ಆರ್ಥಿಕ ಅಪರಾಧಿಗಳಿಗೆ ಅಂಕುಶ

ವಿದೇಶಕ್ಕೆ ಹಾರಿ ಬ್ಯಾಂಕುಗಳಿಗೆ ಮತ್ತು ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಅರ್ಥಿಕ ಅಪರಾಧಿಗಳ ಕುತಂತ್ರಗಳಿಗೆ ಅಂತ್ಯ ಹಾಡುವ ಕಾಲ ಸನ್ನಿಹಿತವಾಗಿದೆ. 100 ಕೋಟಿ ರೂ.ಗಿಂತ ಹೆಚ್ಚಿನ ಸಾಲ ತೀರಿಸದೆ, ದೇಶಬಿಟ್ಟು ಪಲಾಯನ ಮಾಡಿದವರ ಅಥವಾ ಆರ್ಥಿಕ ಅಪರಾಧ ಎಸಗಿ ತಲೆಮರೆಸಿಕೊಂಡು ದೇಶದ ಕಾನೂನಿನ ಬಾಹುಗಳಿಂದ ತಪ್ಪಿಸಿಕೊಳ್ಳುವವರ ಆಸ್ತಿ ಜಪ್ತಿ ಮಾಡಿಕೊಳ್ಳಲು ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆಯನ್ನೇ ಹೊರಡಿಸಿದೆ.

| ರಮಾನಂದ ಶರ್ಮಾ

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಭಾರಿ ಮೊತ್ತದ ಸಾಲ ಮಾಡಿ, ಅದನ್ನು ಮರುಪಾವತಿಸದೆ, ವಿದೇಶಕ್ಕೆ ಹಾರಿ, ಎರಡೂ ದೇಶಗಳ ಮಧ್ಯದ extradition treaty (ತಪ್ಪಿಸಿಕೊಂಡು ಬಂದು ಅಡಗಿರುವ ಅಪರಾಧಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಒಪ್ಪಂದ) ಯಲ್ಲಿನ ನ್ಯೂನತೆ ಮತ್ತು ದೌರ್ಬಲ್ಯಗಳನ್ನು ದುರುಪಯೋಗ ಮಾಡಿಕೊಂಡು, ನಾಡಿನ ಕಾನೂನಿನಿಂದ ತಪ್ಪಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸಾಲ ಮರುಪಾವತಿ ಪಡೆಯಲು, ಅವರನ್ನು ಶಿಕ್ಷಿಸಲು ಮತ್ತು ವಂಚನೆಗೊಳಗಾದ ಬ್ಯಾಂಕುಗಳನ್ನು ಉಳಿಸಲು ಸರ್ಕಾರ ಹೆಜ್ಜೆ ಹಾಕಿದೆ.

ಇಂಥ ಪ್ರಕರಣಗಳು ಲಾಗಾಯ್ತಿನಿಂದ ನಡೆಯುತ್ತಿದ್ದರೂ, ಇತ್ತೀಚಿನ ಆರ್ಥಿಕ ಜಗತ್ತನ್ನು, ಬ್ಯಾಂಕಿಂಗ್ ಉದ್ಯಮವನ್ನು ತಲ್ಲಣಗೊಳಿಸಿದ ವಿಜಯ ಮಲ್ಯ, ಲಲಿತ್ ಮೋದಿ ಮತ್ತು ನೀರವ ಮೋದಿ ಪ್ರಕರಣಗಳು ಸರ್ಕಾರವನ್ನು ಈ ಕ್ರಮಕ್ಕೆ ಪ್ರೇರೇಪಿಸಿದೆ. ಅವರು ವಂಚಿಸಿದ ರೀತಿ ಮತ್ತು ಮೊತ್ತ ಸರ್ಕಾರವನ್ನು ಬಡಿದೆಬ್ಬಿಸಿದ್ದು, ಇಂಥ ಕೃತ್ಯಗಳನ್ನು ಎಸಗುವವರಲ್ಲಿ ಭಯ ಹುಟ್ಟಿಸುವುದು ಅನಿವಾರ್ಯವಾಗಿತ್ತು.

ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ ಇಂಥ 31 ಅಪರಾಧಿಗಳು ದೇಶಬಿಟ್ಟು ಪರಾರಿಯಾಗಿದ್ದಾರೆ. ಮತ್ತು ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ 91 ಜನರನ್ನು (ಸಾಲಗಾರರು ಮತ್ತು ಜಾಮೀನುದಾರರು) ದೇಶ ಬಿಟ್ಟು ಹೊರಹೋಗದಂತೆ ನಿರ್ಬಂಧಿಸಿದೆ. ಸದ್ಯದ ಕಾನೂನಿನಂತೆ ಯಾವ ಬ್ಯಾಂಕೂ ಸಾಲ ನೀಡುವಾಗ ಪಾಸ್​ಪೋರ್ಟ್ ಅನ್ನು ಇರಿಸಿಕೊಳ್ಳಲಾಗದು. ಮತ್ತು ಇದು ವ್ಯಾವಹರಿಕವೂ ಅಲ್ಲ. ಯಾವುದೇ ದೊಡ್ಡ ಸಾಲಗಾರ ತನ್ನ ವ್ಯವಹಾರಗಳಿಗೆ ವಿದೇಶಗಳಿಗೆ ಭೇಟಿ ನೀಡುವುದು ತೀರಾ ಸಾಮಾನ್ಯ. ಅಪರಾಧಿಗಳನ್ನು ವಶಪಡಿಸಿಕೊಳ್ಳುವ ಒಪ್ಪಂದಗಳು ಬಹುತೇಕ ಎಲ್ಲ ದೇಶಗಳೊಂದಿಗೆ ಇದ್ದರೂ, ಈ ಪ್ರಕ್ರಿಯೆ ಬಹಳ ಕ್ಲಿಷ್ಟ ಮತ್ತು ಭಾರಿ ಸಮಯ ತೆಗೆದುಕೊಳ್ಳುತ್ತಿದೆ. ವಿಜಯ ಮಲ್ಯರನ್ನು ಭಾರತಕ್ಕೆ ಕರೆಸುವ ಪ್ರಕ್ರಿಯ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ರ್ತಾಕ ಅಂತ್ಯ ಕಾಣಬೇಕಾಗಿದೆ. ನೀರವ ಮೋದಿಯ ಪ್ರಕರಣವೂ ಇದಕ್ಕಿಂತ ಬೇರೆಯಾಗಿಲ್ಲ. ಅಂತೆಯೇ, ಸರ್ಕಾರ ಈ ನಿಟ್ಟಿನಲ್ಲಿ ಠಜಟ್ಟಠ್ಚಿ್ಠ ಹುಡುಕಿದೆ.

ದೇಶಭ್ರಷ್ಟ ಅರ್ಥಿಕ ಅಪರಾಧಿ ಯಾರು?

ಬ್ಯಾಂಕ್​ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಿಸದೆ, ಚೆಕ್ ಅಮಾನ್ಯವಾಗುವಂತೆ ಮಾಡಿದವರು, ಅಕ್ರಮ ಹಣ (ವಿದೇಶಕ್ಕೆ) ವರ್ಗಾವಣೆ ಮಾಡಿದವರು, ಸರ್ಕಾರದ ಸ್ಟ್ಯಾಂಪ್ ಅಥವಾ ಕರೆನ್ಸಿಯನ್ನು ನಕಲು ಮಾಡಿದವರು, ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿ ದೇಶಬಿಟ್ಟು ಹೋದವರು ಅಥವಾ ತಲೆಮರೆಸಿಕೊಂಡವರು, ಈ ಕಾರಣಕ್ಕಾಗಿ ಬಂಧನದ ವಾರಂಟ್ ಎದುರಿಸುತ್ತಿರುವವರು, ತನಿಖೆ ಮತ್ತು ವಿಚಾರಣೆಯಿಂದ ತಪ್ಪಿಸಿಕೊಳ್ಳುವವರು ಅಥವಾ ತನಿಖೆ ಹಾಗೂ ವಿಚಾರಣೆಗೆ ಬರಲು ಸಹಕರಿಸದಿರುವವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಎನ್ನುತ್ತಾರೆ.

ಬ್ಯಾಂಕುಗಳಿಗೆ ವಂಚನೆ ಎಸಗಿ ದೇಶಬಿಟ್ಟು ಓಡಿಹೋದವರನ್ನು ಆರ್ಥಿಕ ಅಪರಾಧಿ ಎಂದು ಘೊಷಿಸುವಂತೆ ಈ ನಿಟ್ಟಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ನೇಮಕಗೊಂಡಿರುವ ನಿರ್ದೇಶಕರು ಅಥವಾ ಉಪನಿರ್ದೇಶಕರು ಅರ್ಜಿ ಸಲ್ಲಿಬೇಕು. ಈ ಆರ್ಥಿಕ ಅಪರಾಧಿ ಯಾರು, ಎಲ್ಲಿದ್ದಾನೆ, ಆತನ ಆಸ್ತಿಗಳು ಎಲ್ಲೆಲ್ಲಿವೆ, ಆತ ಎಸಗಿದ ವಂಚನೆ ಏನು, ಆತನ ಬೇನಾಮಿ ಅಸ್ತಿಗಳು ಎಲ್ಲೆಲ್ಲಿವೆ, ಯಾವ್ಯಾವ ಆಸ್ತಿಗಳನ್ನು ಜಪ್ತಿ ಮಾಡಬೇಕು ಮತ್ತು ಅದರಿಂದ ಬಂದ ಹಣವನ್ನು ಯಾರ್ಯಾರಿಗೆ ಕೊಡಬೇಕು ಎನ್ನುವ ಎಲ್ಲ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು. ಇಂಥ ಅರ್ಜಿಯನ್ನು ಸ್ವೀಕರಿಸಿದ ನಂತರ ವಿಶೇಷ ನ್ಯಾಯಾಲಯ ಆರೋಪಿ 6 ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡುತ್ತದೆ. ಇದಕ್ಕೆ ಆರೋಪಿ ಸ್ಪಂದಿಸಿ ವಿಚಾರಣೆಗೆ ಹಾಜರಾದರೆ, ಈ ಕಾಯ್ದೆಯ ಅಡಿ ವಿಚಾರಣೆ ಕೈಬಿಟ್ಟು ಸಂಬಂಧಪಟ್ಟ ಮತ್ತು ಪ್ರಚಲಿತ ಇರುವ ಇತರ ಕಾಯ್ದೆ-ಕಾನೂನು ಮತ್ತು ನಿಯಮಾವಳಿ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ನೋಟಿಸ್​ಗೆ ಸ್ಪಂದಿಸದೆ ವಿಚಾರಣೆಗೆ ಹಾಜರಾಗದಿದ್ದರೆ ಅರ್ಜಿಯಲ್ಲಿ ನಮೂದಿಸಿದ ಎಲ್ಲ ಆಸ್ತಿಗಳನ್ನು ಜಪ್ತಿ ಮಾಡಲು ಆದೇಶ ಹೊರಡಿಸಲಾಗುತ್ತದೆ. ಶಿಕ್ಷೆಯಾಗುವ ಮೊದಲೇ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ದೇಶಬಿಟ್ಟು ಹೋಗಿ 30 ದಿನಗಳೊಳಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ, ಆತನ ಆಸ್ತಿ ಜಪ್ತಿಗೆ ವಿಶೇಷ ನ್ಯಾಯಾಲಯದ ಅನುಮತಿ ಬೇಕಿಲ್ಲ.

ಆರ್ಥಿಕ ಅಪರಾಧ ಎಸಗಿ ದೇಶಭ್ರಷ್ಟರಾದವರನ್ನು, ದೇಶಕ್ಕೆ ಕರೆತರಲು ಶಿಕ್ಷಿಸಲು ಮತ್ತು ವಂಚನೆಯ ಮೊತ್ತವನ್ನು ವಸೂಲು ಮಾಡುವ ನಿಟ್ಟಿನಲ್ಲಿ ಇದೊಂದು ಪರಿಣಾಮಕಾರಿ ಅಸ್ತ್ರ. ಹಾಗೆಯೇ ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ವಸೂಲಿಯಲ್ಲಿ ಮತ್ತು ತನ್ಮೂಲಕ ಸುಸ್ತಿ ಸಾಲದ ಪ್ರಮಾಣವನ್ನು ತಗ್ಗಿಸುವ ದೃಷ್ಟಿಯಲ್ಲಿ ಅತಿ ಮಹತ್ವದ ಹೆಜ್ಜೆ ಎನ್ನಲಾಗುತ್ತಿದೆ. ಈ ಸುಗ್ರೀವಾಜ್ಞೆಯ ಅನ್ವಯ, ಅಪರಾಧಿಗಳಿಗೆ ಇರುವುದು ಮೂರೇ ಆಯ್ಕೆ. ಸಾಲ ಮರುಪಾವತಿಸುವುದು, ಶರಣಾಗುವುದು ಅಥವಾ ತಮ್ಮ ಆಸ್ತಿಯನ್ನು ಬಿಟ್ಟುಕೊಡುವುದು. ಪ್ರಕರಣಗಳ ತೀವ್ರ ವಿಚಾರಣೆ ಈ ಸುಗ್ರೀವಾಜ್ಞೆಯ ಮುಖ್ಯ ಅಂಶವಾಗಿದ್ದು, ಸಾರ್ವತ್ರಿಕವಾಗಿ ಭೇಷ್ ಎನಿಸಿಕೊಂಡಿದೆ. ಈ ಸುಗ್ರೀವಾಜ್ಞೆಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಲಾಗದಂತೆ ಆದಷ್ಟು ಎಚ್ಚರಿಕೆ ವಹಿಸಲಾಗಿದ್ದು, ವಕೀಲರ ಮೂಲಕ ಪ್ರತಿನಿಧಿಸುವ, ಸಮನ್ಸ್ ಜಾರಿಗೊಳಿಸುವ ಮತ್ತು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಅವಕಾಶಗಳನ್ನು ಉಳಿಸಿಕೊಳ್ಳಲಾಗಿದೆಯಂತೆ. ಜಾರಿ ನಿರ್ದೇಶನಾಲಯವು ಈಗಾಗಲೇ 15000 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಲು ಈ ಸುಗ್ರೀವಾಜ್ಞೆಯ ಅಡಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ಸುಗ್ರೀವಾಜ್ಞೆಯನ್ನು ಸ್ವಾಗತಿಸಿದ್ದು, ಇದನ್ನು ಸುಸ್ತಿ ಸಾಲ ಮತ್ತು ಉದ್ದೇಶಪೂರ್ವಕ ಸುಸ್ತಿ ಸಾಲಗಳಿಗೂ ವಿಸ್ತರಿಸಿದರೆ ಹೇಗೆ ಎಂದು ಚಿಂತಿಸುತ್ತಿವೆಯಂತೆ. ಕೆಲವರು, ಕೆಲವರನ್ನು ಕೆಲವು ಬಾರಿ ಮಾತ್ರ ಮೂರ್ಖರನ್ನಾಗಿಸಬಹುದು. ವಿದೇಶಿ ನೆಲದಲ್ಲಿ ನಿಂತು ತನ್ನ ದೇಶಕ್ಕೇ ಸವಾಲು ಹಾಕುವ ಕಾಲ ಅಂತ್ಯ ಕಾಣುತ್ತಿದೆ ಎನ್ನುವ ಸತ್ಯವನ್ನು ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳು ತಿಳಿಯುವ ಕಾಲ ಬಂದಿದೆ.

ಸುಗ್ರೀವಾಜ್ಞೆಯ ಪ್ರಯೋಜನವೇನು?

ದೇಶದಲ್ಲಿ ಆರ್ಥಿಕ ವಂಚನೆ ಎಸಗಿ, ವಿಚಾರಣೆಗೆ ಬರಲು ಒಪ್ಪದೆ ಇರುವ, ಆರ್ಥಿಕ ಅಪರಾಧಗಳ ಕಾರಣಕ್ಕಾಗಿ ಬಂಧನ ವಾರಂಟ್ ಎದುರಿಸುತ್ತಿರುವ ಹಾಗೂ ಬ್ಯಾಂಕುಗಳಿಗೆ 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಸಾಲವನ್ನು ಮರುಪಾವತಿ ಮಾಡದೆ ಬಾಕಿ ಇರಿಸಿಕೊಂಡು ದೇಶ ಬಿಟ್ಟು ವಿದೇಶದಲ್ಲಿರುವವರಿಗೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ. ಇದರ ಬಹುದೊಡ್ಡ ಲಾಭವೆಂದರೆ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವ ಮೊದಲೇ, ಈ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಿ, ಮುಟ್ಟುಗೋಲು ಹಾಕಿ ಮಾರಾಟ ಮಾಡಿ ಸಾಲಕ್ಕೆ ಜಮಾ ಮಾಡಬಹುದು.

Leave a Reply

Your email address will not be published. Required fields are marked *