ಭಾರತ ಕಟ್ಟಲು ಅನಿವಾಸಿ ಸೈನಿಕರ ಸದ್ದಿಲ್ಲದ ಸೇವೆ

ಭಾರತೀಯ ಆರ್ಥಿಕ ವ್ಯವಸ್ಥೆ ವಿಪುಲವಾಗಿ ಪ್ರಗತಿ ಕಾಣುತ್ತಿದೆ. ರವಾನೆ ಹಣದ ಬೆಳವಣಿಗೆ ವಿಚಾರದಲ್ಲಿ ಇನ್ನೆರಡು ವರ್ಷ ಅಗ್ರಸ್ಥಾನದಲ್ಲಿಯೇ ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ. ಭಾರತಕ್ಕೆ ಅತಿ ಹೆಚ್ಚು ಮೊತ್ತ ರವಾನಿಸುವ ರಾಷ್ಟ್ರಗಳಲ್ಲಿ ಯುಎಇ, ಅಮೆರಿಕ ಹಾಗೂ ಸೌದಿ ಅರೇಬಿಯಾ ಮೊದಲ ಮೂರು ಸ್ಥಾನಗಳಲ್ಲಿವೆ.

ಚುನಾವಣೆಗಳ ಗದ್ದಲದ ನಡುವೆ ಮಾಧ್ಯಮದಲ್ಲಿ ಮಹತ್ವದ ಸುದ್ದಿಯೊಂದು ಕಳೆದುಹೋಗಿದೆ. 2018ರಲ್ಲಿ ವಿವಿಧ ದೇಶಗಳಿಗೆ ವಿದೇಶಗಳಿಂದ ಹರಿದುಬಂದ ಮೊತ್ತಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಪ್ರಕಟಿಸಿದೆ. ವಿದೇಶದಲ್ಲಿ ನೆಲೆಸಿರುವವರು ಅಥವಾ ಉದ್ಯೋಗದಲ್ಲಿರುವವರು ತಾಯ್ನಾಡಿನಲ್ಲಿರುವ ಪ್ರೀತಿಪಾತ್ರರಿಗೆ, ಕುಟುಂಬದ ಸದಸ್ಯರಿಗೆ ರವಾನಿಸಿರುವ ಮೊತ್ತ ಇದಾಗಿದೆ. 5.5 ಲಕ್ಷ ಕೋಟಿ ರೂ. ಪಡೆಯುವ ಮೂಲಕ ಭಾರತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಾಗತಿಕ ರವಾನೆ ಹಣ (ರೆಮಿಟೆನ್ಸ್) 47.81 ಲಕ್ಷ ಕೋಟಿ ರೂ. (689 ಶತಕೋಟಿ ಡಾಲರ್)ಗಳಾಗಿವೆ. ಇದರಲ್ಲಿ ಭಾರತದ ಪಾಲು ಶೇಕಡ 11. ಈ ಪ್ರಮಾಣ ನಿಧಾನ ಹಾಗೂ ಹಂತಹಂತವಾಗಿ ಹೆಚ್ಚುತ್ತಲೇ ಸಾಗಿದೆ. ಒಟ್ಟಾರೆ ರವಾನೆ ಹಣದ ಮೊತ್ತ ವಾರ್ಷಿಕ ಶೇಕಡ 4ರಷ್ಟು ಬೆಳವಣಿಗೆ ಕಾಣುತ್ತಿದ್ದು, 2019ರಲ್ಲಿ 715 ಶತಕೋಟಿ ಡಾಲರ್​ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ರವಾನೆ ಹಣ ಬಹುಪಾಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹರಿಯುತ್ತದೆ. ಏಕೆಂದರೆ ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಬಹುತೇಕ ಜನರು ತಾಯ್ನಾಡಿನಿಂದ ವಿದೇಶಗಳಲ್ಲಿ ಚದುರಿಹೋಗಿರುತ್ತಾರೆ.

ವಲಸೆಯ ಇತಿಹಾಸ ನದಿ ಹಾಗೂ ಪರ್ವತಗಳಷ್ಟೇ ಪ್ರಾಚೀನವಾಗಿದೆ. ಉದ್ಯೋಗಕ್ಕಾಗಿ ತಾತ್ಕಾಲಿಕವಾಗಿ ವಲಸೆ ತೆರಳುವುದು ಕೂಡ ಹೊಸದೇನಲ್ಲ. 19 ಹಾಗೂ 20ನೇ ಶತಮಾನದಲ್ಲಿ ಹಲವು ಐರೋಪ್ಯ ದೇಶಗಳು ರವಾನೆ ಹಣದ ಮೇಲೆಯೇ ಅವಲಂಬಿತವಾಗಿದ್ದವು. ಉದಾಹರಣೆಗಾಗಿ, ಸ್ಪೇನ್ ರವಾನೆ ಹಣದ ನಿಯಂತ್ರಣಕ್ಕಾಗಿ ವಿಶೇಷ ಕಾಯ್ದೆಯನ್ನೇ ರೂಪಿಸಿತ್ತು. ಏಕೆಂದರೆ 1940ರಲ್ಲಿ ದೇಶದ ನಿವ್ವಳ ಆಂತರಿಕ ಉತ್ಪನ್ನದಲ್ಲಿ ಇದರ ಪಾಲು ಶೇ.20ರಷ್ಟಾಗಿತ್ತು.

ಭಾರತ ಹಾಗೂ ಆಫ್ರಿಕಾದಿಂದ ವಿವಿಧ ದೇಶಗಳಿಗೆ ಕಾರ್ವಿುಕರ ಸಂಚಾರ ಭಾರಿ ಪ್ರಮಾಣದಲ್ಲಿತ್ತು. ಜೀವನಾಧಾರಕ್ಕಾಗಿ ಕುಟುಂಬಸಮೇತ ತೆರಳುತ್ತಿದ್ದ ಜನರು ಬೇರೆ ದೇಶಗಳಲ್ಲಿ ಶಾಶ್ವತ ನೆಲೆಯನ್ನು ಕಂಡುಕೊಳ್ಳುತ್ತಿದ್ದರು. ಭಾರತದಿಂದ ಒಪ್ಪಂದದ ಮೇರೆಗೆ ವಿದೇಶಗಳಿಗೆ ತೆರಳಿದ್ದ ಕಾರ್ವಿುಕರು ಜೀತಪದ್ಧತಿಯ ನಿಮೂಲನೆ ಬಳಿಕ ಬೇರೆ ಬೇರೆ ದೇಶಗಳಲ್ಲಿ ಉತ್ತಮ ನೆಲೆಯನ್ನು ಕಂಡುಕೊಂಡರು.

ಆದರೆ, ಪ್ರಸ್ತುತ ಸನ್ನಿವೇಶ ಭಿನ್ನವಾಗಿದೆ. ಎಲ್ಲ ಹಿನ್ನೆಲೆ, ಕೌಶಲಗಳ ಭಾರತೀಯರು ವಿಶ್ವದ ಬಹುತೇಕ ಭಾಗಗಳಲ್ಲಿ ತಮಗಿಷ್ಟವಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನೆಲೆಸಿದ್ದಾರೆ. ವಿದೇಶಗಳಲ್ಲಿ ಅವರ ವಾಸ್ತವ್ಯದ ಅವಧಿಯೂ ಹಲವು ವಿಚಾರಗಳನ್ನು ಆಧರಿಸಿದೆ. ಭಾರತೀಯ ವಿದೇಶಾಂಗ ಕಚೇರಿ ಅಂದಾಜಿನಂತೆ ಜಾಗತಿಕವಾಗಿರುವ ಭಾರತೀಯ ಮೂಲದವರ ಸಂಖ್ಯೆ 30ರಿಂದ 40 ದಶಲಕ್ಷ.

ಹಲವು ಅಭಿವೃದ್ಧಿಶೀಲ ರಾಷ್ಟ್ರಗಳು ನಿವ್ವಳ ಆಂತರಿಕ ಉತ್ಪನ್ನ ಹೆಚ್ಚಳ, ವಿದೇಶಿ ವಿನಿಮಯ ಸಂಪನ್ಮೂಲ ನಿರ್ವಹಣೆಗಾಗಿ ರವಾನೆ ಹಣ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಎಂಟಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಿವ್ವಳ ಆಂತರಿಕ ಉತ್ಪನ್ನದಲ್ಲಿ ಶೇ.20ಕ್ಕೂ ಹೆಚ್ಚು ಪಾಲು ರವಾನೆ ಹಣವಾಗಿದ್ದರೆ, 10 ರಾಷ್ಟ್ರಗಳಲ್ಲಿ ಇದರ ಪ್ರಮಾಣ ಜಿಡಿಪಿಯ ಶೇ.10 ಆಗಿದೆ. ಭಾರತದಲ್ಲಿ ಇದರ ಪ್ರಮಾಣ ಶೇ.3ರಷ್ಟಾಗಿದ್ದರೂ, ಒಟ್ಟಾರೆ ರಫ್ತು ಪಾವತಿಯ ಶೇ.15ರ ಸನಿಹದಲ್ಲಿದೆ.

ಸೇವೆ ಹಾಗೂ ಉತ್ಪನ್ನಗಳ ರಫ್ತಿನಿಂದ ದೊರೆಯುವ ಆದಾಯಕ್ಕೆ ಹೋಲಿಸಿದಲ್ಲಿ ರವಾನೆ ಹಣದ ಮೇಲೆ ವಿಶ್ವದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತ್ಯಂತರಗಳು ಪ್ರಭಾವ ಬೀರುವುದಿಲ್ಲ. ಜಾಣ್ಮೆ ಹೊಂದಿದ ಯಾವುದೇ ಸರ್ಕಾರವು ವಿದೇಶಿ ಪಾವತಿ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಮತ್ತು ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ.

ಅನಿವಾಸಿ ಭಾರತೀಯರಿಗೆ ಸಂಬಂಧಪಟ್ಟ ಇತ್ತೀಚಿನ ಅಧ್ಯಯನವೊಂದು ಬಂಡವಾಳ ಹೂಡಿಕೆ, ಪ್ರವಾಸೋದ್ಯಮ, ಬ್ಯಾಂಕಿಂಗ್, ವಿಮಾನಯಾನ, ಸಾಂಸ್ಕೃತಿಕ ಹಾಗೂ ಧಾರ್ವಿುಕ ಕ್ಷೇತ್ರಗಳ ಚಟುವಟಿಕೆಗಳಲ್ಲಿ ಹೆಚ್ಚಿನ ಅವಕಾಶಗಳಿರುವುದನ್ನು ಗುರುತಿಸಿದೆ. ವಿಶೇಷವೆಂದರೆ, ಭಾರತದ ರವಾನೆ ಹಣದ ಶೇ.40 ರಷ್ಟು ಭಾಗವು ಯುಎಇಯಿಂದ ಕೇರಳಕ್ಕೆ, ಅಮೆರಿಕದಿಂದ ಆಂಧ್ರಪ್ರದೇಶಕ್ಕೆ, ಕೆನಡಾದಿಂದ ತಮಿಳುನಾಡು, ಪಂಜಾಬ್, ಉತ್ತರಪ್ರದೇಶಗಳಿಗೆ ತಲುಪುತ್ತದೆ. ಭಾರತಕ್ಕೆ ಅತಿ ಹೆಚ್ಚು ಮೊತ್ತ ರವಾನಿಸುವ ರಾಷ್ಟ್ರಗಳಲ್ಲಿ ಯುಎಇ, ಅಮೆರಿಕ ಹಾಗೂ ಸೌದಿ ಅರೇಬಿಯಾ ಮೊದಲ ಮೂರು ಸ್ಥಾನಗಳಲ್ಲಿವೆ. ಈ ಮೂರು ರಾಷ್ಟ್ರಗಳಿಂದ ಹರಿದು ಬರುವ ಪ್ರಮಾಣವು ಶೇ.50ರಷ್ಟಾಗಿದೆ. ಕೇರಳದ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಸಮೃದ್ಧತೆಗೆ ಯುಎಇ, ಮತ್ತು ಸೌದಿ ಅರೇಬಿಯಾದಿಂದ ಹರಿದು ಬರುವ ಹಣವೇ ಕಾರಣವಾಗಿದೆ.

ಆದರೆ, ಎಲ್ಲವೂ ಈ ಮೂಲಕವೇ ಹರಿದು ಬರುತ್ತದೆ ಎಂದೇನಿಲ್ಲ. ಹಣ ರವಾನೆಗೆ ಅಕ್ರಮ ಹವಾಲಾ ಜಾಲವನ್ನು ಇದಕ್ಕೆ ಪರ್ಯಾಯವಾಗಿ ಹಲವರು ಬಳಸಿಕೊಳ್ಳುತ್ತಾರೆ. ಆದರೆ, ಇಂಥ ಚಟುವಟಿಕೆಗಳು ಹಣ ಸ್ವೀಕರಿಸುವ ರಾಷ್ಟ್ರಗಳಿಗೆ ಸವಾಲಾಗಿ ಪರಿಣಮಿಸುತ್ತವೆ. ಕಾರಣ, ಇದರಿಂದ ಅಮೂಲ್ಯ ವಿದೇಶಿ ವಿನಿಮಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದಲ್ಲದೇ ಅಕ್ರಮವಾಗಿ ಸಾಗಣೆಯಾದ ಹಣ ಭಯೋತ್ಪಾದನೆಗೆ ಬಳಕೆಯಾಗಬಲ್ಲುದು. ಹೀಗಾಗಿ ಹವಾಲಾ ಜಾಲದ ಮೂಲಕ ಹಣ ಸಾಗಣೆ ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಹಣ ಸಾಗಣೆ ಹೆಚ್ಚು ವೆಚ್ಚದಾಯಕವಾಗಿ ಪರಿಣಮಿಸಿದೆ. ಹೀಗಾಗಿ ಜನರು ಕಡಿಮೆ ವೆಚ್ಚದಲ್ಲಿ ಹಣ ರವಾನೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗುವಂತೆ ಮಾಡಿದೆ. ಆರ್ಥಿಕ ಕಾರ್ಯಪಡೆ (ಫೈನಾನ್ಶಿಯಲ್ ಆಕ್ಷನ್ ಟಾಸ್ಕ್​ಫೋರ್ಸ್- ಎಫ್​ಎಟಿಎಫ್) ಜಾಗತಿಕವಾಗಿ ಅನುಮಾನಾಸ್ಪದವಾಗಿರುವ ಹಣ ರವಾನೆಗಳ ಮೇಲೆ ಕಣ್ಣಿಟ್ಟಿರುತ್ತದೆ. ಇದು ಪರಿಣಾಮಕಾರಿಯಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೊಂಚ ಮಟ್ಟಿಗಿನ ಶಿಸ್ತನ್ನು ಮೂಡಿಸಿ ಹಣ ರವಾನೆಗೆ ಸುಲಭ, ಸರಳ ಮಾರ್ಗಗಳನ್ನು ರೂಪಿಸಿದೆ.

ವಿದೇಶಿ ಪಾವತಿ ವಿಚಾರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳುವಂತೆ ಎಫ್​ಎಟಿಎಫ್ ಪಾಕಿಸ್ತಾನಕ್ಕೆ ತೀವ್ರ ಒತ್ತಡ ಹೇರಿದೆ ಎಂಬುದು ಉಲ್ಲೇಖನಿಯ. ಸದ್ಯ ಪಾಕಿಸ್ತಾನ ಎಚ್ಚರಿಕೆ ಪಟ್ಟಿಯಲ್ಲಿದೆ (ಬೂದು ಬಣ್ಣದ ಸಂಕೇತ). ಒಮ್ಮೆ ಕಪು್ಪಬಣ್ಣದ ಸಂಕೇತಕ್ಕೆ ಒಳಪಟ್ಟರೆ ಈಗಾಗಲೇ ವಿದೇಶಿ ವಿನಿಮಯ ಸಂಪನ್ಮೂಲ ಕೊರತೆಯಿಂದ ದುಸ್ಥಿತಿಯಲ್ಲಿರುವ ಆರ್ಥಿಕ ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಹಳ್ಳಹಿಡಿಯಬಹುದು.

ಭಾರತೀಯ ಆರ್ಥಿಕ ವ್ಯವಸ್ಥೆ ವಿಪುಲವಾಗಿ ಪ್ರಗತಿ ಕಾಣುತ್ತಿದೆ. ರವಾನೆ ಹಣದ ಬೆಳವಣಿಗೆ ವಿಚಾರದಲ್ಲಿ ಇನ್ನೆರಡು ವರ್ಷ ಭಾರತ ಅಗ್ರಸ್ಥಾನದಲ್ಲಿಯೇ ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ. ಆದರೆ, ವಿದೇಶಿ ವಿನಿಮಯ ಸಂಪನ್ಮೂಲ ವಿಚಾರದಲ್ಲಿ ಇದೇ ಮಾತನ್ನು ಹೇಳಲಾಗದು. ಪ್ರಸ್ತುತ ಇದರ ಪ್ರಮಾಣ 400-420 ಶತಕೋಟಿ ಡಾಲರ್​ನಷ್ಟಿದೆ. ಇದನ್ನು ಪರಿಗಣಿಸುವುದಾದಲ್ಲಿ ವಿದೇಶಿ ವಿನಿಮಯ ಸಂಪನ್ಮೂಲದ ಶೇ.20 ಪಾಲು ರವಾನೆ ಹಣವೇ ಆಗಿದೆ. ಆದರೆ, ಇದಕ್ಕೆ ನಾವು ಅಷ್ಟೊಂದು ಮಹತ್ವವನ್ನೇ ನೀಡುವುದಿಲ್ಲ.

ರವಾನೆ ಹಣದಲ್ಲಿ ಇಳಿಕೆಯಾಗಿದ್ದೇ ಆದಲ್ಲಿ, ವಿದೇಶಿ ವಿನಿಮಯ ಕೊರತೆಯ ಸಂಕಷ್ಟಕರ ಸ್ಥಿತಿಗೆ ಭಾರತವನ್ನು ತಳ್ಳಬಲ್ಲುದು. ಈ ಕಾರಣಕ್ಕಾಗಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಈ ‘ಸೈನಿಕ’ರಿಗೆ ನಾವು ಧನ್ಯವಾದ ಹೇಳಲೇಬೇಕಿದೆ. ಅಲ್ಲದೇ, ವಿದೇಶಿ ವಿನಿಮಯ ಹರಿದು ಬರುವ ಈ ಮೂಲವನ್ನು ಬಲಪಡಿಸಲು ಹಾಗೂ ಪ್ರೋತ್ಸಾಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ವಿದೇಶಿ ವಿನಿಮಯ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಸರ್ಕಾರಕ್ಕೆ ಇದು ಸೂಕ್ತ ಸಮಯವಾಗಿದೆ.

(ಲೇಖಕರು ಆರ್ಥಿಕ ತಜ್ಞರು)