ಕ್ರೆಡಿಟ್ ಕಾರ್ಡ್​ಗೆ ಇನ್ಶೂರೆನ್ಸ್ ಕಡ್ಡಾಯವೇ?

# ನಾನು ಇತ್ತೀಚೆಗಷ್ಟೇ ಕ್ರೆಡಿಟ್ ಕಾರ್ಡ್ ಬಳಕೆ ಆರಂಭಿಸಿದ್ದೇನೆ. ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕ್​ನ ಸಿಬ್ಬಂದಿ ಕ್ರೆಡಿಟ್ ಕಾರ್ಡ್ ಇನ್ಶೂರೆನ್ಸ್ ತೆಗೆದುಕೊಳ್ಳುವಂತೆ ಹೇಳಿದರು. ಕ್ರೆಡಿಟ್ ಕಾರ್ಡ್ ಇನ್ಶೂರೆನ್ಸ್ ಎಂದರೇನು? ಅದು ಕಡ್ಡಾಯವೇ?

| ಓಂಕಾರ್ ಮಠಪತಿ ಚಿಕ್ಕೋಡಿ

ಮೌಲ್ಯವುಳ್ಳ ಎಲ್ಲ ವಸ್ತುಗಳಿಗೆ ಇನ್ಶೂರೆನ್ಸ್ ಕವರೇಜ್ ಇರುವಂತೆ ಕ್ರೆಡಿಟ್ ಕಾರ್ಡ್​ಗೂ ಇನ್ಶೂರೆನ್ಸ್ ಇದೆ. ಇಲ್ಲಿ ಕ್ರೆಡಿಟ್ ಕಾರ್ಡ್ ಇನ್ಶೂರೆನ್ಸ್ ಅಂದ್ರೆ ರಿಸ್ಕ್ ಕವರೇಜ್ ಇನ್ಶೂರೆನ್ಸ್ ಎಂದರ್ಥ. ನಿಯಮದ ಪ್ರಕಾರ, ಕ್ರೆಡಿಟ್ ಕಾರ್ಡ್ ಕೊಳ್ಳಲು ಇನ್ಶೂರೆನ್ಸ್ ಕಡ್ಡಾಯವಲ್ಲ. ಬ್ಯಾಂಕ್​ನವರು ಹೇಳಿದ ಮಾತ್ರಕ್ಕೆ ನೀವು ಅದನ್ನು ಖರೀದಿ ಮಾಡಬೇಕು ಎಂಬ ಯಾವ ನಿಯಮವೂ ಇಲ್ಲ. ನಿಮ್ಮ ಕ್ರೆಡಿಟ್ ಕಾರ್ಡ್ ಕಳ್ಳತನವಾದರೆ, ಕ್ರೆಡಿಟ್ ಕಾರ್ಡ್ ದುರ್ಬಳಕೆಯಾದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಆನ್​ಲೈನ್ ವಂಚನೆಯಾದರೆ ಈ ಇನ್ಶೂರೆನ್ಸ್ ನೆರವಿಗೆ ಬರುತ್ತದೆ. ಕ್ರೆಡಿಟ್ ಕಾರ್ಡ್ ಇನ್ಶೂರೆನ್ಸ್ ಅನ್ನು ಒಂದು ಕಾರ್ಡ್​ಗೂ ಪ್ರತ್ಯೇಕವಾಗಿ ಪಡೆಯಬಹುದು ಅಥವಾ ಎರಡು ಮೂರು ಕ್ರೆಡಿಟ್ ಕಾರ್ಡ್ ಒಳಗೊಂಡು ಇನ್ಶೂರೆನ್ಸ್ ಕವರೇಜ್ ಇರುವ ಒಂದು ಫ್ಲೋಟರ್ ಇನ್ಶೂರೆನ್ಸ್ ಮಾಡಿಸಿಕೊಳ್ಳಬಹುದು.

# ನನಗೆ 26 ವರ್ಷ, ನನ್ನ ಸಹೋದರನಿಗೆ 23 ವರ್ಷ. ನಮ್ಮ ತಾಯಿಗೆ 58 ವರ್ಷವಾಗಿದ್ದು ಇದುವರೆಗೆ ಯಾವುದೇ ಆರೋಗ್ಯ ವಿಮೆ ಮಾಡಿಸಿಲ್ಲ. ಮೂರು ಜನರಿಗೂ ಸೇರಿದ ಹಾಗೆ ಒಂದು ಹೆಲ್ತ್ ಇನ್ಶೂರೆನ್ಸ್ ಮಾಡಿಸಲು ಸಾಧ್ಯವಿದೆಯೇ?

| ರಾಕೇಶ್ ಬೆಂಗಳೂರು

ಖಂಡಿತವಾಗಿಯೂ ನಿಮ್ಮ ಮೂರು ಜನರಿಗೆ ಸೇರಿದ ಹಾಗೆ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮಾಡಿಸಬಹುದು. ಆದರೆ ನಿಮ್ಮ ತಾಯಿಗೆ 58 ವರ್ಷ ವಯಸ್ಸಾಗಿರುವುದರಿಂದ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪಡೆದುಕೊಳ್ಳುವುದು ಸರಿಯಾದ ನಿರ್ಧಾರವಾಗುವುದಿಲ್ಲ. ಫ್ಯಾಮಿಲಿ ಫ್ಲೋಟರ್​ನಲ್ಲಿ ಪ್ರೀಮಿಯಂ ಹಣ ನಿಗದಿ ಮಾಡುವಾಗ ಕುಟುಂಬದ ಅತ್ಯಂತ ಹಿರಿಯ ವ್ಯಕ್ತಿಯ ವಯಸ್ಸನ್ನು ಪರಿಗಣಿಸುತ್ತಾರೆ. ಹೀಗೆ ಮಾಡಿದಾಗ ಪ್ರೀಮಿಯಂ ಜಾಸ್ತಿಯಾಗುತ್ತದೆ. ನೀವು ಫ್ಯಾಮಿಲಿ ಫ್ಲೋಟರ್ ಪಡೆದುಕೊಳ್ಳುವ ಬದಲು, ನಿಮ್ಮ ತಾಯಿಗೆ 3 ಅಥವಾ 5 ಲಕ್ಷ ರೂ. ಕವರೇಜ್ ಹೊಂದಿರುವ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಿ. 3 ಲಕ್ಷದ ಕವರೇಜ್ ಇರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ವಾರ್ಷಿಕ 15 ರಿಂದ 16 ಸಾವಿರದವರೆಗೆ ಪ್ರೀಮಿಯಂ ಬರಬಹುದು. 5 ಲಕ್ಷ ರೂ. ಕವರೇಜ್ ಇರುವ ಪಾಲಿಸಿಗೆ ಪ್ರೀಮಿಯಂ ಮೊತ್ತ 18ರಿಂದ 19 ಸಾವಿರ ರೂ. ಆಸುಪಾಸಿನಲ್ಲಿರುತ್ತೆ. ಇನ್ನು ನಿಮಗೆ ಮತ್ತು ಸೋದರನಿಗೆ ಒಳಗೊಂಡಂತೆ ಒಂದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಿ. ನಿಮಗೆ ವಯಸ್ಸು ಚಿಕ್ಕದಿರುವುದರಿಂದ 3 ಲಕ್ಷ ಮೊತ್ತದ ಕವರೇಜ್​ಗೆ ವರ್ಷಕ್ಕೆ 5ರಿಂದ 6 ಸಾವಿರದವರೆಗೆ ಪ್ರೀಮಿಯಂ ಬರಬಹುದು. ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ ಕ್ಲೇಮ್ ರೇಷಿಯೋ ಶೇ. 90ಕ್ಕಿಂತ ಹೆಚ್ಚಿರುವ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳಿ. ನಿಮ್ಮ ತಾಯಿಗೆ ಮಾಡಿಸಲಾಗುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕೆಲ ಚಿಕಿತ್ಸೆಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ಇನ್ನು ಕೆಲ ಚಿಕಿತ್ಸೆಗಳನ್ನು ನೀಡಲು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಕಾಲಮಿತಿ ನಿಗದಿ ಮಾಡುತ್ತವೆ. ಅವುಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ಎಚ್ಚರಿಕೆಯಿಂದ ಮುನ್ನಡೆಯಿರಿ.

# ನನಗೆ 28 ವರ್ಷ. ಬೆಂಗಳೂರಿನ ಎಂಎನ್​ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ತಿಂಗಳು 41 ಸಾವಿರ ರೂ.ಸಂಬಳ ಬರುತ್ತದೆ. ಇಲ್ಲಿಯತನಕ ಯಾವುದೇ ಉಳಿತಾಯ ಮಾಡಿಲ್ಲ. ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಬೇಕು ಎನ್ನುವುದು ನನ್ನ ತಾಯಿಯ ಕನಸು. ಮನೆ ಕೊಳ್ಳುವ ಸಲುವಾಗಿ ನನ್ನ ಸಂಬಳವನ್ನು ಹೇಗೆ ತೊಡಗಿಸಲಿ ಸಲಹೆ ನೀಡಿ.

| ಸಂತೋಷ್ ಹರಿಹರ

ನಿಮ್ಮ ವಯಸ್ಸು ಚಿಕ್ಕದಿದೆ. ಕನಸಿನ ಮನೆ ಖರೀದಿ ಮಾಡಲು ಇನ್ನೂ ಕಾಲಾವಕಾಶವಿದೆ. ಈಗಲೇ ನೀವು ಮನೆ ಖರೀದಿ ಮಾಡುವ ಬಗ್ಗೆ ಯೋಚಿಸಿರುವುದರಿಂದ ಒಳ್ಳೆಯ ತಯಾರಿ ಮಾಡಿಕೊಳ್ಳಬಹುದು. ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಿ ಮನೆ ಕಟ್ಟಿಸಬೇಕು ಎಂದರೆ 80 ಲಕ್ಷದಿಂದ 1 ಕೋಟಿ ರೂ.ವರೆಗೆ ಹಣ ಬೇಕಾಗುತ್ತದೆ. ಅಪಾರ್ಟ್​ವೆುಂಟ್ ಖರೀದಿಸಬೇಕು ಎಂದರೂ 50ರಿಂದ 60 ಲಕ್ಷ ರೂ. ಬೇಕಾಗುತ್ತದೆ. ಸಂಬಳ ಮಾತ್ರವೇ ನಿಮ್ಮ ಆದಾಯದ ಮೂಲ ಎಂದು ತಿಳಿಸಿರುವುದರಿಂದ ಇಷ್ಟು ಹಣವನ್ನು ನೀವು ಒಮ್ಮೆಲೆ ಹೊಂದಿಸುವುದು ಕಷ್ಟವಾಗುತ್ತದೆ. ನಿಮ್ಮ ಮಾಸಿಕ ಸಂಬಳ ನೋಡಿದಾಗ ನಿಮಗೆ 30 ಲಕ್ಷ ರೂ. ಸಾಲ ಸಿಗಬಹುದು. ಆದರೆ ನಿಮ್ಮ ಕೆಲಸದಲ್ಲಿ ಭದ್ರತೆ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಅಷ್ಟು ಸಾಲ ತೆಗೆದುಕೊಳ್ಳುವುದು ಸರಿಯೋ ತಪ್ಪೋ ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಇನ್ನೊಂದೆರಡು ವರ್ಷ ಕಳೆದಂತೆ ನಿಮ್ಮ ಸಂಬಳವೂ ಜಾಸ್ತಿ ಆಗುತ್ತದೆ. ಅಲ್ಲಿಯತನಕ ಈಗ ಸಂಬಳದ ರೂಪದಲ್ಲಿ ಬರುವ ಹಣವನ್ನು ಕ್ರೋಡೀಕರಿಸಿಕೊಳ್ಳಿ. ಆರ್.ಡಿ. (ರೆಕರಿಂಗ್ ಡೆಪಾಸಿಟ್), ಮ್ಯೂಚುವಲ್ ಫಂಡ್, ಪಿಪಿಎಫ್ ಹೂಡಿಕೆ ಮೂಲಕ ಹಣವನ್ನು ಬೆಳೆಸುತ್ತ ಹೋಗಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ ಎನಿಸಿದಾಗ ಗೃಹಸಾಲದ ಬಗ್ಗೆ ಯೋಚಿಸಿ. ನಿಮ್ಮ ಸ್ವಂತ ಸೂರಿನ ಕನಸು ಸಾಕಾರಗೊಳ್ಳಲಿ.

# ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಮೆರಿಕಕ್ಕೆ ತೆರಳುವ ಸಲುವಾಗಿ ಟ್ರಾವೆಲ್ ಇನ್ಶೂರೆನ್ಸ್ ಮಾಡಿಸಿದ್ದೆ. ಆದರೆ ವೀಸಾ ಸಿಗದ ಕಾರಣ ಪ್ರವಾಸ ರದ್ದಾಗಿದೆ. ಈಗ ನಾನು ಟ್ರಾವೆಲ್ ಇನ್ಶೂರೆನ್ಸ್​ಗಾಗಿ ಕಟ್ಟಿರುವ ಹಣವನ್ನು ಹಿಂಪಡೆಯಬಹುದೇ? ಇದಕ್ಕೆ ನಿಯಮ ಏನು ಹೇಳುತ್ತದೆ?

| ರಜತ್ ಕುಮಾರ್ ಶೆಟ್ಟಿ ಮಂಗಳೂರು

ಖಂಡಿತವಾಗಿಯೂ ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಾಗಿ ಕಟ್ಟಿರುವ ಹಣವನ್ನು ಹಿಂಪಡೆಯಬಹುದು. ಆದರೆ, ಪ್ರವಾಸ ರದ್ದಾಗಿದ್ದಕ್ಕೆ ಕಾರಣ ಮತ್ತು ಸೂಕ್ತ ದಾಖಲೆಗಳನ್ನು ನೀವು ಇನ್ಶೂರೆನ್ಸ್ ಕಂಪನಿಗೆ ಒದಗಿಸಬೇಕಾಗುತ್ತದೆ. ನಿಮ್ಮ ಪಾಸ್​ಪೋರ್ಟ್ ಪ್ರತಿ, ಪಾಲಿಸಿಯ ಪ್ರತಿಯ ಜತೆಗೆ ಒಂದು ಮನವಿಪತ್ರವನ್ನು ನೀಡಬೇಕಾಗುತ್ತದೆ. ‘ಪ್ರವಾಸ ರದ್ದಾಗಿದ್ದು ವೀಸಾ ಸಿಗದ ಕಾರಣ’ದಿಂದ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ.

ವಾರನ್ ಬಫೆಟ್ ಮನಿ ಟಿಪ್ಸ್

ಷೇರು ಮಾರುಕಟ್ಟೆಯಲ್ಲಿ ನೀವು ಎಷ್ಟು ಬೇಕಾದರೂ ಹಣ ಹೂಡಿ; ಆದರೆ ಎರಡು ನಿಯಮಗಳನ್ನು ಮಾತ್ರ ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ, ಅವೆಂದರೆ: ನಿಯಮ

1. ಎಂದೂ ಹಣ ಕಳೆದುಕೊಳ್ಳಬೇಡಿ.

2. ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ!

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.

ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]