ಶಂಖುಹುಳುಗಳ ಕಾಟಕ್ಕೆ ಪರಿಹಾರ ಹೇಗೆ?

ಉತ್ತರಿಸುವವರು: ಪೂರ್ಣಪ್ರಜ್ಞ ಬೇಳೂರು

  • ನಮ್ಮ ತೋಟದಲ್ಲಿ ಶಂಖು ಹುಳುಗಳ ಕಾಟ ಮಿತಿಮೀರಿದೆ. ಹಿಂದೆ ತಿಳಿಸಿದ ಸಾವಯವ ಪರಿಹಾರಗಳಿಂದ ನಾಶ ಮಾಡಲು ಆಗುತ್ತಿಲ್ಲ. ರಾಸಾಯನಿಕ ಪರಿಹಾರಗಳಿದ್ದರೆ ತಿಳಿಸಿ.

| ಪ್ರಸನ್ನ, ಸಕಲೇಶಪುರ

ಶಂಖು ಹುಳು ನಮಗೆ ಮಾರಿಷಸ್​ನ ಕೊಡುಗೆ. ಇದರ ಮೂಲ ಪೂರ್ವ ಆಫ್ರಿಕಾ. ಹೆಸರು ಅಖಾಟಿನಾ ಫೂಲಿಕ. ಇದು ತಿನ್ನದ ಸಸ್ಯಗಳೇ ಇಲ್ಲ. ಮೊಟ್ಟೆ ಇಡದ ಜಾಗಗಳೇ ಇಲ್ಲ. ವರ್ಷದಲ್ಲಿ 5 6 ಸಾರಿ ಮೊಟ್ಟೆಗಳನ್ನು ಇಡುತ್ತದೆ. ಒಮ್ಮೆಗೆ 200 ಮೊಟ್ಟೆಗಳ ಒಂದು ಗೊಂಚಲನ್ನು ವಿವಿಧ ಸ್ಥಳಗಳಲ್ಲಿ ಇಡುತ್ತದೆ. ಜೀವಿತಾವಧಿ 5ರಿಂದ 10 ವರ್ಷಗಳು. ಸಂಜೆ ಕ್ರಿಯಾಶೀಲವಾಗುತ್ತದೆ. ರಾತ್ರಿ ಬೆಳಗಾಗುವುದರೊಳಗೆ ತನ್ನದೇ ತೂಕದ 800 ಪಟ್ಟು ಆಹಾರವನ್ನು ಕಬಳಿಸಬಲ್ಲದು. ಬೆಳಗ್ಗೆ ನೀವು ಎಷ್ಟು ಹುಡುಕಿದರೂ ಕಾಣಿಸುವುದಿಲ್ಲ. ತೇವಾಂಶಭರಿತ ವಾತಾವರಣದಲ್ಲಿ ಅತ್ಯಂತ ಚುರುಕಾಗಿ ಸತತ ಸಸ್ಯಗಳನ್ನು ತಿನ್ನುತ್ತಲೇ ಇರುತ್ತದೆ. ಒಣ ಹವೆಯಲ್ಲಿ ತನ್ನ ಸುತ್ತಲೂ ಕ್ಯಾಲ್ಸಿಯಂ ಕವಚವನ್ನು ತಾನೇ ಸ್ರವಿಸಿಕೊಂಡು ಸುಪ್ತಾವಸ್ಥೆಗೆ ತೆರಳುತ್ತದೆ. ಒಂದೊಮ್ಮೆ ಮೂರು ವರ್ಷಗಳ ಕಾಲ ಆಹಾರವಿಲ್ಲದಿದ್ದರೂ ನಿದ್ರೆಯಿಂದ ಮೇಲೇಳದೆ ಹಾಗೇ ಇರಬಲ್ಲದು. ಹೀಗಾಗಿ ಇದರ ಸಂಪೂರ್ಣ ನಿಮೂಲನೆ ಮಾಡಲು ಪಂಚವಾರ್ಷಿಕ ಯೋಜನೆಯನ್ನೇ ರೂಪಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಚಿಪ್ಪುಸುಣ್ಣ, ಬ್ಲೀಚಿಂಗ್ ಪುಡಿ ಮತ್ತು ಉಪ್ಪಿನ ಸಿಂಪಡಣೆ ಮೂಲಕ ನಿರ್ವಹಣೆ ಮಾಡಬಹುದು. ಅಂದರೆ ನಿಮಗೆ ಮೊದಲ ಹುಳು ಕಾಣಿಸಿಕೊಂಡಾಗಲೇ ಇದನ್ನು ಮಾಡಿದರೆ ಅದರ ಹಿಂದಿರುವ ಇನ್ನೂರು ಹುಳುಗಳ ಸಮೂಹವನ್ನು ನಿಯಂತ್ರಿಸಲು ಸಾಧ್ಯ. ಇವುಗಳಿಗೆ ಪಪ್ಪಾಯ, ಬಾಳೆ ಎಲೆಗಳು ತುಂಬ ಇಷ್ಟ. ಅವುಗಳನ್ನು ಗುಡ್ಡೆ ಹಾಕಿದಲ್ಲಿ ಹೆಚ್ಚಾಗಿ ಇರುತ್ತವೆ. ಹೀಗಾಗಿ ಅವುಗಳನ್ನು ಒಂದೇ ಕಡೆಯಲ್ಲಿ ಹಿಡಿಯಲು ಇದೇ ಉಪಾಯ ಮಾಡಬಹುದು. ಎಲ್ಲವೂ ಸೇರಿಕೊಂಡ ಮೇಲೆ ಅವುಗಳನ್ನು ಬಕೆಟ್​ನಲ್ಲಿ ತುಂಬಿಕೊಂಡು ತೋಟದಿಂದ ಆಚೆ ಕೊಂಡೊಯ್ದು ಸುಟ್ಟು ಹಾಕಿ.

36 ಕಿಲೋಗ್ರಾಂ ಅಕ್ಕಿ ತೌಡಿಗೆ 100 ಗ್ರಾಂ ಲಾರ್ವಿನ್ ಪುಡಿಯನ್ನು ಸೇರಿಸಿ. ಅದಕ್ಕೆ ಮೂರು ಕಿಲೋಗ್ರಾಂ ಬೆಲ್ಲದ ದ್ರಾವಣವನ್ನು ತಯಾರಿಸಿ 150 ಗ್ರಾಂ ಹರಳೆಣ್ಣೆಯನ್ನು ಸೇರಿಸಿ ಕಲೆಸಿ. ರೊಟ್ಟಿ ಹಿಟ್ಟಿನ ಉಂಡೆಯ ಹದಕ್ಕೆ ಮಾಡಿಕೊಂಡು ಉಂಡೆ ಕಟ್ಟಿ. ತೋಟದಲ್ಲಿ ಪ್ರತಿ ನಾಲ್ಕು ಗಿಡಗಳ ಮಧ್ಯೆ ಇಡಿ. ಇದಕ್ಕೆ ಪಪ್ಪಾಯದ ಕಾಯಿ, ಎಲೆ, ಕಾಂಡಗಳನ್ನು ಸಣ್ಣದಾಗಿ ಕೊಚ್ಚಿ ಸೇರಿಸಿ ಉಂಡೆ ಕಟ್ಟಬಹುದು. ನೆನಪಿಡಿ. ಲಾರ್ವಿನ್ ಪುಡಿ ಘೊರ ವಿಷ. ಈ ಮಿಶ್ರಣವನ್ನು ತಯಾರಿಸುವಾಗ ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು. ಮೂಗಿಗೆ ಮಾಸ್ಕ್ ಹಾಕಿಕೊಳ್ಳಬೇಕು. ಮನೆಯೊಳಗೆ ತಯಾರಿಸಬಾರದು. ಮಿಶ್ರಣ ತಯಾರಿಸಿದ ಪಾತ್ರೆಯನ್ನು ಬೇರಾವ ತಯಾರಿಕೆಗೂ ಬಳಸಬಾರದು.

ಉಂಡೆ ತಿಂದು ಸತ್ತ ಹುಳುಗಳನ್ನು ತೋಟದಿಂದ ದೂರ ಕೊಂಡೊಯ್ದು ಎಸೆಯಬೇಕು. ಅಥವಾ ಆಳವಾದ ಗುಂಡಿ ತೋಡಿ ಹುಗಿಯಬೇಕು. ಹುಳುಗಳನ್ನು ಸಹಾ ಗ್ಲೌಸ್ ಬಳಸಿಯೇ ಕೈಗೆತ್ತಿಕೊಳ್ಳಬೇಕು. ಉಂಡೆಯನ್ನು ಯಾವುದಾದರೂ ಫಸಲಿನ ಸಮೀಪವಿರಿಸಿದರೆ ಅಂತಹ ಫಸಲನ್ನು ತಕ್ಷಣ ಸೇವಿಸಬಾರದು. ಇದೂ ಸಹಾ ಒಂದು ವರ್ಷ ಮಾಡಿ ಬಿಡುವುದಲ್ಲ. ನಿರಂತರ ಮೂರು ವರ್ಷಗಳ ಕಾಲ ಮಾಡಬೇಕಾಗುತ್ತದೆ. ಸುತ್ತಲಿನ ಎಲ್ಲ ಕೃಷಿಕರೂ ಇದನ್ನು ಒಟ್ಟಿಗೆ ಮಾಡಿದರೆ ಆ ಪ್ರದೇಶದಲ್ಲಿ ಸಂಪೂರ್ಣ ನಿಮೂಲನೆ ಸಾಧ್ಯವಾಗಬಹುದು!

ಇತ್ತೀಚೆಗೆ ಸ್ನೇಲ್ ಕಿಲ್ಲರ್ ಹರಳುಗಳು ಸಿಗುತ್ತಿವೆ. ಅದು ಮೆಟಾಲ್ಡಿಹೈಡ್ ಹರಳು. ಇದೂ ಸಹಾ ಘೊರ ವಿಷ. ಇದನ್ನು ಗಿಡಗಳ ಸಮೀಪ ಹರಡಲು ಹೇಳುತ್ತಾರೆ. ಆಹಾರ ಬೆಳೆಗಳು, ಹಣ್ಣಿನ ಬೆಳೆಗಳಾದರೆ ಅದಕ್ಕೂ ಇದರ ವಿಷ ಪಸರಿಸುತ್ತದೆ. ಹೀಗಾಗಿ ಎಚ್ಚರಿಕೆ ಮುಖ್ಯ. ಇದರ ಮೊಟ್ಟೆಗಳನ್ನು ನಾಶ ಪಡಿಸುವ ಉಪಾಯ ಇನ್ನೂ ಗೊತ್ತಿಲ್ಲ. ನಿಮ್ಮ ತೋಟದಲ್ಲಿ ಹುಳುಗಳು ಸಂಪೂರ್ಣ ನಾಶವಾಗಿದ್ದರೂ ನೀವು ಬೇರೆ ಕಡೆಗಳಿಂದ ತರಿಸುವ ಗೊಬ್ಬರ, ಕಾಡು ಮಣ್ಣು, ತರಗೆಲೆಗಳು ಮುಂತಾದವುಗಳ ಮೂಲಕ ಮತ್ತೆ ಮತ್ತೆ ನಿಮ್ಮ ತೋಟವನ್ನು ಆಕ್ರಮಿಸುತ್ತಲೇ ಇರುತ್ತವೆ. ಹೆಚ್ಚಿನ ಮಾಹಿತಿಗೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರವನ್ನು ಸಂರ್ಪಸಿ. ಡಾ. ಭರತ್, 9845528681.

Leave a Reply

Your email address will not be published. Required fields are marked *