Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬಿತ್ತನೆಗೆ ಮುನ್ನ ಬೀಜೋಪಚಾರ

Monday, 11.06.2018, 3:03 AM       No Comments

ಬಿತ್ತನೆಗೆ ಮುನ್ನ ಭೂಮಿಯನ್ನು ರೆಂಟೆ ಕುಂಟೆಯಿಂದ ಉಳುಮೆ ಮಾಡುವುದು ಎಷ್ಟು ಉತ್ತಮವೋ ಅಷ್ಟೇ ಪ್ರಮಾಣದಲ್ಲಿ ಬೀಜೋಪಚಾರವೂ ಮಹತ್ವದ್ದಾಗಿದೆ. ಬಿತ್ತಿದಂತೆ ಬೆಳೆ ಎನ್ನುವುದು ನಿಜವಾದರೆ, ಬೀಜದಂತೆ ಬೆಳೆ ಎನ್ನುವುದೂ ಅಷ್ಟೇ ಸತ್ಯ.

| ಅಕ್ಕಪ್ಪ ಮಗದುಮ್ಮ ಬೆಳಗಾವಿ

ಬೀಜಕ್ಕೆ ಮಾಡುವ ಉಪಚಾರ ಬೆಳೆಗೆ ಹಾಕುವ ಅಡಿಪಾಯವಿದ್ದಂತೆ. ಈ ಸತ್ಯ ರೈತನಿಗೂ ಗೊತ್ತು. ಮುಂಗಾರು ಮಳೆಯ ಸುಳಿವು ಪಡೆದ ಕೃಷಿಕ ನೆಲ ಹದವಿಟ್ಟುಕೊಂಡು, ಬಿತ್ತನೆ ಮಾಡಲು ಸಜ್ಜಾಗಿದ್ದಾನೆ. ಕಳಪೆಯಿಂದ ಪಾರಾಗಲು ಬಿತ್ತನೆ ಬೀಜ ಖರೀದಿಸುವಾಗ ಒಂದಿಷ್ಟು ಮುಂಜಾಗ್ರತಾ ಕ್ರಮಗಳೂ ಅಗತ್ಯವಾಗಿವೆ. ಉತ್ತಮ ಇಳುವರಿ ಪಡೆಯಬೇಕೆಂದರೆ ಬೀಜೋಪಚಾರ ಅನಿವಾರ್ಯ.

ಕೃಷಿ ಚಟುವಟಿಕೆಯ ಎಲ್ಲ ಹಂತಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಕಂಡುಬಂದು ಇಳುವರಿಯನ್ನು ಕುಂಠಿತ ಮಾಡುವುದಲ್ಲದೆ ಬೇಸಾಯದ ಖರ್ಚನ್ನೂ ದ್ವಿಗುಣಗೊಳಿಸುತ್ತವೆ. ವಾತಾವರಣದ ವೈಪರೀತ್ಯ, ಮಣ್ಣಿನ ತೇವಾಂಶದ ಕೊರತೆ. ಇದರಿಂದ ಮೊಳಕೆ ಬರುವ ಪ್ರಮಾಣ ಕಡಿಮೆಯಾಗುವುದು, ಮೊಳಕೆ ಬಂದ ಬೀಜ ಸಸಿಯಾಗದಿರುವುದು, ಬೀಜದಿಂದ ಪಸರಿಸುವ ರೋಗಗಳು ಮತ್ತು ಕೀಟದಿಂದ ಸಸಿಗಳ ಬೆಳವಣಿಗೆ ಕುಂಠಿತವಾಗುವುದನ್ನು ಕಾಣಬಹುದು. ಇದರಿಂದ ಸಸ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಕಳೆಗಳ ಪ್ರಮಾಣ ಹೆಚ್ಚಾಗುತ್ತದೆ. ಹೀಗಾದಾಗ, ಸಸ್ಯಗಳಲ್ಲಿ ರೋಗಕಾರಕ ಕೀಟಗಳು ಆಶ್ರಯ ಪಡೆದು ಬೆಳೆಯ ಬೆಳವಣಿಗೆ ಕಡಿಮೆಯಾಗುತ್ತದೆ. ಇವುಗಳನ್ನು ನಿವಾರಿಸಿಕೊಳ್ಳುವ ಉತ್ತಮ ಮಾರ್ಗವೇ ಬೀಜೋಪಚಾರ.

ಏನಿದು ಬೀಜೋಪಚಾರ?: ಕಾಂಡದ ತುಂಡುಗಳು, ಸಸಿಗಳು, ಗೂಟೆ-ಗಡ್ಡೆಗಳಿಗೆ ಹರಡುವ ರೋಗಗಳು ಹಾಗೂ ಮಣ್ಣಿನಿಂದ ಮೊಳಕೆಗೆ ಬರುವ ಕೀಟ ಬಾಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿತ್ತನೆ ಹಂತದಲ್ಲೇ ಅತಿ ಕಡಿಮೆ ಖರ್ಚಿನಲ್ಲಿ ರಾಸಾಯನಿಕ, ಜೈವಿಕ ಕೀಟನಾಶಕಗಳೊಂದಿಗೆ ಬೀಜವನ್ನು ಉಪಚರಿಸುವ ವಿಧಾನಕ್ಕೆ ಬೀಜೋಪಚಾರ. ಈ ವಿಧಾನವನ್ನು ಜಮೀನಿನಲ್ಲಿಯೇ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಅಲ್ಲದೆ ಬಿತ್ತನೆಗೆ ಮುನ್ನ ಬೀಜೋಪಚಾರ ಮಾಡಿದರೆ ಸಸಿಗಳು ಸಮೃದ್ಧವಾಗಿ ಬೆಳೆದು ಅಲ್ಪ ಭೂಮಿಯಲ್ಲಿಯೂ ಅಧಿಕ ಇಳುವರಿ ಪಡೆಯಬಹುದಾಗಿದೆ.

ಬೀಜೋಪಚಾರ ಮಾಡುವುದರಿಂದ ಮಣ್ಣಿನಿಂದ ಮುಂದೆ ಸಸಿಗಳ ಬೆಳವಣಿಗೆ ಹಂತದಲ್ಲಿ ಹರಡಬಹುದಾದ ರೋಗ ಹಾಗೂ ಕೀಟ ಬಾಧೆಯನ್ನು ತಡೆಗಟ್ಟಬಹುದು. ಮೊಳಕೆ ಹಂತದಲ್ಲಿ ಬೀಜಗಳು ಕೊಳೆಯದೆ, ಸಸಿಗಳು ಸಾವನ್ನಪ್ಪದೆ ಶೇಕಡವಾರು ಬಿತ್ತನೆ ಮೊಳಕೆ ಪ್ರಮಾಣ ಉತ್ತಮವಾಗಿರುವ ಜತೆಗೆ ಸರಿಸಮವಾದ ಸಸಿಗಳನ್ನು ಪಡೆಯಬಹುದಾಗಿದೆ. ಬೀಜೋಪಚಾರದಲ್ಲಿ ಕಡಿಮೆ ಪ್ರಮಾಣದ ರಾಸಾಯನಿಕಗಳನ್ನು ಉಪಯೋಗಿಸುವುದರಿಂದ ಬೆಳೆಗಳಿಗೆ ಯಥೇಚ್ಛವಾಗಿ ಬಳಸುವ ರಾಸಾಯನಿಕಗಳ ಪ್ರಮಾಣದಲ್ಲಿ ಕಡಿಮೆಯಾಗಿ ಒಟ್ಟು ಖರ್ಚಿನಲ್ಲೂ ಉಳಿತಾಯ ಮಾಡಬಹುದು. ಪರಿಸರ ಮಾಲಿನ್ಯವನ್ನೂ ತಡೆಯಲು ಸಾಧ್ಯ. ಬೀಜೋಪಚಾರದಿಂದ ಬೀಜ ದಾಸ್ತಾನು ಹಾಗೂ ಸಂಗ್ರಹಣೆಯಲ್ಲಿ ಹರಡುವ ರೋಗಗಳನ್ನು ಕೂಡ ತಡೆಗಟ್ಟಬಹುದು. ಅಲ್ಲದೆ, ದಾಸ್ತಾನು ಹಂತದಲ್ಲೂ ಕಾಳುಗಳನ್ನು ಕೆಡದಂತೆ ಸಂರಕ್ಷಿಸಬಹುದು. ಸೂಕ್ಷಾ್ಮಣು ಜೀವಿಗಳಿಂದ ಬೀಜೋಪಚಾರ ಮಾಡುವುದರಿಂದ ವಾತಾವರಣದಲ್ಲಿನ ಸಾರಜನಕ ಬೆಳೆಗೆ ಸುಲಭವಾಗಿ ಸರಳರೂಪದಲ್ಲಿ ಲಭ್ಯವಾಗುವುದರಿಂದ ಮೇಲು ಗೊಬ್ಬರವಾಗಿ ಕೊಡುವ ರಸಗೊಬ್ಬರ ಪ್ರಮಾಣವನ್ನು ಕಡಿಮೆಗೊಳಿಸಬಹುದು. ವಾತಾವರಣದ ವೈಪರೀತ್ಯದಲ್ಲೂ ಉತ್ತಮ ಮೊಳಕೆ ಪ್ರಮಾಣ ಹಾಗೂ ಉತ್ತಮ ಸಸಿಗಳನ್ನು ಪಡೆದು ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ಮಾಡುವುದು ಹೇಗೆ?: ಬೀಜೋಪಚಾರದಲ್ಲಿ ಹಲವು ಪದ್ಧತಿಗಳಿವೆ. ಪುಡಿ ಹಾಗೂ ದ್ರಾವಣ ರೂಪದ ಔಷಧದಿಂದ ಬೀಜೋಪಚಾರ ಮಾಡಬಹುದು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪೆಲ್ಲೆಟಿಂಗ್ (ಲೇಪನ), ಸ್ಲರಿ (ಗಟ್ಟಿ ದ್ರಾವಣ) ಬೀಜೋಪಚಾರ ಮಾಡಬಹುದಾಗಿದೆ.

ಶಿಫಾರಸು ಮಾಡಿದ ಶಿಲೀಂಧ್ರನಾಶಕ, ಕೀಟನಾಶಕ ಅಥವಾ ಜೈವಿಕ ಕೀಟನಾಶಕಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ದ್ರಾವಣ ರೂಪದ ಔಷಧವನ್ನು ತಯಾರಿಸಿಕೊಳ್ಳಬೇಕು. ಬಿತ್ತನೆಗೆ ಬೇಕಾಗುವ ಬೀಜಗಳಿಗೆ ಅನುಗುಣವಾಗಿ ಬೀಜೋಪಚಾರ ಮಾಡಬೇಕು. ಲೇಪನ ಮಾಡಿದ ಬೀಜಗಳನ್ನು ಕೆಲ ಸಮಯದವರೆಗೆ ನೆರಳಿನಲ್ಲಿ ಒಣಗಿಸಿ ತದನಂತರ ಉಪಯೋಗಿಸಿದರೆ ಉತ್ತಮ. ಖುಷ್ಕಿ ಬೇಸಾಯದಲ್ಲಿ ಮಣ್ಣಿನ ತೇವಾಂಶ ಮಳೆಯನ್ನು ಅವಲಂಬಿಸಿರುತ್ತದೆ. ಇಂತಹ ಸಂದರ್ಭದಲ್ಲಿ ಬಿತ್ತನೆಯ ನಂತರ ಮಳೆ ಬೀಳದಿದ್ದರೆ ಮೊಳಕೆ ಬರದಿರುವುದು ಹಾಗೂ ಮೊಳಕೆ ಒಡೆದ ನಂತರ ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುವುದು ಸಾಮಾನ್ಯ. ಈ ಸಂದರ್ಭ ಮರುಬಿತ್ತನೆ ಮಾಡುವುದು ಅನಿವಾರ್ಯ. ಆದರೆ, ಈ ಸಮಸ್ಯೆ ನಿವಾರಣೆಗೆ ಸುಣ್ಣದ ಕ್ಲೋರೈಡ್​ನಿಂದ ಉಪಚಾರ ಸೂಕ್ತ. ಈ ವಿಧಾನ ಮುಖ್ಯವಾಗಿ ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಉದ್ದು ಮುಂತಾದವುಗಳಲ್ಲಿ ಸಾಮಾನ್ಯ.

ಬೀಜೋಪಚಾರ ವಿಧಾನ: ಬೀಜಗಳನ್ನು ಬಿತ್ತನೆಗೂ ಮುನ್ನ ಶೇ. 2ರಷ್ಟು ಸುಣ್ಣದ ಕ್ಲೋರೈಡ್ ದ್ರಾವಣದಲ್ಲಿ 1 ಗಂಟೆವರೆಗೆ ನೆನೆಸಿ 7ರಿಂದ 8 ಗಂಟೆಗಳವರೆಗೆ ನೆರಳಿನಲ್ಲಿ ಒಣಗಿಸಬೇಕು. ಗೊಬ್ಬರ, ರಸಗೊಬ್ಬರಗಳಿಂದ ಸೂಕ್ಷ್ಮಜೀವಿಗಳು ಸ್ಥಿರೀಕರಿಸಿದ ಮತ್ತು ಕರಗಿದ ರಸಗೊಬ್ಬರದ ಮೂಲಕ ಒದಗಿಸುವ ಪೋಷಕಾಂಶಗಳು ಗಿಡದ ಬೇರು ಸಮೂಹದ ಅತಿ ಹತ್ತಿರವಿದ್ದು, ಪೋಷಕಾಂಶ ಪೋಲಾಗದೆ ಬೆಳೆಗೆ ಸಿಗಬೇಕೆಂಬುದು ಇದರ ಉದ್ದೇಶ. ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ ಸಾರಜನಕ ಸ್ಥಿರೀಕರಿಸಿದ ಮತ್ತು ರಂಜಕ ಕರಗಿಸುವ ಸೂಕ್ಷ್ಮಾಣು ಜೀವಿಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ.

ಒಮ್ಮೆ ಬೆಳೆಯಲ್ಲಿ ತೊಂದರೆ ಕಂಡಾಗ ಅವುಗಳ ನಿರ್ವಹಣೆ ಮಾಡುವುದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚವೂ ವೃದ್ಧಿಯಾಗುತ್ತದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಬೀಜೋಪಚಾರ ಮಾಡಿ ಸಮಸ್ಯೆಯನ್ನು ಸರಳ, ಸುಲಭ ಹಾಗೂ ಸಮರ್ಥವಾಗಿ ನಿರ್ವಹಣೆ ಮಾಡಬೇಕು. ಇದರಿಂದ ಬೆಳೆಯ ಬೆಳವಣಿಗೆ ಹೆಚ್ಚಾಗಿ ಇಳುವರಿ ದ್ವಿಗುಣವಾಗಿ ಬೇಸಾಯದ ಖರ್ಚನ್ನೂ ಕಡಿಮೆ ಮಾಡಬಹುದು. ರೈತರು ಹೆಚ್ಚು ಹೆಚ್ಚಾಗಿ ಈ ವಿಧಾನ ಬಳಕೆ ಮಾಡಿ ಸದುಪಯೋಗ ಮಾಡಿಕೊಳ್ಳಬೇಕು.

| ಡಾ. ಎಸ್. ಎಸ್. ಹಿರೇಮಠ, ವಿಷಯ ತಜ್ಞರು (ಸಸ್ಯ ಸಂರಕ್ಷಣೆ) ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ

ಕಂಪನಿಗಳಿಂದ ಪಂಗನಾಮ

ದೇಶದಲ್ಲಿಯೇ ಗುಣಮಟ್ಟದ ಬೀಜೋತ್ಪಾದನೆಗೆ ಹೆಸರುವಾಸಿಯಾಗಿರುವ ಕರ್ನಾಟಕ ಮಾರುಕಟ್ಟೆಗೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಮೂಲದ ಕಳಪೆ ಬೀಜ ಲಗ್ಗೆ ಇಟ್ಟಿದ್ದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದಲ್ಲಿ ದಶಕಗಳಿಂದಲೂ ಕಳಪೆ ಬೀಜಗಳ ಮಾರಾಟ ನಡೆಯುತ್ತಿದೆ. ರಾಜ್ಯದಲ್ಲಿ ಬೀಜೋತ್ಪಾದನೆಗೆ ಉತ್ತಮ ಹವಾಗುಣವಿರುವ ಕಾರಣ ದೇಶ, ವಿದೇಶದ ಸಾವಿರಕ್ಕೂ ಅಧಿಕ ಕಂಪನಿಗಳು ಬೀಜೋತ್ಪಾದನೆಗಾಗಿ ಇಲ್ಲಿ ಶಾಖೆ ತೆರೆದಿವೆ. ಆದರೆ, ಕೆಲವು ಕಂಪನಿಗಳ ಸಿಬ್ಬಂದಿ ಹಾಗೂ ಸ್ಥಳೀಯ ಕೆಲವು ವ್ಯಾಪಾರಸ್ಥರು ನೆರೆಯ ರಾಜ್ಯಗಳಿಂದ ಕಳಪೆ ಬೀಜಗಳನ್ನು ತಂದು ಗುಣಮಟ್ಟದ ಬೀಜ ಮಾರಾಟದ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ರೈತರಿಗೆ ಹಾಗೂ ಉತ್ತಮ ಬೀಜೋತ್ಪಾದನೆ ಮಾಡುವ ಕಂಪನಿಗಳಿಗೆ ಮೋಸ ಮಾಡುತ್ತಿದ್ದಾರೆ. ಅಲ್ಲದೆ, ಬರಗಾಲದಿಂದಾಗಿ ಈ ಬಾರಿ ಬೀಜೋತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮಾರಾಟಗಾರರು, ಬೀಜೋತ್ಪಾದನೆಯ ಕಂಪನಿಗಳ ಸಂಸ್ಕರಣ ಘಟಕವಿರುವ ನೆರೆಯ ರಾಜ್ಯಗಳ ಏಜೆಂಟರ ಮೂಲಕ ಆ ಕಂಪನಿಗಳ ತಿರಸ್ಕೃತ ಬೀಜಗಳನ್ನು (ಬಿತ್ತನೆಗೆ ಯೋಗ್ಯವಲ್ಲದ ಬೀಜ) ಕಡಿಮೆ ಬೆಲೆಗೆ ಖರೀದಿಸಿ ತಂದು ಅವುಗಳಿಗೆ ಬಣ್ಣ ಸೇರಿಸಿ, ವಿವಿಧ ಕಂಪನಿಗಳ ನಕಲಿ ಪ್ಯಾಕೆಟ್​ಗಳಲ್ಲಿ ಹಾಕಿ ಇಲ್ಲಿಂದಲೇ ನಾನಾ ಕಡೆಗೆ ಕಳಿಸುತ್ತಿದ್ದಾರೆ. ಸ್ಥಳೀಯವಾಗಿಯೂ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮಹಾರಾಷ್ಟ್ರದಿಂದ ಬೀಜ ತಂದು ಮಾರಾಟ ಮಾಡುವವರು ಒಂದೆಡೆಯಾದರೆ, ಸ್ಥಳೀಯ ಮಾರಾಟಗಾರರು ಹೆಚ್ಚಿನ ಲಾಭದ ಆಸೆಗಾಗಿ ನಿಯಮಬಾಹಿರವಾಗಿ ಬೀಜೋತ್ಪಾದನೆ ಮಾಡುತ್ತಿದ್ದಾರೆ. ನಿಯಮದ ಪ್ರಕಾರ ಬಿತ್ತನೆಗೆ ಯೋಗ್ಯ ಹಾಗೂ ಯೋಗ್ಯವಲ್ಲದ ಬೀಜಗಳೆಂದು ಬೇರ್ಪಡಿಸಬೇಕು. ತಿರಸ್ಕೃತ ಬೀಜಗಳನ್ನು ನಾಶಪಡಿಸಬೇಕು. ಆದರೆ, ಲಾಭದಾಸೆಗಾಗಿ ಯಾರೂ ಈ ನಿಯಮ ಪಾಲಿಸುತ್ತಿಲ್ಲ.

ಮುಂಜಾಗ್ರತಾ ಕ್ರಮಗಳು

1. ಅಗತ್ಯ ಪ್ರಮಾಣದ ಬೀಜಕ್ಕೆ ಬೀಜೋಪಚಾರ ಮಾಡಿ ತಕ್ಷಣ ಬಿತ್ತನೆಗೆ ಬಳಸಬೇಕು.

2. ಶಿಫಾರಸು ಮಾಡಿದ ವಸ್ತುವನ್ನು ಆಯಾ ಪ್ರಮಾಣದಲ್ಲಿಯೇ ಬಳಕೆ ಮಾಡಬೇಕು.

3. ಬೀಜೋಪಚಾರ ಮಾಡುವ ಸಂದರ್ಭ ಏನಾದರೂ ತಿನ್ನುವುದು ಹಾಗೂ ಕುಡಿಯುವುದನ್ನು ಮಾಡಬಾರದು. ಅಲ್ಲದೆ, ಸುರಕ್ಷಿತ ಮುಖವಾಡ ಮತ್ತು ಕೈ ಚೀಲಗಳನ್ನು ಕಡ್ಡಾಯವಾಗಿ ಬಳಸಬೇಕು.

(ಮಾಹಿತಿಗೆ ಮೊ.ಸಂ. 9535604747)

Leave a Reply

Your email address will not be published. Required fields are marked *

Back To Top