ಶುರುವಾಗಿದೆ ಜಾಗತಿಕ ವ್ಯಾಪಾರದ ಮಹಾಯುದ್ಧ!

ಅಮೆರಿಕ-ಚೀನಾ ನಡುವೆ ತುರ್ತು ಮಾತುಕತೆ ನಡೆಯುವ ಸಾಧ್ಯತೆಗಳು ಕಾಣುತ್ತಿಲ್ಲ. ಈ ನಡುವೆ ತಾನು ಹೊಂದಿರುವ  70 ಲಕ್ಷ ಕೋಟಿ ರೂ. ಗೂ ಹೆಚ್ಚು ಮೌಲ್ಯದ ಅಮೆರಿಕದ ಖಜಾನೆ ಬಾಂಡ್​ಗಳನ್ನು ಮರಳಿಸಿ ಆರ್ಥಿಕ ವ್ಯವಸ್ಥೆಯನ್ನೇ ಹಳಿ ತಪ್ಪಿಸುವುದಾಗಿ ಚೀನಾ ಬೆದರಿಕೆ ಹಾಕಿದೆ.

ವಿಶ್ವವು ಪ್ರಮುಖ ಸಂಘರ್ಷವೊಂದಕ್ಕೆ ಸಾಕ್ಷಿಯಾಗುತ್ತಿದೆ. ಇದನ್ನು ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಯುದ್ಧ ಎಂದೂ ಕರೆಯಬಹುದು. ಕಳೆದ ಶತಮಾನದಲ್ಲಿ ನಡೆದ ಸಾಂಪ್ರದಾಯಿಕ ಯುದ್ಧ ಇದಲ್ಲ, ಬದಲಿಗೆ ವ್ಯಾಪಾರದ ‘ಮೌನಯುದ್ಧ’ ಎಂದು ಹೇಳಬಹುದು. ನಾವಿಲ್ಲಿ ಹೇಳುತ್ತಿರುವುದು

ಸಂಪದ್ಭರಿತ ರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾ ನಡುವಿನ ತಡೆಯಿಲ್ಲದ ವಾಣಿಜ್ಯ ವಹಿವಾಟಿನ ಯುದ್ಧದ ಬಗ್ಗೆ. ಎಲ್ಲ ವಿವಾದಗಳಂತೆ ಇದು ಕೂಡ ಸಣ್ಣ ಕಾರಣಕ್ಕೆ ಶುರುವಾಗಿ ಅಗಾಧ ಸ್ವರೂಪ ಪಡೆದುಕೊಂಡಿದೆ. ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ರಾಷ್ಟ್ರಗಳು ಈ ಸಂಘರ್ಷದ ಭಾಗವಾಗುತ್ತವೆ. ಆ ಮೂಲಕ ಜಾಗತಿಕ ವಹಿವಾಟಿನ ಬೆನ್ನೆಲುಬೆನಿಸಿರುವ ವಿಶ್ವ ವ್ಯಾಪಾರ ಸಂಘಟನೆ ಹಾಗೂ ವಿಶ್ವ ವಾಣಿಜ್ಯ ಚಟುವಟಿಕೆಗಳಿಗಿರುವ ಸಮಾನ ಅವಕಾಶಗಳು ಸಂಕಷ್ಟಕ್ಕೀಡಾಗಬಲ್ಲವು.

ಚೀನಾದ ಅಪ್ರಾಮಾಣಿಕ ವಾಣಿಜ್ಯ ಚಟುವಟಿಕೆಗಳನ್ನು ನಿಯಂತ್ರಿಸಿ ಉದ್ಯಮಗಳನ್ನು ದೇಶಕ್ಕೆ ಮರಳಿ ಕರೆತರುವ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದರು. ಈ ವಿಚಾರವನ್ನು ಅಧಿಕಾರಕ್ಕೆ ಬಂದ ಆರಂಭದಿಂದಲೂ ಗಂಭೀರವಾಗಿ ಪರಿಗಣಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಜತೆಗೆ ನಿರಂತರ ಚರ್ಚೆ ನಡೆಸಿದ್ದರು. ಅಮೆರಿಕಕ್ಕೆ ಚೀನಾ ರಫ್ತು ಮಾಡುವ ಉತ್ಪನ್ನಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಪರಸ್ಪರ ವ್ಯಾಪಾರದಲ್ಲಿ ಚೀನಾ ಅಮೆರಿಕವನ್ನು ಮೀರಿಸಿದೆ. ಚೀನಾದ ವ್ಯಾಪಾರ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, 2018ರಲ್ಲಿ ಇದರ ಮೊತ್ತ 29.41 ಲಕ್ಷ ಕೋಟಿ ರೂ. (419 ಬಿಲಿಯನ್ ಡಾಲರ್) ಆಗಿದೆ. ಇದನ್ನು ಅರಿತರೆ ಟ್ರಂಪ್ ಬೆದರಿಕೆ ಹಿಂದಿನ ಉದ್ದೇಶ ತಿಳಿದುಕೊಳ್ಳಬಹುದು. ಇದರರ್ಥ ಅಮೆರಿಕದಿಂದ ಚೀನಾ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ರಫ್ತು ಮಾಡುತ್ತದೆ. ಈ ವ್ಯಾಪಾರದ ಅಂತರ ಚೀನಾ 2001ರಲ್ಲಿ ವಿಶ್ವ ವ್ಯಾಪಾರ ಸಂಘಟನೆ ಸೇರಿದ ಬಳಿಕ ಹೆಚ್ಚಾಗುತ್ತಲೇ ಇದೆ. ಚೀನಾದ ಈ ಬೆಳವಣಿಗೆ ಅಮೆರಿಕದ ಮೇಲೆ ದುಷ್ಪರಿಣಾಮ ಬೀರಿದ್ದು, ಅದರಲ್ಲೂ ಮುಖ್ಯವಾಗಿ ಉದ್ಯೋಗ, ಉತ್ಪಾದನೆ ಹಾಗೂ ಕೆಳಹಂತದ ಕೌಶಲ ಬಯಸುವ ಉದ್ಯೋಗಗಳನ್ನೇ ಕಸಿದುಕೊಂಡಿದೆ. ಅಮೆರಿಕನ್ನರಲ್ಲಿ ಇದು ಉಂಟು ಮಾಡಿದ ಅಸಮಾಧಾನ ಸುಪ್ತವಾಗಿತ್ತು. ಡೋನಾಲ್ಡ್ ಟ್ರಂಪ್ ಇದನ್ನು ಭಾವನಾತ್ಮಕವಾಗಿ ಬಳಸಿಕೊಂಡು ಚುನಾವಣೆಯಲ್ಲಿ ಜಯಗಳಿಸಿದರು.

ಕ್ಸಿ ಜಿನ್​ಪಿಂಗ್ 2013ರಲ್ಲಿ ಚೀನಾ ಅಧ್ಯಕ್ಷರಾದರು. ಸಾಮಾನ್ಯವಾಗಿ ಎರಡು ಅವಧಿಗೆ ಚೀನಾದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಜಿನ್​ಪಿಂಗ್ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದಲ್ಲಿ ಅವರು ಅತ್ಯಂತ ಅಧಿಕಾರಯುತ ವ್ಯಕ್ತಿ ಎಂಬುದನ್ನು ಇದು ಸೂಚಿಸುತ್ತದೆ. 2013ರಿಂದ ಪಕ್ಷ ಹಾಗೂ ದೇಶದ ಮೇಲೆ ಹಿಡಿತ ಹೊಂದಿದ್ದಾರೆ. ‘ಚೀನಾವನ್ನು ಆರ್ಥಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಯುತ ದೇಶವನ್ನಾಗಿಸುತ್ತೇನೆ ಹಾಗೂ ಆ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳುತ್ತೇನೆ’ ಎಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಭಾಷಣದಲ್ಲಿ ಕ್ಸಿ ಜಿನ್​ಪಿಂಗ್ ಘೋಷಿಸಿದ್ದರು. ಅಂದಿನಿಂದಲೂ ಅವರು ಆ ಮನೋಭಾವ ಮುಂದುವರಿಸಿದ್ದಾರೆ. 2013ರ ಬಳಿಕ ಯಾವುದೇ ದೇಶ ಚೀನಾವನ್ನು ಅನುಸರಿಸುತ್ತಿದೆ ಎಂದರೆ ಆ ದೇಶದ ಆರ್ಥಿಕ, ರಕ್ಷಣೆ ಸೇರಿ ಎಲ್ಲ ರಂಗಗಳ ನೀತಿಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ ಎಂದೇ ಅರ್ಥ.

ಕಳೆದ ಎರಡು ವರ್ಷಗಳಲ್ಲಿ ಹಲವು ಸುತ್ತಿನ ಚರ್ಚೆ ನಡೆದರೂ ಈ ಎರಡೂ ದೇಶಗಳ ನಡುವಿನ ವ್ಯಾಪಾರ ವಿಷಯದಲ್ಲಿನ ಸಂಘರ್ಷ ಮುಗಿದಿಲ್ಲ. ಎರಡೂ ದೇಶಗಳನ್ನು ಮುನ್ನಡೆಸುತ್ತಿರುವ ಅಧ್ಯಕ್ಷರ (ಟ್ರಂಪ್, ಜಿನ್​ಪಿಂಗ್) ಆಡಳಿತ ವೈಖರಿ ಗಮನಿಸಿದರೆ, ಯಾರೂ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಇವರು ಮುಂದಿಡುತ್ತಿರುವ ವಾದಗಳನ್ನು ಗಮನಿಸಿದರೆ ಇದು ಪರಸ್ಪರರ ಪ್ರತಿಷ್ಠೆಯ ಸಮರವೇ ಆಗಿದೆ. ಚೀನಾ ಉತ್ಪಾದನೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದಂತೆಲ್ಲ ಇತರ ದೇಶಗಳನ್ನು ಅದು ಕಬಳಿಸುತ್ತ, ತನ್ನ ಉತ್ಪನ್ನಗಳನ್ನು ಅನಿವಾರ್ಯವನ್ನಾಗಿಸುತ್ತಿದೆ. ಚೀನಾ ಉತ್ಪಾದನಾ ರಂಗದಲ್ಲಿ ಯಾವ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂದರೆ, ವಿಶ್ವ ಉತ್ಪಾದನಾ ಕ್ಷೇತ್ರವನ್ನು ತನ್ನ ಮಡಿಲಲ್ಲೇ ಇರಿಸಿಕೊಂಡಂತಾಗಿದೆ. ಆದರೂ, ಚೀನಾ ಬಹುಕಾಲದವರೆಗೆ ವಿದೇಶಗಳಿಂದ ಆಮದನ್ನು ನಿರ್ಬಂಧಿಸಿತ್ತು. ಹಲವು ರಾಷ್ಟ್ರಗಳು ಚೀನಾ ಉತ್ಪಾದನಾ ಅತಿಕ್ರಮಣದ ಸಂಕಷ್ಟವನ್ನು ಎದುರಿಸಿವೆ. ಅದರ ಅಗಾಧ ಶಕ್ತಿಯನ್ನು ಸರಿಗಟ್ಟಲಾಗದೆ ಪರದಾಡಿವೆ. ಚೀನಾ ರಫ್ತಿನ ಬಗ್ಗೆ ಅನೇಕ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದರೂ, ಅದರ ಉತ್ಪಾದನಾ ಸಾಮರ್ಥ್ಯ ಕುಂದಿಲ್ಲ. ಸಬ್ಸಿಡಿಗಳನ್ನು ನೀಡುವುದಕ್ಕೆ ವಿಶ್ವ ವ್ಯಾಪಾರ ಸಂಘಟನೆ ಚೀನಾ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಇವೆಲ್ಲ ನಿಯಮಗಳ ಹೊರತಾಗಿಯೂ ಚೀನಾ ಹಿಂಬಾಗಿಲ ಮೂಲಕ ನೆರವು ನೀಡುತ್ತಿದ್ದು, ಕರೆನ್ಸಿ ಮೌಲ್ಯವನ್ನು ಪಲ್ಲಟಗೊಳಿಸುತ್ತಲೇ ಇದೆ. ಚೀನಾದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಲೇ ಇದ್ದರೂ, ಪ್ರಗತಿಯ ವೇಗ ಆ ದೇಶವನ್ನು ಅಗ್ರಸ್ಥಾನದಲ್ಲಿರುವಂತೆ ಮಾಡಿದೆ.

ಚೀನಾದಿಂದ ಅಮೆರಿಕದ ಆಮದಿನ ಪ್ರಮಾಣ 2018ರಲ್ಲಿ 37.91 ಲಕ್ಷ ಕೋಟಿ ರೂ. (540 ಬಿಲಿಯನ್ ಡಾಲರ್ ) ಆಗಿತ್ತು. ಈ ಪೈಕಿ 14 ಲಕ್ಷ ಕೋಟಿ ರೂ. (200 ಬಿಲಿಯನ್ ಡಾಲರ್) ಮೌಲ್ಯದ ಆಮದಿನ ಮೇಲೆ 2018ರ ಸೆಪ್ಟಂಬರ್​ನಲ್ಲಿ ದಂಡರೂಪದ ಸೀಮಾ ಸುಂಕವನ್ನು ಅಮೆರಿಕ ವಿಧಿಸಿತು. ಇನ್ನುಳಿದ ಆಮದಿನ ಮೌಲ್ಯವನ್ನು ಸಂಧಾನಕ್ಕೆ ಮುಕ್ತವಾಗಿರಿಸಿತು. ಹಲವು ಹಂತಗಳ ಚರ್ಚೆ ಬಳಿಕವೂ ಸಂಧಾನ ಏರ್ಪಡದ ಕಾರಣ ಅಮೆರಿಕ ಇನ್ನುಳಿದ ಆಮದಿನ ಮೇಲೂ ಹೆಚ್ಚುವರಿ ಸೀಮಾ ಸುಂಕವನ್ನು ವಿಧಿಸಿತು. ಔಷಧೀಯ ಹಾಗೂ ಕೆಲ ಅಪರೂಪದ ಭೂಖನಿಜಗಳನ್ನು ಇದರಿಂದ ಹೊರತಾಗಿಟ್ಟಿತು. ಇದಕ್ಕೆ ಪ್ರತೀಕಾರದ ಕ್ರಮವಾಗಿ ಚೀನಾ ಕೂಡ ಅಮೆರಿಕದಿಂದ ಆಮದಾದ 8.43 ಲಕ್ಷ ಕೋಟಿ ರೂ. (120 ಬಿಲಿಯನ್ ಡಾಲರ್) ಮೌಲ್ಯದ ವಸ್ತುಗಳ ಮೇಲೆ ಭಾರಿ ಸುಂಕ ವಿಧಿಸಿತು.

ಇವೆರಡೂ ರಾಷ್ಟ್ರಗಳ ನಡುವೆ ತುರ್ತು ಮಾತುಕತೆ ನಡೆಯುವ ಸಾಧ್ಯತೆಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಇಡೀ ಜಗತ್ತು ಈ ಎಲ್ಲ ಬೆಳವಣಿಗೆ ಬಗ್ಗೆ ಆಘಾತಗೊಂಡಿದ್ದು, ಮುಂದೇನು ಎಂಬ ಬಗ್ಗೆ ತಿಳಿಯದಂತಾಗಿದೆ. ಈ ನಡುವೆ ತಾನು ಹೊಂದಿರುವ 70 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ (1 ಟ್ರಿಲಿಯನ್ ಡಾಲರ್) ಅಮೆರಿಕದ ಖಜಾನೆ ಬಾಂಡ್​ಗಳನ್ನು ಮರಳಿಸಿ ಆರ್ಥಿಕ ವ್ಯವಸ್ಥೆಯನ್ನೇ ಹಳಿ ತಪ್ಪಿಸುವುದಾಗಿ ಚೀನಾ ಬೆದರಿಕೆ ಹಾಕಿದೆ. ಇದು ಜಾಗತಿಕ ಆರ್ಥಿಕ ಮಾರುಕಟ್ಟೆ ವ್ಯವಸ್ಥೆಯನ್ನೂ ಬುಡಮೇಲು ಮಾಡಬಲ್ಲುದು. ಕಳೆದ ಹಲವು ತ್ರೖೆಮಾಸಿಕಗಳಿಂದ ಸಾಧಾರಣ ಪ್ರಗತಿ ದಾಖಲಿಸಿದ್ದ ಭಾರತೀಯ ಆರ್ಥಿಕ ವ್ಯವಸ್ಥೆ ಕುಂಠಿತವಾಗುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದೆ. ಸೂಕ್ಷ್ಮ ಆರ್ಥಿಕ ವ್ಯವಸ್ಥೆಯ ಹಲವು ಸೂಚ್ಯಂಕಗಳು ಇದನ್ನು ದೃಢಪಡಿಸಿವೆ. ಈ ಜಾಗತಿಕ ವಾಣಿಜ್ಯ ಯುದ್ಧ ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಲ್ಪಕಾಲದಲ್ಲಿಯೇ ದಯನೀಯ ಸ್ಥಿತಿಗೆ ದೂಡಬಲ್ಲುದು. ಭಾರತೀಯ ರೂಪಾಯಿ ಮೌಲ್ಯದ ಮೇಲೆ ಭಾರಿ ಒತ್ತಡ ಹೇರಬಲ್ಲುದು. ಆದರೆ, ವ್ಯಾಪಾರ ಸಂಘರ್ಷದ ಈ ವಿದ್ಯಮಾನ ಜಾಗತಿಕ ಹಾಗೂ ಭಾರತೀಯ ಆರ್ಥಿಕ ವ್ಯವಸ್ಥೆ ಮೇಲೆ ಉಂಟು ಮಾಡಲಿರುವ ನಿರ್ದಿಷ್ಟ ಪರಿಣಾಮಗಳನ್ನು ಊಹಿಸುವುದು ಸದ್ಯಕ್ಕಂತೂ ಕಷ್ಟ ಎನ್ನಬಹುದು. ಈ ಬಿಕ್ಕಟ್ಟು ಆದಷ್ಟು ಬೇಗ ನಿವಾರಣೆಯಾಗಿ ಸಮಾನತೆ ಹಾಗೂ ನ್ಯಾಯಸಮ್ಮತ ಪರಿಹಾರ ದೊರೆಯಲಿ ಎಂದು ಆಶಿಸೋಣ.

(ಲೇಖಕರು ಆರ್ಥಿಕ ತಜ್ಞರು)

Leave a Reply

Your email address will not be published. Required fields are marked *