ಧಾರಾವಾಹಿಗಳಲ್ಲಿ ಸಾಮಾಜಿಕ ಸಂದೇಶ

| ದೀಪಾ ರವಿಶಂಕರ್

ಮನರಂಜನಾ ಮಾಧ್ಯಮಗಳಿಗೆ ಉದ್ದೇಶ, ಅವುಗಳಲ್ಲಿ ಸಂದೇಶ ಇರಲೇಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಅನಾದಿ ಕಾಲದಿಂದಲೂ ಇದೆ. ಮನರಂಜನೆ ಇರುವುದೇ ನಮ್ಮ ಒತ್ತಡಗಳನ್ನು ಮರೆತು, ನಮಗೆ ಯಾವ ಜವಾಬ್ದಾರಿಯೂ ಇರದ, ಮತ್ತೇನೋ ಒಂದರಲ್ಲಿ ತೊಡಗಿಕೊಳ್ಳುವ ಮೂಲಕ ಮನಸ್ಸನ್ನು ಹಗುರಾಗಿಸಿಕೊಳ್ಳಲು. ಅಲ್ಲಿಯೂ ಉದ್ದೇಶ, ಸಂದೇಶಗಳು ಒಳಹೊಕ್ಕು ನಮ್ಮ ಜವಾಬ್ದಾರಿಗಳನ್ನು ತಿಳಿಸತೊಡಗಿದರೆ ಅದು ಮನರಂಜನೆ ಹೇಗಾದೀತು ಎಂಬುದು ಒಂದು ಪಕ್ಷದ ವಾದ. ಸಮಾಜದಿಂದ ಚಪ್ಪಾಳೆಗಳನ್ನೂ ಆ ಮೂಲಕ ಬದುಕನ್ನೂ ಪಡೆದಿದ್ದೇವೆಂದರೆ ಸಮಾಜದ ಹುಳುಕುಗಳನ್ನು ತೋರಿಸಿ, ಆ ದಿಸೆಯಲ್ಲಿ ಜನಸಾಮಾನ್ಯನ ಜವಾಬ್ದಾರಿಗಳೇನು ಎಂದು ಸೂಚಿಸುವ ಜವಾಬ್ದಾರಿ ಮನರಂಜನಾ ಮಾಧ್ಯಮದ್ದು. ಮನರಂಜಿಸುತ್ತಲೇ ಜನರಿಗೆ ತಮ್ಮ ಸುತ್ತಮುತ್ತಲಿನ ಆಗು ಹೋಗುಗಳ ಅರಿವು ಮೂಡಿಸುವುದೇ ಅದರ ಉದ್ದೇಶವಾಗಿರಬೇಕು ಎನ್ನುವುದು ಮತ್ತೊಂದು ಪಕ್ಷದ ನಿಲುವು.

ಶಾಸ್ತ್ರೀಯ ನೃತ್ಯ ಸಂಗೀತಗಳನ್ನು ಗಮನಿಸಿದರೆ ಅವು ಯಾವ ಉದ್ದೇಶ, ಸಂದೇಶಗಳನ್ನೂ ಹೊಂದದೇ ಮನರಂಜನೆಯೊಂದೇ ಮೂಲ ಉದ್ದೇಶವಾಗಿ ಹೊಮ್ಮುವುದನ್ನು ಗಮನಿಸಬಹುದು. ದೇವರನಾಮಗಳು, ಕೀರ್ತನೆಗಳು, ತಿಲ್ಲಾನಗಳು ಇವೇ ಮೊದಲಾದ ಸಂಗೀತಕ್ಕೆ ಅಳವಡಿಸಿದ ನೃತ್ಯ, ಗಾಯನಗಳೇ ಕಾಣಸಿಗುತ್ತವೆ. ಆದರೆ ಇತ್ತೀಚೆಗೆ ನೃತ್ಯ ಗುರುಗಳು, ನೃತ್ಯ ನಾಟಕಗಳನ್ನು ಸಮಾಜಮುಖಿಯಾದ ಸಂದೇಶಗಳನ್ನು ಇಟ್ಟುಕೊಂಡು ವಿನ್ಯಾಸಗೊಳಿಸುತ್ತಿರುವ ಹೊಸ ಅಲೆ ಕಾಣುತ್ತಿದ್ದೇವೆ. ಅಂದರೆ ಕೇವಲ ಮನರಂಜನೆಯಿಂದ ಸಂದೇಶದೊಡನೆ ಬಂದ ಮನರಂಜನೆಯ ಕಡೆಗೆ.

ಇದಕ್ಕೆ ಪ್ರತಿಯಾಗಿ ರಂಗಭೂಮಿಯಲ್ಲಿ ಎರಡೂ ಬಗೆಯ ಪ್ರಯೋಗಗಳನ್ನು ಕಾಣಬಹುದು. ಕೆಲವು ನಾಟಕಗಳು ಒಂದು ಸಂದೇಶವನ್ನೋ, ಸಮಾಜದ ಓರೆಕೋರೆಗಳನ್ನು ತೋರುವ ಕಥೆಯನ್ನೋ ಬಿಂಬಿಸಿದರೆ, ಕೆಲವು ಅವೆಲ್ಲದರಿಂದ ದೂರ ಉಳಿದು ಸಾಮಾಜಿಕ, ಹಾಸ್ಯದ ಕಥೆಗಳನ್ನು ಆಯ್ದುಕೊಂಡು ಯಾವುದೇ ಸಂದೇಶದಿಂದ ತಟಸ್ಥವಾಗಿ ಉಳಿಯುತ್ತವೆ. ಅಂದಿನಿಂದ ಇಂದಿನವರೆಗೂ ಈ ಎರಡೂ ಬಗೆಯ ಪ್ರಕಾರಗಳು ರಂಗಭೂಮಿಯಲ್ಲಿ ಪ್ರಚಲಿತವಿವೆ. ರಂಗಭೂಮಿಯ ನಿಲುವೇ ಸಿನೆಮಾಗೂ ಇದೆ. ಕೆಲವು ಒಂದು ಸಂದೇಶದ ಸುತ್ತಲೇ ಕಥೆ ಹೆಣೆದರೆ, ಬಹಳಷ್ಟು ಸಿನೆಮಾಗಳು ವ್ಯಕ್ತಿಯೊಬ್ಬನ ಸುತ್ತ ಕಥೆ ಸಾಗುವಂತೆ ಇರುತ್ತದೆ.

ಈಗ ಧಾರಾವಾಹಿಗಳ ಕಡೆ ನೋಡೋಣ. ಧಾರಾವಾಹಿ ಪ್ರಪಂಚ ಕಳೆದ ಒಂದು ದಶಕದಿಂದ ಕ್ರಾಂತಿಯನ್ನೇ ಕಂಡಿದೆ ಎನ್ನಬಹುದು. ಅಷ್ಟರ ಮಟ್ಟಿಗೆ ಅದರ ವಿಸ್ತಾರ, ಜನಪ್ರಿಯತೆ, ಹೆಚ್ಚು ಹೆಚ್ಚು ಜನರನ್ನು ತಲುಪುವ ರೀತಿ, ಎಲ್ಲವೂ ಒಂದೇ ದಶಕದಲ್ಲಿ ತೀವ್ರವಾದ ಏರುಗತಿಯನ್ನು ಕಂಡಿದೆ. ಆದಾಗ್ಯೂ ಬೇರೆಲ್ಲಾ ವಿಷಯಗಳಂತೆ ಇಲ್ಲಿಯೂ ಧಾರಾವಾಹಿ ಪ್ರಪಂಚ ತನಗೂ, ತಾನಿರುವ ಸಮಾಜಕ್ಕೂ ಯಾವ ಸಂಬಂಧವೇ ಇಲ್ಲವೆನ್ನುವಂತೆಯೇ ವರ್ತಿಸಿದೆ. ಯಾವ ಕಥೆಯಲ್ಲೂ ಯಾವ ಸಂದೇಶವೂ ಇಲ್ಲ. ಸರಿ ಹಾಗಾದರೆ ಯಾವ ಅಭಿಪ್ರಾಯವನ್ನೂ ತಳೆಯದ, ಆ ಅಧಿಕಾರವನ್ನು ವೀಕ್ಷಕರಿಗೆ ಬಿಟ್ಟುಕೊಡುವ ತಾಟಸ್ಥ್ಯವೇ? ಅಲ್ಲ. ಧಾರಾವಾಹಿಗಳು ಇಲ್ಲಿಯವರೆಗೆ ತೋರಿರುವುದು ಇಲ್ಲವೇ ತಪ್ಪು ಆದರ್ಶಗಳನ್ನು ಅಥವಾ ಸಮಾಜ ಇದು ಸರಿಯಿಲ್ಲವೆಂದು ಹಿಂದೆ ಬಿಟ್ಟು ಬಂದ ಆಚಾರಗಳನ್ನು ಅಥವಾ ಇನ್ನೂ ಬಿಡಲಾರದೇ ಆದರೆ ನಾಗರೀಕ ಸಮಾಜ ಬಿಡಲೇಬೇಕಾಗಿರುವ ರೂಢಿಗಳನ್ನು. ಉದಾಹರಣೆಗೆ ನಮ್ಮ ನಾಯಕಿಯರೆಲ್ಲಾ ಸಮಾಜದೆಡೆಗೆ, ವಿದ್ಯೆಯ ಕಡೆಗೆ, ತಂದೆತಾಯಂದಿರನ್ನು ನೋಡಿಕೊಳ್ಳಬೇಕಾಗಿರುವುದು ತಮ್ಮದೂ ಕರ್ತವ್ಯ ಎಂಬ ವಾದದೆಡೆಗೆ ಏನೂ ಮಾಡದಿರುವುದು, ಬದಲಿಗೆ ಬಾಲ ವಿಧವೆಯರು, ಅವರ ಕಷ್ಟಗಳನ್ನು ತೋರಿಸುವುದು, ಹೆಣ್ಣು ಮಕ್ಕಳನ್ನು ತ್ಯಾಗ, ಮನೆಗಲಸ, ತಾಯ್ತನ, ಪತಿಸೇವೆಯ ಅತ್ಯಂತ ಚಿಕ್ಕ ವೃತ್ತದಲ್ಲೇ ಸದಾಕಾಲ ಚಿತ್ರಿಸಿ ಅದೇ ಸರಿ. ಒಬ್ಬ ಒಳ್ಳೆಯ ಹೆಣ್ಣು ಮಗಳು ಎಂದರೆ ಅಷ್ಟಕ್ಕೇ ಸೀಮಿತವಾಗಿರಬೇಕು ಎಂಬಂತೆ ಬಿಂಬಿಸುವುದು ಮೊದಲಾದವು. ಮನರಂಜನೆಯಲ್ಲಿ ಒಂದು ಸಂದೇಶವಿರಲೀ ಇಲ್ಲದಿರಲೀ, ನಮ್ಮದೇ ಸಮಾಜದೊಳಗೆ, ನಮ್ಮ ಸುತ್ತಮುತ್ತ ನಡೆಯುವ ಆಗುಹೋಗುಗಳಿಗೆ ಕುರುಡಾಗಿ, ಬೆಳೆಯುತ್ತಿರುವ ಸಮಾಜವಾನ್ನು ಹಿಂದಕ್ಕೆಳೆಯುವ ಕಿರುತೆರೆಯ ಈ ಧೋರಣೆ ಮಾತ್ರ ಅಕ್ಷಮ್ಯ. ಸಮಾಜದಲ್ಲಿ ಹತ್ತಿ ಉರಿಯುತ್ತಿರುವ ನೂರಾರು ಸಮಸ್ಯೆಗಳಿಗೆ, ಅವುಗಳ ಪರ-ವಿರೋಧ ನಿಂತು ಮಾತಾಡಬೇಕಿಲ್ಲ ಧಾರಾವಾಹಿಗಳು. ಕನಿಷ್ಠ ಆ ಸಮಸ್ಯೆಗಳೇನು ಎಂದಾದರೂ ಜನರಿಗೆ ತಿಳಿಸಬಹುದಲ್ಲ?

ರೈತರ ವಿಷಯ ತೆಗೆದುಕೊಳ್ಳೋಣ. ಪ್ರತೀ ವರ್ಷ ನಮ್ಮ ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆದು ಹಾಲು ತುಂಬಿ ತುಳುಕುವ ತೆನೆಗಳು ಇನ್ನೇನು ಕಟಾವಿಗೆ ಬರುವ ಹೊತ್ತಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಾಳಾಗುತ್ತಿವೆ, ವರ್ಷವಿಡೀ ದುಡಿದು ಕೈಗೆ ಬಂದ ಬೆಳೆಗೆ ನ್ಯಾಯವಾದ ಬೆಲೆ ಸಿಗದೆ, ಕೊಂಡ ಸಾಲ ತೀರಿಸಲಾಗದೇ ಪರದೇಶಿಗಳಾಗುತ್ತಿದ್ದಾರೆ, ರೈತರ ಮಕ್ಕಳು ವ್ಯವಸಾಯ ತೊರೆದು ದೊಡ್ಡ ದೊಡ್ಡ ಊರುಗಳಿಗೆ ಕೆಲಸಕ್ಕೆ ಹೊರಟುಬಿಡುತ್ತಿದ್ದಾರೆ. ಪರಿಹಾರ ಕೊಡಲಾಗದಿದ್ದರೆ ಪರವಾಗಿಲ್ಲ. ಅದು ಮನರಂಜನಾ ಮಾಧ್ಯಮದ ಕೆಲಸವೂ ಅಲ್ಲ. ಆದರೆ ಕನಿಷ್ಠ ಪಕ್ಷ ಆ ಚಿತ್ರಣವನ್ನಾದರೂ ಜನಕ್ಕೆ ತಲುಪಿಸಬಹುದಲ್ಲವೇ? ಕಥೆಯ ಮೂಲಕ ಇಂಥ ಸಮಸ್ಯೆಯ ಚಿತ್ರಣ ಜನರಿಗೆ ತಲುಪಿಸಲು ಹೆಚ್ಚಿನ ಸಂಶೋಧನೆ, ಓದು ಮತ್ತು ಅರಿವಿನ ಅಗತ್ಯವಿದೆ. ಮನೆಯಲ್ಲಿ ಕುಳಿತು ಗಂಡನ ಮನೆಯವರ ನಿಂದೆ ಸಹಿಸಿ ಅಳುತ್ತಾ ತ್ಯಾಗ ಮಾಡುವ ಹೆಣ್ಣು ಮಗಳ ಕಥೆಗೆ ಸಂಶೋಧನೆಯೂ ಬೇಕಿಲ್ಲ. ಜನರೂ ನೋಡುತ್ತಾರೆಂಬ ಖಾತ್ರಿಯೂ ಇದೆ. ಮತ್ತೇಕೆ ಕಷ್ಟ ಪಡಬೇಕು?

ಸಂದೇಶ ಇರಬೇಕೇ ಬೇಡವೇ ಎಂಬ ಪ್ರಶ್ನೆ ಸೀಮಿತ ವೀಕ್ಷಕ/ಪ್ರೇಕ್ಷಕರನ್ನು ಹೊಂದಿರುವ ಮನರಂಜನಾ ಮಾಧ್ಯಮಗಳಿಗೆ ಅನ್ವಯವಾಗುತ್ತದೆ. ಧಾರಾವಾಹಿ ಜಗತ್ತಿನಂತೆ ನಾಡನ್ನೆಲ್ಲಾ ವ್ಯಾಪಿಸಿಕೊಂಡು ಜನಸಾಮಾನ್ಯನ ನಾಲ್ಕೈದು ಗಂಟೆಗಳ ಅಮೂಲ್ಯ ಸಮಯವನ್ನು ತೆಗೆದುಕೊಳ್ಳುವ ಕಿರುತೆರೆಯಂಥ ದೈತ್ಯ ಮನರಂಜನಾ ಮಾಧ್ಯಮಕ್ಕಲ್ಲ. ಇಲ್ಲಿ ಜನರಲ್ಲಿ ಅರಿವು ಮೂಡಿಸುವ, ಜಾಗೃತಿ ಮೂಡಿಸುವ ಜವಾಬ್ದಾರಿ ಅತ್ಯಗತ್ಯ. ಏಕೆಂದರೆ ಏಕಕಾಲಕ್ಕೆ ಒಂದಿಡೀ ರಾಜ್ಯದ ಜನರನ್ನು ತಲುಪುವ ಸಾಧ್ಯತೆ ಇರುವುದು ಈ ಮಾಧ್ಯಮದ ವಿರಾಟ್ ಶಕ್ತಿ. ಅದನ್ನು ಈ ಮಾಧ್ಯಮ ತನ್ನದೇ ಸಮಾಜದ ಒಂದು ವರ್ಗದ ಕಷ್ಟಗಳನ್ನು ಇನ್ನುಳಿದ ವರ್ಗಗಳಿಗೆ ತಿಳಿಸುವ ಸಾಧನವನ್ನಾಗಿ ಬಳಸಲೇಬೇಕು.

ನೂರಾರು ವೃತ್ತಿಗಳನ್ನಾಶ್ರಯಿಸಿ, ನೂರಾರು ಬಗೆಯ ರೀತಿ-ರಿವಾಜುಗಳಿರುವ ವೈವಿಧ್ಯಮಯ, ಆದರೆ ಅಷ್ಟೇ ಸಂಕೀರ್ಣವಾದ ಸಮಾಜದಲ್ಲಿ ಬದುಕುತ್ತಿದ್ದೇವೆ ನಾವು. ನೊಂದ ಜನರಿಗೆ ಮತ್ತು ಸಾಂತ್ವನ ಹೇಳುವ ಮನಸ್ಸಿರುವ ಜನರಿಗೆ ಸೇತುವೆಯಾಗುವ ಕೆಲಸ ಕಿರುತೆರೆ ಮಾಡಬೇಕು.

(ಲೇಖಕರು ಸಿನಿಮಾ, ಕಿರುತೆರೆ,ರಂಗಭೂಮಿ ಕಲಾವಿದೆ) (ಪ್ರತಿಕ್ರಿಯಿಸಿ: [email protected])