ಭೈರಪ್ಪ ಸಾಹಿತ್ಯ ಯಾನದ ರಸ ಕ್ಷಣಗಳು

ಒಂದು ಸಮಗ್ರ ದೃಷ್ಟಿಕೋನ ಬರಲು ಹೇಗೆ ಓದಿಕೊಳ್ಳಬೇಕು, ಕಲೆಗಳಲ್ಲಿ ಯಾವ ರೀತಿಯ ರುಚಿ ಮತ್ತು ಹಿನ್ನೆಲೆ ಇರಬೇಕು, ಇದನ್ನು ಕಲ್ಟಿವೇಟ್ ಮಾಡಲು ಸಾಧ್ಯವೇ ಅಥವಾ ಇದು ಹುಟ್ಟಿನಿಂದಲೇ ಬಂದಿರುತ್ತದೆಯೇ, ಕಾದಂಬರಿಗೆ ಚೌಕಟ್ಟು ಇರಬೇಕೆ? ಇತ್ಯಾದಿ ಸಂದೇಹಗಳನ್ನು ಭೈರಪ್ಪ ಅವರು, ತಮ್ಮದೇ ಅನುಭವದ ಆಧಾರದಲ್ಲಿ ತಮ್ಮ ಕಾದಂಬರಿಯ ಸನ್ನಿವೇಶಗಳ ಉದಾಹರಣೆಯ ಮೂಲಕ ನಿವಾರಿಸಿದರು. ಸಂವಾದದ ಕೆಲ ಝುಲಕ್​ಗಳು ಅವರದೇ ಮಾತುಗಳಲ್ಲಿ…

|ರಾಜಶೇಖರ ಜೋಗಿನ್ಮನೆ, ಶ್ಯಾಮಸುಂದರ್ ಕೆ.

ಡಾ. ಎಸ್. ಎಲ್. ಭೈರಪ್ಪ ಅವರೆಂದರೆ ಕಾದಂಬರಿಪ್ರಿಯರು ಪುಳಕಿತರಾಗುತ್ತಾರೆ. ಅವರ ಕಾದಂಬರಿಗಾಗಿ ಕಾಯುತ್ತಾರೆ. ಇದಕ್ಕೆ ಪ್ರಮುಖ ಕಾರಣ ನಿರೀಕ್ಷೆ ಹುಸಿಯಾಗುವುದಿಲ್ಲವೆಂಬ ನಂಬಿಕೆ. ಏಕೆಂದರೆ, ಅವರು ಭಾರತೀಯ ಲೇಖಕ. ತಮ್ಮ ಅಧ್ಯಯನ, ಅನುಭವ ಹಾಗೂ ಅಪಾರ ಕಲ್ಪನಾಶಕ್ತಿಯ ಪಾಕದಿಂದ ಅವರು ಪಾತ್ರಗಳನ್ನು ಸೃಷ್ಟಿಸುತ್ತಾರೆ. ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯ ಆಳ ಅಧ್ಯಯನ, ಬಾಲ್ಯದ ಸಂತೆಶಿವರದ ಬದುಕು ಮತ್ತು ವಿವಿಧ ಪ್ರದೇಶಗಳನ್ನು ಹತ್ತಿರದಿಂದ ಕಂಡ ಅನುಭವ ಇತ್ಯಾದಿ ಕಾರಣಗಳಿಂದಾಗಿ ಅವರ ಬರಹಗಳಿಗೊಂದು ಮಾಂತ್ರಿಕ ಶಕ್ತಿ ಪ್ರಾಪ್ತವಾಗಿದೆ. ಬಹುಶಃ ಭೈರಪ್ಪನವರ ಕಾದಂಬರಿಯ ಪಾತ್ರಗಳು ತಮ್ಮ ಬೇರುಗಳನ್ನು ಭಾರತೀಯ ನೆಲದಲ್ಲಿ, ನೆಲೆಯಲ್ಲಿ ಕಂಡುಕೊಳ್ಳುವ ಕಾರಣದಿಂದ ಕೂಡ ಮತ್ತಷ್ಟು ಆಪ್ತವಾಗಿ, ಅವರನ್ನು ಇತರೆಲ್ಲ ಬರಹಗಾರರಿಗಿಂತ ಮಹತ್ವದ ಸ್ಥಾನದಲ್ಲಿ ನಿಲ್ಲಿಸುತ್ತವೆ. ಇಂಥ ಮೇರು ಸಾಹಿತಿಯೊಂದಿಗೆ ಒಂದಿಡೀ ದಿನ ಕಳೆಯುವುದೆಂದರೆ ಯುವ ಬರಹಗಾರರ ಪಾಲಿಗಂತೂ ಅತ್ಯಂತ ಸಂಭ್ರಮದ ಕ್ಷಣ.

ಅಂಥ ಅವಕಾಶವೊಂದು ಭೈರಪ್ಪ ಅವರ ಹುಟ್ಟೂರಾದ ಸಂತೆಶಿವರದಲ್ಲಿ ಅನಾವರಣಗೊಂಡಿತ್ತು. ‘ಗೌರಮ್ಮ ಸ್ಮಾರಕ ಟ್ರಸ್ಟ್’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾಹಿತ್ಯದ- ಅದರಲ್ಲೂ ಕಾದಂಬರಿ ಬರವಣಿಗೆಯ-ಸೂಕ್ಷ್ಮಗಳು, ವಿಧಾನ, ಮಾದರಿಗಳು ಚರ್ಚೆಯಾದವು. ಸಂಗೀತ, ಕಲೆ, ರಾಷ್ಟ್ರೀಯತೆ, ರಾಜಕೀಯ, ಅಭಿವೃದ್ಧಿಯಂಥ ವಿಚಾರ ಗಳು ಕೂಡ ಅಗತ್ಯಕ್ಕೆ ತಕ್ಕಂತೆ ಹಾದುಹೋದವು. ಒಬ್ಬ ಲೇಖಕ ಇತರರಿಗಿಂತ ಹೇಗೆ ಭಿನ್ನ ಅಥವಾ ಭಿನ್ನ ಅಲ್ಲ ಎಂಬಲ್ಲಿಂದ ಶುರುವಾಗಿ, ಸೃಷ್ಟಿಶೀಲ ಲೇಖಕ ತತ್ವಶಾಸ್ತ್ರ ಓದಲೇಬೇಕೆ, ದರ್ಶನಶಾಸ್ತ್ರಗಳು ಎಷ್ಟರಮಟ್ಟಿಗೆ ಬೇಕಾಗುತ್ತವೆ ಎಂಬ ಸಂದೇಹಗಳನ್ನು ಈ ಸಂವಾದದಲ್ಲಿ ಸಮರ್ಥವಾಗಿ ನಿವಾರಿಸಿದರು.

ಮಂದ್ರ ಕಾದಂಬರಿಯ ಒಂದು ಸನ್ನಿವೇಶ. ಮೋಹನಲಾಲ ಅಯೋಗ್ಯ ಎಂದು ಭಾವಿಸಿ ಮಧುಮಿತಾ ಬೇರೆಯವನ ಹತ್ತಿರ ಕಲಿಯಲು ಹೋಗುತ್ತಾಳೆ. ಆತ ಮೋಹನ ಲಾಲನಿಗಿಂತ ದೊಡ್ಡ ವಿದ್ವಾಂಸ. ಆದರೆ ಸ್ವತಃ ಗಾಯಕರಲ್ಲ. ಸಂಗೀತದಲ್ಲಿ ಇರೋದೇ ಏಳು ಸ್ವರಗಳು. ಯಾರು ಹಾಡಿದರೂ ಅವೇ ಸ್ವರ. ಒಂದೊಂದು ಸ್ವರದಲ್ಲೂ ವ್ಯತ್ಯಾಸ ಇದೆ. ಅವೆಲ್ಲ ಸೇರಿ 22 ಶ್ರುತಿಗಳು. ಕೆಲವು ರಾಗಗಳಿಗೆ ಏಳು ಸ್ವರ, ಕೆಲವಕ್ಕೆ ಆರು, ಕೆಲವಕ್ಕೆ ಐದೇ ಸ್ವರ. ನಿಜವಾದ ಸಂಗೀತಗಾರ ಅದರೊಳಗೇನೇ ಪುನರಾವರ್ತನೆ ಇಲ್ಲದೇ ಎರಡೆರಡು ತಾಸು ಹಾಡಬಲ್ಲ. ಆದರೆ ಸಂಗೀತದ ಮಾಸ್ತರರಿಗೆ ಅವೆಲ್ಲ ತಿಳಿಯುವುದಿಲ್ಲ. ಸ್ವತಃ ಸಂಗೀತಗಾರನಲ್ಲಿ ಸೃಜನಶೀಲತೆ ಇದೆ. ಅದರ ಮರ್ಮ ಅವನಿಗೆ ಗೊತ್ತು, ಹೀಗಾಗಿ ಕೊನೆಗೆ ಮಧುಮಿತಾ ತಾನು ಕೆಟ್ಟು ಹೋದರೂ ಪರವಾಗಿಲ್ಲ, ಮೋಹನಲಾಲನ ಹತ್ತಿರವೇ ಸಂಗೀತ ಕಲಿಯಲು ನಿರ್ಧರಿಸುತ್ತಾಳೆ. ಏಕೆಂದರೆ ಅವನು ಕಲಾವಿದ. ಬರವಣಿಗೆಯ ತಂತ್ರಗಳನ್ನು ಯಶಸ್ವೀ ಸೃಜನಶೀಲ ಲೇಖಕನಿಂದಲೇ ತಿಳಿದುಕೊಳ್ಳುವುದು ಯಾಕೆ ಮುಖ್ಯ ಎಂಬುದಕ್ಕೆ ಡಾ. ಎಸ್. ಎಲ್. ಭೈರಪ್ಪ ಅವರು ನೀಡಿದ ಉದಾಹರಣೆಯಿದು. ಒಬ್ಬೊಬ್ಬ ಸೃಜನಶೀಲ ಲೇಖಕನ ವಿಧಾನಗಳು ಒಂದೊಂದು ಥರ. ನನ್ನ ವಿಧಾನದಲ್ಲೇ ಬೇರೆಯವರೂ ಬರೆಯಬೇಕೆಂದಿಲ್ಲ. ನೀವೂ ಅದೇ ವಿಧಾನ ಅನುಸರಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿಯೇ ಅವರು ಪ್ರಶ್ನೆಗಳನ್ನು ಕೈಗೆತ್ತಿಕೊಂಡರು.

# ಲೇಖಕ ಮಾತೃಭಾಷೆಯಲ್ಲಿ ಬರೆಯಬಹುದೋ ಅಥವಾ ಕಲಿತ ಭಾಷೆಯಿಂದ ಬರೆಯಬಹುದೋ? ಮನೋಧರ್ಮದಲ್ಲಿ ಇರುವ ವ್ಯತ್ಯಾಸವೇನು?

ಇದಕ್ಕೆ ಉತ್ತರ ಹಾಗೂ ಹೇಳಬಹುದು, ಹೀಗೂ ಹೇಳಬಹುದು. ಸಾಹಿತಿ ನಾ. ಕಸ್ತೂರಿ ಕೇರಳದವರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಮೈಸೂರಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಇತಿಹಾಸ ಅವರ ವಿಷಯ. ನಂತರ ಅವರು ಕನ್ನಡ ಕಲಿತು ಸೊಗಸಾಗಿ ಬರೆದರು. ಅದರಲ್ಲೂ ಹಾಸ್ಯ ಸಾಹಿತ್ಯ ಬರೆದರು. ಹಾಸ್ಯ ಸಾಹಿತ್ಯಕ್ಕೆ ಭಾಷೆಯ ಒಳಸುಳಿಗಳು, ಪನ್ ಹೇಗಿವೆ ಎಂಬುದೆಲ್ಲ ಚೆನ್ನಾಗಿ ಗೊತ್ತಿರಬೇಕು. ಅವರು ಅದನ್ನೆಲ್ಲ ತಿಳಕೊಂಡರು. ರಾಳ್ಳಪಳ್ಳಿ ಅನಂತ ಕೃಷ್ಣ ಶರ್ಮಾ ತೆಲುಗು ಭಾಷಿಕರು. ಸಂಗೀತದ ಬಗ್ಗೆ ಅವರಷ್ಟು ಚೆನ್ನಾಗಿ ಕನ್ನಡದಲ್ಲಿ ಬರೆದವರು ಇನ್ನಾರೂ ಇಲ್ಲ. ಹೀಗಾಗಿ ಕಲಿತ ಭಾಷೆಯಲ್ಲಿ ಕೂಡ ಬರೆಯಬಹುದು. ಆದರೆ ಕಷ್ಟ, ತುಂಬ ಪ್ರಯತ್ನ ಮಾಡಬೇಕು. ನಮಗೆಲ್ಲ ಇಂಗ್ಲಿಷ್ ಕಲಿತ ಭಾಷೆ. ನಾವು ಬಾಲ್ಯದಿಂದಲೇ ಇಂಗ್ಲಿಷ್ ಕಲಿತಿದ್ದರೂ ಅದರಲ್ಲಿ ಯಶಸ್ವಿಯಾಗಿ ಬರೆಯಲು ನಾನು ಗಮನಿಸಿದ ಪ್ರಕಾರ ಆಗುವುದಿಲ್ಲ. ಬೇರೆ ಭಾರತೀಯ ಭಾಷೆಯಲ್ಲಾದರೆ ಬರೆಯಬಹುದು. ಏಕೆಂದರೆ ಇಲ್ಲಿ ಸಂಸ್ಕೃತಿಯ ಪ್ರಶ್ನೆ ಇದೆ. ಇಂಗ್ಲೀಷಿನ ಮರ್ಮ ನಮಗೆ ಗೊತ್ತಿರುವುದಿಲ್ಲ. ಅದು ಗೊತ್ತಾಗಬೇಕೆಂದರೆ ಯುರೋಪಿಯನ್ ಭಾಷೆಗಳ ಮರ್ಮ ಗೊತ್ತಿರಬೇಕು. ಗ್ರೀಕ್ ಮತ್ತು ಲ್ಯಾಟಿನ್ ಗೊತ್ತಿರಬೇಕು. ಇಂಗ್ಲೀಷಿನ ಛಾಯೆಗಳು ಬದಲಾಗುತ್ತಲೇ ಇರುತ್ತವೆ. ನಮಗೆ ಗೊತ್ತಿರುವ ಇಂಗ್ಲಿಷ್ ವಿಕ್ಟೋರಿಯನ್ ಕಾಲದ್ದು, ಇವತ್ತಿನ ಇಂಗ್ಲಿಷ್ ಅಲ್ಲ. ಅಮೆರಿಕನ್ ಇಂಗ್ಲೀಷಂತೂ ನಮ್ಮದಲ್ಲವೇ ಅಲ್ಲ. ಹೀಗಾಗಿ ನಮ್ಮ ಭಾಷೆಯಲ್ಲಿ ನಾವು ಬರೆದರೇ ನಮಗೆ ಸಾಧ್ಯ. ನನ್ನ ಕನ್ನಡ ಈ ಪ್ರದೇಶದ ಕನ್ನಡ. ತೆಂಗಿನಸೀಮೆಯ ಕನ್ನಡ. ಇದು ನನಗೆ ಸಹಜವಾದ ಕನ್ನಡ. ಮೈಸೂರಿನಲ್ಲಿ ಸುಮಾರು 45 ವರ್ಷದಿಂದ ಇದ್ದೇನೆ. ಮೈಸೂರಿನ ಕನ್ನಡದಲ್ಲಿ ಬರೆಯಬಲ್ಲೆ. ಆದರೆ ಹಳ್ಳಿ ಭಾಷೆ ಬೇಕು ಅಂದರೆ ನನಗೆ ಈ ಸಂತೆಶಿವರ ಸುತ್ತಮುತ್ತಲ ಭಾಷೆಯೇ ಬರುತ್ತೆ ಹೊರತೂ ಮೈಸೂರು ಸುತ್ತಲ ಹಳ್ಳಿಯ ಭಾಷೆ ಬರಲ್ಲ. ಹೀಗಾಗಿ ಲೇಖಕನಿಗೆ ಮಾತೃಭಾಷೆಯಷ್ಟು ಬೇರಾವ ಭಾಷೆಯೂ ಪರಿಣಾಮ ಬೀರುವುದಿಲ್ಲ.

# ಒಬ್ಬ ಲೇಖಕ ಇತರರಿಗಿಂತ ಹೇಗೆ ಭಿನ್ನ ಅಥವಾ ಭಿನ್ನ ಅಲ್ಲ?

ಒಬ್ಬೊಬ್ಬ ಮನುಷ್ಯ ಒಂದೊಂದು ಥರ. ಅವರವರ ಜೀವನಾನುಭವ ಬೇರೆ ಬೇರೆ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿ ಕೂಡ ಬೇರೆ. ಹೀಗಾಗಿ ಯಾವ ಥರದ ವ್ಯತ್ಯಾಸ, ಸಾಮ್ಯ, ಭಿನ್ನತೆ ಇದೆ ಎಂದು ಹೇಳಲು ಆಗುವುದಿಲ್ಲ. ಮನಶ್ಶಾಸ್ತ್ರಜ್ಞರು ಹೇಳಬಹುದೇನೋ! ಅದು ಅವರವರ ಅನುಭವ ಹಾಗೂ ಅನುಭವವನ್ನು ನೋಡುವ ಅಧ್ಯಯನವನ್ನು ಅವಲಂಬಿಸಿರುತ್ತದೆ. ಅಧ್ಯಯನ ಬಹಳ ಮುಖ್ಯ. ತತ್ವಶಾಸ್ತ್ರ ಓದಿದ್ದರೆ ಒಂದು ಥರ, ಸೈಕಾಲಜಿ ಓದಿದರೆ ಇನ್ನೊಂದು ಥರ. ಇನ್ನಾವುದೋ ಸಾಹಿತ್ಯದ ಪಂಥವನ್ನು ಹೆಚ್ಚಾಗಿ ಓದಿದ್ದರೆ ಅದೇ ಆಗಿಹೋಗಿಬಿಟ್ಟಿರುತ್ತದೆ. ನಮ್ಮಲ್ಲಿ ಈಗ ಹೆಚ್ಚಾಗಿ ಪ್ರಭಾವ ಬೀರಿರುವವರು ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯದ ಪಾಠ ಮಾಡುವ ಇಂಗ್ಲಿಷ್ ಮೇಷ್ಟ್ರುಗಳು. ಅವರಿಗೆ ಯಾವುದೋ ಸ್ಕಾಲರ್​ಶಿಪ್ ಸಿಕ್ಕು ಕೇಂಬ್ರಿಜ್​ಗೆ ಹೋಗ್ತಾರೆ, ಎರಡು ವರ್ಷ ಅಲ್ಲಿ ಓದಿಕೊಂಡು ಬರುತ್ತಾರೆ. ಅವರಿಗೆ ಯಾವುದೋ ಸಾಹಿತ್ಯದ ಸಿದ್ಧಾಂತಗಳಿರುತ್ತವೆ. ಅದನ್ನೇ ಇಲ್ಲಿ ಪಾಠ ಮಾಡುತ್ತಾರೆ. ಇಲ್ಲಿಯ ಉದಯೋನ್ಮುಖ ಬರಹಗಾರ ಆ ಪ್ರಭಾವಕ್ಕೆ ಒಳಗಾದರೆ ಅದೇ ರೀತಿ ಬರೆಯತೊಡಗುತ್ತಾನೆ. ಹತ್ತು ವರ್ಷದ ಹೊತ್ತಿಗೆ ಈ ಮೇಷ್ಟ್ರು ನಿವೃತ್ತಿಯಾಗುತ್ತಾರೆ. ಅಷ್ಟೊತ್ತಿಗೆ ಇನ್ನೊಬ್ಬ ಆಕ್ಸ್ಫರ್ಡ್​ಗೆ ಹೋಗಿ ಓದಿಕೊಂಡು ಬಂದು, ಅದಲ್ಲ, ಇದು… ಸಾಹಿತ್ಯ ಅಂದರೆ ಹೀಗೇ ಇರಬೇಕು, ಹಿಂದೆ ಇದ್ದವರು ಪ್ರಯೋಜನ ಇಲ್ಲ ಎನ್ನುತ್ತಾರೆ. ಹೀಗೇ ಎಷ್ಟೋ ಪ್ರಭಾವಗಳು ಆಗುತ್ತವೆ. ಸಾಹಿತ್ಯ, ಸಾಹಿತ್ಯದ ಇತಿಹಾಸವನ್ನು ಸ್ವತಃ ಕಂಡವರಿಗೆ ಇದೆಲ್ಲ ಗೊತ್ತು.

ಕವಿತೆ- ಕಾದಂಬರಿ

ಕವಿತೆ ಬರೆಯುವುದಕ್ಕೂ ಕಥೆ ಕಾದಂಬರಿ ಬರೆಯುವುದಕ್ಕೂ ಮನೋಧರ್ಮದ ವ್ಯತ್ಯಾಸವಿದೆ. ಕವಿತೆ ಪ್ರತಿಮೆಗಳ ಮೂಲಕ ಬರುವಂಥ ಶುದ್ಧ ಕಲ್ಪನೆ. ಅಲ್ಲಿ ವಾಸ್ತವ ಪ್ರಜ್ಞೆ ಕಡಿಮೆ. ಆದರೆ ಕಾದಂಬರಿಯಲ್ಲಿ ಅದು ಜಾಸ್ತಿ. ಅದಕ್ಕೆ ದೊಡ್ಡ ಕ್ಯಾನ್​ವಾಸ್ ಇರುತ್ತದೆ. ನಾನು ಬರೆದಿದ್ದರಲ್ಲಿ ಐತಿಹಾಸಿಕ ಕಾದಂಬರಿಗಳು ಜಾಸ್ತಿ. ಉದಾಹರಣೆಗೆ ಪರ್ವ,- ವೇದಕಾಲದ ಐತಿಹಾಸಿಕ ಕಾದಂಬರಿ. ಮಧ್ಯಕಾಲೀನ ಐತಿಹಾಸಿಕ ಕಾದಂಬರಿಯೆಂದರೆ ಸಾರ್ಥ. ಆವರಣ ಕೂಡ ಮಧ್ಯ ಕಾಲೀನ, ತಂತು ಈ ಕಾಲದ ಐತಿಹಾಸಿಕ ಕಾದಂಬರಿ. ಹೀಗಾಗಿ ಕಾದಂಬರಿ ನನ್ನ ಮನೋಧರ್ಮಕ್ಕೆ ಹೊಂದಿಕೊಳ್ಳುತ್ತದೆ.

ವಿಮರ್ಶಕ- ವಿದ್ವಾಂಸ -ಸೃಜನಶೀಲತೆ

ಸಾಹಿತ್ಯ ಕೃತಿಯನ್ನು ಸಹೃದಯತೆಯಿಂದ ಓದಿ ಇದು ರಸಸ್ಥಾನ, ಇದು ಇದರ ಗುಣ ಎಂದು ಅರ್ಥ ಮಾಡಿಕೊಂಡು ಬರೆಯುವವನು ನಿಜವಾದ ವಿದ್ವಾಂಸ. ವಿಮರ್ಶಕ ಶಬ್ದ ಹಿಂದೆ ನಮ್ಮಲ್ಲಿರಲಿಲ್ಲ. ಕಾಳಿದಾಸನ ಕೃತಿಗಳ ಮೇಲೆ ಮಲ್ಲಿನಾಥ ಬರೆದ ವಿಮರ್ಶೆ ಅಧಿಕೃತವಾದುದು. ಅವನು ಆಧುನಿಕ ವಿಮರ್ಶಕ ಅಲ್ಲ. ಆಧುನಿಕ ವಿಮರ್ಶಕರು ಪಾಶ್ಚಾತ್ಯದಿಂದ ಪ್ರಭಾವಿತರಾದವರು. ನನ್ನ ಪ್ರಕಾರ ವಿದ್ವತ್ತು ಮತ್ತು ಸೃಜನಶೀಲ ಬರಹಗಳಿಗೆ ಪರಸ್ಪರ ವಿರೋಧ, ಜಗಳ ಇರಬಾರದು. ವಿದ್ವಜ್ಜನರು ಒಂದು ವಾತಾವರಣ ಸೃಷ್ಟಿಸಿರುತ್ತಾರೆ. ಅದು ಸೃಜನಶೀಲ ಬರಹಗಾರರಿಗೆ ಒಂದು ಗಾಂಭೀರ್ಯವನ್ನು ಕೊಡುತ್ತದೆ. ಒಂದು ಮಟ್ಟದ ವಿದ್ವತ್ತು ಬರಹಗಾರನಿಗೂ ಬೇಕಾಗುತ್ತದೆ. ಎಷ್ಟು ಬೇಕು, ಹೇಗೆ ಬೇಕು ಎನ್ನುವುದು ಕಥಾವಸ್ತುವನ್ನು ಅವಲಂಬಿಸಿರುತ್ತದೆ. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ವಿದ್ವತ್ತು ಇರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲದಕ್ಕೂ ಅಂಬೇಡ್ಕರ್, ಗಾಂಧಿ, ಲೋಹಿಯಾ, ನೆಹರೂ ಹೇಳಿದ್ದೇ ಅಂತಿಮ ಎಂಬ ಉಡಾಫೆ ಬಂದುಬಿಟ್ಟಿದೆ. ಇದು ಸೃಜನಶೀಲ ಬರಹಗಾರನಿಗೆ ಪೂರಕವಾದ ವಾತಾವರಣ ಅಲ್ಲ. ಆದರೂ ಒಬ್ಬ ಗಂಭೀರ ಬರಹಗಾರನಿಗೆ ಮಾರ್ಗದರ್ಶನ ಮಾಡುವಂಥವರು ಈಗಲೂ ಅಲ್ಲಲ್ಲಿ ಇದ್ದಾರೆ ಎನ್ನುವುದು ಸಮಾಧಾನಕರ ಸಂಗತಿ. ಸಂವಾದದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ಯುವ ಬರಹಗಾರರು ಪಾಲ್ಗೊಂಡಿದ್ದರು. 60 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲ ಪ್ರಶ್ನೆಗಳಿಗೂ ಭೈರಪ್ಪ ಅವರು ಸಮರ್ಪಕ ಹಾಗೂ ಸಾವಧಾನದಿಂದ ಉತ್ತರಿಸಿದರು.