ಸಮರದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ

ಭಾರತ ಸದ್ಯ ಸುಮಾರು ಶೇ.7.3ರ ದರದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಇದರ ಜತೆಗೆ, ಪ್ರತಿ ವರ್ಷ ದೇಶದ ಆರ್ಥಿಕತೆಗೆ 200 ಶತಕೋಟಿ ಡಾಲರ್ ಮೊತ್ತ ಸೇರ್ಪಡೆಯಾಗುತ್ತಿದೆ. ಇದರಲ್ಲಿ ಶೇಕಡ 1 ಕುಸಿದರೂ ವಾರ್ಷಿಕ ಏನಿಲ್ಲೆಂದರೂ 30 ಶತಕೋಟಿ ಡಾಲರ್ ನಷ್ಟವಾದಂತೆಯೇ ಲೆಕ್ಕ.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎ್ನ 40 ಯೋಧರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತದ ವಿಮಾನಗಳು ಪಾಕಿಸ್ತಾನದ ಗಡಿಯೊಳಗೇ ನುಗ್ಗಿ ಉಗ್ರರ ಹಲವು ತರಬೇತಿ ಶಿಬಿರಗಳನ್ನು ನಾಶಪಡಿಸಿದ್ದು ಈಗಾಗಲೇ ಜಗಜ್ಜಾಹೀರು. 1971ರ ನಂತರದಲ್ಲಿ, ನಮ್ಮ ಸೇನೆ ಪಾಕ್ ನೆಲಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲು. ಪಾಕ್ ಸರ್ಕಾರ ಮತ್ತು ಸೇನೆಗೆ ಇದು ಅಚ್ಚರಿಯ ಆಘಾತ. ಈ ಸಾಹಸಕ್ಕಾಗಿ ನಮ್ಮ ಸರ್ಕಾರ ಮತ್ತು ಸಶಸಪಡೆಗಳು ಅಭಿನಂದನಾರ್ಹ. ಪಾಕಿಸ್ತಾನದ ಎ್-16 ಯುದ್ಧವಿಮಾನಗಳು ನಮ್ಮ ಗಡಿಯೊಳಗೆ ಬಂದಿದ್ದು, ಅದರಲ್ಲಿ ಒಂದನ್ನು ನಮ್ಮ ವಾಯುಸೇನೆ ಹೊಡೆದುರುಳಿಸಿದ್ದು, ನಮ್ಮ ಒಂದು ಮಿಗ್-21 ವಿಮಾನ ಪಾಕ್ ನೆಲದಲ್ಲಿ ಪತನವಾಗಿ ಅದರ ವಿಂಗ್ ಕಮಾಂಡರ್ ಅಭಿನಂದನ್ ಈಗ ಪಾಕ್ ವಶದಲ್ಲಿರುವುದು, ಅವರನ್ನು ಬಿಡಿಸಲು ಭಾರತ ಪ್ರಯತ್ನ ನಡೆಸಿರುವುದು ಇವೆಲ್ಲ ನಂತರದ ವಿದ್ಯಮಾನಗಳು.

ಅರೇ, ಆರ್ಥಿಕ ವಿಷಯಗಳ ಕುರಿತಾದ ಈ ಅಂಕಣದಲ್ಲಿ ಏಕೆ ಯುದ್ಧ ವಿಷಯ ಎಂದು ಅನೇಕರು ಹುಬ್ಬೇರಿಸಬಹುದು. ಕಾರಣ ಇದೆ. ಸದ್ಯಕ್ಕೇನೋ ಎರಡೂ ದೇಶಗಳ ನಡುವೆ ಯುದ್ಧವೇನೂ ಆರಂಭಗೊಂಡಿಲ್ಲ. ಆದರೆ ಒಂದೊಮ್ಮೆ ಈ ಎರಡೂ ಅಣ್ವಸಸಜ್ಜಿತ ದೇಶಗಳ ನಡುವೆ ಪೂರ್ಣಪ್ರಮಾಣದ ಸಮರವೇನಾದರೂ ಘಟಿಸಿದರೆ ಅದರ ಆರ್ಥಿಕ ಪರಿಣಾಮಗಳು ಏನಾಗಬಹುದು ಎಂಬುದರತ್ತ ನನ್ನ ಕಾಳಜಿ. ಸಮಕಾಲೀನ ವಿಶ್ವದಲ್ಲಿ ಸಂಘರ್ಷಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಅಸಾಂಪ್ರದಾಯಿಕವಾಗಿರಬಹುದು. ಕಳೆದ ಸುಮಾರು ಎರಡು ದಶಕಗಳಿಂದ ಪಾಕಿಸ್ತಾನವು ಭಾರತದ ಮೇಲೆ ಅೋಷಿತ ಅಥವಾ ಅಸಾಂಪ್ರದಾಯಿಕ ಯುದ್ಧವನ್ನೇ ನಡೆಸುತ್ತಿದೆ. ಇದರ ಪರಿಣಾಮವಾಗಿ ಗಡಿಗಳ ರಕ್ಷಣೆಗಾಗಿ ಮತ್ತು ನಿರಂತರವಾಗಿ ಕಟ್ಟೆಚ್ಚರದಲ್ಲಿ ಇರುವುದಕ್ಕಾಗಿ ಅಪಾರ ಪ್ರಮಾಣದ ಹಣವನ್ನು ಭಾರತ ವ್ಯಯಿಸಬೇಕಾಗಿದೆ. ಕಾಶ್ಮೀರ ಪ್ರದೇಶವೊಂದರಲ್ಲಿಯೇ ನಿಯೋಜಿಸಲಾಗಿರುವ ಸಶಸ ಪಡೆಗಳ ಸಿಬ್ಬಂದಿ ಸಂಖ್ಯೆ ಸುಮಾರು 4-5 ಲಕ್ಷ ಇದೆ ಎಂದು ಅಂದಾಜಿಸಲಾಗಿದೆ. ಶುದ್ಧ ಆರ್ಥಿಕ ದೃಷ್ಟಿಕೋನವೊಂದರಲ್ಲಿಯೇ ನೋಡುವುದಾದರೆ, ಪಾಕಿಸ್ತಾನದೊಂದಿಗಿನ ಈ ಅಸಾಂಪ್ರದಾಯಿಕ ಸಮರ ಭಾರತದಂತಹ ಮಧ್ಯಮ ಆದಾಯದ ದೇಶಕ್ಕೆ ಬಲು ದುಬಾರಿಯೇ ಸರಿ.

ಅದರೆ ಸಾಂಪ್ರದಾಯಿಕ ಯುದ್ಧದ್ದು ಮತ್ತೊಂದು ಕಥೆ-ವ್ಯಥೆ. ಅದರ ವೆಚ್ಚ ಅಪಾರ. ಇಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚ ಎರಡೂ ಇವೆ. ಪ್ರತ್ಯಕ್ಷ ವೆಚ್ಚ ಅಂದರೆ, ಸಮರದಲ್ಲಿ ತೊಡಗಿಸುವ ಸಶಸ ಪಡೆಗಳಿಗೆ ತಗುಲುವಂಥದ್ದು. ಭಾರತವು ತನ್ನ ಒಟ್ಟು ದೇಶೀ ಆದಾಯದ (ಜಿಡಿಪಿ) ಶೇ.2ರಷ್ಟು ಅಂದರೆ ವಾರ್ಷಿಕ ಸುಮಾರು 3.54 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಸಶಸ ಪಡೆಗಳಿಗಾಗಿ ವ್ಯಯಿಸುತ್ತದೆ. ಒಂದೊಮ್ಮೆ ಪಾಕಿಸ್ತಾನದೊಂದಿಗೆ ಸಂಕ್ಷಿಪ್ತ ಅವಧಿಯ ಯುದ್ಧ ನಡೆದರೂ ಈ ವೆಚ್ಚ ಎರಡು ಮೂರು ಪಟ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಸಮರವೇನಾದರೂ ಬಹು ದಿನಗಳ ಕಾಲ ಎಳೆದಲ್ಲಿ ಈ ಖರ್ಚು ಮತ್ತಷ್ಟು ಹೆಚ್ಚುತ್ತದೆ. ಭಾರತ ಸರ್ಕಾರದ ಬಜೆಟ್ ಲೆಕ್ಕದಲ್ಲಿ ನೋಡುವುದಾದರೆ, ಸದ್ಯ ಬಜೆಟ್‌ನ ಶೇಕಡ 10ರಷ್ಟು ಹಣವನ್ನು ರಕ್ಷಣೆಗೆಂದು ಮೀಸಲಿರಿಸಲಾಗುತ್ತದೆ. ಒಂದು ವೇಳೆ ಯುದ್ಧವೇನಾದರೂ ದೀರ್ಘ ಅವಧಿಗೆ ನಡೆದಲ್ಲಿ ಈ ಪ್ರಮಾಣ ಹೆಚ್ಚುವುದು ಸಹಜ.

ಯುದ್ಧದಿಂದ ಪರೋಕ್ಷ ಪರಿಣಾಮಗಳೂ ಇವೆ. ಸಮರಕಾಲದಲ್ಲಿ ಸಹಜವಾಗಿಯೇ ನಿರ್ಬಂಧಗಳು ಇರುವುದರಿಂದ ಆರ್ಥಿಕ ಚಟುವಟಿಕೆಗಳು ಮಂದವಾಗುತ್ತವೆ. ಇದರ ಪರಿಣಾಮವಾಗಿ ಅಭಿವೃದ್ಧಿ ದರ ಕುಂಠಿತವಾಗುತ್ತದೆ. ಭಾರತ ಸದ್ಯ ಸುಮಾರು ಶೇ.7.3ರ ದರದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಇದರ ಜತೆಗೆ, ಪ್ರತಿ ವರ್ಷ ದೇಶದ ಆರ್ಥಿಕತೆಗೆ 14.16 ಲಕ್ಷ ಕೋಟಿ ರೂ. ಮೊತ್ತ ಸೇರ್ಪಡೆಯಾಗುತ್ತಿದೆ. ಇದರಲ್ಲಿ ಶೇಕಡ 1 ಕುಸಿದರೂ ವಾರ್ಷಿಕ ಏನಿಲ್ಲೆಂದರೂ 2.12 ಲಕ್ಷ ಕೋಟಿ ರೂ. ನಷ್ಟವಾದಂತೆಯೇ ಲೆಕ್ಕ. ಮುಂಬೈನ ಸ್ಟ್ರಾಟಿಜಿಕ್ ೆರ್‌ಸೈಟ್ ಗ್ರೂಪ್ ಎಂಬ ಚಿಂತಕರ ಚಾವಡಿಯು ಯುದ್ಧದ ಖರ್ಚುವೆಚ್ಚಗಳನ್ನು ಲೆಕ್ಕಹಾಕಿ ಒಂದು ವರದಿ ಪ್ರಕಟಿಸಿದೆ. ಅದರ ಪ್ರಕಾರ, ಸಣ್ಣ ಪ್ರಮಾಣದ ಯುದ್ಧ ನಡೆದರೂ ಭಾರತದ ಆರ್ಥಿಕತೆಯನ್ನು ಶೇ.3ರಷ್ಟು ಕುಗ್ಗಿಸುತ್ತದೆ. ಇದು ಕಳವಳಕಾರಿಯೇ ಸರಿ. ಭಾರತದ ಸಂಸತ್ ಭವನದ ಮೇಲೆ ಭಯೋತ್ಪಾದಕರ ದಾಳಿಯಾಯಿತಲ್ಲ, ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಕಟ್ಟೆಚ್ಚರದಿಂದಿರಲು ಮತ್ತು ಸಂಪನ್ಮೂಲ ಸಂಗ್ರಹಕ್ಕೆ ವ್ಯಯಿಸಿದ ಮೊತ್ತ ಸರಿಸುಮಾರು 21 ಸಾವಿರ ಕೋಟಿ ರೂ. ಎರಡು ಅಣ್ವಸಯುಕ್ತ ದೇಶಗಳು ಪರಸ್ಪರರಿಂದ ಯಾವುದೇ ಬಗೆಯ ಸಂಘರ್ಷಕ್ಕೆ ಆಸ್ಪದ ಕೊಡಬಾರದು ಮತ್ತು ಆರ್ಥಿಕತೆಯ ವ್ಯತಿರಿಕ್ತ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಅಮೆರಿಕದ ಅಟ್ಲಾಂಟಿಕ್ ಕೌನ್ಸಿಲ್ ಎಂಬ ಅಧ್ಯಯನವರದಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.

ಅಮೆರಿಕವು ಅ್ಘಾನಿಸ್ತಾನದಲ್ಲಿ ಯುದ್ಧದಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದಕ್ಕಾಗಿ ಅದು ವ್ಯಯಿಸಿರುವ ಹಣವೆಷ್ಟು ಎಂದು ಊಹಿಸಬಲ್ಲಿರಾ? 2017ರವರೆಗಿನ ಲೆಕ್ಕದ ಪ್ರಕಾರ ಈ ಮೊತ್ತ ಸುಮಾರು 19121 ಕೋಟಿ ರೂ. ನೊಬೆಲ್ ಪ್ರಶಸ್ತ್ತಿ ಪುರಸ್ಕೃತ ಆರ್ಥಿಕ ತಜ್ಞ ಜೋಸ್ೆ ಸ್ಟಿಗ್ಲಿಟ್ಜ್ ಪ್ರಕಾರ, ಇರಾಕ್ ಯುದ್ಧದಿಂದಾಗಿ ಅಮೆರಿಕದ ತೆರಿಗೆದಾರರು ಭರಿಸಬೇಕಾಗಿ ಬಂದ ಹಣದ ಮೊತ್ತ ಸುಮಾರು 212.46 ಲಕ್ಷ ಕೋಟಿ ರೂ. ಅಂದರೆ, 2019ರಲ್ಲಿ ಭಾರತದ ಒಟ್ಟು ಜಿಡಿಪಿಯಷ್ಟು! ಅಮೆರಿಕದ ಸಂಸತ್‌ಗೆ
ಸೇನೆ ನೀಡಿದ ಲೆಕ್ಕಕ್ಕಿಂತ ಇದು ಬಹುತೇಕ ಹತ್ತು ಪಟ್ಟು ಅಧಿಕ. ಯುದ್ಧ ಮತ್ತು ಸಂಘರ್ಷಗಳು ಅನಿರೀಕ್ಷಿತ. ಆದರೆ ಇದರಿಂದಾಗಿ ಸಂಬಂಧಿಸಿದ ದೇಶಗಳ ಆರ್ಥಿಕತೆ ಮಾತ್ರ ಬಸವಳಿದುಹೋಗುತ್ತದೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ.

ಮತ್ತೆ, ಭಾರತ-ಪಾಕ್ ಉದ್ವಿಗ್ನತೆಯ ವಿಷಯಕ್ಕೆ ಬರುವುದಾದರೆ, ಭಾರತದ ಗಡಿಯೊಳಗಡೆ ಬರಲು ಪಾಕ್ ಯುದ್ಧವಿಮಾನಗಳು ಯತ್ನಿಸಿವೆ. ಪ್ರತೀಕಾರ ತೀರಿಸಿಕೊಳ್ಳಬೇಕೆಂಬ ಭಾವನೆ ಪಾಕ್‌ನೊಳಗೆ ಹೆಚ್ಚುತ್ತಿದೆ. ಆದರೆ ಆ ದೇಶದ ಆರ್ಥಿಕತೆ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಅಲ್ಲಿನ ವಿದೇಶಿ ವಿನಿಮಯ ಮೀಸಲು ಪ್ರಮಾಣ ದಾಖಲೆಯ ಕುಸಿತ ಕಂಡಿದೆ. ಪಾಕಿಸ್ತಾನದ ಮೀಸಲು ನಿಧಿ ಕೇವಲ 92067 ಕೋಟಿ ರೂ.ಗಳಷ್ಟಿದೆ. ಅಂದರೆ, ಆಮದಿಗೆ ಮೂರು ತಿಂಗಳು ಮಾತ್ರ ಸಾಕು. ಧನಸಹಾಯ ನೀಡಬೇಕೆಂಬ ಪಾಕಿಸ್ತಾನದ ಮನವಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎ್) ಪರಿಶೀಲಿಸುತ್ತಿದೆ. ಇನ್ನೊಂದೆಡೆ, ಪಾಕಿಸ್ತಾನದ ನಾಯಕರು ಹಣದ ನೆರವಿಗಾಗಿ ಚೀನಾ ಮತ್ತು ಸೌದಿ ಅರೇಬಿಯಾದತ್ತ ಹಸ್ತ ಚಾಚುತ್ತಿದ್ದಾರೆ. ಈ ಆರ್ಥಿಕ ದುಸ್ಥಿತಿಯ ಪರಿಣಾಮ ಅಲ್ಲಿನ ಸೇನೆಯ ಮೇಲೂ ಆಗಿದೆ. ಭಾರತದೊಂದಿಗೆ ಯುದ್ಧ ಮಾಡಬೇಕಾದಲ್ಲಿ ಅದು ಇನ್ನಷ್ಟು ಶಸಾಸಗಳನ್ನು ಪೇರಿಸಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಯುದ್ಧವೇ ಘಟಿಸಿದಲ್ಲಿ ಪಾಕಿಸ್ತಾನದ ಶಸ ಸಂಗ್ರಹ ಕೇವಲ ಒಂದು ವಾರಕ್ಕೆ ಸಾಕಾಗುವಷ್ಟಿದೆ ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಮೀಸಲು ನಿಧಿ ಮತ್ತು ಆರ್ಥಿಕ ಗಾತ್ರ ಹಾಗೂ ಆರೋಗ್ಯ ಉತ್ತಮವಾಗಿದೆ ಎಂಬುದು ಸಮಾಧಾನಕರ ಸಂಗತಿ. ಆದರೂ, ಪಾಕಿಸ್ತಾನದೊಂದಿಗೆ ನಮ್ಮನ್ನು ತುಲನೆ ಮಾಡಿಕೊಳ್ಳುವುದು ಜಾಣನಡೆಯೇನೂ ಅಲ್ಲ ಬಿಡಿ. ಯುದ್ಧದಿಂದಾಗುವ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ನಮ್ಮ ನಾಯಕರಿಗೆ ಚೆನ್ನಾಗಿಯೇ ಗೊತ್ತಿದೆ. ಆದರೆ ಏನು ಮಾಡುವುದು? ಆಯಾ ಸಂದರ್ಭಪರಿಸ್ಥಿತಿಗಳಿಗೆ ಅನುಗುಣವಾಗಿ ನಮ್ಮನ್ನು ಯುದ್ಧಕ್ಕೆಳೆಯುವ ಪ್ರಯತ್ನಗಳಾಗುತ್ತವೆ. ಇದೇನೇ ಇರಲಿ, ಭಾರತ-ಪಾಕ್ ನಡುವಣ ಸದ್ಯದ ಬಿಕ್ಕಟ್ಟು ಪೂರ್ಣಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗದಿರಲಿ ಎಂದು ಆಶಿಸೋಣ.
(ಲೇಖಕರು ಆರ್ಥಿಕ ತಜ್ಞರು)