ಕಬ್ಬು ಬೆಲೆ ನಿಗದಿಗೆ ಆಸ್ಟ್ರೇಲಿಯಾ ಮಾದರಿ

ಕಬ್ಬು ಬೆಳೆಯು ನೈಸರ್ಗಿಕವಾಗಿ ಸಿಹಿಯಾಗಿದ್ದರೂ ರೈತರಿಗೆ, ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಸರ್ಕಾರಗಳಿಗೆ ಮಾತ್ರ ಕಹಿಯಾಗಿಯೇ ಮುಂದುವರೆದಿದೆ. ಭಾರತದಲ್ಲಿ ಪ್ರತಿ ವರ್ಷ ಕಬ್ಬು ಬೆಲೆ ನಿಗದಿಗಾಗಿ ಹೋರಾಟಗಳು ನಡೆಯುವುದು ಸಾಮಾನ್ಯವಾಗಿದೆ. ಆಸ್ಟ್ರೇಲಿಯಾದಲ್ಲಿ ಅನುಸರಿಸುತ್ತಿರುವ ಪದ್ಧತಿಯನ್ನು ನಾವೂ ಅನುಸರಿಸಿದರೆ ಈ ಪರಿಸ್ಥಿತಿ ಬದಲಾಗಬಹುದು. ನಮ್ಮಲ್ಲಿ ಈಗ ಸಮಸ್ಯೆ ಎಲ್ಲಿ ಆಗುತ್ತಿದೆ? ಆಸ್ಟ್ರೇಲಿಯಾದಲ್ಲಿರುವ ಪದ್ಧತಿ ಏನು? ಬನ್ನಿ ತಿಳಿದುಕೊಳ್ಳೋಣ.

| ಬಸವರಾಜ ಶಿವಪ್ಪ ಗಿರಗಾಂವಿ

ಕಬ್ಬು ಬೆಳೆಗಾರರದು ನಿರಂತರ ಹೋರಾಟದ ಜೀವನ. ಬೆಳೆ ತೆಗೆಯುವುದು ಒಂದು ಹೋರಾಟವಾದರೆ ಅದನ್ನು ಕಾರ್ಖಾನೆಗಳಿಗೆ ಮಾರಿ ಹಣ ಪಡೆಯುವುದು ಇನ್ನೊಂದು ಹೋರಾಟ. ಇದರಲ್ಲಿ ಸರ್ಕಾರಗಳ ಪಾತ್ರ ಎಷ್ಟಿದೆಯೋ ರೈತರ ಪಾತ್ರವೂ ಅಷ್ಟೇ ಇದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗದಿಪಡಿಸುತ್ತಿರುವ ಎಫ್​ಆರ್​ಪಿ ದರವನ್ನು ಮತ್ತು ರಾಜ್ಯ ಸರ್ಕಾರವು ನಿಗದಿಪಡಿಸುತ್ತಿರುವ ಎಸ್​ಎಪಿ ದರವನ್ನು ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಒಪ್ಪುತ್ತಿಲ್ಲ. ಹಾಗಾಗಿ ಕಬ್ಬು ಬೆಲೆಯ ನಿಗದಿಗಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳೊಂದಿಗೆ ನಡೆಯುವ ಹಗ್ಗ ಜಗ್ಗಾಟ ದಶಕಗಳಾದರೂ ಕೊನೆಗೊಳ್ಳುತ್ತಲೇ ಇಲ್ಲ.

ಕೇಂದ್ರ ಸರ್ಕಾರ ಈ ಸಮಸ್ಯೆಯ ಸರಳ, ಸುಲಭ ಮತ್ತು ಶಾಶ್ವತ ಮಾಗೋಪಾಯಕ್ಕಾಗಿ ಆರ್ಥಿಕ ತಜ್ಞ ಡಾ. ಸಿ.ರಂಗರಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿ ವಿಶ್ವದಾದ್ಯಂತ ತಿರುಗಾಡಿ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆ, ಖರ್ಚು, ಆದಾಯದ ಮೂಲಗಳ ಅಧ್ಯಯನ ಮಾಡಿ ಕಳೆದ 2013ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಶಿಫಾರಸಿನಂತೆ ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ 30:70ರ ಅನುಪಾತದಂತೆ ಒಟ್ಟು ಆದಾಯದ ಕಂದಾಯ ಹಂಚಿಕೆಯನ್ನು ನಿಗದಿಪಡಿಸಲಾಯಿತು. ಕೇಂದ್ರ ಸರ್ಕಾರ ಈ ವರದಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಆಯಾ ರಾಜ್ಯ ಸರ್ಕಾರಗಳ ನೇತೃತ್ವದಲ್ಲಿ ರೈತ ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣ ಮಂಡಳಿಯನ್ನು ರಚಿಸಿತು. ಇದರಿಂದಾಗಿ ಹಲವಾರು ವರ್ಷಗಳಿಂದ ತಲೆದೋರಿದ್ದ ಈ ಕಬ್ಬು ಬೆಲೆ ನಿಗದಿ ಬಿಕ್ಕಟ್ಟನ್ನು ಪರಿಹರಿಸಲಾಯಿತೆಂದು ಸರ್ಕಾರಗಳು, ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ನಿಟ್ಟುಸಿರು ಬಿಟ್ಟವು.

ತದನಂತರ ನಿಯಮಾನುಸಾರ ಈ ಮಂಡಳಿಯ ಸಭೆಗಳು ಸರ್ಕಾರದ ಮಧ್ಯಸ್ಥಿಕೆಯಲ್ಲಿ ಪ್ರಾರಂಭವಾದವು. ಆದರೆ ಈ ಕಬ್ಬು ನಿಯಂತ್ರಣ ಮಂಡಳಿಯ ಸಭೆಯಲ್ಲಿ ರ್ಚಚಿಸಿ ನಿರ್ಧರಿಸಿದ ಬಹುತೇಕ ನಿರ್ಣಯಗಳು ರೈತಪರವಾಗಿದ್ದರೂ ರೈತರೆ ಮೊದಲು ಒಪ್ಪದಿರುವುದು ಮಹಾದುರಂತ. ಇದರಿಂದಾಗಿ ರೈತ, ಕಾರ್ಖಾನೆ ಹಾಗೂ ಸರ್ಕಾರಗಳ ಮಧ್ಯೆ ತಲೆದೋರಿದ ಈ ಕಬ್ಬು ಬೆಲೆ ನಿಗದಿಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸಲಾರಂಭಿಸಿತು. ಈ ಮಂಡಳಿಯಲ್ಲಿನ ನಿರ್ಣಯಗಳು ಅನುಷ್ಠಾನವಾಗದ ಕಾರಣದಿಂದ ಕೆಲವು ಸದಸ್ಯರು ಯಾವ ಪುರುಷಾರ್ಥಕ್ಕೆ ಈ ಸಭೆ ಎಂದು ಮಂಡಳಿಗೆ ರಾಜೀನಾಮೆ ಕೊಟ್ಟರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಕಬ್ಬು ಬೆಳೆಗಾರರ ಹೋರಾಟಗಳು ಇನ್ನೂ ಮುಂದುವರಿಯುವಂತಾಗಿದೆ. ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಇದರಿಂದಾಗಿ ಈ ಕಬ್ಬು ಬೆಲೆ ನಿಗದಿಯ ಸುಲಭ ಪರಿಹಾರ ಇನ್ನೂ ಮರೀಚಿಕೆಯಾಗಿ ಮುಂದುವರೆದಿದೆ.

ಇಂಥ ಸಂಧಿಗ್ಧ ಸ್ಥಿತಿಯಲ್ಲಿ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಯಾವ ಕ್ರಮ ಕೈಗೊಳ್ಳಬೇಕೆಂಬುಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಯಕ್ಷಪ್ರಶ್ನೆಯಾಗಿ ಮುಂದುವರಿದಿದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಆಸ್ಟ್ರೇಲಿಯಾದಲ್ಲಿ ಪ್ರಚಲಿತದಲ್ಲಿರುವ ಪದ್ಧತಿಯು ಸಹಾಯಕ್ಕೆ ಬರಬಹುದು. ಅದು ಜಗತ್ತಿಗೆ ಮಾದರಿಯಾಗಿದೆ. ಜಗತ್ತಿನಲ್ಲಿಯೇ ಬಲಿಷ್ಠ ರೈತ ಸಂಘಟನೆಗಳಿದ್ದರೂ ಸಹ ಇಂದಿಗೂ ರೈತ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯ ಘರ್ಷಣೆಯಾಗಿಲ್ಲ ಎಂಬುದು ಗಮನಿಸಬೇಕಾಗಿರುವ ವಿಷಯ. ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿರುವ ಪದ್ಧತಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

ಕಬ್ಬು ಹಾಗೂ ಸಕ್ಕರೆ ಬೆಲೆಯನ್ನು ರೈತರೇ ನಿರ್ಧರಿಸುತ್ತಾರೆ. ಪ್ರತಿಯೊಬ್ಬ ರೈತ ಸಕ್ಕರೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಪ್ರಮಾಣ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆಯಾದ ಸಕ್ಕರೆಯಲ್ಲಿನ ಮೂರನೇ ಎರಡರಷ್ಟು (2/3) ಭಾಗವನ್ನು ಪಡೆಯುತ್ತಾನೆ. ಅದನ್ನು ಮಾರಾಟ ಮಾಡಿ ಹಣ ಪಡೆಯುತ್ತಾನೆ.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಯಾವುದೇ ರೀತಿಯ ಹಣ ಸಂದಾಯ ಮಾಡುವುದಿಲ್ಲ. ಕಾರ್ಖಾನೆಗಳು ರೈತರಿಂದ ಪೂರೈಕೆಯಾದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯಲ್ಲಿನ ಮೂರನೇ ಒಂದರಷ್ಟು (1/3) ಭಾಗವನ್ನು ತಮ್ಮಲ್ಲಿ ಉಳಿಸಿಕೊಂಡು ಮಾರಾಟ ಮಾಡಿ ಹಣ ಪಡೆಯುತ್ತವೆ.

ಆಸ್ಟ್ರೇಲಿಯಾದಲ್ಲಿನ ರೈತ ಸಂಘಟನೆಗಳು ಖಾಸಗಿಯಾಗಿ ಕಬ್ಬು ಸಂಶೋಧನೆ ಹಾಗೂ ಅಭಿವೃದ್ಧಿ ಘಟಕಗಳನ್ನು ಹೊಂದಿವೆ. ಇಲ್ಲಿ ಸಂಶೋಧಿಸಲ್ಪಟ್ಟ ಅಲ್ಪಾವಧಿ ತಳಿಯ ಕಬ್ಬನ್ನು ಮಾತ್ರ ರೈತರು ತಮ್ಮ ಸ್ವ ಇಚ್ಛೆಯಿಂದ ನಾಟಿ ಮಾಡುತ್ತಾರೆ. ಆಸ್ಟ್ರೇಲಿಯಾದಲ್ಲಿ ಬೃಹತ್ ಪ್ರಮಾಣದ 24 ಸಕ್ಕರೆ ಕಾರ್ಖಾನೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿರುವ ಎಲ್ಲ 24 ಸಕ್ಕರೆ ಕಾರ್ಖಾನೆಗಳಿಗೆ ವಿದೇಶಿಯರೇ ಮಾಲೀಕರಾಗಿದ್ದಾರೆ. ಸ್ಥಳೀಯರು ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅವಕಾಶವಿಲ್ಲ.

ರೈತರು ಕಬ್ಬು ನಾಟಿಯಿಂದ ಹಿಡಿದು ಕಟಾವಿನ ಹಂತದವರೆಗೆ 90% ಯಂತ್ರಗಳನ್ನೇ ಬಳಸುತ್ತಾರೆ. ಕಟಾವಾದ 90% ಕಬ್ಬು ರೈಲುಗಳ ಮೂಲಕ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ. ರೈತರು ತಮ್ಮ ಕಬ್ಬು ಕಟಾವು ಮತ್ತು ಸಾಗಣೆಗಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಅವಲಂಬಿತರಾಗಿರುವುದಿಲ್ಲ. ರೈತರು ಸ್ವತಃ ತಾವೇ ನಿರ್ವಹಿಸುತ್ತಾರೆ. ಅಲ್ಲಿನ ಸರಾಸರಿ ಸಕ್ಕರೆ ಇಳುವರಿ 12% ಇರುತ್ತದೆ. ರೈತರು ಕಬ್ಬು ಬೆಳೆ ನಾಟಿ ಮಾಡಲು ಕಡ್ಡಾಯವಾಗಿ ಹನಿ ನೀರಾವರಿ ಹೊಂದಿರಲೇಬೇಕು. ಗುಣಮಟ್ಟವಿಲ್ಲದ ಕಬ್ಬನ್ನು ಕಟಾವು ಮಾಡುವುದಿಲ್ಲ. ಗುಣಮಟ್ಟದವಿಲ್ಲದ ಕಬ್ಬನ್ನು ಕೇವಲ ಪಶು ಆಹಾರಕ್ಕಾಗಿ ಉಪಯೋಗಿಸುತ್ತಾರೆ. ಕಾರ್ಖಾನೆಗಳು ಸರ್ಕಾರದಿಂದ ಹಂಚಿಕೆಯಾದ ಕ್ಷೇತ್ರದಿಂದ ಮಾತ್ರ ಕಬ್ಬು ಖರೀದಿಸುತ್ತವೆ. ಕಾರ್ಖಾನೆಗಳಿಗೆ ಎಲ್ಲೆಂದರಲ್ಲಿ ಕಬ್ಬು ಖರೀದಿಸಲು ಅವಕಾಶವಿಲ್ಲ. ಆಸ್ಟ್ರೇಲಿಯಾದಲ್ಲಿ ಪ್ರಚಲಿತದಲ್ಲಿರುವ ಈ ಪದ್ಧತಿಯಿಂದಾಗಿ ಅಲ್ಲಿ ರೈತ ಸಂಘಟನೆಗಳು ಎಷ್ಟೇ ಬಲಿಷ್ಠವಾಗಿದ್ದರೂ ಕಬ್ಬು ಬೆಲೆ ನಿಗದಿಗಾಗಿ ಯಾವುದೇ ರೀತಿಯ ಹೋರಾಟ ಮಾಡುವ ಸಂದರ್ಭವೇ ಉದ್ಭವವಾಗುವುದಿಲ್ಲ. ನಮ್ಮಲ್ಲೂ ಆ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಳ್ಳೆಯದಲ್ಲವೇ?

Leave a Reply

Your email address will not be published. Required fields are marked *