ಅಪರಿಪೂರ್ಣ ನ್ಯಾಯ್ ಯೋಜನೆ ಜಾರಿ ಕಾರ್ಯಸಾಧುವೆ?

ಇದು ಚುನಾವಣಾ ಸಮಯ ಮತ್ತು ಎಲ್ಲ ರಾಜಕೀಯ ಪಕ್ಷಗಳಿಂದ ವಿವಿಧ ಬಗೆಯ ಆಶ್ವಾಸನೆಗಳು ಹೊರಹೊಮ್ಮುತ್ತವೆ. ಪ್ರತೀ ಚುನಾವಣೆಯೂ ಭಿನ್ನವೇ. ಹಾಗಾಗಿಯೇ, ರಾಜಕೀಯ ಪಕ್ಷಗಳು ಹೊಸ ಹೊಸ ಭರವಸೆಗಳನ್ನು ನೀಡಿ, ಮತದಾರರ ಮನ ಗೆಲ್ಲಲು ಬಯಸುತ್ತವೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಪ್ರಸಕ್ತ ಚುನಾವಣೆಯೂ ಭಿನ್ನವೇನಲ್ಲ. ಈ ಆಶ್ವಾಸನೆಗಳ ಸ್ಪರ್ಧೆ ಕೆಲವೊಮ್ಮೆ ಬೇರೆಯದ್ದೇ ರೂಪ ಅಥವಾ ಆಯಾಮ ಪಡೆದುಕೊಂಡು ಬಿಡುತ್ತದೆ. ಅದೇನಿದ್ದರೂ, ಈವರೆಗೆ ದೊಡ್ಡ ಯೋಜನೆಯನ್ನು/ಭರವಸೆಯನ್ನು ಘೋಷಿಸಿದ ಪ್ರಶಸ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು! ನ್ಯಾಯ್-ನ್ಯೂನತಮ್ ಆಯ್ ಯೋಜನಾ ಅಂದರೆ ಕನಿಷ್ಠ ಆದಾಯ ಯೋಜನೆಯನ್ನು ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಬಡತನ ನಿಮೂಲನೆ ನಿಟ್ಟಿನಲ್ಲಿ ಇದೊಂದು ದೊಡ್ಡ ಯೋಜನೆ ಎಂದೂ ಹೇಳಿಕೊಂಡಿದ್ದಾರೆ. ಮುಂದೆ ಅಧಿಕಾರಕ್ಕೆ ಬರುವ ಕೇಂದ್ರ ಸರ್ಕಾರ ಇದೊಂದೇ ಯೋಜನೆಗೆ ವಾರ್ಷಿಕ 3.6 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ! ಈವರೆಗೆ ಇಷ್ಟು ದೊಡ್ಡ ಮೊತ್ತ ಕೇಳುವ ಯಾವುದೇ ಯೋಜನೆ ಜಾರಿಗೆ ಬಂದ ನಿದರ್ಶನಗಳಿಲ್ಲ.

ಆದಾಗ್ಯೂ, ‘ನ್ಯಾಯ್’ ಯೋಜನೆಯ ಸಂಪೂರ್ಣ ವಿವರಗಳು ಇನ್ನೂ ಲಭ್ಯವಾಗಿಲ್ಲ. ಚುನಾವಣೆ ಸಮಯವಾಗಿರುವುದರಿಂದ ಅದನ್ನು ಒಂದು ಪ್ರಮುಖ ಘೋಷಣೆಯಂತೆ ಬಿಂಬಿಸಲಾಗಿದೆ ಅಷ್ಟೇ. ಆದರೆ, ಇದಕ್ಕೆ ವಾರ್ಷಿಕವಾಗಿ ಬೇಕಾಗುವ 3.6 ಲಕ್ಷ ಕೋಟಿ ರೂ.ಗಳನ್ನು ಹೇಗೆ ಕ್ರೋಡೀಕರಣ ಮಾಡಲಾಗುವುದು? ಒಂದೇ ಯೋಜನೆಗೆ ಇಷ್ಟೊಂದು ಮೊತ್ತ ಸುರಿದರೆ ಉಳಿದ ಜನಪ್ರಿಯ ಹಾಗೂ ಮೂಲಭೂತ ಸೌಕರ್ಯದ ಯೋಜನೆಗಳ ಗತಿಯೇನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ದೇಶದ ಎಲ್ಲರನ್ನೂ ಇದು ಬಡತನ ರೇಖೆಯಿಂದ ಹೊರತರಲಿದೆ. ಅಲ್ಲದೆ ತೀವ್ರ ಬಡತನ ಎದುರಿಸುತ್ತಿರುವ ದೇಶದ ಶೇಕಡ 20 ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ. ತಿಂಗಳಿಗೆ 12 ಸಾವಿರ ರೂ. ಆದಾಯವಿರುವ 5 ಕೋಟಿ ಬಡಕುಟುಂಬಗಳನ್ನು ಗುರುತಿಸಲಾಗಿದ್ದು, ಆ ಕುಟುಂಬಗಳ 25 ಕೋಟಿ ಜನರಿಗೆ ‘ನ್ಯಾಯ್’ದ ಲಾಭವಾಗಲಿದೆ ಎಂದು ವಿವರಿಸಲಾಗಿದೆ. ಈ ಕುಟುಂಬಗಳಿಗೆ ವಾರ್ಷಿಕ 72 ಸಾವಿರ ರೂ. ಅಂದರೆ ತಿಂಗಳಿಗೆ 6 ಸಾವಿರ ರೂ. ಒದಗಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿಕೊಂಡಿದ್ದಾರೆ. ‘ಈ ಯೋಜನೆಗೆ ಹಣ ಹೊಂದಿಸಲು ಕಷ್ಟವಾಗದು. ಅದಕ್ಕೆ ಸಾಧ್ಯವಿರುವ ದಾರಿಗಳನ್ನು ಕಂಡುಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಹೇಳಿಕೊಂಡಿದೆಯಾದರೂ, ಆ ದಾರಿಗಳು ಅಥವಾ ಕ್ರಮಗಳು ಯಾವವು ಎಂಬುದನ್ನು ಖಚಿತವಾಗಿ ಹೇಳಿಲ್ಲ.

2019-20ರ ಮಧ್ಯಂತರ ಬಜೆಟ್​ನಲ್ಲಿ ಪ್ರಭಾರಿ ವಿತ್ತ ಸಚಿವ ಪಿಯೂಷ್ ಗೊಯಲ್ ಬಡರೈತರಿಗಾಗಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ನೇರ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ‘ರೈತ ಸಮ್ಮಾನ್ ಯೋಜನೆ’ ಘೋಷಿಸಿದರು. ಈ ಮೂಲಕ ಯೂನಿವರ್ಸಲ್ ಇನ್​ಕಮ್ ಸ್ಕಿಮ್ ಮೊದಲಬಾರಿ ಭಾರತದಲ್ಲೂ ಹುಟ್ಟಿಕೊಂಡಿತು. ಈ ಯೋಜನೆ ಅನ್ವಯ ಈಗಾಗಲೇ ಫಲಾನುಭವಿ ರೈತರ ಖಾತೆಗೆ ಮೊದಲ ಕಂತಾಗಿ 2 ಸಾವಿರ ರೂ.ಗಳನ್ನು ಜಮಾ ಮಾಡಲಾಗಿದೆ ಎಂಬುದು ಗಮನಾರ್ಹ.

ದೇಶದ ಸಾಮಾಜಿಕ-ಆರ್ಥಿಕ ರಂಗದ ವಾತಾವರಣದಲ್ಲಿ ಹೊಸ ಋತು ಈಗಷ್ಟೇ ಆರಂಭವಾಗಿದೆ. ಹಲವು ಬದಲಾವಣೆಗಳ ಮೂಲಕ ಈಗ ಅದು ಕನಿಷ್ಠ ಆದಾಯ ಯೋಜನೆವರೆಗೆ ಬಂದು ತಲುಪಿದೆ. ಆದರೆ, ಈ ಯೋಜನೆ ಅಥವಾ ಘೋಷಣೆ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಮಾರ್ಪಡುವುದಿಲ್ಲ ಎಂಬುದು ನನ್ನ ಅನಿಸಿಕೆ.

ಹಾಗೇ ಅವಲೋಕಿಸಿದರೆ ವಿಶ್ವದ ಹಲವು ಪಕ್ಷಗಳಲ್ಲಿ ನಡೆಸಿದ ಅಧ್ಯಯನ ಮತ್ತು ಭಾರತದ್ದೇ ನಿದರ್ಶನವನ್ನು ಪರಿಗಣಿಸುವುದಾದರೆ ಇಂಥ ಯೋಜನೆಗಳು ಬಡವರ ಅಗತ್ಯವನ್ನು ನೀಗಿಸಲು ಪೂರಕವಾಗಿ ಪರಿಣಮಿಸಿವೆ ಎಂಬುದನ್ನು ಕಾಣಬಹುದು. ತೀರಾ ಮೂಲಭೂತ ಅವಶ್ಯಕತೆಗಳಾದ ಆಹಾರ, ಸೂರು, ಆರೋಗ್ಯ, ಶಿಕ್ಷಣವನ್ನು ಒದಗಿಸಲು ಅಗತ್ಯ ಹಣವನ್ನು ಇಂಥ ಯೋಜನೆ ಮೂಲಕ ವಿನಿಯೋಗಿಸಲಾಗಿದೆ. ಹಣವನ್ನು ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದದರಿಂದ ಸೋರಿಕೆಯ ಸಾಧ್ಯತೆಯೂ ಕಮ್ಮಿಯಾಗಿದೆ. ಹಾಗಾಗಿ, ಕನಿಷ್ಠ ಆದಾಯ ಯೋಜನೆಯ ದಕ್ಷತೆ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ, ತುಂಬ ಪ್ರಶ್ನೆಗಳು ಇರುವುದು ಪ್ರಮಾಣ-ಮಿತಿ ಬಗ್ಗೆ. ಅಂದರೆ ಎಷ್ಟು ಫಲಾನುಭವಿಗಳಿಗೆ ಕೊಡಬಹುದು, ತಲುಪಿಸಬಹುದು? ಇದರ ಒಟ್ಟಾರೆ ನಿರ್ವಹಣೆ ಹೇಗೆ? ಕಾಲಾವಧಿಯೇನು? ಇದು ಅಲ್ಪಾವಧಿ ಯೋಜನೆಯೇ, ದೀರ್ಘಾವಧಿ ಯೋಜನೆಯೇ? ಫಲಾನುಭವಿಗಳನ್ನು ನಿರ್ದಿಷ್ಟವಾಗಿ ಗುರುತಿಸುವ ಬಗೆ ಹೇಗೆ? ಇವುಗಳಿಗೆಲ್ಲ ಉತ್ತರ ದೊರೆಯದೆ ಯೋಜನೆಯ ಸಮರ್ಪಕ ಜಾರಿ ಸಾಧ್ಯವಿಲ್ಲ.

ಮುಖ್ಯವೆಂದರೆ, ಹಣ ತಲುಪಿಸುವ ಅದು 6 ಸಾವಿರ, 12 ಸಾವಿರ, 72 ಸಾವಿರ ರೂ. ಎಷ್ಟೇ ಆಗಿರಬಹುದು; ಅಂಥ ಕುಟುಂಬಗಳ ಸ್ಥಿತಿಗತಿ ಕುರಿತಂತೆ ಸಮಗ್ರ ಅಧ್ಯಯನವನ್ನೇ ನಡೆಸಲಾಗಿಲ್ಲ ಎಂಬುದು ಅಚ್ಚರಿಯ ಸಂಗತಿ. ಹಣದ ಮೊತ್ತ ಮತ್ತು ಅದನ್ನು ತಲುಪಿಸುವ ಕುಟುಂಬಗಳನ್ನು ಒಂದು ಸ್ಥೂಲ ಅಂದಾಜಿನಲ್ಲಿ ನಿರ್ಧರಿಸಿದಂತಿದೆ. ಪಾರದರ್ಶಕತೆ ಹಾಗೂ ಗಾಂಭೀರ್ಯದ ಕೊರತೆ ಕುರಿತಂತೆ ವಿವರವಾದ ಚರ್ಚೆಯ ಅಗತ್ಯವಿದ್ದು, ಈ ಸಂಗತಿಗಳೇ ‘ನ್ಯಾಯ್’ ಯೋಜನೆಗೆ ಸಂಬಂಧಿಸಿದ ವಿಶ್ವಾಸಾರ್ಹತೆಗೆ ಧಕ್ಕೆ ತರಬಲ್ಲವು.

ಇಷ್ಟೊಂದು ಬೃಹತ್ ಮೊತ್ತದ ನೀಡಿಕೆ ಹೇಗೆ ಸಾಧ್ಯ ಎಂಬುದಂತೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ. ಈ ಯೋಜನೆ ಬಯಸುವ 3.6 ಲಕ್ಷ ಕೋಟಿ ರೂ. ನಮ್ಮ ದೇಶದ ಬಜೆಟ್​ನ ಶೇಕಡ 15ರಷ್ಟು ಎಂಬುದು ಗೊತ್ತಿರಲಿ. ‘ಇತರೆ ಸಬ್ಸಿಡಿಗಳನ್ನು ಕಡಿತಗೊಳಿಸಲಾಗುವುದಿಲ್ಲ. ಅವು ಮುಂಚಿನಂತೆ ಅಬಾಧಿತವಾಗಿ ಮುಂದುವರಿಯಲಿವೆ. ನ್ಯಾಯ್ ಯೋಜನೆಯನ್ನು ಸ್ವತಂತ್ರವಾಗಿ ಜಾರಿಗೆ ತರಲಾಗುವುದು’ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆಯಾದರೂ 3.6 ಲಕ್ಷ ಕೋಟಿ ರೂ.ಗಳ ಕ್ರೋಡೀಕರಣ ಹೇಗೆ ಎಂಬುದಕ್ಕೆ ಉತ್ತರವಿಲ್ಲ. ಅಲ್ಲದೆ, ಈಗ ನೀಡುತ್ತಿರುವ ಎಲ್ಲ ಸಬ್ಸಿಡಿಗಳನ್ನು ಲೆಕ್ಕ ಹಾಕಿದರೆ ಆ ಮೊತ್ತ 9 ಲಕ್ಷ ಕೋಟಿ ರೂ.ಗೆ ತಲುಪುತ್ತದೆ. ಸರಳ ಗಣಿತವನ್ನೇ ನಂಬುವುದಾದರೆ, ಕೇಂದ್ರ ಸರ್ಕಾರದ ಬೊಕ್ಕಸದಲ್ಲಿ ಸದ್ಯಕ್ಕಂತೂ ಇಷ್ಟು ಹಣ ಇಲ್ಲ. ಒಂದು ವೇಳೆ ತೆರಿಗೆ ದರಗಳನ್ನು ಹೆಚ್ಚಿಸಿದರೆ ಅದರಿಂದ ಬೆಲೆಯೇರಿಕೆಯೂ ಹೆಚ್ಚಿ ಜನಸಾಮಾನ್ಯರ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತದೆಯಷ್ಟೇ. ಹಣದುಬ್ಬರದ ಸಮಸ್ಯೆಯೂ ಕಾಡಬಹುದು. ಹಾಗಾಗಿ, ಇಂದಿನ ಆರ್ಥಿಕ ಪರಿಸ್ಥಿತಿ ಅವಲೋಕಿಸುವುದಾದರೆ ‘ನ್ಯಾಯ್’ದಂಥ ಯೋಜನೆ ಜಾರಿಗೆ ಪೂರಕವಾದಂಥ ಸ್ಥಿತಿ ಇಲ್ಲ. ಇಂಥ ಯೋಜನೆಯ ನಿರ್ವಹಣೆಯೂ ತುಂಬ ಸವಾಲಿನದ್ದು ಎಂಬುದನ್ನು ಮರೆಯುವಂತಿಲ್ಲ. ಏಕೆಂದರೆ, ಇಂಥ ಕುಟುಂಬಗಳ ನಿರ್ದಿಷ್ಟ ಆದಾಯದ ಕುರಿತಂತೆ ಸರ್ಕಾರದ ಬಳಿ ಯಾವುದೇ ನಿಖರವಾದ ಮಾಹಿತಿ ಅಥವಾ ದತ್ತಾಂಶಗಳಿಲ್ಲ. ಬಹಳಷ್ಟು ಬಡ ಕುಟುಂಬಗಳು ಅಸಂಘಟಿತ ಆರ್ಥಿಕ ವ್ಯವಸ್ಥೆಯಲ್ಲೇ ಇವೆ ಎಂಬುದು ಕಟುವಾಸ್ತವ. ಹಾಗಾಗಿ, ಇಂಥ ಕುಟುಂಬಗಳ ಆದಾಯದ ಮಾಹಿತಿ ಬಗ್ಗೆ ಸದ್ಯಕ್ಕಂತೂ ಬರೀ ಗ್ರಹಿಕೆಗಳಿವೆ.

ಈ ಯೋಜನೆ ಘೋಷಣೆಯ ವೇಳೆಯನ್ನು ಪ್ರಶ್ನಿಸುವಂತಿಲ್ಲ. ಏಕೆಂದರೆ, ಚುನಾವಣಾ ಸಮಯವಾಗಿರುವುದರಿಂದ ಕಾಂಗ್ರೆಸ್ ಈ ಘೋಷಣೆ ಮಾಡಿದೆ. ಆದರೆ, ಅನುಷ್ಠಾನದ ಕುರಿತಂತೆಯೇ ಸಮಸ್ಯೆ-ಸವಾಲುಗಳಿದ್ದು ಅವುಗಳ ಬಗ್ಗೆ ಚರ್ಚೆಯಾಗಬೇಕಿದೆ. ‘ನ್ಯಾಯ್’ ನಿರ್ದಿಷ್ಟ ಅವಧಿಯದ್ದೇ? ಎಷ್ಟು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ? ಎಷ್ಟು ಸಮಯದವರೆಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲಾಗುತ್ತದೆ? ಎಂಬ ಪ್ರಶ್ನೆಗಳಿಗೂ ಉತ್ತರವಿಲ್ಲ. ಇದನ್ನೆಲ್ಲ ಗಮನಿಸಿದರೆ ಸೂಕ್ತ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳದೆಯೇ ‘ನ್ಯಾಯ್’ ಅನ್ನು ಚುನಾವಣಾ ಭರವಸೆಯಾಗಿ ಘೋಷಿಸಲಾಗಿದೆ. ಇನ್ನೂ ಕಾಲ ಮಿಂಚಿಲ್ಲ. ಕಾಂಗ್ರೆಸ್ ಪಕ್ಷ ಸಮಗ್ರ ಅಧ್ಯಯನ ನಡೆಸಿ, ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿದ್ಧಪಡಿಸಿಕೊಳ್ಳಬೇಕಿದೆ. ಕೋಟ್ಯಂತರ ಜನರ ಬದುಕನ್ನು ಪ್ರಭಾವಿಸಬಲ್ಲ ಸಂಗತಿಯನ್ನು ಕೇವಲ ಚುನಾವಣಾದೃಷ್ಟಿಯನ್ನು ಇರಿಸಿಕೊಂಡು ತರಾತುರಿಯಲ್ಲಿ ಘೋಷಿಸುವುದು ಸೂಕ್ತವಲ್ಲ. ಚುನಾವಣೆ ಬಳಿಕ ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಕನಿಷ್ಠ ಆದಾಯ ಯೋಜನೆಯ ಎಲ್ಲ ಮಗ್ಗುಲುಗಳನ್ನು, ಆಯಾಮಗಳನ್ನು ಮತ್ತು ಅದರ ಸಾಧ್ಯಾಸಾಧ್ಯತೆಗಳನ್ನು ಸಮಗ್ರವಾಗಿ ಪರೀಕ್ಷಿಸಲಿ.

ಅಲ್ಲದೆ, ಹೀಗೆ ಉಚಿತವಾಗಿ ದುಡ್ಡು ನೀಡುವಂಥ ಪರಿಪಾಠ ಜನರಲ್ಲಿ ಸೋಮಾರಿತನವನ್ನು ಬೆಳೆಸಿ, ಶ್ರಮ ಸಂಸ್ಕೃತಿಗೆ ಧಕ್ಕೆ ಉಂಟುಮಾಡಬಲ್ಲದು ಎಂಬುದು ಕೆಲ ವಿಚಾರವಾದಿಗಳ ಅಭಿಮತ. ಅದೇನಿದ್ದರೂ, ಕನಿಷ್ಠ ಆದಾಯ ಯೋಜನೆಯಂಥ ಮಹತ್ವದ ಯೋಜನೆ ಸಮಗ್ರ ಅಧ್ಯಯನ, ನಿಖರ ಮಾಹಿತಿ ಸಂಗ್ರಹ, ಪೂರ್ವಸಿದ್ಧತೆಗಳ ಬಳಿಕವೇ ಜಾರಿಗೆ ಪರಿಶೀಲಿಸಬೇಕು. ಇದು ಚುನಾವಣಾ ಸಮಯ ಆಗಿರುವುದರಿಂದ ಮುಂದೇನಾಗಲಿದೆ ಎಂಬುದನ್ನು ಕಾದು ನೋಡೋಣ.

(ಲೇಖಕರು ಆರ್ಥಿಕ ತಜ್ಞರು)