Friday, 16th November 2018  

Vijayavani

Breaking News

ದುರಾಶೆಯೆಂಬ ಕಾಳಿಯನಾಗನ ಮರ್ದನವಾಗಲಿ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ಬಳಿಕ ಯಶೋದೆಯು ಕೃಷ್ಣನನ್ನು ಒರಳಿಗೆ ಕಟ್ಟಿದಳು. ಕೃಷ್ಣ ಒರಳುಕಲ್ಲನ್ನೇ ಎಳೆದುಕೊಂಡು ಮುಂದೆ ಸಾಗಿದನು. ದಾರಿಯಲ್ಲಿ ಜೋಡಿಯಾದ ಎರಡು ಮರಗಳ ನಡುವೆ ಒರಳು ಸಿಲುಕಿಕೊಂಡು ಬೃಹದಾಕಾರದ ಮರಗಳು ನೆಲಕ್ಕುರುಳಿದವು.

ನಲಕೂಬರ ಮಣಿಗ್ರೀವರೆಂಬ ಇಬ್ಬರು ಗಂಧರ್ವರು ಶಾಪಗ್ರಸ್ತರಾಗಿ ಮರಗಳ ಜನ್ಮ ತಾಳಿದ್ದರು. ಇವರಿಬ್ಬರೂ ಭಗವಂತನ ಭಕ್ತರೇ. ಆದರೆ ಒಮ್ಮೆ ಎದುರಿನಲ್ಲಿ ನಾರದರು ಬರುತ್ತಿದ್ದರೂ ಅಧಿಕಾರದ ಅಮಲಿನಿಂದ, ‘ನಮ್ಮನ್ನು ಕೇಳುವವರ್ಯಾರು?’ ಎಂದು ಅಹಂಕಾರದಿಂದ ಸ್ತ್ರೀಯರೊಂದಿಗೆ ಅಶ್ಲೀಲವಾಗಿ ಅಸಭ್ಯ ರೀತಿಯಿಂದ ಯಮುನಾನದಿಯಲ್ಲಿ ವಿಹರಿಸುತ್ತಿದ್ದರು. ಓರ್ವ ಕವಿ ಹೇಳುತ್ತಾನೆ; ‘ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕತಾ | ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಮ್ ||’ ‘ತಾರುಣ್ಯ, ಶ್ರೀಮಂತಿಕೆ, ಅಧಿಕಾರ, ಅವಿವೇಕ ಇವುಗಳು ಒಂದೊಂದೂ ಅನರ್ಥಕ್ಕೆ ಕಾರಣ. ಅಂತಹದ್ದರಲ್ಲಿ ಈ ನಾಲ್ಕೂ ಇಟ್ಟು ಸೇರಿದರೆ ಸಮಾಜದ ಗತಿ ಏನಾಗಬೇಕು!!’

ಮತ್ತೊಬ್ಬ ಕವಿ ಹೇಳುತ್ತಾನೆ; ‘ಕಪಿರಪಿ ಚ ಕಾಪಿಶಾಯನಮದಮತ್ತಃ ವೃಷ್ಚಿಕೇನ ಸಂದಷ್ಟಃ | ಅಪಿ ಚ ಪಿಶಾಚಗ್ರಸ್ತಃ ಕಿಂ ಬ್ರೂವೋ ವೈಕೃತಂ ತಸ್ಯ|| (ಕುವಲಯಾನಂದ) ‘ಚಪಲತೆಯ ತುತ್ತತುದಿಯಲ್ಲಿರುವ ಕೋತಿಗೆ ಎಲ್ಲಿಯೋ ಕಳ್ಳು (ಮದ್ಯ) ದೊರಕಿತಂತೆ. ಕಪಿ ಅದನ್ನು ಕುಡಿಯಿತಂತೆ. ಅದೇ ಸಮಯಕ್ಕೆ ಸರಿಯಾಗಿ ಆ ಕಪಿಗೆ ಒಂದು ಚೇಳು ಕಚ್ಚಿತಂತೆ. ಸಾಲದಕ್ಕೆ ಒಂದು ಪಿಶಾಚಿ ಕಪಿಯ ಒಳಗೆ ಸೇರಿಕೊಂಡಿತಂತೆ. ಇಂತಹ ಕಪಿಯ ಚೇಷ್ಟೆ ತಡೆಯಲು ಯಾರಿಂದ ಸಾಧ್ಯ?!’

ನಮ್ಮ ಸ್ಥಿತಿಯೂ ಕಪಿಯಂತೆಯೇ ಆಗಿದೆ. ಮೊದಲೇ ಯೌವನದ ಚಾಂಚಲ್ಯ. ಜೊತೆಗೆ ಶ್ರೀಮಂತಿಕೆ. ಸಾಲದ್ದಕ್ಕೆ ಅಧಿಕಾರ. ಎಲ್ಲದಕ್ಕೂ ಮಿಗಿಲಾಗಿ ಅವಿವೇಕ. ಇವೆಲ್ಲದರಿಂದಲೂ ಕೂಡಿದ ನಮ್ಮ ಅವಸ್ಥೆಯೂ ಕಪಿಯಂತಾಗಿದೆ. ಪ್ರಕೃತ ಗಂಧರ್ವರೂ ಹೀಗೆಯೇ ಅಹಂಕಾರದಿಂದ ಮೆರೆದದ್ದರಿಂದ ನಾರದರಿಂದ ಶಾಪಗ್ರಸ್ತರಾಗಿ ಮರಗಳಾಗಿ ಹುಟ್ಟಿದ್ದರು. ಬಳಿಕ ತಮ್ಮ ತಪ್ಪನ್ನು ಅರಿತು ಪಶ್ಚಾತ್ತಾಪದಿಂದ ಪವಿತ್ರರಾಗಿದ್ದ ಅವರಿಬ್ಬರನ್ನೂ ಕೃಷ್ಣಪರಮಾತ್ಮ ಉತ್ತಮ ಸ್ಥಾನಕ್ಕೆ ತೆರಳುವಂತೆ ಶಾಪವಿಮೋಚನೆ ಮಾಡಿದನು. ಹೀಗೆ ಕೃಷ್ಣನ ಪ್ರತಿಯೊಂದು ಕಾರ್ಯದಲ್ಲಿಯೂ ಭಕ್ತರ ರಕ್ಷಣೆ ಹಾಗೂ ಅವರ ಮೇಲಿರುವ ಕಾರುಣ್ಯ ಎದ್ದುತೋರುತ್ತದೆ.

ಭೀಷ್ಮರು ಕೃಷ್ಣನ ಮತ್ತೊಂದು ಬಾಲ್ಯಲೀಲೆಯನ್ನು ವರ್ಣಿಸಲು ಆರಂಭಿಸಿದರು. ಕಾಳಿಯನಾಗನ ವಿಷದಿಂದ ಸಮಸ್ತ ಗೋಕುಲದ ಪರಿಸರವೇ ಕಲುಷಿತವಾಗಿತ್ತು. ಯಮುನೆಯ ನೀರು ಕುಡಿದು ಪ್ರಾಣಿಗಳೆಲ್ಲವೂ ಅಸುನೀಗುತ್ತಿದ್ದವು. ಇಂತಹ ಪರಿಸರಕ್ಕೆ ಅಂಟಿದ ವಿಷದೋಷವನ್ನು ಪರಿಹರಿಸಲು ಪುಟ್ಟ ಬಾಲಕನಾದ ಶ್ರೀಕೃಷ್ಣನು ಯಮುನೆಯ ಮಡುವಿಗೆ ಧುಮುಕಿ ಕಾಳಿಯನ ಹೆಡೆಯ ಮೇಲೆ ನರ್ತಿಸಿ ಯಮುನೆಯ ನೀರನ್ನು ಸ್ವಚ್ಛಗೊಳಿಸಿ ಲೋಕಹಿತವಾದ ಪರಿಸರರಕ್ಷಣೆಯ ಮಹತ್ಕಾರ್ಯವನ್ನು ಮಾಡಿದನು.

ಕೃಷ್ಣನ ಕಾಳಿಯಮರ್ದನವನ್ನು ಕಂಡು ದೇವತೆಗಳೆಲ್ಲರೂ ಆಕಾಶದಿಂದ ಪುಷ್ಪವೃಷ್ಟಿಗೈದರಂತೆ. ಕೃಷ್ಣ ನಡೆಸಿದ ಕಾಳಿಯಮರ್ದನದಲ್ಲಿಯೂ ಒಂದು ಸಂದೇಶ ಅಡಗಿದೆ ಎನ್ನುತ್ತಾರೆ ವಾದಿರಾಜಗುರುಸಾರ್ವಭೌಮರು. ಕೃಷ್ಣ ಕಾಳಿಯನ ಹೆಡೆಯನ್ನು ಮಾತ್ರ ತನ್ನ ಪಾದಗಳಿಂದ ತುಳಿದ. ಕಾಳಿಯನ ಬಾಲವನ್ನು ತನ್ನ ಕೈಗಳಿಂದ ಎತ್ತಿಹಿಡಿದ. ಇದರ ಅರ್ಥ ತಪ್ಪು ಎಸಗಿರುವುದು ಕಾಳಿಯನ ಹೆಡೆ! ಕಾಳಿಯ ಹೆಡೆಯ ಮೂಲಕ ವಿಷವನ್ನು ಕಾರಿ ನೀರನ್ನೆಲ್ಲ ಮಲಿನಗೊಳಿಸಿದ್ದನು. ಆದ್ದರಿಂದ ಎಲ್ಲರನ್ನೂ ಹಿಂಸಿಸುತ್ತಿದ್ದ ಕಾಳಿಯನ ಹೆಡೆಯನ್ನು ಮಾತ್ರ ಕೃಷ್ಣ ತುಳಿದ. ನಿರಪರಾಧಿಯಾದ ಬಾಲವನ್ನು ಎತ್ತಿಹಿಡಿದ. ನಿರಪರಾಧಿಯಾದ ಬಾಲವನ್ನು ಕೈಯಿಂದ ಮೇಲಕ್ಕೆತ್ತಿ ಹಿಡಿಯುವ ಮೂಲಕ ಅಪರಾಧಿಗಳನ್ನು ಮಾತ್ರ ದಂಡಿಸಬೇಕು ಎಂಬ ಸಂದೇಶವನ್ನು ಕಾಳಿಯಮರ್ದನದ ಮೂಲಕ ತೋರಿಸಿಕೊಟ್ಟನು. ಆದರೆ ಇಂದು ಅಪರಾಧಿಗಳು ತಪ್ಪಿಸಿಕೊಂಡು ನಿರಪರಾಧಿಗಳು ಕಾನೂನಿನ ಶಿಕ್ಷೆಗೆ ಒಳಗಾಗುವಂತಹ ವಿಪರ್ಯಾಸ ನಡೆಯುತ್ತಿದೆ.

ಯಮುನೆಯ ಮಡು ಕಾಳಿಯನಾಗನ ವಿಷದಿಂದ ತುಂಬಿದಂತೆ ನಮ್ಮ ಹೃದಯವೂ ದುರಾಶೆಯೆಂಬ ವಿಷದಿಂದ ಕೂಡಿದೆ. ಯಮುನೆಯ ಮಡುವಿನಲ್ಲಿ ಕಾಳಿಯನಾಗ ಹತ್ತಾರು ಹೆಡೆಗಳಿಂದ ವಿಜೃಂಭಿಸಿದಂತೆ ನಮ್ಮ ಹೃದಯದಲ್ಲಿಯೂ ದುರಾಶೆಯೆಂಬ ಕಾಳಿಯನಾಗ ಹೆಡೆಯೆತ್ತಿ ಸಮಾಜಕ್ಕೆ ಹಾನಿಕಾರಕವಾದ ರಾಗದ್ವೇಷಗಳೆಂಬ ವಿಷವನ್ನು ಕಾರುತ್ತಿದ್ದಾನೆ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಪ್ರತಿಯೊಬ್ಬರಲ್ಲಿಯೂ ಇರುವ ರಾಗದ್ವೇಷಗಳೇ ಕಾರಣ. ಕೃಷ್ಣ ಯಮುನೆಯ ಮಡುವಿಗೆ ಹಾರಿದ ಕೂಡಲೇ ಯಮುನಾನದಿ ಶುದ್ಧವಾಯಿತು. ಯಮುನೆಯ ಮಡುವಿನಂತೆ ಕಲುಷಿತವಾಗಿರುವ ನಮ್ಮ ಹೃದಯಮಡುವಿಗೂ ಕೃಷ್ಣ ಧಾವಿಸಿಬಂದು ನಮ್ಮ ಹೃದಯದಲ್ಲಿ ನೆಲೆನಿಂತರೆ ದುರಾಶೆಯೆಂಬ ಕಾಳಿಯನ ಮರ್ದನವಾಗುತ್ತದೆ.

ಕಾಳಿಯನಾಗನಿಗೆ ಹತ್ತಾರು ಹೆಡೆಗಳಿದ್ದಂತೆ ನಮ್ಮೊಳಗಿರುವ ದುರಾಶೆಗೂ ಅನೇಕ ಹೆಡೆಗಳು. ಕೃಷ್ಣ ಕಾಳಿಯನ ಒಂದು ಹೆಡೆಯನ್ನು ತುಳಿದಾಗ ಮತ್ತೊಂದು ಹೆಡೆ ಮೇಲೇಳುತ್ತಿತ್ತು. ಅದನ್ನು ತುಳಿದಾಗ ಮತ್ತೊಂದು ಹೆಡೆ. ಅದರಂತೆ ನಮ್ಮ ಒಂದು ವಿಧದ ದುರಾಶೆಯನ್ನು ನಿಲ್ಲಿಸಿದರೆ ಮತ್ತೊಂದು ಮುಖದ ಆಸೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಕೃಷ್ಣ ಪ್ರತಿಯೊಂದು ಹೆಡೆಯನ್ನೂ ಮರ್ದಿಸಿ ಯಾವ ಹೆಡೆಗಳೂ ಮೇಲೇಳದಂತೆ ಮಾಡಿದನು. ನಾವೂ ಕೃಷ್ಣನ ಬಳಿ, ‘ಕೃಷ್ಣ! ನೀನು ಯಮುನೆಯ ಮಡುವಿಗೆ ಧುಮುಕಿ ಯಮುನೆಯ ಮಡುವನ್ನು ಪರಿಶುದ್ಧಗೊಳಿಸಿದಂತೆ ನಮ್ಮೆಲ್ಲರ ಹೃದಯದಲ್ಲಿ ನೆಲೆನಿಂತು ದುರಾಶೆಗಳಿಂಬ ಕಾಳಿಯನನ್ನು ಧ್ವಂಸಗೊಳಿಸುವ ಮೂಲಕ ಅಂತರಂಗವನ್ನು ಪರಿಶುದ್ಧಗೊಳಿಸು’ ಎಂದು ಪ್ರಾರ್ಥಿಸಬೇಕು. ಇದು ಕಾಳಿಯಮರ್ದನದ ಹಿಂದಿರುವ ಅಧ್ಯಾತ್ಮಸಂದೇಶವಾದರೆ ಮತ್ತೊಂದು ಸಂದೇಶ ಪರಿಸರದ ನೈರ್ಮಲ್ಯವನ್ನು ರಕ್ಷಿಸುವುದು. ಅಂದು ಕಾಳಿಯನಾಗ ಇದ್ದಂತೆ ಇಂದು ಯಂತ್ರಗಳೆಂಬ ನಾಗಗಳಿಂದ ಹೊರಗಿನ ಪರಿಸರವೆಲ್ಲವೂ ಕಲುಷಿತವಾಗುತ್ತಿದೆ. ಒಂದೆಡೆ ರಾಗದ್ವಾಷಾದಿಗಳಿಂದ ಅಂತರಂಗ ಕಲುಷಿತವಾಗುತ್ತಿದ್ದರೆ ಮತ್ತೊಂದೆಡೆಯಿಂದ ಬಾಹ್ಯಪರಿಸರವೂ ಕಲುಷಿತವಾಗುತ್ತಿದೆ. ಕೃಷ್ಣ ಕಾಳಿಯನಾಗನ ಮರ್ದನದ ಮೂಲಕ ಪರಿಸರದ ನೈರ್ಮಲ್ಯ ಹಾಗೂ ಅಂತರಂಗದ ನೈರ್ಮಲ್ಯದ ಸಂದೇಶವನ್ನು ನೀಡಿದ್ದಾನೆ.

Leave a Reply

Your email address will not be published. Required fields are marked *

Back To Top