ಬರಹ ಹತ್ತು ಹಲವು ತರಹ

ಈ ವಾರದ ಲೇಖನವನ್ನು ಬೆಳಗ್ಗೆ 4.30ಕ್ಕೆ ಎದ್ದು ಬರೆಯಲು ಶುರುಮಾಡಿದ್ದೇನೆ. ಅದೇಕೆ? ಆಗ ಒಳ್ಳೆಯ ಮುಹೂರ್ತ ಇದೆಯಾ? ಅಂತ ಕೇಳಬೇಡಿ. ಎಲ್ಲದಕ್ಕೂ ಘಳಿಗೆ ಮಹೂರ್ತ ನೋಡಲು ನಾನೇನೂ ಸಚಿವನಲ್ಲ! ಬೇಗ ಎದ್ದು ಬರೆಯಲು ಕಾರಣ ಇಷ್ಟೆ. ನನ್ನ ಮೂರುವರೆ ವರ್ಷದ ಮೊಮ್ಮಗಳು ದಿವಿಜಾ ಬಂದಿದ್ದಾಳೆ. ಅವಳು ಏಳುವುದರೊಳಗೆ ಬರೆದು ಮುಗಿಸಿದರೆ ಬಚಾವ್. ಇಲ್ಲದಿದ್ದರೆ ಆಕೆ ‘ಅಜ್ಜಾ ಬರೆದದ್ದು ಸಾಕು. ನಾನ್ ಬಂದಿದೀನಿ. ನಂಜತೆ ಆಡು ಬಾ’ ಎಂದು ಕೈಹಿಡಿದು ಎಳೆಯುತ್ತಾಳೆ. ಯಾವ ಆಟವನ್ನೂ ಆಕೆ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಆಡುವುದಿಲ್ಲ. ಹೀಗಾಗಿ ಹೊಸ ಹೊಸ ಆಟಗಳನ್ನು ಹುಡುಕುತ್ತಲೇ ಇರಬೇಕು. ನಿನ್ನೆ ಆಟದ ಜತೆ ಪಾಠವೂ ಇರಲಿ ಎಂದು ಸ್ಲೇಟಿನ ಮೇಲೆ ಚಿತ್ರ ಬರೆಯುವ ಆಟ ಆಡಿದೆ. ಅವಳು ಕಣ್ಣು ಮುಚ್ಚಿಕೊಳ್ಳುವುದು. ನಾನು ಸ್ಲೇಟಿನ ಮೇಲೆ ಏನಾದರೂ ಚಿತ್ರ ಬರೆಯುವುದು. ಇದೇನು? ಅಂದಾಗ ಅವಳು ಕಣ್ಣು ತೆರೆದು ಅದನ್ನು ಗುರುತಿಸಬೇಕು. ಉತ್ತರ ಸರಿಯಾದರೆ ಇಬ್ಬರಿಗೂ ಖುಷಿ. ನಮ್ಮ ಆಟವನ್ನು ನೋಡುತ್ತಿದ್ದ ನನ್ನ ಮಡದಿಗೆ ನಾನು ಕೆಲವೇ ಸೆಕೆಂಡುಗಳಲ್ಲಿ ಹೂವು, ಹಣ್ಣು, ಪ್ರಾಣಿ ಹಾಗೂ ವಿವಿಧ ವಸ್ತುಗಳ ಚಿತ್ರವನ್ನು ಸ್ಲೇಟಿನ ಮೂಡಿಸುತ್ತಿದ್ದುದನ್ನು ಕಂಡು ಆಶ್ಚರ್ಯವಾಯಿತು. ‘ನೀವು ಅಡ್ಡಿಲ್ಯೆ. ಚಿತ್ರ ಲಾಯ್್ಕ ಬಿಡಿಸ್ತ್ರಿ’ ಅಂದು ನನ್ನತ್ತ ಮೆಚ್ಚುಗೆಯ ನೋಟ ಬೀರಿದಳು. ಮದುವೆಯಾಗಿ 35 ವರ್ಷಗಳಾದರೂ ನನ್ನವಳಿಂದ ನನ್ನ ಸಾಹಿತ್ಯಕ್ಕೆ ಸಿಗದ ಪ್ರಶಂಸೆ ಚಿತ್ರಕಲೆಗೆ ಸಿಕ್ಕಿತು!

ಹೌದು. ಚಿತ್ರಗಳನ್ನು ನಾನು ಸಾಕಷ್ಟು ಚೆನ್ನಾಗಿಯೇ ರಚಿಸುತ್ತೇನೆ. ಅದನ್ನು ರಚನೆ ಅನ್ನುವುದಕ್ಕಿಂತ ಗೀಚುವುದು ಅನ್ನುವುದೇ ಸೂಕ್ತ. ಏಕೆಂದರೆ ಚಿತ್ರ ಬರೆಯುವುದನ್ನು ನಾನು ಡ್ರಾಯಿಂಗ್ ಕ್ಲಾಸಿಗೆ ಹೋಗಿ ಕಲಿಯಲಿಲ್ಲ. ಬಾಲ್ಯದಲ್ಲಿ ಅಪ್ಪಯ್ಯ ಸ್ಲೇಟಿನ ಮೇಲೆ ವಿವಿಧ ಪ್ರಾಣಿಗಳ ಚಿತ್ರ ಬರೆದು ತೋರಿಸುತ್ತಿದ್ದರು. ಅದನ್ನು ನೋಡಿ ನಾನೂ ಚಿಕ್ಕಂದಿನಲ್ಲೇ ಚಿತ್ರ ಬರೆಯಲು ಶುರುಮಾಡಿದೆ. ಎಲಿಮೆಂಟರಿ ಶಾಲೆಯಲ್ಲಿ ನಾನು ಪೆನ್ಸಿಲ್ಲಿನಲ್ಲಿ ಬರೆದಿದ್ದ ಹನುಮಂತನ ಚಿತ್ರವನ್ನು ಅಧ್ಯಾಪಕರು ಮೆಚ್ಚಿ ಶಾಲೆಯ ನೋಟೀಸ್ ಬೋರ್ಡಿನಲ್ಲಿ ಹಾಕಿದ್ದರು. ಕಾಲೇಜಿನಲ್ಲಿ ಅಧ್ಯಾಪಕರ ಪಾಠ ಬೋರ್ ಅನ್ನಿಸಿದಾಗ ನೋಟ್ಸ್ ಪುಸ್ತಕದ ಅಂಚಿನಲ್ಲಿ ಸುಂದರ ಯುವತಿಯರ ಚಿತ್ರ ಬರೆಯುತ್ತಿದ್ದೆ. ನಮ್ಮ ತರಗತಿಯಲ್ಲಿ ಹುಡುಗಿಯರು ಇರಲಿಲ್ಲವಾದ್ದರಿಂದ ಹುಡುಗರು ನನ್ನ ಚಿತ್ರವನ್ನೆ ನೋಡಿ ತೃಪ್ತರಾಗುತ್ತಿದ್ದರು. ಬ್ಯಾಂಕಿನ ಕಾನ್ಪರೆನ್ಸ್​ಗಳಲ್ಲಿ , ಸಾಹಿತ್ಯದ ಸೆಮಿನಾರುಗಳಲ್ಲಿ ಕೊರೆತ ಅತಿಯಾದಾಗಲೆಲ್ಲ ನಾನು ಮನಸ್ಸಿಗೆ ಬಂದ ಚಿತ್ರಗಳನ್ನು ಗೀಚುತ್ತಿದ್ದೆ.

ವಿದ್ಯಾರ್ಥಿಯಾಗಿದ್ದಾಗ ನಾನು ಬಿಡಿಸುತ್ತಿದ್ದ ಚಿತ್ರಗಳಲ್ಲದೆ ನನ್ನ ಕೈಬರಹವೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅದು ಮಕ್ಕಳ ಕೈಬರಹದ ಬಗ್ಗೆ ಅಧ್ಯಾಪಕರು ತುಂಬಾ ಗಮನಕೊಡುತ್ತಿದ್ದ ಕಾಲ. ಮೂರು ಗೆರೆಯ ಕಾಪಿ ಪುಸ್ತಕದಲ್ಲಿ ದಿನವೂ ಕಾಪಿ ಬರೆಯುವುದು ಕಡ್ಡಾಯವಾಗಿತ್ತು. ಸುಂದರವಾದ ಕೈ ಬರಹದಲ್ಲಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಅಧ್ಯಾಪಕರು ಇಡೀ ಕ್ಲಾಸಿಗೆ ತೋರಿಸಿ ‘ಎಲ್ಲರೂ ಇಷ್ಟೇ ಲಾಯ್್ಕ ಮಾಡಿ ಬರೀಕು, ಗೊತ್ತಾಯ್ತಾ?’ ಅನ್ನುತ್ತಿದ್ದರು. ಪರೀಕ್ಷೆಯಲ್ಲಿ ಅಂದವಾದ ಅಕ್ಷರಕ್ಕೆ ಬೋನಸ್ ಅಂಕ ಸಿಗುತ್ತಿತ್ತು. ಕೈ ಬರಹ ಚೆನ್ನಾಗಿಲ್ಲದಿದ್ದವರಿಗೆ ‘ಇದೆಂತ ಅಕ್ಷರ ಮಾರಾಯಾ? ಕಾಗೆ ಕಾಲ್ ಗುಬ್ಬಿ ಕಾಲ್’ ಎಂದು ಬೈಯುತ್ತಿದ್ದರು. ಬೇಸಿಗೆ ರಜೆ ಮುಗಿದು ಶಾಲೆ ಶುರುವಾಗುವ ಸಮಯದಲ್ಲಿ ಹೊಸ ತರಗತಿಯ ಪುಸ್ತಕಗಳಿಗೆ ಬೈಂಡ್ ಹಾಕುವುದೊಂದು ದೊಡ್ಡ ಕೆಲಸ. ಇದಕ್ಕಾಗಿ ಗೋಧಿ ಹಿಟ್ಟಿನ ಅಂಟನ್ನು ನಾವೇ ಮಾಡುತ್ತಿದ್ದೆವು. ಪುಸ್ತಕಗಳ ಬೈಂಡಿನ ಮೇಲೆ ಲೇಬಲ್ ಅಂಟಿಸಿ ಅದರಲ್ಲಿ ನಮ್ಮ ಹೆಸರು, ಕ್ಲಾಸು, ಶಾಲೆಯ ಹೆಸರು ಮತ್ತು ವಿಷಯ ಅಂದವಾಗಿ ಬರೆಯಬೇಕು. ನನ್ನ ಕೆಲವು ಸೋಮಾರಿ ಸಹಪಾಠಿಗಳು ‘ನಿನ್ನ ಅಕ್ಷರ ಭಾರೀ ಲಾಯ್ಕಿತ್ತ’ ಎಂದು ನನ್ನನ್ನು ಹೊಗಳಿ ಅವರ ಪುಸ್ತಕಗಳ ಲೇಬಲ್ ಮೇಲೆ ಬರೆಯುವ ಕೆಲಸವನ್ನು ನನ್ನಿಂದ ಮಾಡಿಸುತ್ತಿದ್ದರು.

ನಾನು ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಓದುತ್ತಿದ್ದಾಗ ಸಾಹಿತ್ಯಾಸಕ್ತ ವಿದ್ಯಾರ್ಥಿಗಳೆಲ್ಲ ಸೇರಿ ‘ರಚನಾ’ ಎಂಬ ಕೈ ಬರಹದ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದೆವು. ಒಳ್ಳೆಯ ಕೈಬರಹ ಹೊಂದಿದ ನಾಲ್ಕೈದು ಮಂದಿ ಸೇರಿ ಪ್ರತಿ ತಿಂಗಳೂ ಸುಮಾರು 40 ಪುಟಗಳ ಪತ್ರಿಕೆಯನ್ನು ಬರೆದು ಬೈಂಡ್ ಮಾಡಿಸಿ ಕಾಲೇಜಿನ ಗ್ರಂಥಾಲಯದಲ್ಲಿ ಇಡುತ್ತಿದ್ದೆವು. ಸ್ನಾತಕೋತ್ತರ ಶಿಕ್ಷಣಕ್ಕಾಗಿ ನಾನು ಧಾರವಾಡದ ಕೃಷಿ ಕಾಲೇಜಿಗೆ ಹೋದಾಗ ಅಲ್ಲಿ ‘ಚೇತನಾ’ ಎಂಬ ಕೈಬರಹದ ಭಿತ್ತಿಪತ್ರಿಕೆ ಆರಂಭಿಸಿದೆ. ಆ ಪತ್ರಿಕೆ ಎಷ್ಟು ಜನಪ್ರಿಯವಾಗಿತ್ತು ಎಂದರೆ ಅದರಿಂದಾಗಿ ನಾನು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆ! ಕೆಲಸಕ್ಕೆ ಸೇರಿದ ನಂತರ ಆಫೀಸಿನಲ್ಲಿ ಟೈಪಿಸ್ಟ್ ಕಮ್ ಸ್ಟೆನೊಗ್ರಾಫರ್ಸ್ ಇದ್ದದ್ದರಿಂದ ಬರೆಯುವುದು ಕಡಿಮೆಯಾಯಿತು. ಪರಿಣಾಮವಾಗಿ ನನ್ನ ಕೈಬರಹದ ಅಂದವೂ ಕಡಿಮೆಯಾಗುತ್ತಾ ಹೋಯಿತು. ಆದರೂ ಪತ್ರಿಕೆಗಳಿಗೆ ಕವನ, ಲೇಖನಗಳನ್ನು ಕಳುಹಿಸುವಾಗ ಕೈಬರಹ ಚೆನ್ನಾಗಿರುವಂತೆ ಕಾಳಜಿ ವಹಿಸುತ್ತಿದ್ದೆ.

ಕೈಬರಹ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಅದರ ಮೂಲಕ ಮನೋವಿಜ್ಞಾನಿಗಳು ಒಬ್ಬ ವ್ಯಕ್ತಿಯ ಮನಃಸ್ಥಿತಿಯನ್ನು ಅಳೆಯಬಲ್ಲರು. ಅದಕ್ಕೆ ಗ್ರಾಫೋಲಜಿ ಅನ್ನುತ್ತಾರೆ. ಅಪರಾಧಗಳ ತನಿಖೆಯಲ್ಲೂ ಕೈಬರಹ ಮಹತ್ವದ ಪಾತ್ರ ವಹಿಸುತ್ತದೆ. ನನ್ನ ಹತ್ತಿರ ಕಾರಂತ, ಜಿಎಸ್​ಎಸ್, ಕಣವಿ, ಹಾಮಾನಾ, ತಿರುಮಲೇಶ್, ಎಚ್​ಎಸ್​ವಿ, ಬಿಆರ್​ಎಲ್ ಮುಂತಾದ ಹಿರಿಯ ಸಾಹಿತಿಗಳು ಬರೆದ ಪತ್ರಗಳ ಸಂಗ್ರಹವಿದೆ. ಅವುಗಳನ್ನು ನೋಡಿದಾಗ ಕೈಬರಹದ ಮೂಲಕವೇ ಇದು ಇಂಥವರ ಪತ್ರ ಅಂತ ಗುರುತಿಸಬಲ್ಲೆ. ನವೋದಯ ಪಂಥದ ಸಾಹಿತಿಗಳಿಗೆ ಪುಸ್ತಕದ ಗೌರವ ಪ್ರತಿ ಕಳುಹಿಸಿದರೆ ತಪ್ಪದೆ ದುಂಡಗಿನ ಅಕ್ಷರಗಳಲ್ಲಿ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ನವ್ಯ ಸಾಹಿತಿಗಳಲ್ಲಿ ಹೆಚ್ಚಿನವರು ಪುಸ್ತಕ ತಲುಪಿತು ಎಂದು ಪತ್ರ ಬರೆಯುವ ಸೌಜನ್ಯ ತೋರಿಸುವುದಿಲ್ಲ. ಕೆಲವರು ಕಾಟಾಚಾರಕ್ಕೆ ಒಂದು ಕಾರ್ಡಿನಲ್ಲಿ ನಾಲ್ಕು ಸಾಲು ಗೀಚುತ್ತಿದ್ದರು. ಅವರ ಕೈಬರಹ ಎಷ್ಟು ಕೆಟ್ಟದಾಗಿರುತ್ತಿತ್ತು ಎಂದರೆ ಬರೆದದ್ದು ಹೊಗಳಿಕೆಯೊ ಅಥವಾ ತೆಗಳಿಕೆಯೋ ಅನ್ನುವುದು ತಿಳಿಯುತ್ತಿರಲಿಲ್ಲ. ಅವರ ಉದ್ದೇಶವೂ ಬಹುಶಃ ಅದೇ ಇರಬಹುದು! ಪತ್ರದಲ್ಲಿ ಮುದ್ದಾದ ಅಕ್ಷರಗಳ ಜತೆಗೆ ಆಕರ್ಷಕ ರೇಖಾಚಿತ್ರಗಳನ್ನೂ ಬರೆಯುವುದು ಜಯಂತ ಕಾಯ್ಕಿಣಿಯವರ ವೈಶಿಷ್ಟ್ಯ. ಕೈಬರಹದ ಪತ್ರಗಳು ಈಗ ತುಂಬಾ ಅಪರೂಪವಾಗಿಬಿಟ್ಟಿವೆ.

ಮೋಡಿ ಎಂಬ ಪದಕ್ಕೆ ನಿಘಂಟಿನಲ್ಲಿ ‘ಇಂದ್ರಜಾಲ’ ಎಂಬ ಅರ್ಥದ ಜತೆಗೆ ‘ಅಂದವಾದ’ ಎಂಬ ಅರ್ಥವೂ ಇದೆ. ವಿಪರ್ಯಾಸವೆಂದರೆ ಅಂದವಾಗಿಲ್ಲದ, ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಲಾಗದ ಕೈಬರಹಕ್ಕೆ ಮೋಡಿ ಅನ್ನುತ್ತಾರೆ. ನಮ್ಮ ಮನೆಯಲ್ಲಿದ್ದ ಹಲವಾರು ತಾಳೆಗರಿ ಗ್ರಂಥಗಳು ಮತ್ತು ದಸ್ತಾವೇಜುಗಳು ನಮಗೆ ಓದಲು ಸಾಧ್ಯವಾಗದಂಥ ಮೋಡಿ ಅಕ್ಷರಗಳಲ್ಲಿದ್ದವು. ಅಪ್ಪಯ್ಯ ಮಾತ್ರ ಅವುಗಳನ್ನು ಸರಾಗವಾಗಿ ಓದುತ್ತಿದ್ದರು. ಕಾರಣ ಅವರದ್ದೂ ಮೋಡಿ ಅಕ್ಷರ! ಈ ಸಂದರ್ಭದಲ್ಲಿ ಒಂದು ಹನಿಗವನ ನೆನಪಾಗುತ್ತಿದೆ.

ಅವಳ ಮನ ನೀರಿನಂತೆ ತಿಳಿ

ಸಣ್ಣ ಮಾತಿಗೂ ಅಲೆಗಳೆದ್ದು

ರಾಡಿಯಾಗುವುದು ನೀರು ಕದಡಿ,

ಅವಳ ಮನ ತೆರೆದ ಪುಸ್ತಕ

ಬರವಣಿಗೆ ಮಾತ್ರ ಬರೀ ಮೋಡಿ!

ಬಹಳಷ್ಟು ವೈದ್ಯರ ಕೈಬರಹ ಓದುವುದು ತುಂಬಾ ಕಷ್ಟ. ಹೀಗಾಗಿ ಆ ಕುರಿತು ಅನೇಕ ಜೋಕುಗಳು ವರ್ಷಗಳಿಂದ ಚಾಲ್ತಿಯಲ್ಲಿವೆ. ಡಾಕ್ಟರನ್ನು ಪ್ರೀತಿಸಿದ ಹುಡುಗಿಯೊಬ್ಬಳು ಅವರು ಬರೆದ ಪ್ರೇಮಪತ್ರ ಓದಲಾಗದೆ ಕೊನೆಗೆ ಔಷಧಿ ಅಂಗಡಿಯವನ ಸಹಾಯ ಕೋರಿದಳಂತೆ! ವೈದ್ಯರು ಎಷ್ಟು ಕೆಟ್ಟದಾಗಿ ಗೀಚಿದರೂ ಡ್ರಗ್​ಹೌಸಿನವರು ಅದನ್ನು ಅರ್ಥ

ಮಾಡಿಕೊಳ್ಳುತ್ತಾರೆ. ಅದು ಹೇಗೆ ಅಂತೀರಾ? ವೈದ್ಯರು ಚೀಟಿಯಲ್ಲಿ ನಾನು 50% ಬೋಳಿಸಿದ್ದೇನೆ. ಉಳಿದದ್ದು ನಿಮ್ಮ ಪಾಲು ಅಂತ ಬರೆದಿರುತ್ತಾರಂತೆ. ವೈದ್ಯರ ಕೈಬರಹದ ಬಗ್ಗೆ ನಾನು ಓದಿದ ನಗೆಹನಿ ಸಂಭಾಷಣೆಯ ರೂಪದಲ್ಲಿದೆ.

ರೋಗಿ: ಡಾಕ್ಟ್ರೆ, ನೀವು ಚೀಟಿಯ ಎದುರು ಬದಿಯಲ್ಲಿ ಬರೆದ ಎಲ್ಲಾ ಔಷಧ ಸಿಕ್ತು. ಆದರೆ ಹಿಂಬದಿಯಲ್ಲಿ ಬರೆದದ್ದು ಎಲ್ಲೂ ಸಿಗ್ತಾ ಇಲ್ಲ.

ಡಾಕ್ಟರ್: (ಚೀಟಿ ನೋಡಿ) ಇದು ಬರೆದದ್ದಲ್ಲ. ಪೆನ್ನು ಬರೀತಾ ಇರಲಿಲ್ಲ ಅಂತ ಗೀಚಿದ್ದು.

ಬೆಂಗಳೂರಿನಲ್ಲಿ ಡಾ.ಮಹೇಶ್ ಎಂಬ ಒಳ್ಳೆಯ ವೈದ್ಯರಿದ್ದಾರೆ. ಅವರನ್ನು ನಮ್ಮ ಫ್ಯಾಮಿಲಿ ಡಾಕ್ಟರ್ ಅನ್ನಬಹುದು. ರೋಗಿಗಳನ್ನು ತಾಳ್ಮೆಯಿಂದ ವಿವರವಾಗಿ ಪರೀಕ್ಷಿಸಿ ತೀರಾ ಅಗತ್ಯ ಅನ್ನಿಸಿದರೆ ಮಾತ್ರ ಆಂಟಿಬಯಾಟಿಕ್ಸ್ ಕೊಡುತ್ತಾರೆ. ಮೊದಲ ಬಾರಿ ಅವರ ಪ್ರಿಸ್ಕಿ›ಪ್ಷನ್ ನೋಡಿದಾಗ ನನಗೆ ಇವರು ಡಾಕ್ಟರ್ ಹೌದೋ ಅಲ್ಲವೋ ಎಂಬ ಅನುಮಾನ ಉಂಟಾಗಿತ್ತು. ಕಾರಣ ಅವರ ಸುಂದರವಾದ ಕೈಬರಹ ! ಇಂಕ್ ಪೆನ್ನಿನಲ್ಲಿ ತಿಳಿ ನೀಲಿ ಬಣ್ಣದ ಶಾಯಿಯಲ್ಲಿ ಮೂಡಿಬರುವ ಅವರ ಅಕ್ಷರಗಳು ತುಂಬಾ ಆಕರ್ಷಕ. ವೈದ್ಯರ ಕೈಬರಹ ಅಷ್ಟು ಚೆನ್ನಾಗಿರುವುದನ್ನು ನಾನಂತೂ ನೋಡಿಲ್ಲ. ಕಳೆದ ತಿಂಗಳು ಡಾ. ಮಹೇಶ್ ಅವರ ಬಳಿ ಹೋದಾಗ ನನಗೆ ಬೇಸರವಾಯಿತು. ಅವರು ಕೈಬರಹದ ಬದಲು ಕಂಪ್ಯೂಟರ್​ನಲ್ಲಿ ಪ್ರಿಂಟಾದ ಪ್ರಿಸ್ಕಿ›ಪ್ಷನ್ ಕೊಟ್ಟಿದ್ದರು. ‘ಡಾಕ್ಟರ್, ಐ ಮಿಸ್ ಯುವರ್ ಬ್ಯೂಟಿಫುಲ್ ಹ್ಯಾಂಡ್ ರೈಟಿಂಗ್’ ಅಂದೆ. ಅವರು ನಗುತ್ತಾ ‘ಈ ಟ್ಯಾಬ್ಲೆಟ್​ನಲ್ಲಿ ಟೈಪ್ ಮಾಡುವಾಗ ಟ್ಯಾಬ್ಲೆಟ್​ಗಳ ಹೆಸರು ಬೇಗ ನೆನಪಾಗುವುದಿಲ್ಲ. ಆದ್ದರಿಂದ ನಾನು ಪುನಃ ಕೈಯಲ್ಲಿ ಬರೆಯಲು ಶುರುಮಾಡುವ ಸಾಧ್ಯತೆ ಇದೆ’ ಅಂದರು. ನನಗೂ ನೇರವಾಗಿ ಟೈಪ್ ಮಾಡಲು ಹೊರಟಾಗ ಪೆನ್ನಿನಿಂದ ಹಾಳೆಗಳ ಮೇಲೆ ಅಕ್ಷರಗಳನ್ನು ಮೂಡಿಸುವಾಗ ಬರುವಷ್ಟು ವೇಗದಲ್ಲಿ ವಿಚಾರಗಳು ಹೊಳೆಯುವುದಿಲ್ಲ. ಹೀಗಾಗಿ ನಾನು ಈಗಲೂ ಕವನಗಳನ್ನು ಮೊದಲು ಕೈಯಲ್ಲಿ ಬರೆದು ನಂತರ ಟೈಪ್ ಮಾಡುತ್ತೇನೆ.

ಚಲಿಸುವ ಬಸ್ಸಿನಲ್ಲಿ ಟಿಕೆಟ್ ಮೇಲೆ ಬರೆಯುವ ಕಂಡಕ್ಟರ್​ಗಳ ಕೈಬರಹವೂ ಓದುವುದು ಕಷ್ಟ. ಈಗ ಟಿಕೆಟ್ ನೀಡಲು ಯಂತ್ರಗಳು ಬಂದಿರುವುದರಿಂದ ಆ ಸಮಸ್ಯೆ ಇಲ್ಲ. ಕಂಪ್ಯೂಟರ್ ಮತ್ತು ಮೊಬೈಲ್​ಗಳಲ್ಲಿ ಈಗ ಎಲ್ಲಾ ಭಾಷೆಯ ಅಕ್ಷರಗಳನ್ನೂ ಟೈಪ್ ಮಾಡುವ ಸೌಲಭ್ಯವಿದೆ. ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಅಂದರೆ ಟೈಪ್ ಮಾಡುವ ಕಷ್ಟವೂ ಇಲ್ಲ. ಬಾಯಲ್ಲಿ ಹೇಳಿದರೆ ಪರದೆಯ ಮೇಲೆ ಅಕ್ಷರಗಳು ಮೂಡುತ್ತವೆ. ಹೀಗಾಗಿ ಅನೇಕರು ಈಗಾಗಲೇ ಕೈಯಿಂದ ಬರೆಯುವುದನ್ನೆ ಮರೆತಿದ್ದಾರೆ.

ಯಾರಿಂದಲೂ ಓದಲಾಗದ ಅತ್ಯಂತ ಕ್ಲಿಷ್ಟವಾದ ಕೈಬರಹ ಯಾರದು ಗೊತ್ತಾ? ಎಲ್ಲರ ಹಣೆಯ ಮೇಲೆ ಬರೆಯುವ ಸೃಷ್ಟಿಕರ್ತ ಬ್ರಹ್ಮನದ್ದು. ಆದ್ದರಿಂದಲೇ ಓದಲು ಕಷ್ಟವಾಗುವ ಕೈಬರಹಕ್ಕೆ ಬ್ರಹ್ಮಲಿಪಿ ಎನ್ನುವುದುಂಟು. ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಪ್ರಗತಿಯಾದರೂ ಬ್ರಹ್ಮ ಸಕಲ ಜೀವಿಗಳ ಹಣೆಬರಹವನ್ನು ಈಗಲೂ ಕೈಯಿಂದಲೇ ಬರೆಯುತ್ತಿದ್ದಾನೆ. ಟೈಪಿಂಗ್ ಮಾಡುವ ಯೋಗ ಅವನ ಹಣೆಯಲ್ಲಿ ಬರೆದಿಲ್ಲ!

ಮುಗಿಸುವ ಮುನ್ನ:

ಇತ್ತೀಚೆಗೆ ತುಂಬಾ

ಕಡಿಮೆಯಾಗುತ್ತಿದೆ

ಕೈಬರಹದ

ಪತ್ರ ವ್ಯವಹಾರ

ಹೆಚ್ಚುತ್ತಿದೆ ಸಚಿವರ

ಪುತ್ರ ವ್ಯವಹಾರ!

(ಲೇಖಕರು ಕವಿ ಹಾಗೂ ನಾಟಕಕಾರರು)

ಪ್ರತಿಕ್ರಿಯಿಸಿ: [email protected]
[email protected]

Leave a Reply

Your email address will not be published. Required fields are marked *