ನಿಮ್ಮ ಆದಾಯಕ್ಕೆ ಸಿಗುವ ಗೃಹ ಸಾಲವೆಷ್ಟು?

| ಸಿ.ಎಸ್. ಸುಧೀರ್, ಸಿಇಒ, ಸಂಸ್ಥಾಪಕರು ಇಂಡಿಯನ್​ವುನಿ.ಕಾಂ

ಸರ್ಕಾರಿ ನೌಕರನಾಗಿದ್ದು, ಮಾಸಿಕ 41000 ರೂ. ವೇತನ ಪಡೆಯುತ್ತಿದ್ದೇನೆ. ನನಗೆ ಮನೆ ಕಟ್ಟಲು ಬ್ಯಾಂಕ್​ನವರು ಎಷ್ಟು ಸಾಲ ನೀಡುತ್ತಾರೆ ತಿಳಿಸಿ.

| ದೇವರಾಜ್ ಕೆ., ದಾವಣಗೆರೆ

ದೇವರಾಜ್ ಅವರೇ, ಬ್ಯಾಂಕ್​ಗಳು ಗೃಹ ಸಾಲ ನೀಡುವಾಗ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಸಾಲ ಪಡೆಯುವ ವ್ಯಕ್ತಿಯ ಒಟ್ಟು ಮಾಸಿಕ ವೇತನ, ಸಾಲ ಮರು ಪಾವತಿ ಸಾಮರ್ಥ್ಯ ಅರ್ಜಿದಾರರ ವಯಸ್ಸು, ಆರ್ಥಿಕ ಸ್ಥಿತಿಗತಿ, ಈ ಹಿಂದೆ ಸಾಲ ಪಡೆದಿರುವ ಇತಿಹಾಸ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತವೆ. ಇದಲ್ಲದೆ, ಈಗಾಗಲೇ ಮಾಡಿರುವ ಸಾಲಗಳ ಸ್ಥಿತಿಗತಿಯನ್ನು ಗಮನಿಸುತ್ತವೆ. ನಿಮ್ಮ ತಿಂಗಳ ಒಟ್ಟು ಆದಾಯ 41 ಸಾವಿರ ರೂ.ಎಂದು ತಿಳಿಸಿದ್ದೀರಿ. ಅದರಂತೆ ಹೋದರೆ ನಿಮಗೆ 20 ವರ್ಷಗಳವರೆಗೆ ಶೇ. 8.4ರ ಬಡ್ಡಿದರದಂತೆ 21,41,602 ರೂ. ಸಾಲ ಸಿಗಬಹುದು. ಇಷ್ಟು ಮೊತ್ತದ ಸಾಲ ಸಿಕ್ಕರೆ ಮಾಸಿಕವಾಗಿ ನೀವು 18,450 ರೂ.ಗಳನ್ನು ಸಾಲ ಮರುಪಾವತಿಗೆ ಮೀಸಲಿಡಬೇಕಾಗುತ್ತದೆ. 20 ವರ್ಷಗಳ ಅವಧಿಯ ಸಾಲಕ್ಕೆ ನೀವು ಅಸಲು ಹೊರತುಪಡಿಸಿ 22,86,398 ರೂ.ಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ.

ವೃತ್ತಿಯಲ್ಲಿ ಟಿವಿ ಟೆಕ್ನಿಷಿಯನ್ ಆಗಿರುವ ನಾನು ಕೋ ಆಪರೇಟಿವ್ ಬ್ಯಾಂಕ್​ವೊಂದರಲ್ಲಿ 2 ಲಕ್ಷ ರೂ. ತೊಡಗಿಸಲು ಯೋಜಿಸಿದ್ದೇನೆ. ಅದರಲ್ಲಿ ನಿಶ್ಚಿತ ಠೇವಣಿ (ಎಫ್​ಡಿ) ಬಡ್ಡಿದರ ಶೇ. 10.75ರಷ್ಟಿದೆ. ಇದು ಸರಿಯಾದ ನಿರ್ಧಾರವೇ ತಿಳಿಸಿ.

| ಶಶಿಧರ್, ಕಾರವಾರ

ಬಹಳಷ್ಟು ರಾಷ್ಟ್ರೀಕೃತ ಬ್ಯಾಂಕ್​ಗಳು ಫಿಕ್ಸೆಡ್ ಡೆಪಾಸಿಟ್ ಮೇಲೆ ಶೇ. 7ರ ಬಡ್ಡಿದರ ನೀಡುತ್ತಿರುವಾಗ 10.75ರಷ್ಟು ಬಡ್ಡಿದರ ಕೊಡುವ ಕೋ ಆಪರೇಟಿವ್ ಬ್ಯಾಂಕ್​ವೊಂದರಲ್ಲಿ ಹಣ ತೊಡಗಿಸಿ ಹೆಚ್ಚು ಗಳಿಸಬಾರದೇಕೆ ಎಂಬ ಪ್ರಶ್ನೆ ನಿಮಗೆ ಬಂದಿರುವುದು ಸರ್ವೇ ಸಾಮಾನ್ಯ. ಆದರೆ ಕೋ ಆಪರೇಟಿವ್ ಬ್ಯಾಂಕ್​ಗಳಲ್ಲಿ ನಿಮ್ಮ ಹಣ ತೊಡಗಿಸುವ ಮುನ್ನ ಅದರಲ್ಲಿರುವ ರಿಸ್ಕ್ ಅನ್ನು ಅರಿತುಕೊಳ್ಳಿ. ರಾಜ್ಯವೂ ಸೇರಿದಂತೆ ದೇಶದ ಹಲವೆಡೆ ಕೋ ಆಪರೇಟಿವ್ ಬ್ಯಾಂಕ್ ಗಳು ನಷ್ಟದ ಸುಳಿಗೆ ಸಿಲುಕಿ ಲಾಕ್ ಔಟ್ ಆದ ಉದಾಹರಣೆಗಳಿವೆ. ರಾಷ್ಟ್ರೀಕೃತ ಬ್ಯಾಂಕ್​ಗಳ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ನಿಮಗೆ ನಿಖರ ಮಾಹಿತಿ ಸಿಗುತ್ತದೆ. ಆದರೆ ಕೋ ಆಪರೇಟಿವ್ ಬ್ಯಾಂಕ್​ಗಳ ಆರ್ಥಿಕ ಪರಿಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿ ಸಿಗುವುದು ಕಷ್ಟ. ಕೋ ಆಪರೇಟಿವ್ ಬ್ಯಾಂಕ್​ಗಳ ರೀತಿ ನೀತಿಗಳಿಗೆ ಹೋಲಿಕೆ ಮಾಡಿ ನೋಡಿದಾಗ ರಾಷ್ಟ್ರೀಕೃತ ಬ್ಯಾಂಕ್​ಗಳ ನಿಯಮಗಳು ಕಠಿಣವಾಗಿರುತ್ತವೆ. ಹಾಗಾಗಿ ಕೋ ಆಪರೇಟಿವ್ ಬ್ಯಾಂಕ್​ಗಳಲ್ಲಿನ ಹೂಡಿಕೆ ಅಷ್ಟು ಸುರಕ್ಷಿತವಲ್ಲ ಎನ್ನಬಹುದು. ಎಷ್ಟೋ ಸಂದರ್ಭಗಳಲ್ಲಿ ಕೋ ಆಪರೇಟಿವ್ ಬ್ಯಾಂಕ್​ಗಳು ನಷ್ಟದ ಸುಳಿಗೆ ಸಿಲುಕಿದಾಗ ಗ್ರಾಹಕರು ತಮ್ಮ ಠೇವಣಿ ಹಣದಿಂದ ನಷ್ಟ ಭರಿಸಿದ ಉದಾಹರಣೆಗಳೂ ಇವೆ. ರಾಷ್ಟ್ರೀಕೃತ ಬ್ಯಾಂಕ್​ಗಳ ಠೇವಣಿಗೆ ವಿಮೆ ಇರುವಂತೆ ಕೋ ಆಪರೇಟಿವ್ ಬ್ಯಾಂಕ್​ಗಳಲ್ಲಿ ದೊಡ್ಡ ಹೂಡಿಕೆಗೆ ವಿಮೆ ರಕ್ಷಣೆ ಇರುವುದಿಲ್ಲ. ನಿಮ್ಮ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿದ್ದೇನೆ. ಇನ್ನೇನಿದ್ದರೂ ತೀರ್ಮಾನ ನಿಮ್ಮದು.

ಗೃಹ ಸಾಲ ಹೆಚ್ಚಿಗೆ ಪಡೆಯಲು ಹೀಗೆ ಮಾಡಬಹುದು

# ತಿಂಗಳ ಸಂಬಳ ಪಡೆಯುತ್ತಿರುವ ಮತ್ತೊಬ್ಬ ಕುಟುಂಬ ಸದಸ್ಯನನ್ನು ಗೃಹ ಸಾಲಕ್ಕಾಗಿ ಸಹ ಅರ್ಜಿದಾರನನ್ನಾಗಿ ಸೇರಿಸಬಹುದು.

# ವ್ಯವಸ್ಥಿತ ಮರುಪಾವತಿ ಯೋಜನೆ ರೂಪಿಸುವುದು.

# ಉಳಿತಾಯ ಮತ್ತು ಹೂಡಿಕೆ ಮೂಲಕ ಸ್ಥಿರ ಆದಾಯ ಬರುವಂತೆ ಮಾಡಿಕೊಳ್ಳುವುದು. ಹೆಚ್ಚುವರಿ ಆದಾಯದ ವಿವರಗಳನ್ನು ನೀಡುವುದು.

# ಈಗಾಗಲೇ ಇರುವ ಸಾಲಗಳನ್ನು ಮರುಪಾವತಿ ಮಾಡುವುದರ ಜತೆಗೆ ಅಲ್ಪಾವಧಿ ಸಾಲಗಳನ್ನು ತೀರಿಸುವುದು.

# ಕ್ರೆಡಿಟ್ ಸ್ಕೋರ್​ನಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸುವುದು.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಳ ಮಾಡಿದ ಕಾರಣ ಗೃಹ ಸಾಲದ ಮೇಲಿನ ಬಡ್ಡಿ ದರ ಜಾಸ್ತಿಯಾಗಿದೆ ಎನ್ನುವುದನ್ನು ನಾವು ಕೇಳುತ್ತಿರುತ್ತೇವೆ. ರೆಪೋ ಮತ್ತು ರಿವರ್ಸ್ ರೆಪೋ ದರ ಎಂದರೇನು? ರೆಪೋ ದರ ಹೆಚ್ಚಾದರ ಗೃಹ ಸಾಲದ ಬಡ್ಡಿ ದರ ಹೆಚ್ಚಾಗಲು ಕಾರಣವೇನು?

| ರಂಗನಾಥ್, ಚಿತ್ರದುರ್ಗ

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತನ್ನ ಸಹವರ್ತಿ ಬ್ಯಾಂಕ್​ಗಳಿಗೆ ನೀಡುವ ಹಣದ ಬಡ್ಡಿದರ. ರೆಪೋ ಪದವು Repurchase Agreement ಎಂಬ ಪದದಿಂದ ಹುಟ್ಟಿಕೊಂಡಿದೆ. ಬ್ಯಾಂಕುಗಳಿಗೆ ಹಣದ ಕೊರತೆ ಉಂಟಾದಾಗ ತಮ್ಮ ಸರ್ಕಾರಿ ಬಾಂಡುಗಳನ್ನು ಅಡವಿಟ್ಟು ರಿಸರ್ವ್ ಬ್ಯಾಂಕ್ ನಿಂದ ಹಣವನ್ನು ಸಾಲವಾಗಿ ಪಡೆಯುತ್ತವೆ. ಈ ಸಾಲದ ಬಡ್ಡಿದರವನ್ನು ರೆಪೋ ದರ ಎಂದು ಹೇಳಲಾಗುತ್ತದೆ. ಜೂನ್ 6ರಂದು ಆರ್​ಬಿಐ ಹಣಕಾಸು ನೀತಿ ಪ್ರಕಟಿಸಿದ್ದು, ಶೇ. 6ರಷ್ಟಿದ್ದ ರೆಪೋ ದರವನ್ನು ಶೇ.6.25ಕ್ಕೆ ಹೆಚ್ಚಳ ಮಾಡಿದೆ. ಈ ರೆಪೋ ದರದ ಹೆಚ್ಚಳವನ್ನು ಬ್ಯಾಂಕ್​ಗಳು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ. ಹಾಗಾಗಿ, ರೆಪೋ ದರ ಹೆಚ್ಚಾದಾಗ ಗೃಹ ಸಾಲ, ವಾಹನ ಸಾಲ ಮತ್ತು ಇತರ ಸಾಲಗಳ ಮಾಸಿಕ ಕಂತು (ಇಎಂಐ) ಏರಿಕೆಯಾಗುತ್ತದೆ. ಬ್ಯಾಂಕ್​ಗಳಿಗೆ ಹಣದ ಕೊರತೆ ಎದುರಾದಾಗ ಆರ್​ಬಿಐ ಹಣ ಒದಗಿಸುತ್ತದೆ. ಅದೇ ರೀತಿ ಬ್ಯಾಂಕ್​ಗಳು ಹೆಚ್ಚುವರಿ ಹಣ ಹೊಂದಿದ್ದ ಪಕ್ಷದಲ್ಲಿ ಅದನ್ನು ರಿಸರ್ವ್ ಬ್ಯಾಂಕ್​ನಲ್ಲಿ ಇಡುವ ಸೌಲಭ್ಯವಿರುತ್ತದೆ. ಹೀಗೆ ಬಂದ ಹಣಕ್ಕೆ ರಿಸರ್ವ್ ಬ್ಯಾಂಕ್ ಇಂತಿಷ್ಟು ಎಂದು ಬಡ್ಡಿ ನೀಡುತ್ತದೆ. ಈ ಬಡ್ಡಿದರವನ್ನೇ ರಿವರ್ಸ್ ರಿಪೋ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *