ಸಾರ್ವತ್ರಿಕ ಆದಾಯ ಯೋಜನೆಯೆಡೆಗೆ ಭಾರತ ಹೆಜ್ಜೆಹಾಕುತ್ತಿದೆಯೇ?

ಸಂಸತ್​ನಲ್ಲಿ 2019-20ರ ಮಧ್ಯಂತರ ಬಜೆಟ್ ಮಂಡನೆಯಾಗಿ ಹತ್ತತ್ತಿರ 15 ದಿನಗಳೇ ಸಂದಿವೆ. ಸಣ್ಣಪುಟ್ಟ ರೈತರಿಗೆ ಸಂಬಂಧಿಸಿದ ಯೋಜನೆಗೆ ಚಾಲನೆ ನೀಡಲು ಒಂದು ಐತಿಹಾಸಿಕ ಮತ್ತು ಪಥನಿರ್ವಪಕ ಘೋಷಣೆಯೂ ಹೊರಬಿದ್ದಿದೆ. ತತ್​ಕ್ಷಣದಿಂದ ಜಾರಿಗೆ ಬರುವಂತೆ, ವರ್ಷವೊಂದಕ್ಕೆ 6 ಸಾವಿರ ರೂಪಾಯಿ ಮೊತ್ತವನ್ನು ಮೂರು ಕಂತುಗಳಲ್ಲಿ ಎಲ್ಲ ಸಣ್ಣಪುಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಮಾಡಲಾಗುವುದು ಎಂಬುದು ಇಲ್ಲಿ ಹೊಮ್ಮಿರುವ ಭರವಸೆ. ಕೆಲವೊಂದು ಷರತ್ತುಗಳೊಂದಿಗೆ ಈ ಯೋಜನೆ ಯಾವುದೇ ಹೊರತುಗಳಿಲ್ಲದೆ ಭಾರತದಾದ್ಯಂತ ಅನುಷ್ಠಾನಗೊಳ್ಳುತ್ತಿದೆ ಎಂಬುದು ಮಹತ್ವದ ವಿದ್ಯಮಾನವೇ ಸರಿ. ತೆಲಂಗಾಣ ರಾಜ್ಯದಲ್ಲೂ ಕೃಷಿಕರಿಗೆ ಇಂಥದೇ ಯೋಜನೆಯನ್ನು ಘೋಷಿಸಲಾಗಿದೆ. ಪ್ರತಿವರ್ಷ ಈ ಯೋಜನೆಯ ಮೇಲೆ 75,000 ಕೋಟಿ ರೂ.ಗಳನ್ನು ವಿನಿಯೋಗಿಸಬೇಕಾಗಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಹಾಗಾದಲ್ಲಿ, ಎಲ್ಲ ಪರೋಕ್ಷ ಸಬ್ಸಿಡಿಗಳನ್ನು ನಿಧಾನವಾಗಿ ಹಿಂತೆಗೆದುಕೊಂಡು, ಅದರ ಜಾಗದಲ್ಲಿ ಮೂಲಭೂತ ಆದಾಯದ ಯೋಜನೆಯನ್ನು ಅಳವಡಿಸುವಂಥ ಹೊಸತೊಂದು ವ್ಯವಸ್ಥೆಯ ಆರಂಭ ಇದಾಗಿರಬಹುದೇ ಎಂಬುದು ಪ್ರಶ್ನೆ. ಇಂಥದೊಂದು ಮೂಲಭೂತ ಆದಾಯವು ಸಮಾಜದ ಎಲ್ಲ ಬಡವಾತಿಬಡವರಿಗೂ ಆದರ್ಶಪ್ರಾಯವಾಗಿ ಒತ್ತಾಸೆಯಾಗಿ ನಿಲ್ಲುತ್ತದೆ; ನೇರನಗದು ಪಾವತಿಯಂಥ ಉಪಕ್ರಮದಿಂದಾಗಿ ಅವರ ಆದಾಯಗಳಿಗೆ ಪೂರಕಬಲ ಒದಗುವುದರಿಂದ, ಅದನ್ನು ಸ್ವೀಕರಿಸಿದವರು ಯಾವುದೇ ಅಡೆತಡೆಗಳಿಲ್ಲದೆಯೇ ಅದು ತಮಗೇ ಸೇರಿದ ಹಣವೇನೋ ಎಂಬ ರೀತಿಯಲ್ಲಿ ಅದನ್ನು ಖರ್ಚುಮಾಡುವ ತೀರ್ಮಾನ ಸ್ವಾತಂತ್ರ್ಯವನ್ನು ಹೊಂದುವಂಥ ಸನ್ನಿವೇಶವನ್ನು ಇದು ಸೃಷ್ಟಿಸುವುದಂತೂ ಖರೆ.

ಮೂಲಭೂತ ಆದಾಯ ಎಂಬ ವಿಷಯ ಅಥವಾ ಪರಿಕಲ್ಪನೆ ಹೊಸದೇನಲ್ಲ. ಪಾಶ್ಚಾತ್ಯ ವಿದ್ವಾಂಸರು/ಚಿಂತಕರಿಂದ 15ನೇ ಶತಮಾನದಷ್ಟು ಹಿಂದೆಯೇ ಸೂಚಿಸಲ್ಪಟ್ಟ ಮತ್ತು ಇತಿಹಾಸದ ಹತ್ತು ಹಲವು ಕಾಲಘಟ್ಟಗಳಲ್ಲಿ ರ್ಚಚಿಸಲ್ಪಟ್ಟ ಪರಿಕಲ್ಪನೆಯಿದು. ‘ಸಾರ್ವತ್ರಿಕ ಆದಾಯ’, ‘ಮೂಲಭೂತ ಆದಾಯ’, ‘ನಾಗರಿಕರ ಆದಾಯ’, ‘ಮೂಲಭೂತ ಆದಾಯ ಖಾತರಿ’, ‘ಸಾರ್ವತ್ರಿಕ ಪ್ರಾತ್ಯಕ್ಷಿಕ ಅನುದಾನ’ (Universal Demogrant) ಇವೇ ಮೊದಲಾದ ವಿಭಿನ್ನ ಹೆಸರುಗಳು ಇದಕ್ಕಿದ್ದವು. ಆದಾಯವು ಬೇಷರತ್ತಾಗಿ ಒದಗಿಸಲ್ಪಡುತ್ತಿದೆ ಮತ್ತು ಸಂಬಂಧಿತ ವರ್ಗದಲ್ಲಿನ ಪ್ರತಿಯೊಬ್ಬರೂ ಯಾವುದೇ ಹೊರತು/ವಿನಾಯಿತಿ ಇಲ್ಲದೆಯೇ ಅದನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂಬುದು ಇದಕ್ಕೆ ಆಧಾರವಾಗಿರುವ ತತ್ತ್ವ. ಇಂಥದೇ ಯೋಜನೆಯೊಂದನ್ನು 1946ರಲ್ಲಿ ಅನುಷ್ಠಾನಕ್ಕೆ ತಂದ ಮೊದಲ ದೇಶ ಬ್ರಿಟನ್; ‘ಬೇಷರತ್ತಾದ ಕೌಟುಂಬಿಕ ಭತ್ಯೆ’ ಎಂಬ ಹಣೆಪಟ್ಟಿಯಿದ್ದ ಈ ಯೋಜನೆ, ಕುಟುಂಬದಲ್ಲಿನ ಎರಡನೆಯ ಮತ್ತು ತರುವಾಯದ ಮಗುವಿಗೆ ಒತ್ತಾಸೆಯಾಗುವ ಉದ್ದೇಶವನ್ನು ಹೊಂದಿತ್ತು. ಮಿಕ್ಕಾವುದೇ ಸಬ್ಸಿಡಿ ಯೋಜನೆಗೆ ಹೋಲಿಸಿದಾಗ ಮೂಲಭೂತ ಆದಾಯ ಯೋಜನೆ ಫಲಾನುಭವಿಗಳಿಗೆ ಉತ್ತಮವಾಗಿ ತಲುಪುತ್ತದೆ ಮತ್ತು ಪರಿಣಾಮಕಾರಿಯಾಗಿದೆ ಎಂಬುದನ್ನು 80ರ ದಶಕದಲ್ಲಿ ಬ್ರೆಜಿಲ್​ನಲ್ಲಿ ಕಂಡುಬಂದ ಅನುಭವವು ನಿಸ್ಸಂದೇಹವಾಗಿ ಸಾಬೀತುಪಡಿಸುತ್ತದೆ. ಬ್ರೆಜಿಲ್​ನಲ್ಲಿ ಕಂಡುಬಂದ ಇಂಥ ಅನುಭವದ ಕುರಿತಾಗಿ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊಮ್ಮಿರುವ ಅಭಿಪ್ರಾಯಗಳು ಉಜ್ವಲವೂ ಆಶಾದಾಯಕವೂ ಆಗಿದ್ದು, ಆಹಾರ, ಆರೋಗ್ಯ ಮತ್ತು ಶಿಕ್ಷಣದಂಥ ಬಾಬತ್ತುಗಳಿಗೆ ಆದ್ಯತಾನುಸಾರವಾಗಿ ವಿನಿಯೋಗಿಸಲಾದ ಅನುದಾನವನ್ನು ಶೇಕಡ 80ಕ್ಕೂ ಹೆಚ್ಚಿನ ಫಲಾನುಭವಿಗಳು ಸ್ವೀಕರಿಸಿರುವುದನ್ನು ಅವು ತೋರಿಸಿವೆ. ಹಾಗೆ ನೋಡಿದರೆ, ವಿಶ್ವಬ್ಯಾಂಕ್ ಕೂಡ ಬ್ರೆಜಿಲ್ ಕೈಗೊಂಡ ಇಂಥ ಯೋಜನೆಯಲ್ಲಿ ಸಹವರ್ತಿ ಎನಿಸಿಕೊಂಡಿತು ಮತ್ತು ಸಹಾಯಹಸ್ತ ನೀಡಿತು ಎನ್ನಬೇಕು.

ಮತ್ತೆ ಭಾರತದ ವಿಷಯಕ್ಕೆ ಮರಳುವುದಾದರೆ, ‘ಸೇವಾ ಭಾರತ್’ ಎಂಬ ಹೆಸರಿನ ಪ್ರಾಯೋಗಿಕ ಯೋಜನೆಯೊಂದನ್ನು 2013-14ರಲ್ಲಿ ಮಧ್ಯಪ್ರದೇಶ ರಾಜ್ಯದ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ನಿರ್ವಹಿಸಲಾಯಿತು. ಆಗ, ಆಧಾರ್ ಗುರುತಿನ ಚೀಟಿಯ ತಂತ್ರಜ್ಞಾನದ ಬೆಂಬಲವಿನ್ನೂ ಲಭ್ಯವಿರಲಿಲ್ಲವಾದರೂ, ಸದರಿ ಪ್ರಾಯೋಗಿಕ ಅಧ್ಯಯನವು ಅತ್ಯಂತ ಸ್ವಾರಸ್ಯಕರ ಫಲಿತಾಂಶಗಳನ್ನೇ ಒದಗಿಸಿತು ಎನ್ನಬೇಕು. ಶೌಚಗೃಹಗಳ ಸುಧಾರಣೆ, ಮುರಿದ ಮನೆಗಳ ದುರಸ್ತಿ ಇತ್ಯಾದಿ ಬಾಬತ್ತುಗಳು ಸೇರಿದಂತೆ ಈ ಹಣವನ್ನು ಫಲಾನುಭವಿಗಳು ವಿವೇಚನಾಯುಕ್ತವಾಗೇ ಬಳಸಿದರು ಮತ್ತು ಆ ಪೈಕಿ ಆಹಾರವು ಮೊದಲ ಆದ್ಯತೆಯಾಗಿತ್ತು ಎಂಬುದಿಲ್ಲಿ ಉಲ್ಲೇಖನೀಯ. ಭಾರತದ ಆರ್ಥಿಕತೆ ನಿಜಾರ್ಥದಲ್ಲಿ ಶೇಕಡ 7.5ರಷ್ಟು ಪ್ರಮಾಣದ ಯೋಗ್ಯ ಬೆಳವಣಿಗೆಯನ್ನು ದಾಖಲಿಸುತ್ತಿದೆಯಾದರೂ, ಆರ್ಥಿಕತೆಯಲ್ಲಿ ಹುಟ್ಟುವಳಿಯಾದ ಹೆಚ್ಚುವರಿ ಆದಾಯದ ವಿತರಣಾ ಪರಿಪಾಠದಲ್ಲಿ ಕುಸಿತವಾಗಿರುವಂತೆ ತೋರುತ್ತದೆ. ಕೃಷಿ ಕ್ಷೇತ್ರವು ಈಗಲೂ ಅಡಕತ್ತರಿಯಲ್ಲೇ ಸಿಲುಕಿರುವುದನ್ನು, ಹಣಕಾಸಿನ ಸಮಸ್ಯೆಯ ಒತ್ತಡಕ್ಕೆ ಸಿಲುಕಿರುವ ಕೃಷಿಕರು ಒಂದು ಅಂತಿಮ ಪಲಾಯನಮಾರ್ಗವಾಗಿ ಆತ್ಮಹತ್ಯೆಗೆ ಒಡ್ಡಿಕೊಳ್ಳುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗೆಂದ ಮಾತ್ರಕ್ಕೆ ನಗರಪ್ರದೇಶಗಳ ಬಡವರ ಸ್ಥಿತಿಗತಿ ಉತ್ತಮವಾಗಿದೆ ಎಂದೇನಲ್ಲ; ಅವರೂ ಹೀನಾವಸ್ಥೆಯಲ್ಲೇ ದಿನದೂಡುತ್ತಿದ್ದಾರೆ. ಸಾಲಮನ್ನಾ ಉಪಕ್ರಮ ಸೇರಿದಂತೆ, ಕೃಷಿವಲಯಕ್ಕೆ ಸಹಾಯವಾಗಲೆಂದು ರಾಜ್ಯ ಸರ್ಕಾರಗಳು ಅಗಾಧ ಮೊತ್ತದ ಸಹಾಯಧನವನ್ನು ವಿನಿಯೋಗಿಸಲು ಶುರುಮಾಡಿವೆ. ಆಹಾರ, ವಿದ್ಯುಚ್ಛಕ್ತಿ, ರಸಗೊಬ್ಬರಗಳು, ಸೀಮೆಎಣ್ಣೆ, ಬಿತ್ತನೆಬೀಜ, ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತಮ್ಮ ನಡುವಿನ ಅನುದಾನದ ಹೊಂದಾಣಿಕೆಯ ಪರಿಪಾಠಕ್ಕೆ ಮುಂದಾಗಿವೆ. ಸಮಾಜದ ದುರ್ಬಲ ವರ್ಗಗಳೆಡೆಗೆ ಗುರಿಯಾಗಿಸಿಕೊಂಡಿರುವ ಸಬ್ಸಿಡಿಗಳ ಮೇಲೆ ವಾರ್ಷಿಕವಾಗಿ ಏನಿಲ್ಲವೆಂದರೂ 4 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವೊಂದೇ ಖರ್ಚುಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಬಡವರಿಗೆ ಕನಿಷ್ಠ 100 ದಿನಗಳವರೆಗಿನ ಉದ್ಯೋಗಖಾತ್ರಿಯನ್ನೂ ಇದು ಒದಗಿಸುತ್ತಿರುವುದನ್ನು ಹೊಸದಾಗಿ ಹೇಳಬೇಕಿಲ್ಲ. ರಾಜ್ಯ ಸರ್ಕಾರಗಳು ಸಬ್ಸಿಡಿಗಳ ಮೇಲೆ ಬಹುತೇಕ ಇಷ್ಟೇ ಮೊತ್ತವನ್ನು ವಿನಿಯೋಗಿಸುತ್ತವೆ. ಆದರೆ ಉದ್ದೇಶಿತ ಫಲಾನುಭವಿಗಳಿಗೆ ಈ ಸಬ್ಸಿಡಿಗಳು ತಲುಪುತ್ತಿರುವಂತೆ ಕಾಣುತ್ತಿಲ್ಲ. ರಾಜ್ಯ ಸರ್ಕಾರಗಳು ಚಾಲನೆ ನೀಡಿರುವ ಸಾಲಮನ್ನಾ ಉಪಕ್ರಮವೂ ನಿರೀಕ್ಷಿತ ಫಲಿತಾಂಶಗಳನ್ನು ನೀಡಿಲ್ಲ. ವ್ಯವಸ್ಥೆಯಲ್ಲಿನ ಸೋರಿಕೆಗಳು ಅದೆಷ್ಟು ಆಳವಾಗಿವೆಯೆಂದರೆ, ವಿನಿಯೋಗಿಸಲಾದ ಹಣದ ಶೇ. 25ರಷ್ಟು ಭಾಗವೂ ಫಲಾನುಭವಿಗಳ ಸರಣಿಯಲ್ಲಿರುವ ಕೊನೆಯ ವ್ಯಕ್ತಿಗೆ ತಲುಪುವುದಿಲ್ಲ. ಇದರ ಪರಿಣಾಮವಾಗಿ, ಸಣ್ಣಪುಟ್ಟ ರೈತರು ಬಡವರಾಗೇ ದಿನದೂಡುತ್ತಿದ್ದಾರೆ ಮತ್ತು ಸದಾಶಯದ ಯೋಜನೆಗಳು ಅಥವಾ ಉಪಕ್ರಮಗಳ ಪ್ರಯೋಜನವನ್ನು ಪಡೆಯಲು ಅಸಮರ್ಥರಾಗಿದ್ದಾರೆ.

ಆದ್ದರಿಂದ, ಅತ್ಯಂತ ಬಡವರಿಗೆ, ಅದರಲ್ಲೂ ವಿಶೇಷವಾಗಿ ಕೃಷಿಕಾಯಕದಲ್ಲಿ ತೊಡಗಿರುವವರಿಗೆ ಒತ್ತಾಸೆಯಾಗಿ ನಿಲ್ಲುವಂಥ ಮೂಲಭೂತ ಆದಾಯ ಯೋಜನೆಯ ಪರವಾಗಿ ಬಲವತ್ತಾದ ಸಮರ್ಥನೆಯೊಂದು ಹೊಮ್ಮುತ್ತಿದೆ. ಮಾಹಿತಿಕ್ಷೇತ್ರದಲ್ಲಿ ಕಾಣಬರುತ್ತಿರುವ ಕ್ಷಿಪ್ರ ಡಿಜಿಟಲೀಕರಣ ಪ್ರಕ್ರಿಯೆ ತಂತ್ರಜ್ಞಾನ ಕ್ಷೇತ್ರದಲ್ಲಿನ ನಿರಂತರ ಸುಧಾರಣೆಯಿಂದಾಗಿ, ಅಪೇಕ್ಷಿತ ಫಲಿತಾಂಶಗಳು ಸಾಕಾರಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಯೋಜನೆಯಲ್ಲಿ ವಿನಿಯೋಗಿಸಿದ ಹಣಕ್ಕಿಂತ ಅದರ ಫಲಿತಾಂಶಗಳ ಕಡೆಗೆ ಗಮನ ಹರಿಯಲಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಸಣ್ಣಪುಟ್ಟ ಕೃಷಿಕರಿಗೆ ಪ್ರತಿವರ್ಷ 6000 ರೂಪಾಯಿಗಳನ್ನು ನೀಡುವ ಯೋಜನೆಯನ್ನು ಪ್ರಾಯೋಗಿಕ ಯೋಜನೆಯಾಗಿ ಸರ್ಕಾರವು ಪರೀಕ್ಷಿಸಬಹುದು ಎಂಬುದನ್ನು ಇತ್ತೀಚಿನ ಬಜೆಟ್ ಘೋಷಣೆ ಸೂಚಿಸುತ್ತಿರುವಂತೆ ತೋರುತ್ತದೆ. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು- ಸದರಿ ಹೊಸ ಆದಾಯ ಯೋಜನೆಗೆ ಅನುವುಮಾಡಿಕೊಡಲೆಂದು ಸರ್ಕಾರ ಮತ್ತಾವುದೇ ಸಬ್ಸಿಡಿ ಯೋಜನೆಗೆ ಕತ್ತರಿಹಾಕಿಲ್ಲ ಅಥವಾ ಅದರ ಸ್ವರೂಪಕ್ಕೆ ಚ್ಯುತಿತಂದಿಲ್ಲ; ದೂರಗಾಮಿ ಚಿಂತನೆ ಸರ್ಕಾರದಲ್ಲಿ ಹರಳುಗಟ್ಟಿರುವುದರ ಸ್ಪಷ್ಟಸೂಚನೆಯಿದು ಎನ್ನಲಡ್ಡಿಯಿಲ್ಲ. ಹಾಗಂತ ಸುಮ್ಮನೆ ಕೂರದೆ, ಈ ಯೋಜನೆಯ ಪರಿಣಾಮಕಾರಿತ್ವವನ್ನು ಸಾಕಾರಗೊಳಿಸಲು ಸೂಕ್ತ ಮೇಲ್ವಿಚಾರಣಾ ವ್ಯವಸ್ಥೆಗೂ ಅನುವುಮಾಡಿಕೊಡುವಂಥ ಪ್ರಕ್ರಿಯೆಗೂ ಸರ್ಕಾರ ಚಾಲನೆ ನೀಡಬೇಕಿದೆ.

ಪ್ರಸ್ತಾವನೆ ಯಾವುದೇ ಇರಲಿ, ಹೇಗೇ ಇರಲಿ, ಅದಕ್ಕೆ ಮತ್ತೊಂದು ಮಗ್ಗುಲೂ ಇರುತ್ತದೆ. ಸಾರ್ವತ್ರಿಕ ಆದಾಯ ಯೋಜನೆ ಫಲಾನುಭವಿಗಳಲ್ಲಿ ಜಡತ್ವ ಅಥವಾ ಚಟುವಟಿಕೆರಾಹಿತ್ಯವನ್ನು ಹುಟ್ಟುಹಾಕುತ್ತದೆ ಮತ್ತು ಜೀವನೋಪಾಯಕ್ಕಾಗಿ ದುಡಿಯಲೇಬೇಕಾದ ಉತ್ಸಾಹವನ್ನು ಸದ್ದಿಲ್ಲದೆ ದಮನಿಸುತ್ತದೆ ಎಂಬುದು ಈ ಯೋಜನೆಯ ವಿರುದ್ಧ ಬಲವಾಗಿರುವ ಒಂದು ವಾದ. ಇಷ್ಟೇ ಅಲ್ಲ, ಇಂಥ ಉಪಕ್ರಮಗಳಿಂದಾಗಿ ಕಾರ್ವಿುಕರ ಲಭ್ಯತೆ ಕುಸಿಯುತ್ತ ಹೋಗುವುದರಿಂದ, ಅವರ ಅಗತ್ಯವಿರುವ ಕೃಷಿಕಾರ್ಯಗಳು ದುಬಾರಿಯಾಗಿ ಪರಿಣಮಿಸಿ ಅನೇಕ ಗ್ರಾಮೀಣ ವ್ಯವಹಾರಗಳ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಮತ್ತೆ ಕೆಲವರಲ್ಲಿ ಉದ್ಭವಿಸಿರುವ ಭಯ. ಆದರೆ, ಬಹುಜನರ ಹಿತಾಸಕ್ತಿ ಕಾಯ್ದುಕೊಳ್ಳಬೇಕೆಂದರೆ ದೇಶವು ಇಂಥ ಸಣ್ಣಪುಟ್ಟ ಬೆಲೆಯನ್ನು ತೆರಬೇಕಾಗಬಹುದು. ಈ ಹೊಸ ಸಾಮಾಜಿಕ-ಆರ್ಥಿಕ ಉಪಕ್ರಮವು ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂಬುದು ಸಹಜನಿರೀಕ್ಷೆ. ಆ ನಿಟ್ಟಿನಲ್ಲಿ ಒಂದು ಶುಭಾರಂಭವಂತೂ ಆಗಿದೆ ಎಂದಷ್ಟೇ ಆಶಿಸೋಣ.

(ಲೇಖಕರು ಆರ್ಥಿಕ ತಜ್ಞರು)