ಐಟಿ ಲೋಕಕ್ಕೆ ಹೊಳಪಿನ ಅಂಚು ಎಡ್ಜ್ ಕಂಪ್ಯೂಟಿಂಗ್

ಬಹಳ ಹಿಂದೆ, ಕಂಪ್ಯೂಟರುಗಳನ್ನು ಬಳಸಿ ಮಾಡಬಹುದಾದ ಕೆಲಸಗಳೆಲ್ಲ ನಿರ್ದಿಷ್ಟ ಕಂಪ್ಯೂಟರಿಗೆ ಮಾತ್ರವೇ ಸೀಮಿತವಾಗಿರುತ್ತಿದ್ದವು. ಅಂದರೆ, ಬಳಕೆದಾರರು ತಮ್ಮ ಕಂಪ್ಯೂಟರಿನ ಎದುರಿಗಿದ್ದರಷ್ಟೇ ಅದರ ಉಪಯೋಗ ಪಡೆದುಕೊಳ್ಳುವುದು ಸಾಧ್ಯವಿತ್ತು. ಆಮೇಲೆ, ವೈಯಕ್ತಿಕ ಕಂಪ್ಯೂಟರುಗಳು ಬಂದಾಗ, ಕಂಪ್ಯೂಟರುಗಳು ನಮ್ಮ ಮನೆಗೇ ಬಂದವು. ಅಂತರ್ಜಾಲ ರೂಪುಗೊಂಡ ಮೇಲಂತೂ ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರುಗಳ ನಡುವೆ ಸಂಪರ್ಕ ಸುಲಭಸಾಧ್ಯವಾಯಿತು.

ಸದ್ಯ ಕಂಪ್ಯೂಟರಿನಲ್ಲಿ ನಮ್ಮ ವ್ಯವಹಾರದ ಬಹುಪಾಲು ಅಂತರ್ಜಾಲದ ಮೂಲಕವೇ ನಡೆಯುತ್ತದೆ. ಇ-ಮೇಲ್ ಸಂದೇಶಗಳಿರಲಿ, ಉಳಿಸಿಟ್ಟ ಕಡತಗಳೇ ಇರಲಿ – ಯಾವುದೇ ಕಂಪ್ಯೂಟರ್ ಅಥವಾ ಮೊಬೈಲಿನಿಂದ ಎಲ್ಲಿ ಬೇಕಾದರೂ ನಾವು ಅವನ್ನು ಪಡೆದುಕೊಳ್ಳುವುದು ಸಾಧ್ಯವಾಗಿದೆ. ಕಂಪ್ಯೂಟರಿನಲ್ಲಿ ಜೀಬಿಗಟ್ಟಲೆ ಹಾಡುಗಳನ್ನು, ಸಿನಿಮಾಗಳನ್ನು ಉಳಿಸಿಟ್ಟುಕೊಳ್ಳುತ್ತಿದ್ದವರು ಇಂದು ಅದನ್ನೆಲ್ಲ ಅಂತರ್ಜಾಲದ ಮೂಲಕವೇ, ತಮಗೆ ಬೇಕೆನಿಸಿದಾಗ, ಪಡೆದುಕೊಳ್ಳುತ್ತಿದ್ದಾರೆ.

ಇದನ್ನೆಲ್ಲ ಸಾಧ್ಯವಾಗಿಸಿರುವುದು ಕ್ಲೌಡ್ ಕಂಪ್ಯೂಟಿಂಗ್ ಎಂಬ ಪರಿಕಲ್ಪನೆ. ನಮಗೆ ಬೇಕಾದ ತಂತ್ರಾಂಶ ಹಾಗೂ ಮಾಹಿತಿಯನ್ನೆಲ್ಲ ನಮ್ಮದೇ ಕಂಪ್ಯೂಟರಿನಲ್ಲಿ ಇಟ್ಟುಕೊಂಡಿರುವ ಬದಲು, ಹೆಚ್ಚು ಸಕ್ಷಮವಾದ ಬೇರೊಂದು ಸ್ಥಳದಲ್ಲಿ ಅದನ್ನೆಲ್ಲ ಉಳಿಸಿಟ್ಟು ನಮಗೆ ಬೇಕಾದಾಗ ಅಂತರ್ಜಾಲದ ಮೂಲಕ ಪಡೆದು ಬಳಸಿಕೊಳ್ಳುವುದು ಈ ಪರಿಕಲ್ಪನೆಯ ಹೂರಣ. ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ನಾವೆಲ್ಲ ಬಳಸಿಕೊಳ್ಳುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಇದರ ಹೆಗ್ಗಳಿಕೆ.

ಏಳೆಂಟು ವರ್ಷಗಳ ಹಿಂದೆ ಫೇಸ್​ಬುಕ್​ಗೆ ಸೇರಿಸಿದ್ದ ಚಿತ್ರಗಳು ಇವತ್ತು ಕೊಂಡ ಮೊಬೈಲಿನಲ್ಲೂ ಥಟ್ಟನೆ ಕಾಣಿಸಿಕೊಳ್ಳುತ್ತವಲ್ಲ, ಅದರ ಹಿಂದಿರುವುದು ಇದೇ ಪರಿಕಲ್ಪನೆ. ಗೂಗಲ್ ಡ್ರೖೆವ್​ನಲ್ಲಿ ಕಡತಗಳನ್ನು ಉಳಿಸಿದಾಗ, ಬೇರೆಬೇರೆ ಸಾಧನಗಳ ಮೂಲಕ ಜಿ-ಮೇಲ್ ಖಾತೆ ಬಳಸಿದಾಗೆಲ್ಲ ಕೆಲಸಮಾಡುವುದೂ ಇದೇ. ನಮ್ಮದೇ ಸಾಧನಗಳ ಬದಲು ಬೇರೆಲ್ಲೋ ಇರುವ ಶೇಖರಣಾ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುತ್ತೇವಲ್ಲ, ಆ ಹೊರಗಿನ ಭಾಗವನ್ನು ಆಕಾಶದ ಮೋಡಕ್ಕೆ ಹೋಲಿಸಿ ಕ್ಲೌಡ್ ಎಂದು ಕರೆಯಲಾಗಿದೆ. ಇಷ್ಟೆಲ್ಲ ಅನುಕೂಲಗಳ ಜತೆ ಕ್ಲೌಡ್ ಕಂಪ್ಯೂಟಿಂಗ್ ಬಳಸುವಾಗ ಕೆಲ ಸವಾಲುಗಳೂ ಎದುರಾಗುತ್ತವೆ. ಕ್ಲೌಡ್ ಬಳಸಿ ನಾವು ಕೆಲಸ ಮಾಡಲು ಹೊರಟಾಗ, ನಮ್ಮ ಕಂಪ್ಯೂಟರ್ ಅಥವಾ ಮೊಬೈಲು ಪ್ರತಿಬಾರಿಯೂ ಪ್ರಪಂಚದ ಬೇರಾವುದೋ ಮೂಲೆಯಲ್ಲಿರುವ ಕ್ಲೌಡ್ ಸೇವಾದಾರರ ಕಂಪ್ಯೂಟರಿನ ಜತೆ ವ್ಯವಹರಿಸಬೇಕಾಗುತ್ತದೆ. ಬ್ರೌಸರಿನಲ್ಲಿ ಜಾಲತಾಣದ ವಿಳಾಸ ಹಾಕಿದ ಮೇಲೆ ಆ ತಾಣದಲ್ಲಿರುವ ಮಾಹಿತಿ ನಮಗೆ ಕಾಣಲು ಕೊಂಚ ಸಮಯ ಬೇಕಾಗುತ್ತದಲ್ಲ, ಆ ವಿಳಂಬಕ್ಕೆ (‘ಲೇಟೆನ್ಸಿ’) ಇದೇ ಕಾರಣ.

ನಾವು ನೋಡಲು ಹೊರಟ ಯಾವುದೋ ಜಾಲತಾಣ ತೆರೆದುಕೊಳ್ಳುವುದು ಅರೆಕ್ಷಣ ತಡವಾದರೆ ಪರವಾಗಿಲ್ಲ, ನಿಜ. ಆದರೆ ನಮ್ಮ ಮೊಬೈಲಿನ ಸುರಕ್ಷತಾ ದೃಢೀಕರಣ ತಡವಾದರೆ ಅದು ಅಷ್ಟೇನೂ ಒಳ್ಳೆಯದಲ್ಲ. ಈಚೆಗೆ ಅಮೆಜಾನ್ ಎಕೋ ಹಾಗೂ ಗೂಗಲ್ ಹೋಮ್ಂತಹ ಸ್ಮಾರ್ಟ್ ಸಹಾಯಕ ಸಾಧನಗಳು ಜನಪ್ರಿಯವಾಗುತ್ತಿವೆಯಲ್ಲ, ಅವು ಹೆಚ್ಚೂ ಕಡಿಮೆ ಎಲ್ಲ ಕೆಲಸಗಳಿಗೂ ಅಂತರ್ಜಾಲವನ್ನೇ ಬಳಸುತ್ತವೆ. ನಾವು ಕೇಳಿದ ಪ್ರಶ್ನೆಗೆ ಅವು ಥಟ್ ಅಂತ ಉತ್ತರಿಸಬೇಕಾದರೆ ಅಲ್ಲಿಯೂ ಈ ವಿಳಂಬ ಜಾಸ್ತಿಯಿರಬಾರದು.

ಕಂಪ್ಯೂಟರು – ಮೊಬೈಲುಗಳ ಜತೆಗೆ ಇನ್ನಿತರ ವಿದ್ಯುನ್ಮಾನ ಸಾಧನಗಳು, ಯಂತ್ರಗಳು, ವಾಹನಗಳು ಎಲ್ಲವೂ ಅಂತರ್ಜಾಲದ ಭಾಗವಾಗಿ ಬೆಳೆದು ವಸ್ತುಗಳ ಅಂತರ್ಜಾಲ (ಇಂಟರ್​ನೆಟ್ ಆಫ್ ಥಿಂಗ್ಸ್) ರೂಪುಗೊಳ್ಳುತ್ತಿದೆಯಲ್ಲ – ಅದರ ಕೆಲಸಗಳಲ್ಲೂ ವಿಳಂಬವನ್ನು ಸಹಿಸುವುದು ಕಷ್ಟ. ಸ್ವಯಂಚಾಲಿತ ಕಾರಿಗೆ ಯಾರೋ ಅಡ್ಡಬಂದ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೀರ್ವನಿಸಲು ಅದು ಬೇರಾವುದೋ ಕಂಪ್ಯೂಟರಿನ ಉತ್ತರಕ್ಕಾಗಿ ಕಾಯುತ್ತಿದ್ದರೆ ಅಲ್ಲಿ ಅಪಘಾತವೇ ಆಗಿಬಿಡಬಹುದಲ್ಲ!

ಅಷ್ಟೇ ಅಲ್ಲ, ಒಂದು ಮನೆ ಅಥವಾ ಕಾರ್ಖಾನೆಯಲ್ಲಿರುವ ಸಕಲ ಸಾಧನಗಳೂ ಅಂತರ್ಜಾಲ ಬಳಸಲು ಶುರುಮಾಡಿದರೆ ಅವೆಲ್ಲದಕ್ಕೂ ಸಾಕಾಗುವಷ್ಟು ಸಾಮರ್ಥ್ಯದ ಸಂಪರ್ಕ ಒದಗಿಸುವುದೂ ಕಷ್ಟವೇ. ಇನ್ನು ಅವೆಲ್ಲ ಬೇರಾವುದೋ ಕಂಪ್ಯೂಟರ್ ಹೇಳಿದ್ದನ್ನು ಸುಮ್ಮನೆ ಅನುಸರಿಸುತ್ತ ಹೋದರೆ ಅವುಗಳ ಸುರಕ್ಷತೆ ಕೂಡ ಸವಾಲಿನ ಕೆಲಸವೇ ಆಗಿಬಿಡಬಹುದು – ನಿಮ್ಮ ಮನೆಯ ಸ್ಮಾರ್ಟ್ ಟಿ.ವಿಯಲ್ಲಿ ಯಾವ ಚಾನೆಲ್ ಬರಬೇಕು ಎನ್ನುವುದನ್ನು ಯಾರೋ ಕಿಡಿಗೇಡಿ ನಿಯಂತ್ರಿಸಲು ಶುರುಮಾಡಿದರೆ?

ಈ ಸಮಸ್ಯೆಗಳಿಗೆಲ್ಲ ಪರಿಹಾರ ಕಂಡುಕೊಳ್ಳಲು ಹೊರಟ ತಜ್ಞರು ಹೊಸದೇ ಆದ ಇನ್ನೊಂದು ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಆ ಪರಿಕಲ್ಪನೆಯ ಹೆಸರೇ ಎಡ್ಜ್ ಕಂಪ್ಯೂಟಿಂಗ್ . ಮಾಹಿತಿ ಸಂಸ್ಕರಣೆಯನ್ನು ಹಿಂದಿನ ಕಾಲದಂತೆ ಆಯಾ ಸಾಧನದಲ್ಲೇ ಮಾಡದೆ, ಇಂದಿನಂತೆ ಕ್ಲೌಡ್ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನೆಚ್ಚಿಕೊಳ್ಳದೆ ಮಧ್ಯಮ ಮಾರ್ಗ ಕಂಡುಕೊಳ್ಳುವ ಪ್ರಯತ್ನ ಇದು. ಒಂದು ಜಾಲಕ್ಕೆ ಸಂಬಂಧಿಸಿದ ಮಾಹಿತಿಯನ್ನೆಲ್ಲ ಆ ಜಾಲದ ಅಂಚಿನಲ್ಲೇ (ಎಡ್ಜ್) ಸಂಸ್ಕರಿಸುವುದರಿಂದ ಇದಕ್ಕೆ ಎಡ್ಜ್ ಕಂಪ್ಯೂಟಿಂಗ್​ಎಂದು ಹೆಸರು. ವಿವಿಧ ಸಾಧನಗಳಿಂದ ಸಂಗ್ರಹವಾಗುವ ದತ್ತಾಂಶವನ್ನು ಸಂಸ್ಕರಿಸಲು ಕ್ಲೌಡ್ ನಲ್ಲೆಲ್ಲೋ ಇರುವ ಸಂಪನ್ಮೂಲಗಳಿಗೆ ಕಾಯುವ ಬದಲು ಅಗತ್ಯ ಸಂಸ್ಕರಣಾ ಸಾಮರ್ಥ್ಯವನ್ನು ಆ ಸಾಧನಗಳಿಗೆ ಹತ್ತಿರದಲ್ಲೇ ಒದಗಿಸಿಕೊಡುವುದು ಎಡ್ಜ್ ಕಂಪ್ಯೂಟಿಂಗ್​ಪರಿಕಲ್ಪನೆಯ ಉದ್ದೇಶ. ಹೀಗೆ ಮಾಡುವ ಮೂಲಕ ಸಂಭಾವ್ಯ ವಿಳಂಬವನ್ನು ತಪ್ಪಿಸುವುದು, ಕ್ಲೌಡ್ ಮೇಲೆ ಅತಿಯಾದ ಅವಲಂಬನೆ ಇಲ್ಲದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಸಂಪನ್ಮೂಲಗಳನ್ನು ಅಂತರ್ಜಾಲ ಸಂಪರ್ಕ ಇಲ್ಲದಾಗಲೂ ಕೆಲಸಮಾಡುವಂತೆ ರೂಪಿಸಬಹುದು.

ಸದ್ಯ ಎಡ್ಜ್ ಕಂಪ್ಯೂಟಿಂಗ್​ಪರಿಕಲ್ಪನೆಯನ್ನು ಹೆಚ್ಚಾಗಿ ವಸ್ತುಗಳ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆಯೇ ಬಳಸಲಾಗುತ್ತಿದೆ. ಈ ಜಾಲದ ಭಾಗವಾದ ದೊಡ್ಡ ಸಂಖ್ಯೆಯ ಸಾಧನಗಳಿಂದ ಸಂಗ್ರಹವಾಗುವ ಭಾರೀ ಪ್ರಮಾಣದ ದತ್ತಾಂಶವನ್ನು ಅಲ್ಲಿಯೇ ಕ್ಷಿಪ್ರವಾಗಿ ಸಂಸ್ಕರಿಸುವುದು ಹಾಗೂ ಬೇಕಾದಷ್ಟನ್ನು ಬೇಕಿದ್ದರೆ ಮಾತ್ರವೇ ಕ್ಲೌಡ್ ಕಡೆ ರವಾನಿಸುವುದು ಇದರಿಂದಾಗಿ ಸಾಧ್ಯವಾಗುತ್ತದೆ. ಈ ಮೂಲಕ ದತ್ತಾಂಶದ ಸಕಾಲಿಕ ಹಾಗೂ ಪರಿಣಾಮಕಾರಿ ಬಳಕೆಯ ಜತೆಗೆ ಸಮಯ – ಸಂಪನ್ಮೂಲಗಳ ಉಳಿತಾಯವೂ ಆಗುತ್ತದೆ.

ಎಡ್ಜ್ ಕಂಪ್ಯೂಟಿಂಗ್​ಅನುಕೂಲಗಳನ್ನು ಸಾಮಾನ್ಯ ಬಳಕೆದಾರರಿಗೆ ದೊರಕಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ಮೊಬೈಲ್ ಫೋನ್ ಬಳಕೆದಾರರನ್ನು ಗುರುತಿಸಿ ದೃಢೀಕರಿಸುವ ಕೆಲಸದ ಬಹುಪಾಲನ್ನು ಕ್ಲೌಡ್ ಬದಲು ಮೊಬೈಲಿನಲ್ಲೇ ನಿಭಾಯಿಸುವುದು ಇಂತಹ ಪ್ರಯತ್ನಗಳಲ್ಲೊಂದು. ಇತ್ತೀಚೆಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸವಲತ್ತುಗಳು ಸಾಮಾನ್ಯರ ಬಳಕೆಗೂ ದೊರಕುತ್ತಿವೆಯಲ್ಲ, ಅದಕ್ಕೆ ಬೇಕಾದ ಸಂಸ್ಕರಣಾ ಸಾಮರ್ಥ್ಯವನ್ನು ಪ್ರತ್ಯೇಕ ಎಐ ಚಿಪ್​ಗಳ ಮೂಲಕ ಮೊಬೈಲಿನಲ್ಲೇ ನೀಡುವ ಅಭ್ಯಾಸ ಕೂಡ ಪ್ರಾರಂಭವಾಗಿದೆ.

ಒಟ್ಟಿನಲ್ಲಿ, ಎಡ್ಜ್ ಕಂಪ್ಯೂಟಿಂಗ್ ಎಂಬ ಈ ಪರಿಕಲ್ಪನೆ ಐಟಿ ಲೋಕಕ್ಕೆ ಹೊಸದೊಂದು ಹೊಳಪಿನ ಅಂಚನ್ನು ಕಟ್ಟಿಕೊಡಲು ಹೊರಟಿದೆ. ಅದು ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆಯೋ, ಬರಿದೇ ಸದ್ದುಮಾಡಿ ಸುಮ್ಮನಾಗಲಿದೆಯೋ ಎನ್ನುವುದನ್ನು ಮಾತ್ರ ಕಾಲವೇ ಹೇಳಬೇಕಿದೆ.