ಹೊಸ ಚಿಗುರು ಹಳೆ ಬೇರು

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

ಹೊಸಯುಕ್ತಿ ಹಳೆ ತತ್ವದೊಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ

ಜಸವು ಜನಜೀವನಕೆ ಮಂಕುತಿಮ್ಮ

ಡಿವಿಜಿಯವರ ಈ ಕಗ್ಗ ಬಹಳ ಉನ್ನತವಾದ ವಿಚಾರವನ್ನು ಸಾರುತ್ತದೆ. ಆದರೆ ಋಷಿವಾಕ್ಯದೊಡನೆ ವಿಜ್ಞಾನವನ್ನು ಮೇಳವಿಸುವುದು ಸುಲಭದ ತುತ್ತಲ್ಲ. ಇಂದು ಉದ್ಯಮಗಳಲ್ಲಿ, ಕೈಗಾರಿಕೆಗಳಲ್ಲಿ, ಶೈಕ್ಷಣಿಕ ಮಾಧ್ಯಮಗಳಲ್ಲಿ, ಮನರಂಜನಾ ಮಾಧ್ಯಮಗಳಲ್ಲಿ ಎಲ್ಲೆಡೆಯೂ ಉದ್ದೇಶಪೂರ್ವಕವಾಗಿ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಿರಿಯ ತಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಎನಿಸುವಷ್ಟು ಹೊಸ ಪೀಳಿಗೆಯ ಹೊಸ ರಕ್ತಕ್ಕೆ ಆದ್ಯತೆ ಕೊಡಲಾಗುತ್ತಿದೆ. ಉದ್ದೇಶ ಇಷ್ಟೇ. ಹೊಸ ತಲೆಮಾರಿನ ಚಿಂತನೆಗಳು, ಆಲೋಚನೆಗಳು, ದೃಷ್ಟಿಕೋನ ಎಲ್ಲವೂ ಸಹಜವಾಗಿಯೇ ಬದಲಾಗುತ್ತಿರುವ ಹೊಸ ಜಗತ್ತಿಗೆ ಪ್ರಸ್ತುತವಾಗಿರುತ್ತದೆ. ಅಪ್​ಡೇಟೆಡ್ ಆಗಿರುತ್ತದೆ. ಹಳೆಯ ಆಲೋಚನಾ ವಿಧಾನ ಕೆಲಸಕ್ಕೆ ಬಳಸುವ ತಂತ್ರಗಳು ಕೇವಲ ಒಗ್ಗಿಹೋಗಿದೆ ಎಂಬ ಒಂದೇ ಕಾರಣಕ್ಕೆ ನಮಗರಿವಿಲ್ಲದೆಯೇ ಹಿಂದುಳಿದುಬಿಡುವ ಸಾಧ್ಯತೆಯನ್ನು ಪರಿಗಣಿಸಿ ಎಲ್ಲೆಡೆಯಲ್ಲೂ ಹೊಸ ಪೀಳಿಗೆಯವರಿಗೆ ಆದ್ಯತೆ ಕೊಡಲಾಗುತ್ತದೆ. ಇದು ಜಗದ ನಿಯಮ ಹಿಂದಿನ ತಲೆಮಾರು ಬಂದದ್ದೂ ಅದೇ ಹೊಸರಕ್ತದ ಹರಿವಾಗಿ. ಅಂತೆಯೇ ಅದು ಹರಿದು ಹೊಸದಕ್ಕೆ ಜಾಗ ಮಾಡಿಕೊಡಬೇಕಾದ್ದು ಧರ್ಮ. ಆದರೆ ಆ ಬದಲಾವಣೆ ಪ್ರತೀ ಪೀಳಿಗೆಯಲ್ಲೂ ಅಷ್ಟೇ ಕಷ್ಟದ ಕೆಲಸ. ಮಾನದಂಡಗಳು ಬದಲಾಗುತ್ತಾ ಹೋಗುವುದು ಹಿಂದಿನ ಮತ್ತು ಮುಂದಿನ ಎರಡೂ ಪೀಳಿಗೆಗಳಿಗೆ ಸರಳವಾದದ್ದಲ್ಲ.

ಎರಡು ಪೀಳಿಗೆಗಳ ನಡುವಿನ ಅಂತರ ಜಗತ್ತಿನ ಎಲ್ಲಾ ವಿಷಯಗಳಲ್ಲೂ ಇರುತ್ತವೆ. ಕಿರುತೆರೆ ಅದಕ್ಕೆ ಹೊರತಲ್ಲ. ಸದ್ಯಕ್ಕಂತೂ ಧಾರಾವಾಹಿ ಜಗತ್ತು ಈ ಜನರೇಷನ್ ಗ್ಯಾಪ್ ಅನ್ನು ಬಹಳ ತೀವ್ರವಾಗಿ ಎದುರಿಸುತ್ತಿದೆ. ವಿವರಿಸುತ್ತೇನೆ.

ಈಗ ಧಾರಾವಾಹಿಗಳು ನಿರ್ಮಾಣ ಸಂಸ್ಥೆಗಳ ಮಡಿಲಿನಿಂದ ವಾಹಿನಿಗಳ ಮಡಿಲಿಗೆ ಜಾರಿವೆ. ಅಂದರೆ ಪ್ರತೀ ಧಾರಾವಾಹಿಯ ಮೇಲುಸ್ತುವಾರಿ, ಕಥೆ, ನಟ ನಟಿಯರ ಆಯ್ಕೆ, ವಿಶೇಷ ಸಂಚಿಕೆಗಳು, ಮದುವೆ- ಮುಂಜಿ ಮೊದಲಾದ ವಿಶೇಷ ಸಮಾರಂಭಗಳ ನಿರ್ದೇಶನ ಎಲ್ಲವನ್ನೂ ವಾಹಿನಿಯೇ ನಿರ್ಧರಿಸುತ್ತದೆ. ಅದಕ್ಕೆ ಹಣ ಹೂಡುತ್ತವೆ. ಆದ್ದರಿಂದ ಹೇಳುವ ಅಧಿಕಾರ ಮತ್ತು ಕೇಳುವ ಹಕ್ಕು ಎರಡೂ ನಿರ್ಮಾಣ ಸಂಸ್ಥೆಗಿಂತ ವಾಹಿನಿಗೇ ಹೆಚ್ಚಿರುತ್ತದೆ.

ಇಂಥ ವಾಹಿನಿಯಲ್ಲಿ ಈಗ ಹೊಸ ಹೊಸ ಕನಸುಕಂಗಳ ಎಳೆಯರು ತುಂಬಿದ್ದಾರೆ. ಅವರಿಗೆ ತಾವು ಜವಾಬ್ದಾರಿ ವಹಿಸಿಕೊಂಡಿರುವ ಧಾರಾವಾಹಿ ಬೇರೆಲ್ಲದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿರಬೇಕು. ತಾನು ತನ್ನ ಮೇಲಧಿಕಾರಿಗಳಿಂದ ಯಾವ ಮಾತನ್ನೂ ಕೇಳದಂತಿರಬೇಕು ಎಂಬ ಹುಮ್ಮಸ್ಸು. ವಿಶೇಷ ಸಂಚಿಕೆಗಳನ್ನು ನಿರ್ದೇಶಿಸಲು ವಾಹಿನಿಯವರೇ ಬಂದರಂತೂ ಬಹಳ ಮುತುವರ್ಜಿಯಿಂದ ಹಗಲು ರಾತ್ರಿ ಎನ್ನದೇ ಇಂಥ ಕೆಲಸ ಅಂಥ ಕೆಲಸ ಎನ್ನದೇ ಎಲ್ಲವನ್ನೂ ನಿಭಾಯಿಸುತ್ತಾರೆ. ಉರಿಯುವ ಸೆಖೆಯಲ್ಲಿ ಒಂದೇ ಸಮ ನಿಂತು ಹೆಗಲ ಮೇಲೊಂದು ಟವಲ್ ಎಸೆದುಕೊಂಡು ಅದರಿಂದ ಸುರಿಯುವ ಬೆವರೊರೆಸಿಕೊಳ್ಳುತ್ತಾ ಮೈಕ್​ನಲ್ಲಿ ಆದೇಶಗಳನ್ನು ನೀಡುತ್ತಾ ದುಡಿಯುತ್ತಾರೆ. ತಮ್ಮ ಕೆಲಸಗಳ ಬಗ್ಗೆ ಅತೀವ ಹುಮ್ಮಸ್ಸು, ಅತೀವ ‘ಅಚ್ಛೆ’ ತೋರಿಸುತ್ತಾರೆ ಈ ಯುವಕ ಯುವತಿಯರು.

ಅವರಲ್ಲಿ ಕೊರತೆಯಿರುವುದೆಂದರೆ ಒಂದೇ. ಅನುಭವದ್ದು. ಒಂದು ದಿನದಲ್ಲಿ ಲೊಕೇಷನ್, ನಟ ನಟಿಯರ ತಯಾರಾಗುವ ಸಮಯ, ಊಟ ತಿಂಡಿಗಳ ಬ್ರೇಕ್ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಎಷ್ಟು ದೃಶ್ಯಗಳ ಚಿತ್ರೀಕರಣ ಮಾಡಬಹುದು? ಎಷ್ಟು ಹೊತ್ತಿಗೆ ಪ್ರಾರಂಭ ಮಾಡಿ ಎಷ್ಟು ಹೊತ್ತಿಗೆ ಮುಗಿಸಬಹುದು, ಯಾವ ನಟ ನಟಿಯ ಡೈಲಾಗ್ ಹೇಳುವ ಕ್ಷಮತೆ ಎಷ್ಟಿದೆ? ಯಾರಿಗೆ ಎಂಥ ಕಾಸ್ಟೂ್ಯಮ್ ಹೆಚ್ಚು ಒಪ್ಪುತ್ತದೆ ಮೊದಲಾದ ಅಂದಾಜುಗಳಲ್ಲಿ ಈ ಹುಡುಗ ಹುಡುಗಿಯರು ಸೋಲುತ್ತಾರೆ. ಈ ವಿಷಯಗಳು ಬಹಳ ಕರಾರುವಾಕ್ಕಾಗಿ ನಿರ್ದೇಶಕರುಗಳಿಗೆ ಮತ್ತು ಪೊ›ಡಕ್ಷನ್ ಮ್ಯಾನೇಜರುಗಳಿಗೆ ಗೊತ್ತಿರುತ್ತದೆ. ಏಕೆಂದರೆ ಈ ಕೆಲಸಗಳನ್ನು ಅವರು ಈ ಹುಡುಗರಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿರುತ್ತಾರೆ. ಅವರ ಅನುಭವ ಅಪಾರ. ನುರಿತ ಪೊ›ಡಕ್ಷನ್ ಮ್ಯಾನೇಜರುಗಳಿಗೆ ಕಥೆ ಹೇಳಿದರೆ ಸಾಕು ನಿಮಗೆ ಹೊಂದಬಲ್ಲ ಒಂದೆರೆಡಲ್ಲ, ನಾಲ್ಕಾರು ಲೊಕೇಷನ್​ಗಳನ್ನು ತೋರಿಸುತ್ತಾರೆ. ಪ್ರತೀ ಲೊಕೇಷನ್ನಿನ ಸಾಧಕ ಬಾಧಕಗಳನ್ನು ವಿವರಿಸುತ್ತಾರೆ. ಎದುರಾಗಬಹುದಾದ ಸಮಸ್ಯೆಗಳಿಗೆ ಪ್ಲಾನ್ ಬಿ ತಯಾರಾಗಿಟ್ಟುಕೊಳ್ಳುತ್ತಾರೆ. ಹಾಗೆಯೇ ನುರಿತ ನಿರ್ದೇಶಕರುಗಳು ದೃಶ್ಯಗಳನ್ನು ಶಾಟ್​ಗಳಾಗಿ ವಿಂಗಡಿಸುವ ವಿಧಾನ, ಹಾಳೆಯ ಮೇಲೆ ಬರೆದ ಆ ದೃಶ್ಯಗಳನ್ನು ಚಿತ್ರೀಕರಿಸುವಾಗ ಆಗಬಹುದಾದ ಸಮಸ್ಯೆಗಳು ಅದನ್ನು ಆಯಾ ಲೊಕೇಷನ್​ಗೆ ತಕ್ಕಂತೆ ಬದಲಿಸಿಕೊಳ್ಳಬಹುದಾದ ಸಾಧ್ಯತೆಗಳು ಎಲ್ಲವನ್ನೂ ಪರಿಗಣಿಸುತ್ತಾರೆ. ಆದರೆ ತಮ್ಮನ್ನು ಆ ಬಗ್ಗೆ ‘ಕೇಳದ’ ವಾಹಿನಿಯ ಯುವಕರಿಗೆ ಅವರು ತಾವಾಗಿಯೇ ಸಲಹೆ ಸೂಚನೆ ಕೊಡಲು ಹೋಗುವುದಿಲ್ಲ. ಅಧಿಕಾರದಿಂದ ಹೆಚ್ಚಿನ ಹಂತದಲ್ಲಿರುವ ಮತ್ತು ವಯಸ್ಸಿನ ಉತ್ಸಾಹದಿಂದ ವಾಹಿನಿಯ ಹುಡುಗರು ಅವರನ್ನು ಕೇಳುವುದಿಲ್ಲ.

ಈ ತಲೆಮಾರುಗಳ ಅಂತರ ಕೇವಲ ನಿರ್ಮಾಣ ಸಂಸ್ಥೆ ಮತ್ತು ವಾಹಿನಿಗಳ ನಡುವಿನ ಜಂಬದ ಜಗಳ ಎಂದುಕೊಳ್ಳಬಾರದು. ಇದೇ ವ್ಯತ್ಯಾಸಗಳು ವಾಹಿನಿಯ ಒಳಗೇ ಕೂಡಾ ಇರಬಹುದು. ಅಂತೆಯೇ ನಿರ್ಮಾಣ ಸಂಸ್ಥೆಯ ಒಳಗೇ ನಿರ್ವಪಕ ಮತ್ತು ನಿರ್ದೇಶಕರ ನಡುವೆಯೂ ಇರಬಹುದು. ಇಲ್ಲಿ ಎರಡು ಪೀಳಿಗೆಯ ನಡುವಿನ ಸಂಘರ್ಷದ ಬಗೆಗೆ ಮತ್ತು ಅದರಿಂದ ಬರುವ ಔಟ್​ಕಮ್ ಅಥವಾ ಫಲಿತಾಂಶದ ಬಗೆಗೆ ಮಾತನಾಡುತ್ತಿರುವುದು.

ಧಾರಾವಾಹಿ ಜಗತ್ತಿನಲ್ಲಿ ಸರಪಳಿಯ ಬಹು ಮುಖ್ಯ ಕೊಂಡಿ ಕಳಚಿಹೋಗುವುದು ಇಲ್ಲೇ. ಎರಡೂ ಧನಾತ್ಮಕ ಅಂಶಗಳು ಒಂದನ್ನೊಂದು ಗುರುತಿಸಲಾಗದೇ ಅಹಂನ ಬಲೆಯೊಳಗೆ ಬಿದ್ದು ಸೊರಗುತ್ತವೆ. ಮುಚ್ಚಿದ ಬಾಗಿಲುಗಳನ್ನು ಮುಕ್ತವಾಗಿ ತೆರೆದರೆ ಹೊಸ ಗಾಳಿ, ಹೊಸ ನೀರು ಹರಿಯತೊಡಗುತ್ತದೆ. ಇವರ ಅನುಭವ, ಅವರ ಉತ್ಸಾಹ ಎರಡೂ ಸಗೌರವವಾಗಿ ಬೆರೆತರೆ ಸದ್ಯಕ್ಕೆ ಹಾಲಾಹಲವಾಗಿರುವ ಧಾರಾವಾಹಿ ಸಾಗರದಲ್ಲಿ ಅಮೃತ ಹುಟ್ಟುವ ಸಾಧ್ಯತೆಗಳು ಮತ್ತಷ್ಟು ತೆರೆದುಕೊಳ್ಳುತ್ತವೆ.

(ಲೇಖಕರು ಸಿನಿಮಾ, ಕಿರುತೆರೆ,ರಂಗಭೂಮಿ ಕಲಾವಿದೆ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *