ಮತ್ತೆ ಗಗನಕ್ಕೇರುವುದೇ ಜೆಟ್ ಏರ್​ವೇಸ್?

ಜೆಟ್ ಏರ್​ವೇಸ್ ಪುನರುಜ್ಜೀವನ ಕಾರ್ಯಸಾಧ್ಯತೆ ಬಗ್ಗೆ ಬ್ಯಾಂಕ್​ಗಳು ಹಾಗೂ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕಿದೆ. ಈ ಕಾರ್ಯದಲ್ಲಿ ಇನೂ ವಿಳಂಬ ಸಲ್ಲದು. ಏಕೆಂದರೆ, ಇಲ್ಲಿ ಸಾವಿರಾರು ಉದ್ಯೋಗಗಳು ಹಾಗೂ ವಿಮಾನಯಾನ ರಂಗದ ವಿಶ್ವಾಸದ ಪ್ರಶ್ನೆಯೂ ಅಡಗಿದೆ. ಊರು ಕೊಳ್ಳೆಹೋದ ಮೇಲೆ ದಿಡ್ಡಿಬಾಗಿಲು ಹಾಕಿದರೆ ಏನು ಪ್ರಯೋಜನ?

ಜೆಟ್ ಏರ್​ವೇಸ್​ನ ಸಂಕಷ್ಟಗಾಥೆ ‘ಸೃಜನಾತ್ಮಕ ವಿಧ್ವಂಸಕತೆ’ಯ ಭಾಗ ಎನ್ನಲಡ್ಡಿಯಿಲ್ಲ. ಈ ವಿಮಾನಯಾನ ಸಂಸ್ಥೆಯ ಪುನರುಜ್ಜೀವನ ಯೋಜನೆ ತ್ರಿಶಂಕುಸ್ಥಿತಿಯಲ್ಲೇ ಇದ್ದು, ಯಾವುದೇ ಆಶಾಕಿರಣ ಕಂಡುಬರುತ್ತಿಲ್ಲ. ಜೆಟ್​ನ ಕೊನೆಯ ವಿಮಾನ ಹಾರಾಟ ನಡೆಸಿದ್ದು ಏ.17ರಂದು. ಇದಾಗಿ ಎರಡು ವಾರ ಕಳೆದಿದ್ದು ಸಂಸ್ಥೆಯ ವಿಮಾನಗಳು, ಇತರ ಆಸ್ತಿ ಹಾಗೂ ಮೂಲಸೌಕರ್ಯಗಳಿಗೆ ಕ್ರಮೇಣ ಧೂಳು ಹಿಡಿಯುತ್ತಿದೆ. ಈ ವಿಷಯವೀಗ ಸುದ್ದಿಮೌಲ್ಯವನ್ನು ಕಳೆದುಕೊಂಡಿದೆ. ಎಷ್ಟರಮಟ್ಟಿಗೆಂದರೆ ಪತ್ರಿಕೆಗಳ ಮೂಲೆಯಲ್ಲೆಲ್ಲೋ ಜೆಟ್ ಸುದ್ದಿ ಪ್ರಕಟವಾಗುತ್ತಿದೆ. ಎರಡು ದಶಕಗಳ ಕಾಲ ದೇಶದ ಪ್ರಮುಖ ಬ್ರಾ್ಯಂಡ್ ಮೌಲ್ಯಗಳಲ್ಲಿ ಒಂದಾಗಿದ್ದ ಜೆಟ್ ಏರ್​ವೇಸ್ ನಿರ್ದಯ ಪೈಪೋಟಿ ಯುಗದಲ್ಲಿ ನೆಲಕಚ್ಚಬೇಕಾಗಿ ಬಂದಿದ್ದು ವಿಪರ್ಯಾಸವೆ ಸರಿ.

‘ಸೃಜನಾತ್ಮಕ ವಿಧ್ವಂಸಕತೆ’ ಎಂಬ ಪದವನ್ನು ಲೇಖನದಲ್ಲಿ ಆರಂಭದಲ್ಲಿ ಬಳಸಿದೆ. ಈ ಪರಿಕಲ್ಪನೆಯನ್ನು ಮುಂದಿಟ್ಟಿದ್ದು ಅರ್ಥಶಾಸ್ತ್ರಜ್ಞ ಜೋಸೆಫ್ ಶ್ಯುಂಪೀಟರ್. ಆರ್ಥಿಕ ರಂಗದ ನಾವೀನ್ಯತೆ, ವ್ಯವಹಾರ ಚಕ್ರಗಳನ್ನು ವಿವರಿಸಲು ಇದನ್ನು ಉಲ್ಲೇಖಿಸಲಾಗುತ್ತದೆ. ಕೈಗಾರಿಕಾ ರಂಗದ ನಿರಂತರ ರೂಪಾಂತರದಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಆಂತರಿಕವಾಗಿ ಉಂಟಾಗುವ ಕ್ರಾಂತಿಕಾರಕ ಬದಲಾವಣೆಯು ಹಳೆಯದನ್ನು ಉಳಿಸಿ, ಹೊಸದನ್ನು ಸೃಜಿಸುತ್ತದೆ. ಈ ಪ್ರಕ್ರಿಯೆಯನ್ನು ಬಣ್ಣಿಸಲು ಸೃಜನಾತ್ಮಕ ವಿಧ್ವಂಸಕತೆ ಪದವನ್ನು ಬಳಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಸ್ಪರ್ಧಾತ್ಮಕ ಯುಗದಲ್ಲಿ ಹಳೆಯದರ ಅಳಿವು ಹಾಗೂ ಅದರ ಸ್ಥಾನದಲ್ಲಿ ಹೊಸ ವಹಿವಾಟೊಂದರ ಆರಂಭವನ್ನು ಇದು ಸೂಚಿಸುತ್ತದೆ. ಬಂಡವಾಳಾಧಾರಿತ ಸಾಮಾಜಿಕ ಸಂರಚನೆಯಲ್ಲಿ ಆರ್ಥಿಕ ಪ್ರಗತಿಗೆ ಇಂಥದ್ದೊಂದು ವಿದ್ಯಮಾನ ಅಗತ್ಯವೂ ಆಗಿರುತ್ತದೆ. ಉದ್ದಿಮೆಗಳು ಪ್ರಗತಿಯ ಔನ್ನತ್ಯಕ್ಕೇರಿ, ಅಲ್ಲಿಯೇ ಸಮೃದ್ಧವಾಗಿ ಕೆಲಕಾಲ ಉಳಿದು ಬಳಿಕ ತೆರೆಮರೆಗೆ ಸರಿದ ನೂರಾರು ನಿದರ್ಶನಗಳಿವೆ. ಉದಾಹರಣೆಗೆ ಹೇಳುವುದಾದರೆ, ನಮ್ಮ ತಲೆಮಾರಿನಲ್ಲಿ ಬಿನ್ನಿ, ಎಚ್​ಎಂಟಿ ಮೊದಲಾದ ಬ್ರಾ್ಯಂಡ್​ಗಳು ಮನೆಮಾತಾಗಿದ್ದವು. ಆದರೆ ಹಲವು ಕಾರಣಗಳಿಂದಾಗಿ ಕ್ರಮೇಣ ಜನಮಾನಸದಿಂದ ದೂರಾದವು. ಷೇರು ಮಾರುಕಟ್ಟೆಯಲ್ಲಿ ಇಂದು ಕಂಡುಬರುವ ಕಂಪನಿಗಳನ್ನು ಗಮನಿಸಿದರೆ, ಕಾಲ ಕಳೆದಂತೆ ಉಂಟಾದ ಬದಲಾವಣೆಗಳು ಅರಿವಿಗೆ ಬರುತ್ತವೆ. ಜಾಗತಿಕವಾಗಿ ಇಂಥ ಬದಲಾವಣೆಗಳು ಅಪವಾದ ಎನ್ನುವುದಕ್ಕಿಂತ ನಿಯಮವೇ ಆಗಿ ಪರಿಣಮಿಸಿವೆ. ಇದೇ ರೀತಿ ಜೆಟ್ ಏರ್​ವೇಸ್ ಕೂಡ ಕಾಲಗರ್ಭದಲ್ಲಿ ಮರೆಯಾಗುತ್ತದೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

1993ರಲ್ಲಿ ಏರ್ ಟ್ಯಾಕ್ಸಿ ಆಪರೇಟರ್ ಆಗಿ ಕಾರ್ಯಾಚರಣೆ ಆರಂಭಿಸಿದ ಜೆಟ್ ಏರ್​ವೇಸ್, 1995ರಲ್ಲಿ ಪೂರ್ಣ ಪ್ರಮಾಣದ ವಿಮಾನಯಾನ ಸಂಸ್ಥೆಯಾಯಿತು. 2004ರಲ್ಲಿ ಅಂತಾರಾಷ್ಟ್ರೀಯ ಸೇವೆ ಆರಂಭಿಸಿತು. 2005 ಹಾಗೂ 2007ರಲ್ಲಿ ಸಾರ್ವಜನಿಕ ಷೇರುಗಳನ್ನು ಬಿಡುಗಡೆ ಮಾಡಿತು. 2010ರಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲು ಪಡೆಯುವ ಮೂಲಕ ಸಂಸ್ಥೆಯು ಭರ್ಜರಿ ಯಶಸ್ಸನ್ನು ತನ್ನದಾಗಿಸಿಕೊಂಡಿತು. ಇದಾದ ಬಳಿಕ ನಾಲ್ಕು ವರ್ಷಗಳವರೆಗೆ ತನ್ನ ಪಾರಮ್ಯ ಮೆರೆಯಿತು. ಆದರೆ, ಪ್ರಗತಿಯು ತನ್ನದೇ ಆದ ಸವಾಲುಗಳನ್ನು ಹೊಂದಿರುತ್ತದೆ. ಜೆಟ್ ಏರ್​ವೇಸ್ ಕೂಡ ಇದಕ್ಕೆ ಹೊರತಾಗಿರಲಿಲ್ಲ.

ಜೆಟ್ ಏರ್​ವೇಸ್ ಹಲವು ವಿವಾದಗಳಿಗೆ ಗುರಿಯಾಯಿತು. ಸುರಕ್ಷತಾ ಮಾನದಂಡದ ಬಗ್ಗೆ ಪ್ರಶ್ನೆಗಳೆದ್ದವು. ದಕ್ಷಿಣ ಆಫ್ರಿಕಾದ ಸ್ಥಳೀಯಾಡಳಿತದ ಮೇಲೆ ಪ್ರಭಾವ ಬೀರಲು ಅಲ್ಲಿನ ಗುಪ್ತಾ ಕುಟುಂಬದೊಂದಿಗಿನ ನಂಟು ಬಯಲಾಯಿತು. ಅನೈಚ್ಛಿಕ ವ್ಯಕ್ತಿಗಳೊಂದಿರುವ ಸಂಬಂಧ ಸಂಸ್ಥೆಯ ಘನತೆಗೆ ಕುಂದುಂಟು ಮಾಡಿತು. ಆದರೆ, ಈ ಎಲ್ಲ ಸವಾಲುಗಳನ್ನು ದೃಢವಾಗಿಯೇ ಎದುರಿಸಿದ ಸಂಸ್ಥೆಯ ಅಧ್ಯಕ್ಷರು ಪ್ರತಿಬಾರಿಯೂ ಇನ್ನಷ್ಟು ಸದೃಢರಾಗಿ ಮತ್ತೆ ಕಾರ್ಯಾರಂಭಿಸಿದರು. ಹಿನ್ನಡೆಗೆ ಒಳಗಾಗದ, ಬದ್ಧತೆಯುಳ್ಳ ಉದ್ಯಮಿ ಅವರಾಗಿದ್ದರಿಂದ ಯಾವುದು ಕೂಡ ಅವರ ವೇಗವನ್ನು ಕುಂಠಿತಗೊಳಿಸಲಿಲ್ಲ. ಆ ಸಂದರ್ಭದಲ್ಲಿ ವಿಮಾನ ಯಾನ ಕ್ಷೇತ್ರದಲ್ಲುಂಟಾದ ಬೆಳವಣಿಗೆ ಜೆಟ್​ಗೆ ವರದಾನವಾಗಿ ಸಂಸ್ಥೆಯನ್ನು ಸುಸ್ಥಿತಿಯಲ್ಲಿಟ್ಟಿತ್ತು. ದೇಶದ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಪ್ರವಾಸ ಕ್ಷೇತ್ರದಲ್ಲಾದ ಅಭೂತಪೂರ್ವ ಬೆಳವಣಿಗೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ನೆರವಾಯಿತು. ಜೆಟ್ ಏರ್​ವೇಸ್​ನಂಥ ಸಂಸ್ಥೆಗಳು ಇದರ ಪೂರ್ಣ ಲಾಭವನ್ನು ಪಡೆದುಕೊಂಡವು.

ಹಾಗಾದರೆ, ಇಷ್ಟೆಲ್ಲ ಯಶಸ್ಸನ್ನು ತನ್ನದಾಗಿಸಿಕೊಂಡ, ಆಗಸದಲ್ಲಿ ಮಿಂಚಿದ ಜೆಟ್ ಏರ್​ವೇಸ್ ವಿಫಲವಾಗಿದ್ದು ಏಕೆ ಮತ್ತು ಹೇಗೆ? ಈ ಪ್ರಶ್ನೆಗೆ ಉತ್ತರ ನೀಡುವುದು ಕೊಂಚ ಕಠಿಣವೇ ಸರಿ. ಆದರೂ, ಸಂಸ್ಥೆಯ ಪತನಕ್ಕೆ ಕಾರಣವಾದ ಕೆಲ ನಿರ್ಧಾರಗಳನ್ನು ವಿಶ್ಲೇಷಿಸಲು ಯತ್ನಿಸುತ್ತೇನೆ. ಪ್ರಮುಖ ಹಾಗೂ ಪ್ರಶ್ನಾರ್ಹ ನಿರ್ಧಾರವೆಂದರೆ ಸಹರಾ ಏರ್​ಲೈನ್ಸ್ ಸ್ವಾಧೀನದ್ದು. ಈ ವೇಳೆಗಾಗಲೇ ಉದ್ಯಮದಲ್ಲಿ ತನಗಾರೂ ಸರಿಸಾಟಿಯಲ್ಲವೆಂಬ ಗರ್ವ ಮನೆ ಮಾಡಿತ್ತು ಹಾಗೂ ಭಾರತದಲ್ಲೇ ಅತಿದೊಡ್ಡ ವಿಮಾನ ಯಾನ ಸಂಸ್ಥೆಯಾಗಬೇಕೆಂಬುದರಲ್ಲಷ್ಟೇ ಜೆಟ್ ಆಸಕ್ತಿ ವಹಿಸಿತ್ತು. ಕೆಲವೊಮ್ಮೆ ಇಂಥ ನಿರ್ಧಾರಗಳು ಕಾಗದದ ಮೇಲಷ್ಟೇ ಚೆನ್ನ ಎನಿಸುತ್ತವೆ. ಸಮಗ್ರತೆ ಕಾಪಾಡಿಕೊಳ್ಳುವಲ್ಲಿ ಅಗಣಿತ ಸವಾಲುಗಳನ್ನು ಹುಟ್ಟು ಹಾಕುತ್ತವೆ ಹಾಗೂ ಸ್ವಾಧೀನಪಡಿಸಿಕೊಳ್ಳುವ ಕಂಪನಿ ಮೇಲೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತವೆ. ಕೆಲವು ತಜ್ಞರು ಹೇಳುವ ಪ್ರಕಾರ, ಜೆಟ್ ಏರ್​ವೇಸ್ ತನ್ನ ಮಾರುಕಟ್ಟೆ ಪಾರಮ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ವಿಜಯ್ ಮಲ್ಯ ಒಡೆತನ ಕಿಂಗ್​ಫಿಷರ್ 2007ರಲ್ಲಿ ಏರ್ ಡೆಕ್ಕನ್ ಸ್ವಾಧೀನಪಡಿಸಿಕೊಂಡ ಹಾದಿಯನ್ನುಸರಿಸಿ ಸಹರಾ ಏರ್​ಲೈನ್ಸ್ ಅನ್ನು ಖರೀದಿಸಿತು. ಸಹರಾ ಏರ್​ಲೈನ್ಸ್ ಮೂಲತಃ ಕಡಿಮೆ ದರದಲ್ಲಿ ಸೇವೆ ನೀಡುವ ವಿಮಾನ ಯಾನ ಸಂಸ್ಥೆ ಆಗಿತ್ತು. ಇದರ ಸ್ವಾಧೀನಕ್ಕೆ ಜೆಟ್ ಏರ್​ವೇಸ್ ದುಬಾರಿ ಬೆಲೆ ನೀಡಿದ್ದು ಸಂಸ್ಥೆಯ ಭವಿಷ್ಯಕ್ಕೆ ಕಂಟಕವಾಗಿ ಪರಿಣಮಿಸಿತು ಎಂಬುದು ತಜ್ಞರ ವಿಶ್ಲೇಷಣೆ.

ವಿಮಾನ ಯಾನ ಹೆಚ್ಚು ಪೈಪೋಟಿ, ಕಡಿಮೆ ಲಾಭದ ಉದ್ಯಮ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಪ್ರಾದೇಶಿಕ ಸಂಚಾರದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ನಿರ್ಬಂಧವಿರುವುದರಿಂದ ಇಲ್ಲಿ ಲಾಭದ ಪ್ರಮಾಣ ಕುಸಿಯದು ಹಾಗೂ ಎಲ್ಲ ಪ್ರಾದೇಶಿಕ ಸಂಸ್ಥೆಗಳಿಗೂ ಸಮಾನ ಅವಕಾಶಗಳಿರುತ್ತವೆ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಕ್ಷೇತ್ರ ಹೆಚ್ಚು ಆಕರ್ಷಕವಾಗಿ ಕಂಡರೂ, ಹತ್ತಾರು ಸಂಸ್ಥೆಗಳು ಹಾಗೂ ಪರಿವರ್ತನಾಶೀಲತೆಯಿಂದಾಗಿ ಅವುಗಳ ಕಥೆಯೇ ಭಿನ್ನವಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನಯಾನ ಕಂಪನಿಗಳು ಬಹುತೇಕ ಆಯಾ ದೇಶಗಳಿಂದ ನೆರವು ಹಾಗೂ ಪ್ರೋತ್ಸಾಹಧನವನ್ನು ಪಡೆದಿರುತ್ತವೆ. ಅಂತಾರಾಷ್ಟ್ರೀಯವಾಗಿ ಹಾರಾಟ ನಡೆಸುವ, ಅಂಟ್ಲಾಟಿಕ್ ಹಾಗೂ ಪೆಸಿಫಿಕ್ ಖಂಡಾಂತರ ಮಾರ್ಗದಲ್ಲಿ ಸಂಚರಿಸುವ ನಿರ್ಧಾರಕ್ಕೆ ಹೆಚ್ಚು ಸಂಪನ್ಮೂಲ ಹಾಗೂ ಸಾಮರ್ಥ್ಯದ ಅಗತ್ಯವಿತ್ತು. ಜೆಟ್​ಗೆ ಇದರ ಕೊರತೆ ಇತ್ತು. ವಿಮಾನಯಾನ ಸಂಸ್ಥೆಗಳಿಗೆ ಕಾಡುವ ಮಹತ್ವಾಕಾಂಕ್ಷೆ ಅವುಗಳ ಸಂಪನ್ಮೂಲವನ್ನು ಬರಿದಾಗಿಸಿ ನೆಲಕಚ್ಚುವಂತೆ ಮಾಡುತ್ತದೆ. ಜೆಟ್ ಏರ್​ವೇಸ್ ಕೂಡ ಇದಕ್ಕೆ ಅಪವಾದವಲ್ಲ. ಇದಲ್ಲದೇ, ಮೊದಲ ತಲೆಮಾರಿನ ಉದ್ಯಮಿಗಳಲ್ಲಿ ಕೆಲವೊಮ್ಮೆ ಅರ್ತಾಕ ನಡವಳಿಕೆ ಕಂಡುಬರುತ್ತದೆ. ತಾವು ಆರಂಭಿಸಿದ ಉದ್ಯಮವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಲು ಅವರು ಮುಂದಾಗುತ್ತಾರೆ. ವ್ಯಾಪಾರ ಕೈಕೊಡುತ್ತಿದೆ, ಬಿಕ್ಕಟ್ಟು ಎದುರಾಗಲಿದೆ ಎಂಬುದು ಆಡಳಿತ ಮಂಡಳಿಗೆ ಬಹುಮುಂಚಿತವಾಗಿಯೇ ತಿಳಿದಿರುತ್ತದೆ. ಇದನ್ನು ಒಪ್ಪಿಕೊಂಡು, ವಹಿವಾಟುಗಳನ್ನು ಕಡಿತಗೊಳಿಸಿ ನಷ್ಟವನ್ನು ಕಡಿಮೆಗೊಳಿಸಲು ಅವರು ಸಿದ್ಧರಿರುವುದಿಲ್ಲ. ಪವಾಡ ಜರುಗಿ ತಮ್ಮನ್ನು ರಕ್ಷಿಸಲಿದೆ ಎಂಬುದು ಅವರ ನಂಬಿಕೆಯಾಗಿರುತ್ತದೆ. ಗೊತ್ತಿದ್ದೂ, ಸಂಸ್ಥೆಯನ್ನು ನೆಲಕಚ್ಚಿಸುವ ಇಂಥ ವರ್ತನೆಗೆ ಆಡಳಿತ ಮಂಡಳಿಯೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ. ಇನ್ನು, ಇಂಥ ಸಂದರ್ಭದಲ್ಲಿ ಸುದೀರ್ಘ ಕಾಲದವರೆಗೆ ಸಂಬಂಧಪಟ್ಟ ಬ್ಯಾಂಕುಗಳ ನಿರ್ಲಕ್ಷ್ಯವನ್ನು ಕೂಡ ಪ್ರಶ್ನಿಸಬೇಕಾಗುತ್ತದೆ. ಏಕೆಂದರೆ, ಹೊರಗಿನ ಇತರರಿಗೆ ಈ ವ್ಯವಹಾರದ ಒಳಹೊರಗುಗಳು ಗೊತ್ತಿರುವುದಿಲ್ಲ; ಸಾಲ ನೀಡಿದ ಬ್ಯಾಂಕುಗಳಿಗೆ ಇದರ ಅರಿವಿರುತ್ತದೆ.

ಇದೆಲ್ಲ ಏನೂ ಇರಲಿ, ಜೆಟ್ ಏರ್​ವೇಸ್ ಪುನರುಜ್ಜೀವನ ಕಾರ್ಯಸಾಧ್ಯತೆ ಬಗ್ಗೆ ಬ್ಯಾಂಕ್​ಗಳು ಹಾಗೂ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕಿದೆ. ಈ ಕಾರ್ಯದಲ್ಲಿ ಇನೂ ವಿಳಂಬ ಸಲ್ಲದು. ಏಕೆಂದರೆ, ಇಲ್ಲಿ ಸಾವಿರಾರು ಉದ್ಯೋಗಗಳು ಹಾಗೂ ವಿಮಾನಯಾನ ರಂಗದ ವಿಶ್ವಾಸದ ಪ್ರಶ್ನೆಯೂ ಅಡಗಿದೆ. ಊರು ಕೊಳ್ಳೆಹೋದ ಮೇಲೆ ದಿಡ್ಡಿಬಾಗಿಲು ಹಾಕಿದರೆ ಏನು ಪ್ರಯೋಜನ? ಅಷ್ಟಕ್ಕೂ, ಮೊದಲೇ ಹೇಳಿದಂತೆ ಇಲ್ಲಿ ನಡೆದಿರುವುದು ಸೃಜನಾತ್ಮಕ ವಿಧ್ವಂಸಕತೆ.

(ಲೇಖಕರು ಆರ್ಥಿಕ ತಜ್ಞರು)