. ಹಾಗಂತ ಸರ್ಕಾರಗಳು ಈ ನಿಟ್ಟಿನಲ್ಲಿ ಏನೂ ಮಾಡಿಯೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಆದರೂ ಕೃಷಿರಂಗವು ಒಡ್ಡುವ ರಾಚನಿಕ ಸವಾಲನ್ನು ಎದುರಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ದೇಶದ ಕೃಷಿಕ್ಷೇತ್ರವು ಸಂಕೀರ್ಣವಾಗಿದ್ದು, ಇಡೀ ದೇಶಕ್ಕೆ ಅನ್ವಯವಾಗುವಂತೆ ಏಕಮೇವ ಪರಿಹಾರವನ್ನು ಕಂಡುಕೊಳ್ಳುವುದು ಕೂಡ ಸಾಧ್ಯವಿಲ್ಲ. ಆದರೂ, ಕೆಲ ಮೂಲಭೂತ ಸಮಸ್ಯೆಗಳು ದೇಶದ ರೈತಸಮೂಹವನ್ನು ಏಕಪ್ರಕಾರವಾಗಿ ಕಾಡುತ್ತಿವೆ. ಉದಾಹರಣೆಗೆ- ಮೂಲಸೌಕರ್ಯ, ಶೀತಲಗೃಹಗಳ ಕೊರತೆ, ಮಧ್ಯವರ್ತಿಗಳ ಹಾವಳಿ, ಮಣ್ಣು ಸವಕಳಿ, ಸಾಲಸೌಲಭ್ಯದ ಸಮಸ್ಯೆ, ಮಾರುಕಟ್ಟೆ ನಿಯಂತ್ರಣ ಇತ್ಯಾದಿ. ಕೆಲ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ತಾತ್ಕಾಲಿಕ-ಚಿಚ್ಞಛಚಜಿಛ ಪರಿಹಾರ ದೊರಕಿಸಿವೆ. ಇದರಿಂದ ಚರ್ಮವನ್ನು ಮತ್ತಷ್ಟು ಗಾಯಮಾಡಿದಂತಾಗಿಯೇ ವಿನಾ ಮತ್ತೇನೂ ಆಗಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಿದೆ. ಈ ಪೈಕಿ ಕೆಲ ಸಮಸ್ಯೆಗಳು ಬಹುಕಾಲದಿಂದ ಇರುವಂಥವು ಎಂಬುದನ್ನು ಒಪ್ಪಲೇಬೇಕು. ಆದರೂ, ಪ್ರಯತ್ನ ಮಾಡಬಹುದಲ್ಲ? ಒಂದು ಉದಾಹರಣೆ ನೀಡುವುದಾದರೆ- ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಮಾಡುವಾಗ ಸಹಕಾರ ಒಕ್ಕೂಟ ತತ್ತ್ವವನ್ನು ಅನುಸರಿಸಿತು. ಅಂದರೆ ಎಲ್ಲ ರಾಜ್ಯಗಳ ಸಹಮತಿಯನ್ನು ಪಡೆಯಿತು. ಹೀಗಾಗಿ ಜಾರಿ ಸುಲಭವಾಯಿತು. ಇದೇ ಮಾದರಿಯನ್ನು ಕೃಷಿ ರಂಗದ ಸಮಸ್ಯೆಗಳ ಪರಿಹಾರಕ್ಕೂ ಬಳಸಿದರೆ ಎಷ್ಟು ಚೆನ್ನಾಗಿರುತ್ತದಲ್ಲವೆ?! ಒಂದೊಮ್ಮೆ ನಾವು ಈಗಲೂ ಕೃಷಿರಂಗದ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸದೆ ಹೋದರೆ ಮುಂದೆ ಇದು ಟೈಮ್ ಬಾಂಬ್ ಆಗಿ ಪರಿವರ್ತನೆಯಾಗುವುದು ನಿಶ್ಚಿತ. ಅದರಿಂದ ದೇಶದ ಬೆಳವಣಿಗೆ ಮತ್ತು ಒಳಗೊಳ್ಳುವಿಕೆ ಮೇಲೆ ದುಷ್ಪರಿಣಾಮ ಆಗಿಯೇ ಆಗುತ್ತದೆ. ಏಕೆಂದರೆ, ದೇಶದ ಶೇ.55ರಷ್ಟು ಜನ ಇಂದಿಗೂ ಕೃಷಿಯನ್ನೇ ಅವಲಂಬಿಸಿದ್ದಾರೆ.

ಪ್ರಸಕ್ತ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ ನೀಡುವ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದು ಗ್ರಾಮಾಂತರದ ಜೀವನಶೈಲಿಯನ್ನೇ ಬದಲಿಸಲಿದ್ದು, ಅದಕ್ಕೆ ತಕ್ಕಂತೆ ಜೀವನವೆಚ್ಚ ಕೂಡ ಏರಲಿದೆ. ಅದೇ ರೀತಿ, ಈ ಬದಲಾವಣೆಗಳಿಗೆ ತಕ್ಕಂತೆ ರೈತರು ಉತ್ತಮ ಜೀವನ ನಡೆಸುವಂತಾಗಲು ಕೃಷಿ ಆದಾಯ ಕೂಡ ಹೆಚ್ಚಬೇಕಾಗುತ್ತದೆ.

ಈ ಎಲ್ಲದರ ನಡುವೆ, ಆರ್ಥಿಕತೆಗೆ ಶುಭಸೂಚನೆಗಳೂ ಕಂಡುಬರುತ್ತಿವೆ. ಕಚ್ಚಾತೈಲ ದರದಲ್ಲಿ ಇಳಿಕೆ, ಚೀನಾ-ಅಮೆರಿಕ ವ್ಯಾಪಾರ ಸಮರಕ್ಕೆ ತಾತ್ಕಾಲಿಕ ವಿರಾಮ, ರೂಪಾಯಿ ಬಲವರ್ಧನೆ ಮುಂತಾದ ಅಂಶಗಳು ಬೆಳವಣಿಗೆಗೆ ಇಂಧನ ವಾಗಬಲ್ಲವು. ನಾವು ಆಶಾವಾದಿಗಳಾಗಿರೋಣ. ಭರವಸೆಯೇ ಜೀವನ ಅಲ್ಲವೆ?

(ಲೇಖಕರು ಆರ್ಥಿಕ ತಜ್ಞರು)