ಹೃದಯ ಪೂರ್ವಕ ಪ್ರೀತಿಸಿ ಹೃದಯವನ್ನೂ ಪ್ರೀತಿಸಿ

| ಎಚ್.ಡುಂಡಿರಾಜ್

ಪ್ರೀತಿಗೆ ವಿಳಾಸ ಇದೆಯಾ?

ಹೌದು. ಕೇರಾಫ್ ಹೃದಯ!

ಪ್ರೀತಿ, ಪ್ರೇಮ ಹೃದಯದಲ್ಲಿ ನೆಲೆಸಿರುತ್ತದೆ ಎನ್ನುವುದು ನಮ್ಮ ನಂಬಿಕೆ. ನಮ್ಮ ಸಾಹಿತ್ಯ, ನಾಟಕ, ಸಿನಿಮಾಗಳು ಈ ನಂಬಿಕೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬಂದಿವೆ. ಚಲನಚಿತ್ರಗಳಿಗಾಗಿ ಪ್ರೇಮಗೀತೆಗಳನ್ನು ಬರೆಯುವವರಿಗೆ ಅತ್ಯಂತ ಪ್ರಿಯವಾದ ಪದವೆಂದರೆ ಹೃದಯ. ‘ನನ್ನ ನಿನ್ನ ಮನವು ಸೇರಿತು/ ನನ್ನ ನಿನ್ನ ಹೃದಯ ಹಾಡಿತು’, ‘ಹೃದಯದಲಿ ಇದೇನಿದು ನದಿಯೊಂದು ಓಡಿದೆ’, ‘ಇದೇ ಹೊಸ ಹಾಡು/ ಹೃದಯ ಸಾಕ್ಷಿ ಹಾಡು/ ಹೃದಯಾಸೆ ಭಾಷೆ ಈ ಹಾಡು’ ಮುಂತಾದ ನೂರಾರು ಗೀತೆಗಳನ್ನು ನೀವು ಕೇಳಿರಬಹುದು. ಕನ್ನಡದ ಹಾಡುಗಳಲ್ಲದೆ ‘ಕೋಯಿ ಜಬ್ ತುಮ್ಹಾರಾ ಹೃದಯ್ ತೋಡ್ ದೆ’, ‘ಮೈ ಹಾರ್ಟ್ ಈಸ್ ಬೀಟಿಂಗ್’ ಇತ್ಯಾದಿ ಹಲವು ಹಿಂದಿ ಚಿತ್ರಗೀತೆಗಳಲ್ಲೂ ‘ಹೃದಯ’ ಉಂಟು. ಹೃದಯವೆಂಬ ಪದವನ್ನು ಉಪಯೋಗಿಸದೆ ಒಂದು ಪ್ರೇಮಗೀತೆಯನ್ನು ರಚಿಸಬೇಕೆಂಬ ಸವಾಲನ್ನು ಹಾಕಿದರೆ ಸಿನಿಮಾ ಕವಿಗಳು ಕಂಗಾಲಾಗುವುದು ಖಂಡಿತ. (ನಿಷೇಧಾಕ್ಷರಿಯಲ್ಲಿ ಪರಿಣತರಾದ ಶತಾವಧಾನಿ ಆರ್. ಗಣೇಶ್ ಅವರಿಗೆ ಮಾತ್ರ ಅದು ಸಾಧ್ಯ!)

ಜೀವಶಾಸ್ತ್ರದ ಪ್ರಕಾರ ಹೃದಯವೆಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಪೂರೈಸುವ ಒಂದು ಅಂಗ. ಅದರಲ್ಲಿ ಯಾವ ಭಾವನೆಗಳೂ ಮೂಡುವುದಿಲ್ಲ. ನಾವು ಪಂಚೇಂದ್ರಿಯಗಳ ಮೂಲಕ ಗ್ರಹಿಸಿದ್ದನ್ನು ಸಂಸ್ಕರಿಸಿ ವಿವಿಧ ಭಾವನೆಗಳ ಮೂಲಕ ಅವುಗಳಿಗೆ ಪ್ರತಿಕ್ರಿಯೆ ನೀಡುವುದು ಮಿದುಳಿನ ಕೆಲಸ. ಆದರೆ ವೇದಗಳ ಕಾಲದಿಂದಲೂ ಪ್ರೀತಿ, ಸ್ನೇಹ, ಕರುಣೆ, ದ್ವೇಷ ಮುಂತಾದ ಭಾವನೆಗಳು ಹೃದಯದಲ್ಲಿ ಹುಟ್ಟುತ್ತವೆ ಎಂಬ ನಂಬಿಕೆ ಬೆಳೆದು ಬಂದಿದೆ. ರಕ್ತವನ್ನು ಪಂಪ್ ಮಾಡುವ ಹೃದಯ ಮತ್ತು ಭಾವನೆಗಳು ಹುಟ್ಟುವ ಹೃದಯ ಇವೆರಡೂ ಬೇರೆ ಬೇರೆ ಅನ್ನುವವರೂ ಇದ್ದಾರೆ. ಅವರ ಪ್ರಕಾರ ಮನಸ್ಸು, ಅಂತಃಕರಣ ಅನ್ನುವ ಅರ್ಥದಲ್ಲಿ ಬಳಸುವ ಹೃದಯ ಕಣ್ಣಿಗೆ ಕಾಣುವುದಿಲ್ಲ. ಆದರೆ ನಮ್ಮ ಕವಿಗಳು ಮತ್ತು ಕಲಾವಿದರು ಎರಡೂ ಒಂದೇ ಅಂದುಕೊಂಡಿದ್ದಾರೆ ಎಂಬುದಕ್ಕೆ ಪ್ರೇಮದ ಸಂಕೇತವು ಕೆಂಪು ಬಣ್ಣ ಮತ್ತು ಹೃದಯದ ಆಕಾರವನ್ನು ಹೊಂದಿರುವುದೇ ಸಾಕ್ಷಿ. ನಾವು ಓದುವ ಪ್ರೇಮ ಕವನಗಳು, ಕಥೆ ಕಾದಂಬರಿಗಳು ಹೃದಯ ಕಮಲ, ಹೃದಯ ವೀಣೆ, ಹೃದಯ ಮಂದಿರ ಮುಂತಾದ ಹೃದಯಕ್ಕೆ ಸಂಬಂಧಿಸಿದ ಪದಪುಂಜಗಳಿಂದ ತುಂಬಿರುತ್ತವೆ. ನಾಟಕ ಹಾಗೂ ಸಿನಿಮಾಗಳಲ್ಲೂ ಪ್ರೇಮಿಗಳ ನಡುವಿನ ಮಾತುಕತೆ ಹೃದಯದ ಪ್ರಸ್ತಾಪವಿಲ್ಲದೆ ಮುಗಿಯುವುದಿಲ್ಲ. ಯುವಕನೊಬ್ಬ ನಿಜ ಜೀವನದಲ್ಲೂ ಸಿನಿಮಾದ ಶೈಲಿಯಲ್ಲಿ ಮಾತನಾಡಿ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದಾಗ ಏನಾಯಿತು ಗೊತ್ತಾ?

ಹುಡುಗ ಹೇಳಿದ:

‘ಪ್ರಿಯೆ ನಿನ್ನ ಹೃದಯ ವೀಣೆ

ನಾನು ನುಡಿಸುತ್ತೇನೆ’

ಹುಡುಗಿ ಕೇಳಿದಳು:

‘ನಿನ್ನ ಖಾಲಿ ತಲೆ ಮದ್ದಲೆ

ನಾನು ಬಾರಿಸಲೆ?’

ಪ್ರೇಮಕವಿಗಳಿಗೆ ಮಾತ್ರವಲ್ಲ, ಗಂಭೀರ ಕವಿಗಳಿಗೂ ಹೃದಯದ ಹಂಗು ಉಂಟು. ಏಕೆಂದರೆ ಅವರ ಕಾವ್ಯವನ್ನು ಆಸ್ವಾದಿಸಲು ಸಹೃದಯಿ ಓದುಗರು ಬೇಕೇಬೇಕು. ಆದ್ದರಿಂದಲೇ ಕವಿ ಗಂಗಾಧರ ಚಿತ್ತಾಲರು ‘ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ ಸುದಿನ’ ಅಂದದ್ದು. ರಾಷ್ಟ್ರಕವಿ ಜಿ.ಎಸ್.ಎಸ್ ‘ಎದೆ ತುಂಬಿ ಹಾಡಿದೆನು ಅಂದು ನಾನು’ ಅನ್ನುವ ಮೂಲಕ ಹಾಡಿಗೂ ಹೃದಯಕ್ಕೂ ಇರುವ ನಂಟನ್ನು ತೋರಿಸಿದ್ದಾರೆ. ಅಂದ ಹಾಗೆ ಎದೆ ಅನ್ನುವ ಪದವನ್ನು ನಾವು ಹೃದಯವೆಂಬ ಅರ್ಥದಲ್ಲಿ ಬಳಸುತ್ತೇವಾದರೂ ಅದರ ನಿಜವಾದ ಅರ್ಥ ಚೆಸ್ಟ್ ಅಥವಾ ವಕ್ಷಸ್ಥಳ. ಎದೆಯ ಭಾಗದಲ್ಲಿ ಹೃದಯವಲ್ಲದೆ ಶ್ವಾಸಕೋಶ, ಲಿವರ್ ಮುಂತಾದ ಅಂಗಗಳು ಇವೆ. ವ್ಯಾಯಾಮ ಮಾಡುವುದರಿಂದ ಎದೆ ಅಗಲವಾಗುತ್ತದೆ. ಆದರೆ ಅಗಲವಾದ ಎದೆಯುಳ್ಳವರೆಲ್ಲ ಹೃದಯವಂತರು ಅನ್ನವಂತಿಲ್ಲ. ಹೃದಯಕ್ಕಿರುವ ಪರ್ಯಾಯ ಪದ ಗುಂಡಿಗೆ. ಬೆಂಗಳೂರಿನ ಆಡುಭಾಷೆಯಲ್ಲಿ ಗುಂಡಿಗೆ ಮದ್ಯ ಎಂಬ ಆರ್ಥವೂ ಇದೆ! ಸ್ವಾಗತ ಭಾಷಣ ಮಾಡುವವರು ಮಾತನಾಡುವುದು ಬಾಯಿಯಿಂದಲೇ ಆದರೂ ‘ಹಾರ್ದಿಕ ಸ್ವಾಗತ’ ಅನ್ನುತ್ತಾರೆ. ಧನ್ಯವಾದ ಸಮರ್ಪಿಸುವಾಗ ‘ಹೃತ್ಪೂರ್ವಕ ವಂದನೆಗಳು’, ‘ಹೃದಯಾಂತರಾಳದ ನಮನಗಳು’ ಅಂದರೆ ಕೃತಜ್ಞತೆಯ ಮೌಲ್ಯ ಹೆಚ್ಚಾಗುತ್ತದೆ. ಇಂಗ್ಲಿಷ್​ನಲ್ಲೂ ಹಾರ್ಟಿ ವೆಲ್​ಕಂ, ಹಾರ್ಟ್ ಫೆಲ್ಟ್ ಥ್ಯಾಂಕ್ಸ್ ಎನ್ನುತ್ತಾರೆ. ವಂದನಾರ್ಪಣೆ ಮಾಡುವಾಗ ಒಮ್ಮೆ ಸಭಾಕಂಪದಿಂದ ಒಬ್ಬರು ‘ಐ ಥ್ಯಾಂಕ್ ಯೂ ಫ್ರಾಮ್ ದ ಬಾಟಮ್ ಆಫ್ ಮೈ ಹಾರ್ಟ್’ ಅನ್ನುವ ಬದಲು ‘ಐ ಥ್ಯಾಂಕ್ ಯೂ ಫ್ರಾಮ್ ಮೈ ಬಾಟಮ್ ಅಂದಿದ್ದರು!

ಈಗ ಮನಸ್ಸೆಂಬ ಹೃದಯವನ್ನು ಬದಿಗಿಟ್ಟು ದೇಹದ ರಕ್ತ ಪರಿಚಲನೆಯ ಹೊಣೆ ಹೊತ್ತ ಮಾಂಸಖಂಡಗಳಿಂದ ಕೂಡಿರುವ ಹೃದಯದ ವಿಷಯಕ್ಕೆ ಬರೋಣ.

ನಾವು ತಾಯಿಯ ಗರ್ಭದಲ್ಲಿ ಇರುವಾಗಲೇ ದುಡಿಯಲು ತೊಡಗುವ ಹೃದಯ ವಿಶ್ರಾಂತಿ ತೆಗೆದುಕೊಳ್ಳುವುದೇ ಇಲ್ಲ. ಹೃದಯ ವಿಶ್ರಾಂತಿ ತೆಗೆದುಕೊಂಡರೆ ಆ ಹೃದಯದ ಒಡೆಯನಿಗೆ ಅವನ ಬಂಧುಮಿತ್ರರು ಚಿರಶಾಂತಿ ಕೋರಬೇಕಾಗುತ್ತದೆ. ನಮ್ಮ ದೇಹದ ಬಹು ಮುಖ್ಯ ಭಾಗವಾದರೂ ಹೃದಯದ ಗಾತ್ರ ಒಂದು ಮುಷ್ಟಿಯಷ್ಟು ಮಾತ್ರ. ಜಾತಿ, ಧರ್ಮ, ಭಾಷೆ, ಪ್ರದೇಶ ಮುಂತಾದ ಯಾವುದೇ ಭೇದಭಾವ ಮಾಡದೆ ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿಗಳನ್ನು ನಾವು ‘ವಿಶಾಲ ಹೃದಯದವರು’ ಎಂದು ಹಾಡಿ ಹೊಗಳುತ್ತೇವೆ. ಆದರೆ ಹೃದಯದ ಗಾತ್ರ ಮುಷ್ಟಿಯ ಮಿತಿಯನ್ನು ಮೀರಿ ಬೆಳೆದು ವಿಶಾಲವಾದರೆ ಅದು ಅನಾರೋಗ್ಯದ ಸೂಚನೆ. ಆರೋಗ್ಯವಂತ ಗಂಡಸರ ಹೃದಯದ ತೂಕ 280-340 ಗ್ರಾಂ. ಮತ್ತು ಹೆಂಗಸರ ಹೃದಯದ ತೂಕ 230-280 ಗ್ರಾಂ. ಮಹಿಳೆಯರ ಹೃದಯದ ತೂಕ ಕಡಿಮೆ ಇರುವುದಕ್ಕೆ ಡಯಟಿಂಗ್ ಕಾರಣವಲ್ಲ! ಹೃದಯ ನಮ್ಮ ಎದೆಯ ಮಧ್ಯ ಭಾಗದಲ್ಲಿದ್ದು ಅದರ ಕೆಳತುದಿ ಎಡಕ್ಕೆ ವಾಲಿರುತ್ತದೆ. ಈ ವಿಷಯದಲ್ಲಿ ನಾವೆಲ್ಲರೂ ಎಡಪಂಥೀಯರೇ! ಅಪರೂಪಕ್ಕೆ ಕೆಲವರಲ್ಲಿ ಹೃದಯದ ಕೆಳತುದಿ ಬಲಕ್ಕೆ ವಾಲಿರುವುದುಂಟು. ಹುಟ್ಟಿನಿಂದಲೇ ಕಂಡುಬರುವ ಈ ಸ್ಥಿತಿಗೆ ‘ಡೆಕ್ಸ್​ಟ್ರೊಕಾರ್ಡಿಯಾ’ ಅನ್ನುತ್ತಾರೆ. ನನ್ನ ಸಹೋದ್ಯೋಗಿಯೊಬ್ಬರ ಹೃದಯ ಬಲಕ್ಕೆ ವಾಲಿದೆ ಎಂದು ಗೊತ್ತಾದಾಗ ಮೊದಲು ನಮಗೆಲ್ಲ ವಿಚಿತ್ರ ಅನ್ನಿಸಿತ್ತು. ಆದರೆ ಅವರ ನಡವಳಿಕೆ ಎಲ್ಲರ ಹಾಗೆ ಇದ್ದದ್ದರಿಂದ ನಂತರ ನಮಗದು ಮರೆತೇ ಹೋಯಿತು. ಗುಂಡಿಗೆ ಬಲಕ್ಕೆ ವಾಲಿದ್ದ ಆ ನನ್ನ ಮಿತ್ರರು ಆರೋಗ್ಯವಂತರಾಗಿದ್ದು ಉಳಿದವರಿಗಿಂತ ಹೆಚ್ಚು ಗುಂಡು ಹಾಕುತ್ತಿದ್ದರು!

ರಕ್ತದ ಮೂಲಕ ದೇಹದ ಜೀವಕೋಶಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪೂರೈಸುವುದರ ಜೊತೆಗೆ ‘ಕಾರ್ಬನ್ ಡೈ ಆಕ್ಸೈಡ್’ ಮತ್ತಿತರ ತ್ಯಾಜ್ಯಗಳನ್ನು ತೆಗೆಯುವ ಜವಾಬ್ದಾರಿಯನ್ನು ನಮ್ಮ ಹೃದಯ ನಿರ್ವಹಿಸುತ್ತದೆ. ಇದಕ್ಕಾಗಿ ಅದು ನಿರಂತರವಾಗಿ ಮಿಡಿಯುತ್ತಲೇ ಇರಬೇಕು. ವಿಶ್ರಾಂತಿಯ ವೇಳೆ ವಯಸ್ಕರ ಹೃದಯದ ಬಡಿತ ನಿಮಿಷಕ್ಕೆ 60 ರಿಂದ 80. ದೈಹಿಕ ಶ್ರಮದ ಕೆಲಸ ಅಥವಾ ವ್ಯಾಯಾಮ ಮಾಡುವಾಗ ಅದು ಹೆಚ್ಚಾಗುತ್ತದೆ. ಭಯ ಮತ್ತು ಉದ್ವೇಗದ ಕಾರಣದಿಂದಲೂ ಎದೆ ಬಡಿತದ ವೇಗ ಜಾಸ್ತಿಯಾಗುತ್ತದೆ. ಪ್ರೀತಿ ಹೃದಯದಲ್ಲಿ ಇರುತ್ತದೆ ಅನ್ನುವುದು ಅವೈಜ್ಞಾನಿಕವಾಗಿರಬಹುದು. ಆದರೆ ಪ್ರೀತಿಸುವವರು ಪರಸ್ಪರ ಭೇಟಿಯಾದಾಗ ಎದೆಬಡಿತ ಏರುವುದು ಸುಳ್ಳಲ್ಲ.

ಹೃದಯದಲ್ಲಿ ಪ್ರೀತಿ ಇರಬೇಕು

ಕರುಣೆ ಇರಬೇಕು

ಗುರು ಹಿರಿಯರ ಬಗ್ಗೆ

ಗೌರವವಿರಬೇಕು

ಇರಬಾರದ್ದು ಒಂದೇ

ರಕ್ತನಾಳದ ಬ್ಲಾಕು!

ರಕ್ತನಾಳಗಳಲ್ಲಿ ಕೊಬ್ಬು ಶೇಖರವಾದರೆ ರಕ್ತ ಸಂಚಾರಕ್ಕೆ ತಡೆಯುಂಟಾಗಿ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಮೂರು ವರ್ಷಗಳ ಕೆಳಗೆ ನಾನು ಮಂಗಳೂರಿನಲ್ಲಿ ವಾರ್ಷಿಕ ಆರೋಗ್ಯ ತಪಾಸಣೆಗೆ ಹೋದಾಗ ಟಿಎಂಟಿ ಫಲಿತಾಂಶವನ್ನು ಪರಿಶೀಲಿಸಿದ ವೈದ್ಯರು ನನ್ನ ಹೃದಯದ ರಕ್ತನಾಳದಲ್ಲಿ ಬ್ಲಾಕ್ ಇರಬಹುದು, ಆಂಜಿಯೊಗ್ರಾಮ್ ಮಾಡಿಸಿಕೊಳ್ಳಿ ಎಂದರು. ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಂಡ ನಂತರ ಎಲ್ಲಾ ಅಂಗಾಂಗಗಳೂ ಸುಸ್ಥಿತಿಯಲ್ಲಿರುವ ನನ್ನ ದೇಹದ ಬಗ್ಗೆ ಹೆಮ್ಮೆ ಅನ್ನಿಸುತ್ತಿತ್ತು. ಕೃತಜ್ಞತಾ ಪೂರ್ವಕವಾಗಿ ಅದಕ್ಕೊಂದು ಮಸಾಲೆ ದೋಸೆ ತಿನ್ನಿಸಿ ಮನೆಗೆ ಮರಳುತ್ತಿದ್ದೆ. ಈ ಬಾರಿ ವೈದ್ಯರು ಆಂಜಿಯೋಗ್ರಾಮ್ ಅಂದದ್ದು ಕೇಳಿ ಅಂಜಿಕೆಯಾಯಿತು. ಮೊದಲು ಆಂಜಿಯೊಗ್ರಾಮ್ ಆಮೇಲೆ ಆಂಜಿಯೊಪ್ಲಾಸ್ಟ್, ಸ್ಟಂಟ್, ಬೈ ಪಾಸ್ ಸರ್ಜರಿ ಅಂದರೆ ? ಇನ್ನೂ ಇಬ್ಬರು ಹೃದಯ ತಜ್ಞರ ಸಲಹೆ ಕೇಳಿದೆ. ಅವರೂ ಆಂಜಿಯೊಗ್ರಾಮ್ ಮಾಡಿಸಿ ನೋಡುವುದು ಉತ್ತಮ ಎಂದರು. ಅನಿವಾರ್ಯವಾಗಿ ನನ್ನ ಹೃದಯವನ್ನು ಆಂಜಿಯೊಗ್ರಾಮ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ. ಆಸ್ಪತ್ರೆಯಲ್ಲಿ ನನ್ನ ಹೃದಯದ ಪರೀಕ್ಷೆಯ ತಯಾರಿ ನಡೆಯುತ್ತಿರುವಾಗ ದೊಡ್ಡ ಶಸ್ತ್ರಕ್ರಿಯೆ ನಡೆಸುತ್ತಿದ್ದಾರೆ ಅನ್ನಿಸಿ ಭಯವಾಯಿತು. ನಾನು ನಂಬುವ ಎಲ್ಲಾ ದೇವರನ್ನೂ ಮನಸ್ಸಿನಲ್ಲೆ ಪ್ರಾರ್ಥಿಸಿದೆ. ಆಂಜಿಯೊಗ್ರಾಮ್ ನಾನು ಅಂದುಕೊಂಡಷ್ಟು ಭಯಾನಕವಾಗಿರಲಿಲ್ಲ. ಪರೀಕ್ಷೆ ಮಾಡಿದ ವೈದ್ಯರು ‘ಏನೂ ಗಾಬರಿಯಿಲ್ಲ. ಒಂದು ಕಡೆ ಸಣ್ಣ ಬ್ಲಾಕ್ ಇದೆ. ಔಷಧ ತೆಗೆದುಕೊಂಡರೆ ಸಾಕು’ ಅಂದರು.

ಹೃದಯದ ಸಮಸ್ಯೆ ಸುಲಭದಲ್ಲಿ ಪರಿಹಾರವಾಯಿತೆಂದು ನನಗಷ್ಟೇ ಅಲ್ಲ ನನ್ನ ಬಂಧು ಮಿತ್ರರಿಗೆಲ್ಲ ಸಂತೋಷವಾಯಿತು. ನನ್ನ ಸಹೋದ್ಯೋಗಿಯೂ, ಒಳ್ಳೆಯ ಚಿತ್ರ ಕಲಾವಿದರೂ ಆಗಿದ್ದ ರಾಘವ ಆಚಾರ್ , ‘ಸೃಜನಶೀಲ ಕವಿಹೃದಯ ಸದಾ ತಡೆರಹಿತವಾಗಿರಬೇಕು/ ಅದಕ್ಕೆ ನಿಮ್ಮದು ಸಣ್ಣ ಬ್ಲಾಕು’ ಎಂದು ಸಂದೇಶ ಕಳಿಸಿದ್ದರು. ಬೇಸರದ ಸಂಗತಿಯೆಂದರೆ ಇದಾಗಿ ಒಂದು ವರ್ಷವಾಗುವಷ್ಟರಲ್ಲಿ ಆರೋಗ್ಯವಂತರಾಗಿದ್ದ ಗೆಳೆಯ ರಾಘವ ಆಚಾರ್ ತೀವ್ರ ಹೃದಯಾಘಾತದಿಂದ ನಿಧನರಾದರು. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರ, ಮೃತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒತ್ತಡದ ಜೀವನ, ವ್ಯಾಯಾಮದ ಕೊರತೆ, ದೋಷಪೂರಿತ ಆಹಾರ, ಧೂಮಪಾನ ಮುಂತಾದ ಕಾರಣಗಳಿಂದ ಚಿಕ್ಕ ವಯಸ್ಸಿನವರೂ ಹೃದಯದ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಹೃದಯದ ಕಾಯಿಲೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 29 ನ್ನು ‘ವಿಶ್ವ ಹೃದಯ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ನಾವು ಇನ್ನೊಬ್ಬರನ್ನು ಹೃದಯಪೂರ್ವಕವಾಗಿ ಪ್ರೀತಿಸಿದರೆ ಸಾಲದು. ಸ್ವಲ್ಪವೂ ಬಿಡುವು ತೆಗೆದುಕೊಳ್ಳದೆ ನಮಗಾಗಿ ದುಡಿಯುವ, ದಿನಕ್ಕೆ ಸರಾಸರಿ ಒಂದು ಲಕ್ಷ ಬಾರಿ ಮಿಡಿಯುವ ನಮ್ಮ ಹೃದಯವನ್ನೂ ಪ್ರೀತಿಸಬೇಕು. ಅದರ ಬೇಕು ಬೇಡಗಳಿಗೆ ಸ್ಪಂದಿಸಬೇಕು. ಏನಂತೀರಿ?

ಮುಗಿಸುವ ಮುನ್ನ:

ಪರೀಕ್ಷೆಯ ಪ್ರಶ್ನೆ ಪತ್ರಿಕೆ

ಮತ್ತು ಚಂದದ ಹುಡುಗಿ

ಎರಡೂ ಒಂದೇ

ಯಾಕೆ ಗೊತ್ತಾ?

ನೋಡಿದಾಕ್ಷಣ ಏರುತ್ತದೆ

ಹುಡುಗರ ಎದೆಬಡಿತ!