ಸಾಧಕರ ಬದುಕಿನ ಒಳನೋಟ ತೆರೆದಿಡುವ ಕೃತಿ

| ಶಿವಾನಂದ ತಗಡೂರು

ಪತ್ನಿಯರು ಕಂಡಂತೆ ಪ್ರಸಿದ್ಧರು ಎಂಬ ಶೀರ್ಷಿಕೆಯಲ್ಲಿಯೇ ಒಳಗಿನ ಹೂರಣವೆಲ್ಲವೂ ಅಡಕವಾಗಿದೆ. ಕನ್ನಡ ಸಾರಸ್ವತ ಲೋಕವೂ ಒಳಗೊಂಡಂತೆ ವಿವಿಧ ಕ್ಷೇತ್ರಗಳ ಪ್ರಸಿದ್ಧರ ಒಳ ಹೊರಗನ್ನು ಪರಿಚಯಿಸಿಕೊಡುವ ವಿಭಿನ್ನವಾದ ಕೃತಿ ಇದು. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ಆಧ್ಯಾತ್ಮ, ಸಿನಿಮಾ, ಕಲೆ, ಸಾಮಾಜಿಕ ಸೇವೆ, ರಾಜಕೀಯ ಮುಂತಾದ ಕ್ಷೇತ್ರಗಳ ಎಲ್ಲ ಸಾಧಕರ ಸಾಮಾಜಿಕ ಸಾಧನೆಯ ಹೆಜ್ಜೆ ಗುರುತುಗಳು ಅಲ್ಲಲ್ಲಿ ದಾಖಲಾಗಿಯೇ ಇರುತ್ತವೆ. ಅದರ ಬಗ್ಗೆ ಜನಸಾಮಾನ್ಯರಿಗೆ ತಿಳಿದೇ ಇರುತ್ತದೆ. ಆದರೆ, ಆ ಸಾಧಕರನ್ನು ಒಳಗಣ್ಣಿನಿಂದ ನೋಡಲು ಮತ್ತು ಅವರ ವ್ಯಕ್ತಿತ್ವವನ್ನು ವಿಭಿನ್ನವಾಗಿ ಕಟ್ಟಕೊಡಲು ಅವರ ಬಾಳ ಸಂಗಾತಿಗೆ ಮಾತ್ರ ಸಾಧ್ಯ.

ಹೊರ ಜಗತ್ತಿಗೆ ಮಹಾನ್ ವ್ಯಕ್ತಿಯಾಗಿ ಕಾಣಿಸುವವರು ಕೂಡ ಹಿಂದೆ ಒಂದು ದಿನ ಸಾಮಾನ್ಯ ವ್ಯಕ್ತಿಯಾಗಿಯೇ ಬದುಕನ್ನು ಪ್ರಾರಂಭಿಸಿದವರು. ಕನಸುಗಳೊಂದಿಗೆ ಭರವಸೆಯ ಬೆಳಕು ಕಂಡವರು. ಸಂಕಷ್ಟಗಳಿದ್ದರೂ ಅದನ್ನು ಮೆಟ್ಟಿ, ಒಂದೊಂದೆ ಸಾಧನೆಯ ಮೆಟ್ಟಿಲು ಹತ್ತಿ ಸಾಧಕರಾಗುವ ಸಂಭ್ರಮದಲ್ಲಿ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡವರು. ಬಾಲ್ಯದಿಂದ ಯೌವನದವರೆಗೆ ಒಂದು ಘಟ್ಟವಾದರೆ, ನಂತರದ್ದು ಮತ್ತೊಂದು ಘಟ್ಟ. ದಾಂಪತ್ಯದಿಂದ ಇಳಿ ವಯಸ್ಸಿನ ಬದುಕಿನ ಮಗ್ಗಲುಗಳನ್ನು ಆಪ್ತವಾಗಿ ಪರಿಚಯಿಸಲು ಸಾಧ್ಯವಿರುವುದು ಪತ್ನಿಯರಿಗೆ ಮಾತ್ರ ಎನ್ನುವುದು ಗೊತ್ತಿರುವ ಸತ್ಯ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಿರುವ ಲೇಖಕಿ ಬಿ.ಎಸ್. ವೆಂಕಟಲಕ್ಷ್ಮಿ ಅವರು ಪ್ರಸಿದ್ಧರನ್ನು ಅವರ ಪತ್ನಿಯರ ಮೂಲಕ ಕನ್ನಡದ ಓದುಗರಿಗೆ ಪರಿಚಯಿಸಿಕೊಟ್ಟಿದ್ದಾರೆ.

ಪರಿಚಯ ಎನ್ನುವುದು ಒಂದು ಕ್ಷೇತ್ರದ ಸಾಧಕರಿಗೆ ಮಾತ್ರವೇ ಸೀಮಿತವಾಗಿಲ್ಲ. ಪ್ರಸಿದ್ಧ ವೈಣಿಕ ವಿ.ದೊರೆಸ್ವಾಮಿ ಅಯ್ಯಂಗಾರ್ ಅವರಿಂದ ಹಿಡಿದು, ಮೇರು ಸಾಹಿತಿಗಳಾದ ಗೋಪಾಲಕೃಷ್ಣ ಅಡಿಗ, ಹಾ.ಮಾ.ನಾಯಕ, ಬೀಚಿ, ಸು.ರಂ. ಎಕ್ಕುಂಡಿ, ಚೆನ್ನವೀರ ಕಣವಿ, ಎಸ್.ಎಲ್. ಭೈರಪ್ಪ, ತೀನಂಶ್ರೀ, ಕೆ.ಎಸ್. ನರಸಿಂಹಸ್ವಾಮಿ ಅವರ ತನಕ ಸಾಲು ಸಾಲು ಸಾಹಿತ್ಯ ಸಾಧಕರ ಬದುಕಿನ ಒಳನೋಟ ಈ ಪುಸ್ತಕದಲ್ಲಿ ಸಿಗುತ್ತದೆ. ನಟಸಾರ್ವಭೌಮ ಡಾ. ರಾಜ್​ಕುಮಾರ್, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಮಾತಿನ ಮಲ್ಲ ಮಾಸ್ಟರ್ ಹಿರಣ್ಣಯ್ಯ, ಖ್ಯಾತ ವಿಜ್ಞಾನಿ ಯು.ಆರ್.ರಾವ್, ಸಂಗೀತ ಕ್ಷೇತ್ರದ ದಿಗ್ಗಜ ಆರ್.ಕೆ. ಶ್ರೀಕಂಠನ್, ಖ್ಯಾತ ಕ್ರಿಕೆಟ್ ಪಟು ಎಸ್.ಎಂ.ಎಚ್. ಕಿರ್ವನಿ, ಮೇಕಪ್ ನಾಣಿ, ಜಾನಪದ ಸಾಹಿತಿ ಎಚ್.ಎಲ್. ನಾಗೇಗೌಡ, ಹೋರಾಟಗಾರ ಮ.ರಾಮಮೂರ್ತಿ, ಪತ್ರಿಕಾ ಕ್ಷೇತ್ರದ ಎನ್.ಎಸ್. ಸೀತಾರಾಮಯ್ಯ, ಚಿತ್ರಕಲೆ ರಸಋಷಿ ಎಸ್.ಎಂ. ಪಂಡಿತ್… ಹೀಗೆ ವಿವಿಧ ಕ್ಷೇತ್ರಗಳ 40 ಸಾಧಕರನ್ನು ಅವರ ಪತ್ನಿಯರ ಮೂಲಕ ಪರಿಚಯಿಸುವುದು ಅಷ್ಟು ಸುಲಭವಲ್ಲ. ಅಂಥ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ವೆಂಕಟಲಕ್ಷ್ಮಿ ಅವರು ಎಲ್ಲ ಬರಹಗಳಿಗೊಂದು ನವಿರಾದ ನಿರೂಪಣೆಯನ್ನು ನೀಡಿದ್ದಾರೆ. ಸಾಧಕರ ಪತ್ನಿಯರ ಧ್ವನಿಯನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದ್ದಾರೆ. ಅಚ್ಚರಿ ಅಂದರೆ ಸಾಧಕರಲ್ಲಿ ಹಲವರು ತಮ್ಮ ದಾಂಪತ್ಯ ಜೀವನಕ್ಕೆ ಹೆಜ್ಜೆ ಇರಿಸಿದ ಸಂಗತಿಗಳು ಬಹಳ ರಸವತ್ತಾಗಿವೆ. ಬಹಳಷ್ಟು ಜನರು ಬಾಲ್ಯದಲ್ಲಿ ಅಥವಾ ಆಗಷ್ಟೆ ಹರೆಯಕ್ಕೆ ಕಾಲಿಟ್ಟ ಹಂತದಲ್ಲಿಯೇ ದಾಂಪತ್ಯ ಬೆಸುಗೆಯಲ್ಲಿ ಸಿಲುಕಿರುವುದು ವಿಶೇಷ. ಒಂದೆಡೆ ಸಂಸಾರ, ಮತ್ತೊಂದೆಡೆ ಪತಿಯ ಸಾಧನೆಗಾಗಿ ಹೆಗಲಿಗೆ ಹೆಗಲು ಕೊಟ್ಟು, ಸ್ಪೂರ್ತಿಯ ಸೆಲೆಯಾಗಿ ದುಡಿದಿರುವ ಜೀವಗಳ ಬದುಕಿನ ಕ್ಷಣಗಳಿಗೆ ನಾವೊಂದು ಕ್ಷಣ ಈ ಪುಸ್ತಕದ ಮೂಲಕ ಮುಖಾಮುಖಿಯಾಗಲೇಬೇಕು.

ಪುಸ್ತಕದಲ್ಲಿರುವ ಆಯ್ದ ಘಟನೆಗಳು ಇಲ್ಲಿವೆ:

ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಪಟ್ಟ ಕಷ್ಟಗಳನ್ನು ಅವರ ಪತ್ನಿ ಸರಸ್ವತಿ ವಿವರಿಸಿದ್ದಾರೆ. ‘ಗುಜರಾತ್​ಗೆ ಹೋದರೂ ಕಷ್ಟ ಕಾರ್ಪಣ್ಯ ತಪ್ಪಲಿಲ್ಲ. ಅವರು ಪಿಎಚ್​ಡಿ ಮಾಡುತ್ತಿದ್ದಾಗ ಯುನಿವರ್ಸಿಟಿಗೆ ದುಡ್ಡು ಕಟ್ಟಬೇಕಾಗಿತ್ತು. ಒಂದೆರಡು ರೂಪಾಯಿ ಉಳಿದರೆ ಅದೇ ಹೆಚ್ಚು. ಮನೇಲಿ ಒಂದಿದ್ದರೆ ಇನ್ನೊಂದಿಲ್ಲ. ಯಾವಾಗಲೋ 2 ರೂ. ಉಳಿತಾಯವಾದಾಗ 2 ಲೋಟ ಕೊಂಡುಕೊಂಡ್ವಿ. ಮತ್ಯಾವಾಗಲೋ 10 ರೂ. ಉಳೀತು. ಊಟದ ತಟ್ಟೆ ಕೊಂಡುಕೊಂಡ್ವಿ. ಮಗದೊಮ್ಮೆ 2 ಸ್ಟೀಲ್ ಪಾತ್ರೆ. ಹೀಗೆ ಒಂದೊಂದಾಗಿ ಮನೆಗೆ ಕೂಡಿಸಿಕೊಂಡೆ. ಇನ್ನು ಸೀರೆ ಕೊಳ್ಳುವ ಮಾತು ಬಿಡಿ. ವರ್ಷಕ್ಕೊಂದು ಅಷ್ಟೆ. ಅವರಿಗೂ 3 ಪಯಿಜಾಮ, 3 ಜುಬ್ಬ, 3 ಬನಿಯನ್ ಬಿಟ್ಟರೆ ಬೇರೇನೂ ಇರಲಿಲ್ಲ. ಇಷ್ಟರಲ್ಲಿಯೇ ಹೇಗೋ ಸಂಸಾರ ನಿಭಾಯಿಸತೊಡಗಿದೆವು…’

ಡಾ.ರಾಜ್​ಕುಮಾರ್ ಅವರ ಬಗ್ಗೆ ಪಾರ್ವತಮ್ಮನವರ ಮಾತುಗಳು ಹೀಗಿವೆ. ‘ನನಗೆ 14ನೇ ವಯಸ್ಸಿಗೆ ಮದುವೆ. 15ನೇ ವಯಸ್ಸಿಗೆ ಅತ್ತೆ ಮನೆಗೆ ಹೋದೆ. ಅವರಿಗಾಗ 24 ವರ್ಷ ವಯಸ್ಸು. ಮದುವೆಯಾಗಿ 9 ವರ್ಷವಾದರೂ ಮಕ್ಕಳಾಗಲಿಲ್ಲ. ಅವತ್ತಿನ ದುಡಿಮೆ ಅವತ್ತಿಗೆ. ಸಂಕಷ್ಟದ ಜೀವನ ನಡೆದಿತ್ತು. 1962ರಲ್ಲಿ ಮೊದಲ ಮಗ ಶಿವಣ್ಣ ಹುಟ್ಟಿದ. ನಿಜವಾಗಿ ನಮ್ಮ ಅದೃಷ್ಟದ ಬಾಗಿಲು ತೆರೆದದ್ದು ಆಗಲೇ. ಸಂತ ತುಕಾರಾಂ ಚಿತ್ರದ ಅಭಿನಯಕ್ಕೆ ಕೈ ತುಂಬ ಸಂಭಾವನೆ ಸಿಕ್ಕಿತು. ಮಗ ಹುಟ್ಟಿದ ಘಳಿಗೆ ಅಂತ ಮನೆಯವರು ಕುಣಿದಾಡಿಬಿಟ್ಟರು…’

ಖ್ಯಾತ ವಿಜ್ಞಾನಿ ಯು.ಆರ್. ರಾವ್ ಪತ್ನಿ ಯಶೋದಾ ಮನದ ಮಾತು… ‘ಎಸ್​ಎಸ್​ಎಲ್​ಸಿ ಮುಗಿಯುತ್ತಲೇ ಮದುವೆಯಾಯಿತು. ಹೊಸದರಲ್ಲಿ ಇವರಿಗೆ ಹೇಗೆ ಸರ›ನೆ ಸಿಟ್ಟು ಬರ್ತ ಇತ್ತು ಅಂತೀರಿ. ಬಹಳ ಮುಂಗೋಪಿಯಾಗಿದ್ರು. ಅಮೆರಿಕಕ್ಕೆ ಹೋಗಿ ಬಂದ ಮೇಲೆ ಅದೇನೋ ಬದಲಾಗಿಬಿಟ್ಟರು. ಆದರೆ ಎಂದೂ ಸುಮ್ಮನೆ ಕೂರುವವರಲ್ಲ. ಅಡುಗೆಯನ್ನು ಸಹ ಅಚ್ಚುಕಟ್ಟಾಗಿ ಮಾಡುತ್ತಾರೆ.’

ಕ್ರಿಕೆಟಿಗ ಕಿರ್ವನಿ ಅವರ ಪತ್ನಿ ಹಬೀಬ ಹೇಳುವುದು ಹೀಗೆ… ‘ಆಗ ನನಗಿನ್ನೂ 14 ವರ್ಷ. ಅವರಿಗೆ 26 ವರ್ಷ. ಮದುವೆ ನಿಶ್ಚಯವಾಯಿತು. ನಮ್ಮ ವಯಸ್ಸಿನ ಅಂತರದ ಬಗ್ಗೆ ನೆಂಟರಿಷ್ಟರು, ಜನ ನಾನಾ ರೀತಿಯಲ್ಲಿ ಮಾತನಾಡಿಕೊಂಡರು. ಬೆಂಗಳೂರು ಅರಮನೆ ಟೆನ್ನಿಸ್ ಮೈದಾನದಲ್ಲಿ ಮದುವೆ. ಅಲ್ಲಿ ಭಾರತದ ಕ್ರಿಕೆಟ್ ತಂಡವೇ ಬಂದಿತ್ತು. ಮದುವೆ ನಂತರ ದೇಶ, ವಿದೇಶಗಳನ್ನು ಅವರೊಟ್ಟಿಗೆ ಸುತ್ತಿದೆ. ನಮಗೆಂದೂ ವಯಸ್ಸಿನ ಅಂತರ ಬಾಧಿಸಲಿಲ್ಲ…’

ಮಾಜಿ ಸಿಎಂ ಬಂಗಾರಪ್ಪ ಅವರ ಬಗ್ಗೆ ಪತ್ನಿ ಶಂಕುಂತಲಾ ಮಾತು… ‘ನಾನು ಓದಿದ್ದು 5ನೇ ತರಗತಿತನಕ. ನನಗೂ ಅವರಿಗೂ 11 ವರ್ಷ ವ್ಯತ್ಯಾಸ. ಸಂಬಂಧ ಕೂಡಿ ಬಂದು ಮದುವೆಯಾಗಿಬಿಟ್ಟಿತು. ಕುಬಟೂರಿನಲ್ಲಿ ಸಂಸಾರ. ಅವರು ಲಾ ಮುಗಿಸಿದ ಬಳಿಕ ಶಿವಮೊಗ್ಗದ ಚೆನ್ನಮ್ಮ ಲೇಔಟ್​ನಲ್ಲಿ ಬಾಡಿಗೆ ಮನೆಗೆ ಬಂದೆವು. 1967ರಲ್ಲಿ ಸೊರಬದಿಂದ ಸ್ಪರ್ಧಿಸಿ ಗೆದ್ದರು. ಅವತ್ತೆ ನಮ್ಮ ಮಧು ಹುಟ್ಟಿದ. ಮುಂದೆ ಅವರು ಮಿನಿಸ್ಟರ್ ಆದ ಮೇಲೆ ಬೆಂಗಳೂರಿಗೆ ಸಂಸಾರ ಬದಲಿಸಿದೆವು.. ಸಾಧಕರ ಬಗ್ಗೆ ಇಂಥ ಹಲವಾರು ಒಳನೋಟಗಳಿರುವ ಪುಸ್ತಕ ಇದು. ಒಮ್ಮೆ ಓದಲು ಕುಳಿತರೆ ಪೂರ್ತಿ ಮುಗಿಸಿಯೇ ಮೇಲೇಳಬೇಕು, ಅಷ್ಟು ಆಸಕ್ತಿಕರವಾಗಿದೆ.