ಬಹುಬೇಡಿಕೆಯ ಚೆಂಡು

| ಚಂದ್ರಹಾಸ ಚಾರ್ಮಾಡಿ

ಪುಷ್ಪ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಬೆಳೆಗಾರರು ರಾಜ್ಯದಲ್ಲಿದ್ದಾರೆ. ಗುಲಾಬಿ, ಸೇವಂತಿಗೆ, ಕಾಕಡ, ಸುಗಂಧರಾಜ, ಮಲ್ಲಿಗೆ, ಲಿಲ್ಲಿ, ಕಾಕಡ ಮುಂತಾದ ಕೃಷಿಗಳಿಗೆ ಹೋಲಿಸಿದರೆ ಕಡಿಮೆ ರೋಗಬಾಧೆ ತಗಲುವ ಪುಷ್ಪವೆಂದರೆ ಚೆಂಡು. ನೀರಾವರಿ ವ್ಯವಸ್ಥೆಯಿದ್ದರೆ ಹೆಚ್ಚಿನ ಭೂಮಿಯಲ್ಲಿ ಬೆಳೆಯಬಹುದು. ಇತರ ಪುಷ್ಪಗಳಿಗೆ ಹೋಲಿಸಿದರೆ ಖರ್ಚು ಕಡಿಮೆ. ಅನುಭವವಿದ್ದಲ್ಲಿ ಐದು ತಿಂಗಳಲ್ಲಿ ಹಾಕಿದ ಬಂಡವಾಳದ ಮೂರು ಪಟ್ಟು ಆದಾಯ ಗಳಿಸಬಹುದು.

ಮುನಿಯಪ್ಪ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೊಂಡನಹಳ್ಳಿಯವರು. ಬೀಳುವ ಮಳೆ, ವಾತಾವರಣಕ್ಕನುಗುಣವಾಗಿ ಎಂಟು ಎಕರೆ ತುಂಬ ಟೊಮ್ಯಾಟೊ, ಕ್ಯಾಪ್ಸಿಕಂ, ಕ್ಯಾರಟ್, ಆಲೂಗಡ್ಡೆ, ಮೂಲಂಗಿಯನ್ನು ಬೆಳೆಯುತ್ತಾರೆ. ಇವುಗಳ ಕಟಾವು ಆದನಂತರ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಚೆಂಡು ಪುಷ್ಪವನ್ನು ಬೆಳೆಯುತ್ತಿದ್ದಾರೆ.

ಅಧಿಕ ಲಾಭ

ಏಪ್ರಿಲ್ ತಿಂಗಳಲ್ಲಿ ಬಿತ್ತಿದರೆ ಆಗಸ್ಟ್ ತಿಂಗಳಿಗೆ ಗಿಡ ಕಟಾವಿನ ಕೆಲಸ ಮುಗಿದು ಹೋಗುತ್ತದೆ. ಅಂದರೆ ಗಣೇಶ ಚತುರ್ಥಿ ಸಮಯದಲ್ಲಿ ಚೆಂಡು ಪುಷ್ಪಕ್ಕೆ ಬಹುಬೇಡಿಕೆಯಿದ್ದು ಆ ದಿನಗಳಲ್ಲಿಯೇ ಮಾರಾಟಕ್ಕೆ ಸಿಗುತ್ತದೆ. ಜೂನ್ ಮಾಸದಲ್ಲಿ ನೆಟ್ಟರೆ ದೀಪಾವಳಿ ಸಮಯದಲ್ಲಿ ಕಟಾವಿಗೆ ಸಿಗುತ್ತದೆ. ಮುನಿಯಪ್ಪ ಅವರು ಪುಷ್ಪದ ಬೇಡಿಕೆಯನ್ನು ಅಧ್ಯಯನ ನಡೆಸಿ ಎರಡು ಬೆಳೆ ಬೆಳೆಯುವುದೂ ಇದೆ. ‘ಹೂವಿನ ಕೃಷಿಯಲ್ಲಿ ಮಾರುಕಟ್ಟೆ ಮತ್ತು ಬೇಡಿಕೆಯ ಬಗ್ಗೆ ತಿಳಿದಿರಬೇಕಾದುದು ಅತಿ ಅಗತ್ಯ. ಬೇಡಿಕೆ ಇರುವ ಹಂತದಲ್ಲಿ ಪುಷ್ಪ ಕಟಾವಿಗೆ ಬಂದರೆ ಮಾತ್ರ ಬೆಳೆಗಾರ ಲಾಭ ಗಳಿಸಲು ಸಾಧ್ಯ’ ಎನ್ನುತ್ತಾರೆ ಮುನಿಯಪ್ಪ.

ನಾಟಿ, ಗೊಬ್ಬರ, ನೀರಾವರಿ

ನಾಟಿಗೆ ಬೇಕಾದ ಬೆರಳುದ್ದದ ಗಿಡ ನರ್ಸರಿಗಳಲ್ಲಿ ಲಭ್ಯ. ಒಂದು ಗಿಡಕ್ಕೆ ರೂ.3 ದರವಿದೆ. ಬೀಜಗಳನ್ನು ಸಹ ಬಿತ್ತಬಹುದು. ಗದ್ದೆ, ಕಪ್ಪು ಭೂಮಿ ಸೂಕ್ತ. ಕಲ್ಲುಮಿಶ್ರಿತ ಗುಡ್ಡ ಸೂಕ್ತವಲ್ಲ. ಮಲ್ಲಿಗೆ ಬೆಳೆಯುವ ಕಡೆಗಳಲ್ಲಿ ಚೆಂಡು ಬೆಳೆಯಲಾರದು. ಭೂಮಿಯನ್ನು ಉಳುಮೆ ಮಾಡಿಕೊಳ್ಳಬೇಕು. ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಬಹುದು. ಅರ್ಧದಿಂದ ಒಂದು ಅಡಿ ಎತ್ತರವಾದ ಸಾಲನ್ನು ನಿರ್ವಿುಸಿಕೊಳ್ಳಬೇಕು. ಕೈ ಬೆರಳಿನಲ್ಲಿ ಗುಣಿ ತೆಗೆದು ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರಬಿಟ್ಟು ಗಿಡಗಳನ್ನು ನಾಟಿ ಮಾಡಬೇಕು. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರ ಬಿಟ್ಟರೆ ಒಳ್ಳೆಯದು. ಇವರು, ನಾಟಿಗಿಂತ ಮೊದಲು ಮತ್ತು ಗಿಡ ನೆಟ್ಟು ಹದಿನೈದು ದಿನಗಳ ನಂತರ ಕೊಟ್ಟಿಗೆ ಗೊಬ್ಬರ ನೀಡುತ್ತಾರೆ. ಹೂ ಬಿಡುವ ಹಂತದಲ್ಲೊಮ್ಮೆ ಕೊಟ್ಟಿಗೆ ಗೊಬ್ಬರ ನೀಡುತ್ತಾರೆ. ಹನಿ ನೀರಾವರಿಯನ್ನು ಮಾಡಿಕೊಂಡಿದ್ದು, ಎರಡು ದಿನಕ್ಕೊಮ್ಮೆ ಮೂರು ತಾಸುಗಳ ಕಾಲ ನೀರನ್ನು ಹಾಯಿಸುತ್ತಾರೆ.

ಮಾರುಕಟ್ಟೆ

ನೆಟ್ಟು ಒಂದೂವರೆ ತಿಂಗಳ ನಂತರ ಚೆಂಡು ಗಿಡ ಮೊಗ್ಗು ನೀಡಲು ಆರಂಭಿಸುತ್ತದೆ. ವಾರಕ್ಕೊಮ್ಮೆ ಕಟಾವು ಮಾಡುತ್ತಾರೆ. ಒಂದು ವಾರದಲ್ಲಿ ಸರಾಸರಿ ಒಂದೂವರೆ ಟನ್ ಹೂವು ಸಿಗುತ್ತಿದೆ. ಕೆಜಿಗೆ ರೂ.5ರಿಂದ ರೂ.30ರಂತೆ ನೀಡಿ ದಲ್ಲಾಳಿಗಳು ತೋಟದಿಂದಲೇ ಕೊಂಡೊಯ್ಯುತ್ತಾರೆ. ಮದ್ರಾಸ್​ಗೂ ಈ ಹೂವುಗಳು ಸಾಗಣೆಯಾಗುತ್ತವೆ. ಬಿಡಿ ಹೂಗಳನ್ನು ಖರೀದಿಸಿ ಮಾಲೆ ಕಟ್ಟಿದಾಗ ಹೂವಿನ ಬೆಲೆ ಅಧಿಕವಾಗುತ್ತದೆ. ಗೊಬ್ಬರ, ಹನಿನೀರಾವರಿ ಹೀಗೆ ಎಲ್ಲ ಲೆಕ್ಕ ಹಾಕಿದರೆ ಒಂದೂವರೆ ಎಕರೆಗೆ ರೂ.1 ಲಕ್ಷ ಖರ್ಚು ತಗಲುತ್ತದೆ. ಹೀಗೆ, ಪ್ರತಿವರ್ಷ ಚೆಂಡು ಪುಷ್ಪದಿಂದ ಸರಾಸರಿ ಎರಡು ಲಕ್ಷ ರೂಪಾಯಿ ಲಾಭವನ್ನು ಪಡೆಯುತ್ತಿದ್ದಾರೆ.

ತಿಳಿದಿರಬೇಕು

ಅತಿ ಹೆಚ್ಚು ಮಳೆ ಬೀಳುವ ಕರಾವಳಿ ಪ್ರದೇಶ ಚೆಂಡು ಹೂ ಬೆಳೆಗೆ ಸೂಕ್ತವಲ್ಲ. ಹೈಬ್ರಿಡ್ ತಳಿಯ ಚೆಂಡು ಹೂವಿಗೆ ಅಧಿಕ ಬೇಡಿಕೆಯಿದೆ. ಹಾರ, ದೇವಾಲಯಗಳ ಶೃಂಗಾರಕ್ಕೆ ಹೆಚ್ಚು ಉಪಯೋಗಿಸುತ್ತಾರೆ. ತಿಂಗಳಲ್ಲಿ ಒಂದು ಬಾರಿ ಗಿಡಗಳಿಗೆ ಔಷಧ ಸಿಂಪಡಿಸಬೇಕು. ಹೆಚ್ಚು ಗೊಬ್ಬರ, ನೀರು ನೀಡಬಾರದು. ಆರಂಭದಲ್ಲಿ ಒಂದೆರಡು ಮಳೆ ಬಂದರೆ ಅದೇ ಸಾಕಾಗುತ್ತದೆ. ಕಟಾವು ಕೆಲಸವನ್ನು ಬೆಳಗ್ಗೆ ಬೇಗ ಮಾಡಿ ಮುಗಿಸಬೇಕು. ನೆರಳಿನಲ್ಲಿ ಬೆಳೆಯುವುದು ಕಷ್ಟ. ಕಟಾವಾದ ನಂತರ ಗಿಡಗಂಟಿಗಳನ್ನು ಉಳುಮೆ ಮಾಡಿ ಭೂಮಿಗೆ ಸೇರಿಸಿದಲ್ಲಿ ಉತ್ತಮ ಗೊಬ್ಬರವಾಗುತ್ತದೆ. ಒಂಚೂರು ಮಾಹಿತಿಯಿದ್ದರೆ ಸುಲಭವಾಗಿ ಆದಾಯ ಪಡೆಯಬಹುದಾದ ಪುಷ್ಪ ಕೃಷಿಯಿದು. ಮುನಿಯಪ್ಪ ಸಂಪರ್ಕ ಸಂಖ್ಯೆ 8861255015.