ಕರಾವಳಿಯ ಕೆಂಪುಕಲ್ಲು ಕಟ್ಟಡಕ್ಕೆ ಲುಕ್

ವೈವಿಧ್ಯಮಯ ವಿನ್ಯಾಸಕ್ಕೆ ತಕ್ಕಂತೆ ದೇಹವನ್ನು ಒಗ್ಗಿಸಿಕೊಳ್ಳುವ, ಮೈಪೂರ್ಣ ಉಸಿರಾಟ ಹೊಂದಿರುವ ಕೆಂಪುಕಲ್ಲುಗಳನ್ನು ಇಡೀ ರಾಜ್ಯಕ್ಕೆ ಕರಾವಳಿಯ ಜಿಲ್ಲೆಗಳೇ ಪೂರೈಸಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಬೆಂಗಳೂರು, ಹಾಸನ, ಸಕಲೇಶಪುರ ಸಹಿತ ರಾಜ್ಯದ ವಿವಿಧೆಡೆಗಳಿಗೆ ಇಂದಿಗೂ ಕೆಂಪುಕಲ್ಲು ರವಾನೆಯಾಗುತ್ತಿದೆ.

| ಪ್ರಕಾಶ್ ಮಂಜೇಶ್ವರ

ಗುಣಮಟ್ಟದ ಕೆಂಪುಕಲ್ಲು ಸಮುದ್ರ ತೀರದ ಕರಾವಳಿ ಪ್ರದೇಶಗಳಲ್ಲಿ ಮಾತ್ರ ಲಭ್ಯ. ಅಧಿಕೃತ ಅಂಕಿಅಂಶ ಪ್ರಕಾರ, ಕಳೆದ ವರ್ಷ ದಕ್ಷಿಣ ಕನ್ನಡದಲ್ಲಿ 46,450 ಮೆಟ್ರಿಕ್ ಟನ್ ಕೆಂಪು ಕಲ್ಲು ಉತ್ಪಾದನೆಯಾಗಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಗರಿಷ್ಠ. 2012- 13ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು ಉತ್ಪಾದನೆ 47,721 ಮೆಟ್ರಿಕ್ ಟನ್ ಇತ್ತು. ವಾಸ್ತವ ಅಂಕಿಅಂಶ ಅಧಿಕೃತ ಅಂಕಿಅಂಶಕ್ಕಿಂತ ತುಂಬ ಅಧಿಕವಿರುವ ಸಾಧ್ಯತೆಯೇ ಹೆಚ್ಚು.

ಕರಾವಳಿಯಲ್ಲಿ ಉತ್ಪಾದನೆಯಾಗುತ್ತಿರುವ ಕೆಂಪುಕಲ್ಲು ಸ್ಥಳೀಯರ ಬೇಡಿಕೆ ಪೂರೈಸುವಷ್ಟೂ ಇಲ್ಲ. ಏಕೆಂದರೆ ಇಲ್ಲಿನ ಶೇ.90 ಜನರು ಯಾವುದೇ ಕಟ್ಟಡ ನಿರ್ವಿುಸಲು ಕೆಂಪುಕಲ್ಲುಗಳನ್ನೇ ಬಳಸುತ್ತಾರೆ. ಇತ್ತೀಚೆಗೆ ಕೆಲವರು ಫ್ಲ್ಯಾಟ್​ಗಳ ನಿರ್ಮಾಣ ಸಂದರ್ಭ ಕೆಂಪು ಕಲ್ಲುಗಳ ಬದಲು ಸಿಮೆಂಟ್ ಬ್ಲಾಕ್, ಇಟ್ಟಿಗೆ ಉಪಯೋಗಿಸುತ್ತಿರುವುದು ಕಂಡುಬರುತ್ತಿದೆ. ಬಯಲು ಸೀಮೆಯ ಕೆಲವರು ದುಬಾರಿ ಹಣ ತೆತ್ತಾದರೂ ಕರಾವಳಿಯಿಂದ ಕೆಂಪುಕಲ್ಲುಗಳನ್ನೇ ತರಿಸಿಕೊಳ್ಳುತ್ತಾರೆ. ನಿಸರ್ಗ ಸ್ನೇಹಿಯಾಗಿರುವ ಕೆಂಪು ಕಲ್ಲುಗಳ ಬಗ್ಗೆ ವಿಶೇಷ ಮೋಹ ಬೆಳೆಸಿಕೊಂಡಿರುವ ಜನರು ದೇಶಾದ್ಯಂತ ಕಾಣಸಿಗುತ್ತಾರೆ. ಕೆಂಪು ಕಲ್ಲುಗಳಿಂದ ನಿರ್ವಿುಸಿದ ಕಟ್ಟಡಗಳಿಗೆ ಒಂದು ಪಾರಂಪರಿಕೆ ಲುಕ್ ಇರುವುದೂ ಬೇಡಿಕೆಗೆ ಇನ್ನೊಂದು ಕಾರಣ.

ಸಂಕಷ್ಟದಲ್ಲಿ ಉದ್ಯಮ: ಒಂದು ಕಾಲವಿತ್ತು, ಕೆಂಪು ಕಲ್ಲು ಉದ್ಯಮ ನಡೆಸುವವರ ಬಗ್ಗೆ ಹೆಚ್ಚು ಯಾರೂ ತಲೆ ಕೆಡಿಸಿಕೊಳ್ಳುತ್ತಿರರಲ್ಲ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಂಬಂಧಿಸಿದ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವ ಅನಿವಾರ್ಯತೆಗೆ ಅಧಿಕಾರಿಗಳು ಸಿಲುಕಿದ್ದಾರೆ. (ಹಿಂದೆಯೂ ನಿಯಮಗಳಿತ್ತು) ತೆರೆದ ಕ್ವಾರಿಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಸಂಭವಿಸಿದ ಕೆಲ ಪ್ರಾಣಹಾನಿಯಂಥ ದುರಂತಗಳು ಇಡೀ ಉದ್ಯಮವನ್ನು ಸಾರ್ವಜನಿಕರು ಅನುಮಾನದಿಂದ ನೋಡುವಂತೆ ಮಾಡಿವೆ. ಆದ್ದರಿಂದಲೇ ಕೆಂಪುಕಲ್ಲು ಉತ್ಪಾದನೆಯ ಪರವಾನಗಿ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತ ಬರುತ್ತಿದೆ.

2012-13ನೇ ಸಾಲಿನಲ್ಲಿ ದಕ್ಷಿಣ ಕನ್ನಡದಲ್ಲಿ ಪರವಾನಗಿ ಪಡೆದವರ ಸಂಖ್ಯೆ 85 ಇದ್ದರೆ, ಕಳೆದ 2016-17ನೇ ಸಾಲಿನಲ್ಲಿ ಈ ಸಂಖ್ಯೆ ಕೇವಲ 15ಕ್ಕೆ ಇಳಿದಿದೆ. ಅನಧಿಕೃತವಾಗಿ ಕೆಂಪುಕಲ್ಲು ಉತ್ಪಾದಿಸುವವರ ಸಂಖ್ಯೆ ಕೂಡ ಕಡಿಮೆಯಾಗಿದೆ.

ಕೇರಳ ಮಾದರಿ: ಕರ್ನಾಟಕದ ಪರಿಸ್ಥಿತಿಗೆ ಹೋಲಿಸಿದರೆ ಕೆಂಪುಕಲ್ಲು ಉದ್ಯಮಕ್ಕೆ ಸಂಬಂಧಿಸಿದ ಕೇರಳದ ನೀತಿ ಉತ್ತಮವಾಗಿದೆ ಎನ್ನುತ್ತಾರೆ ದಕ್ಷಿಣ ಕನ್ನಡದಲ್ಲಿ ಕೆಂಪು ಕಲ್ಲು ಉತ್ಪಾದನೆ ಮಾಡುವವರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ರಾಜೇಶ್ ಶೆಟ್ಟಿ ಪಡೀರುಗುತ್ತು.

ಆಸಕ್ತರು ಗಣಿಗಾರಿಕೆ ಯೋಜನೆ ಸಿದ್ಧಪಡಿಸಿ ಸಲ್ಲಿಸುವ ಅರ್ಜಿಗಳನ್ನು 12 ಮಂದಿಯ ತಜ್ಞರ ಸಮಿತಿ ಪರಿಶೀಲಿಸಿ ಪರವಾನಗಿ ಒದಗಿಸುವ ಕುರಿತು ತೀರ್ವನಿಸುವ ವ್ಯವಸ್ಥೆ ಕೇರಳದಲ್ಲಿದೆ. ಕಂದಾಯ ವಿಭಾಗ ಅಧಿಕಾರಿ (ಆರ್​ಡಿಒ) ಪೂರಕ ಪ್ರಮಾಣಪತ್ರ ಒದಗಿಸುತ್ತಾರೆ. ಹಿಂದೆ ಕೇರಳದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೇರವಾಗಿ ಪರವಾನಗಿ ಪಡೆಯುವ ವ್ಯವಸ್ಥೆಯಿದ್ದು, 2017ರಲ್ಲಿ ಹೊಸ ನಿಯಮ ಜಾರಿ ಬಳಿಕ ಪರವಾನಗಿ ಪಡೆಯುವ ವ್ಯವಸ್ಥೆ ಕಠಿಣಗೊಂಡಿದೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪ್ರದೇಶವೊಂದರಲ್ಲೇ 120ರಷ್ಟಿದ್ದ ಕಲ್ಲು ಉತ್ಪಾದಿಸುವವರ ಸಂಖ್ಯೆ ಈಗ 45ಕ್ಕೆ ಇಳಿದಿದೆ. ಆದರೆ ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಕೇರಳ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಕೆಂಪುಕಲ್ಲು ಉತ್ಪಾದಕರು ಪ್ರತ್ಯೇಕ ಸಂಘ ಕಟ್ಟಿಕೊಂಡು ಸಂಘಟಿತರಾಗಿ ನಿಯಮ ಸರಳೀಕರಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಕರಾವಳಿಯಲ್ಲಿ ಮಾತ್ರ ಯಾಕೆ?

ಇಂದಿನ ಕರಾವಳಿಯ ಬಹುಭಾಗದಲ್ಲಿ ಹಿಂದೆ ಸಮುದ್ರ ಇತ್ತು. ಸಾವಿರಾರು ವರ್ಷ ಹಿಂದೆ ಸಾಗರದಲ್ಲಿ ಉಂಟಾದ ದೊಡ್ಡ ಮಟ್ಟದ ಸ್ಥಿತ್ಯಂತರದ ಪರಿಣಾಮ ಸಮುದ್ರ ಸಾಕಷ್ಟು ಹಿಂದೆ ಹೋಯಿತು. ಸಮುದ್ರ ಆವರಿಸಿಕೊಂಡಿರುವ ಸಂದರ್ಭ ಅಲ್ಯುಮಿನಾ, ಕಬ್ಬಿಣದ ಅಂಶ ಮುಂತಾದ ವಸ್ತುಗಳ ಜತೆ ಉಂಟಾದ ರಾಸಾಯನಿಕ ಮಿಶ್ರಣದಿಂದ ಈ ಭಾಗವನ್ನು ಕೆಂಪು ಕಲ್ಲು ನಿರ್ವಣಗೊಂಡಿದೆ. ಇದು ಎಲ್ಲ ಕಲ್ಲುಗಳಿಗಿಂತ ಕೊನೆಯಲ್ಲಿ ನಿರ್ವಣಗೊಂಡಿರುವ ಶಿಲೆ ಎನ್ನುತ್ತಾರೆ ಹಿರಿಯ ಭೂಗರ್ಭ ವಿಜ್ಞಾನಿ ನಿರಂಜನ್.

ದಕ್ಷಿಣ ಕನ್ನಡದಲ್ಲಿ ಕೆಂಪು ಕಲ್ಲು ಉತ್ಪಾದನೆ (ಮೆಟ್ರಿಕ್ ಟನ್​ಗಳಲ್ಲಿ)

2012- 13 47721

2013- 14 41849

2014- 15 20895

2016- 17 46450

Leave a Reply

Your email address will not be published. Required fields are marked *