ಐದು ಪಟ್ಟಣಗಳಿಗೆ ವರ್ತಲ ರಸ್ತೆ

| ಹೊಸಹಟ್ಟಿ ಕುಮಾರ

ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ಐದು ನಗರ ಹಾಗೂ ಪಟ್ಟಣಗಳಿಗೆ ವರ್ತಲಾಕಾರದಲ್ಲಿ ನೇರ ರಸ್ತೆ ಸಂಪರ್ಕ ಕಲ್ಪಿಸುವ ‘ವಿಷನ್ ಬೆಂಗಳೂರು-2050’ ಯೋಜನೆಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಅಧಿಕೃತವಾಗಿ ಅನುಮೋದನೆ ಸಿಕ್ಕ ಕೂಡಲೇ ಈ ಪ್ರದೇಶಗಳ ಸುತ್ತಮುತ್ತ ಹೊಸ ಹೊಸ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳು ಗರಿಗೆದರಲಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ವೇಗ ಪಡೆದುಕೊಳ್ಳುವ ಮುಖಾಂತರ ಭೂಮಿಗೆ ಚಿನ್ನದ ಬೆಲೆ ಬರಲಿದೆ.

ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರೂ ಆಗಿರುವ ಡಾ. ಜಿ.ಪರಮೇಶ್ವರ್ ಇತ್ತೀಚೆಗೆ ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ‘ವಿಷನ್ ಬೆಂಗಳೂರು -2050’ ಯೋಜನೆ ಜಾರಿಗೆ ತರುವ ಕುರಿತು ಪ್ರಸ್ತಾಪ ಮಾಡಿದ್ದಾರೆ. ಹೊಸಕೋಟೆ, ದೊಡ್ಡಬಳ್ಳಾಪುರ, ದಾಬಸ್​ಪೇಟೆ, ರಾಮನಗರ ಹಾಗೂ ಆನೇಕಲ್ ಪಟ್ಟಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಈ ಯೋಜನೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಎಂಆರ್​ಡಿಎ ನಿರ್ವಹಿಸಲಿದೆ.

ಈಗಾಗಲೇ ಅಡ್ಡಾದಿಡ್ಡಿಯಾಗಿ ಬೆಳೆದಿರುವ ಬೆಂಗಳೂರು ಮತ್ತಷ್ಟು ಯರಾ›ಬಿರ್ರಿಯಾಗಿ ಬೆಳೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಶೀಘ್ರದಲ್ಲೇ ಯೋಜನೆಯನ್ನು ಸಂಪುಟದ ಮುಂದೆ ಇಟ್ಟು ಅನುಮತಿ ಪಡೆಯಲು ಸಭೆಯಲ್ಲಿ ತೀರ್ವನಿಸಲಾಗಿದೆ. ಅನುಮೋದನೆ ದೊರೆತ ನಂತರ ಮುಂದಿನ ಪ್ರಕ್ರಿಯೆಗಳು ಶುರುವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೇಗಿರುತ್ತೆ ಯೋಜನೆ?: ಪೆರಿಫೆರಲ್ ವರ್ತಲ ರಸ್ತೆ ಮೂಲಕ ಈ ನಗರ, ಪಟ್ಟಣಗಳ ನಡುವೆ ಸಂಪರ್ಕ ರಸ್ತೆ ನಿರ್ವಣವಾಗಲಿದೆ. ಇಷ್ಟೂ ನಗರಗಳನ್ನು ಒಂದು ವರ್ತಲದಲ್ಲಿ ಸೇರಿಸುವ ಯೋಜನೆ ಇದಾಗಿದೆ. ಇದರಿಂದ ಈ ನಗರ ಹಾಗೂ ಪಟ್ಟಣಗಳ ನಡುವೆ ಹಲವು ಟೌನ್​ಷಿಪ್​ಗಳನ್ನು ನಿರ್ಮಾಣ ಮಾಡಬಹುದು. ಇದರಿಂದ ಬೆಂಗಳೂರು ನಗರದ ಮೇಲಿನ ಒತ್ತಡ ನಿವಾರಣೆಯಾಗುವುದರ ಜತೆಗೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೂ ಪೂರಕ ವಾತಾವರಣ ನಿರ್ವಣವಾಗಲಿದೆ. ಆ ಭಾಗದ ರೈತರ ಭೂಮಿಗೂ ಬೆಲೆ ಬರಲಿದೆ.

ವಿಷನ್-2031 ಈಗ 2050: ಈ ಮೊದಲೇ ರಾಜ್ಯ ಸರ್ಕಾರ ‘ವಿಷನ್ ಬೆಂಗಳೂರು-2031’ ಹೆಸರಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಇದೇ ಯೋಜನೆಯನ್ನು ಈಗ ಇನ್ನಷ್ಟು ವಿಸ್ತರಿಸುವ ಮೂಲಕ ‘ವಿಷನ್ ಬೆಂಗಳೂರು-2050’ ಹೆಸರಿನ ಯೋಜನೆಯನ್ನು ಜಾರಿಗೊಳಿಸಲು ತೀರ್ವನಿಸಿದೆ. ಸದ್ಯ ಬೆಂಗಳೂರು ನಗರ ಪೂರ್ವಯೋಜಿತವಾಗಿ ಅಭಿವೃದ್ಧಿ ಹೊಂದುತ್ತಿಲ್ಲ. ಇದರಿಂದ ಭವಿಷ್ಯದಲ್ಲಿ ಹಲವು ಸಮಸ್ಯೆಗಳು ಎದುರಾಗುವ ಆತಂಕ ಉದ್ಭವಿಸಿದೆ. ಇದನ್ನು ತಪ್ಪಿಸಲು ಸರ್ಕಾರ ಈ ಹೊಸ ಯೋಜನೆ ಜಾರಿಗೆ ತರಲು ಹೊರಟಿದೆ.

ರಿಯಲ್ ಎಸ್ಟೇಟ್​ಗೆ ಶುಕ್ರದೆಸೆ: ಹೊಸಕೋಟೆ, ದೊಡ್ಡಬಳ್ಳಾಪುರ, ದಾಬಸ್​ಪೇಟೆ, ರಾಮನಗರ ಹಾಗೂ ಆನೇಕಲ್ ನಗರಗಳು ಕೆಲವೇ ಕಿಲೋ ಮೀಟರ್ ದೂರವಿರುವುದರಿಂದ ಈಗಾಗಲೇ ಶೇ.50ರಷ್ಟು ಭಾಗ ಬೆಂಗಳೂರಿಗೇ ಸೇರಿಕೊಂಡಿದೆ. ಈಗ ಎಲ್ಲ ನಗರಗಳಿಗೂ ನೇರ ಸಂಪರ್ಕ ರಸ್ತೆ ಸಾಧ್ಯವಾದರೆ ಮತ್ತಷ್ಟು ಹತ್ತಿರವಾಗುತ್ತದೆ. ಹೊಸ ಹೊಸ ಕೈಗಾರಿಕೆಗಳು, ಕಂಪನಿಗಳು, ವಸತಿ ಸಂಕೀರ್ಣಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಬರಲಿವೆ. ಇದರಿಂದ ರಿಯಲ್ ಎಸ್ಟೇಟ್ ವಹಿವಾಟು ಗರಿಗೆದರಲಿದ್ದು, ಭೂಮಿ ಬೇಡಿಕೆ ಮತ್ತಷ್ಟು ಏರಲಿದೆ. ಈಗಾಗಲೇ ಈ ಐದೂ ನಗರಗಳಲ್ಲಿ ಕೈಗಾರಿಕಾ ನಗರ ಸ್ಥಾಪನೆಯಾಗಿದ್ದು, ಬಹುತೇಕ ಕಂಪನಿಗಳು ತಲೆ ಎತ್ತಿವೆ. ಹೊಸ ಯೋಜನೆ ಜಾರಿಯಿಂದ ಇದರ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ.

ಯಾವ್ಯಾವ ಪ್ರದೇಶ

ಹೊಸಕೋಟೆ

ದೊಡ್ಡಬಳ್ಳಾಪುರ

ದಾಬಸ್​ಪೇಟೆ

ರಾಮನಗರ

ಆನೇಕಲ್