More

    ವೇದ ದರ್ಶನ 92| ವೇದಗಳಲ್ಲಿ ಏಕದೇವಭಾವ

    ಸೃಷ್ಟಿ, ಸ್ಥಿತಿ, ಲಯಗಳೂ ಒಂದಕ್ಕೊಂದು ಹೇಗೆ ಸಂಬಂಧಿಸಿವೆ? ಯಾವುದಕ್ಕಾಗಿ ಯಾವುದು ಇದೆ ಎಂದರೆ: 1) ಸೃಷ್ಟಿಗಾಗಿ ಸೃಷ್ಟಿಯಲ್ಲ – ಸ್ಥಿತಿಗಾಗಿ ಸೃಷ್ಟಿ, 2) ಲಯಕ್ಕಾಗಿ ಸೃಷ್ಟಿಯಲ್ಲ – ಸ್ಥಿತಿಗಾಗಿ ಲಯ, 3) ಸ್ಥಿತಿಗಾಗಿ ಸ್ಥಿತಿ; ಸ್ಥಿತಿಗಾಗಿ ಸೃಷ್ಟಿ; ಸ್ಥಿತಿಗಾಗಿ ಲಯ. – ಅಂದರೆ ದೇವರು ಎಲ್ಲರನ್ನೂ ರಕ್ಷಿಸಲು, ರಕ್ಷಕತ್ತ್ವವನ್ನೇ ಪ್ರಧಾನವನ್ನಾಗಿ ಹೊಂದಿ, ಲಯದಿಂದಲೂ, ಪುನಃಸೃಷ್ಟಿಯಿಂದಲೂ, ಜಗದ್ಧಿತವನ್ನೇ ಆಚರಿಸುತ್ತಿದ್ದಾನೆಂಬುದು ಭಾಗವತದ ಮಾರ್ವಿುಕ ಕಥೆಯ ಒಳ ಮರ್ಮ, ತಾತ್ಪರ್ಯವೇ ವಿನಾ ದೇವತಾಂತರ ದೂಷಣವಲ್ಲ.

    ವೇದ ದರ್ಶನ 92| ವೇದಗಳಲ್ಲಿ ಏಕದೇವಭಾವಒಂದು ಮಣಿಹಾರದಲ್ಲಿ ಎಲ್ಲ ಬಣ್ಣದ ಸಮಾಕಾರದ ಮಣಿಗಳಿದ್ದರೂ, ದೊಡ್ಡದಾದ ‘‘ನಾಯಕಮಣಿ’’ ಎಂಬುದೊಂದಿದೆಯಷ್ಟೆ. ಇದು ಮಧ್ಯದಲ್ಲಿ ಬರುವಂತೆ ಹಾರವನ್ನು ಧರಿಸುವುದು ಚೆನ್ನಾಗಿ ಕಾಣುವುದು. ಪರಮಾತ್ಮನ ಮುಖಗಳಲ್ಲಿ ಎಲ್ಲವೂ ಮುಖ್ಯವಾದರೂ, ಸಂಕ್ಷೇಪದಲ್ಲಿ ಸಮಗ್ರವಾಗಿ ಧ್ಯಾನಿಸಲು, ಎಲ್ಲವನ್ನೂ ಪ್ರತಿನಿಧಿಸುವ ಒಂದಾನೊಂದನ್ನು ಆರಿಸಿಕೊಳ್ಳಬೇಕಾಗುವುದು. ಈ ಆರಿಸುವುದು ಹೇಗೆ? ಎಂಬ ವಿಷಯಕ್ಕೆ ಈ ಕೆಳಕಂಡ ಋಕ್ಸೂಕ್ತವಿರುವುದು. (10-121):

    ಈ ಸೂಕ್ತದ ಹತ್ತು ಮಂತ್ರಗಳಲ್ಲಿ ಪ್ರತಿಯೊಂದರ ಕೊನೆಯಲ್ಲೂ ‘‘ಕಸ್ಮೈ ದೇವಾಯ ಹವಿಷಾ ವಿಧೇಮ’’ ಎಂಬ ವಾಕ್ಯವಿರುವುದು. ಇದು ಪ್ರಶ್ನೆಯೂ, ಉತ್ತರವೂ ಏಕಕಾಲಕ್ಕೆ ಆಗಿರುವುದು. ಹವಿಸ್ಸೆಂದರೆ ನಮ್ಮ ಆತ್ಮಾತ್ಮೀಯ ಅರ್ಪಣೆಯ ಸಾಂಕೇತಿಕವಾದ ಆಜ್ಯ ಸಮರ್ಪಣೆ ಒಂದು ಅರ್ಥ: ಹೀಗೆ ಸೂಕ್ತದ ಒಂದೊಂದು ಮಂತ್ರದಲ್ಲೂ ಭಗವತ್ಸ್ವರೂಪದ ವಿಶೇಷ ವರ್ಣನೆ ಇದ್ದು, ಕೊನೆಯ ಪ್ರಶ್ನೆಗೆ ‘‘ಇವನಿಗೆ, ಇಂತಹ ಪರವಸ್ತುವಿಗಲ್ಲದೆ ಬೇರೆ ಯಾರಿಗೆ ಆತ್ಮಾರ್ಪಣೆ?’’ ಎಂಬ ದಿಟ್ಟ ಉತ್ತರದ ಧ್ವನಿಯೂ ಇದೆ. ವೇದಗಳಲ್ಲಿ ಏಕದೇವಭಾವಕ್ಕೆ ಶ್ರೇಷ್ಠ ನಿದರ್ಶನವಾಗಿರುವ ಈ ಸೂಕ್ತದಲ್ಲಿ ಅಸಂಖ್ಯೇಯ ಧ್ವನಿಗಳಿರುವುದನ್ನು ಗಮನಿಸಬಹುದು. ಇದರ ಸ್ಥೂಲ ಸಂಗ್ರಹವನ್ನು ಹೀಗೆ ಮಾಡಬಹುದು:

    ‘‘ಸಕಲ ಚರಾಚರ ಸೃಷ್ಟಿಗೂ ಪೂರ್ವದಲ್ಲಿ ಪರಮಾತ್ಮನು, ತಾನೊಬ್ಬನೇ ಅದ್ವಿತೀಯನಾಗಿ ಇದ್ದನು. ಪ್ರಳಯಕಾಲದಲ್ಲಿ ಹಾಳಾಗಿಯೇ ಹೋಗಬಹುದಾಗಿದ್ದ ಈ ಜಗತ್ತನ್ನು ಚಿನ್ನದ ಅದುರಿನಂತೆ ತನ್ನ ಗರ್ಭದಲ್ಲಿಯೇ ಇಟ್ಟುಕೊಂಡು ರಕ್ಷಿಸಿ, ಮುಂದೆ ಸೂಕ್ತ ಕಾಲದಲ್ಲಿ ಹೊರತಂದು ಪೃಥಿವೀದ್ಯುಲೋಕಾದಿಗಳನ್ನು ತಾನೇ ಧರಿಸಿ, ಭರಿಸಿ, ಎಲ್ಲ ವಿಧದಿಂದಲೂ ರಕ್ಷಕನಾಗಿ, ಸರ್ವಜಗತ್ಪತಿಯಾಗಿ, (ಪ್ರಜಾಪತಿಯಾಗಿ) ‘ಹಿರಣ್ಯಗರ್ಭ’ನಾದ ಈ ‘ಯಾವನೋ ಒಬ್ಬನಿಗೆ’ (ಇವನಿಗಲ್ಲದೆ ಮತ್ತೆ ಯಾರಿಗೆ?) ನಮ್ಮನ್ನು ನಾವು ಹವಿಸ್ಸಿನ ರೂಪದಲ್ಲಿ ಅರ್ಪಿಸಿಕೊಳ್ಳೋಣ. (ಇದಲ್ಲದೆ ಮತ್ತೇನು ಪ್ರತಿಫಲ ಕೊಡಬಲ್ಲೆವು ಅವನ ಈ ಅನುಗ್ರಹ ವಿಶೇಷಕ್ಕೆ?) ಯಾವನು ನಮಗೆ ಚೈತನ್ಯ ಕೊಟ್ಟಿರುವನೋ, ನಮ್ಮೊಳಗೆ ತನ್ನನ್ನೇ ದಾನ ಮಾಡಿಕೊಂಡು ಅಂತರ್ಯಾಮಿ ಯಾಗಿರುವನೋ, ಯಾವನ ಮಾರ್ಗದರ್ಶನರೂಪವಾದ ಆಜ್ಞೆಯನ್ನು ಎಲ್ಲ ಜೀವಿಗಳೂ ದೇವತೆಗಳೂ ಪಾಲಿಸುವರೋ, ಅಮೃತವೂ ಮೃತ್ಯುವೂ ಯಾವನ ನೆರಳುಗಳೋ, ಇಂತಹ ಈ ಯಾವನೋ ಒಬ್ಬನಿಗೆ’’ (ಇವನಿಗಲ್ಲದೆ ಮತ್ತೆ ಯಾರಿಗೆ) ಆತ್ಮಾರ್ಪಣದ ಹೊರತು ಕೊಡಲು ನಮ್ಮಲ್ಲೇನುಂಟು? (ಇದನ್ನಾದರೂ ನಾವು ಮಾಡದಿದ್ದರೆ ಕೃತಘ್ನರಲ್ಲವೇ?)

    ಏನು ಮಹಾ ಉಪಕಾರ ಮಾಡಿದ್ದಾನೆ ಈ ಯಾವನೋ ಒಬ್ಬನು? ಎಂದು ಕೇಳಿದರೆ; ಎಷ್ಟಾದರೂ, ನಮಗೆ ನೋಡಲು ಕಣ್ಣನ್ನೂ ಉಸಿರಾಡಲು ಉಸಿರನ್ನೂ ಕೊಟ್ಟನಲ್ಲವೆ? ಮನುಷ್ಯರಿರಲಿ, ಚತುಷ್ಪಾದಿಗಳಾದ ಪಶುಗಳೂ ಸಹ ಈ ವರಗಳನ್ನು ಪಡೆದವೆಂದಮೇಲೆ (ನಿರ್ವ್ಯಾಜವಾದ, ವಿಶ್ವವ್ಯಾಪಿಯಾದ, ಅವನಿಗೆ ಸಹಜವಾದ ಈ ಕರುಣೆಯನ್ನು ಏನೆಂದು ಕೊಂಡಾಡೋಣ?) ಈ ಒಬ್ಬನಿಗೆ ಆತ್ಮಾರ್ಪಣೆಗಿಂತ ಮತ್ತೇನು ಮಾಡಬಲ್ಲೆವು? (ಉಸಿರನ್ನು ಅವನೇ ಕೊಟ್ಟದ್ದರಿಂದ, ನಮ್ಮದೆಂಬುದು ಏನೂ ಇಲ್ಲವಷ್ಟೆ?) ಹಿಮದಿಂದ ಮುಚ್ಚಿದ ಬೆಟ್ಟಗಳೂ, ರಸದಿಂದ ತುಂಬಿದ ನದಿಗಳೂ, ಈ ನದಿಗಳಿಂದ ತುಂಬಿದ ಸಮುದ್ರಗಳೂ, ಈ ದೇವದೇವೋತ್ತಮನಾದ ಯಾವನೋ ಒಬ್ಬನ ಶರೀರದಲ್ಲಿ ಸಣ್ಣ ಅಂಶಗಳಾಗಿ, ಅವನ ನಿರತಿಶಯ ಮಹಿಮೆಗೆ ಸಾಕ್ಷಿಗಳು. (ಇಷ್ಟು ದೊಡ್ಡ ಒಬ್ಬನಿಗೆ ಏನನ್ನು ತಾನೇ ಕೊಡಬಲ್ಲೆವು, ಎಂದು ಸಂಕೋಚಭಾವ.)

    (ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts