Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಗುರಿಯ ದಾರಿಯಿಂದ ಜಾರದಿರಿ!

Thursday, 12.07.2018, 3:01 AM       No Comments

| ಸ್ವಾಮಿ ಹರ್ಷಾನಂದಜೀ ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ನಿವಾತಕವಚರೆಂಬ ರಾಕ್ಷಸರಿದ್ದರು. ಇವರು ಪ್ರಹ್ಲಾದನ ತಮ್ಮನಾದ ಸುಹ್ಲಾದನ ನೂರು ಮಕ್ಕಳು. ಇವರು ಹಗಲಿನಲ್ಲಿ ಇಂದ್ರನನ್ನು ಚೆನ್ನಾಗಿ ಪೀಡಿಸಿ, ರಾತ್ರಿ ಸಮುದ್ರದಲ್ಲಿ ಅಡಗುತ್ತಿದ್ದರು. ಅದೃಶ್ಯರಾದ ಇವರ ನಿವಾರಣೆಗೆ ಇಂದ್ರನು ಶ್ರೀಕೃಷ್ಣಾರ್ಜುನರನ್ನು ಪ್ರಾರ್ಥಿಸಿದ. ಶ್ರೀಕೃಷ್ಣಾರ್ಜುನರು ಕುರುಕ್ಷೇತ್ರದ ರಣಾಂಗಣದಿಂದ ಬಂದರು. ಅರ್ಜುನನು ತನ್ನಲ್ಲಿದ್ದ ವಿಶೇಷ ಬಾಣಗಳಿಂದ ಸಮುದ್ರದಲ್ಲಿ ಅಡಗಿದ್ದ ನಿವಾತಕವಚರನ್ನು ಎಳೆದೆಳೆದು ಕೊಂದನು. ಇವರ ಸಂಹಾರಕ್ಕೆ ಶ್ರೀಕೃಷ್ಣಾರ್ಜುನರು ಹೋದಾಗಲೇ ಇತ್ತ ಯುದ್ಧದಲ್ಲಿ ಕೌರವರು ಮೋಸದಿಂದ ಮಹಾವೀರ ಅಭಿಮನ್ಯುವನ್ನು ಕೊಂದರು. ಚಕ್ರವ್ಯೂಹದಲ್ಲಿದ್ದ ಅಭಿಮನ್ಯುವನ್ನು ರಕ್ಷಿಸಲು ಉಳಿದ ಪಾಂಡವರು ಪ್ರಯತ್ನಿಸಿದರು. ಆದರೆ ಜಯದ್ರಥ ಅವರನ್ನು ತಡೆದ. ವೀರಾಧಿವೀರ ಕೌರವರು ಮೋಸದಿಂದ ಅಭಿಮನ್ಯುವನ್ನು ಕೊಂದರು.

ಶಿವನನ್ನು ಗೆದ್ದ, ನಿವಾತಕವಚರನ್ನು ನಿವಾರಿಸಿದ ಅರ್ಜುನ ಅನೇಕ ಯುದ್ಧಗಳನ್ನು ಗೆದ್ದ. ಅಪಾರ ಕೀರ್ತಿ ಸಂಪಾದಿಸಿದ. ಈಗ ಎಲ್ಲವನ್ನೂ ಕಳೆದುಕೊಂಡು ಪಾಪಗಳಿಸುವ ಸಂದರ್ಭ ಬಂದಿದೆ. ‘ಪಾಪವೆಂದರೆ ದುಃಖಕ್ಕೆ ಕಾರಣವಾದ ಕೆಲಸ. ಇದರಿಂದ ನರಕಪ್ರಾಪ್ತಿ ಮೊದಲನೆಯದಾದರೆ, ಎರಡನೆಯದು ಬದುಕಿರುವಾಗಲೇ ಕೆಟ್ಟ ಹೆಸರು ಪ್ರಾಪ್ತಿ.’ ಒಳ್ಳೆಯವನು ಕೆಟ್ಟ ಹೆಸರು ಪಡೆದುಕೊಂಡರೆ ಸತ್ತಂತೆಯೇ ಎನ್ನುವರು ಮತ್ತೊಬ್ಬ ವ್ಯಾಖ್ಯಾನಕಾರರು. ಶ್ರೀಮಂತನೊಬ್ಬ ಐಶ್ವರ್ಯ ಕಳೆದುಕೊಂಡರೆ ಜನರು ಅವನಿಗೆ ‘ಸತ್ತೇಹೋದ’ ಎನ್ನುವರು. ಹಾಗೆಯೇ, ಅರ್ಜುನನಂತಹವನು ಕೀರ್ತಿ ಕಳೆದುಕೊಂಡರೆ, ಅದು ಸತ್ತಂತೆಯೇ ಆಗುವುದು.

ಮಾಡಲೇಬೇಕಾದ ನಿತ್ಯ ಕರ್ತವ್ಯಕರ್ಮಗಳಿವೆ. ಎರಡನೆಯದಾಗಿ ಪಾಪಕರವಾದ ನಿಷಿದ್ಧ ಕರ್ಮಗಳೂ ಇವೆ. ಮೂರನೆಯದು ಸಕಾಮವಾದ ಕಾಮ್ಯಕರ್ಮಗಳೂ ಇವೆ. ಮನುಷ್ಯಪ್ರಯತ್ನದಿಂದ ಈಡೇರಿಸಿಕೊಳ್ಳಲಾಗದ ಆಸೆಯನ್ನು ದೈವಾನುಗ್ರಹದಿಂದ ಪಡೆಯಬಹುದು. ಇದಕ್ಕೆ ಬೇಕಾದ ನೀತಿ-ನಿಯಮಗಳನ್ನು ಧರ್ಮಶಾಸ್ತ್ರ ಕೊಟ್ಟಿದೆ. ಧರ್ಮಕಾರ್ಯ ಹಾಗೂ ಭಗವಂತನ ಕೃಪೆಯಿಂದಲೇ ಪಡೆಯಬಹುದು. ಇಂತಹ ಸಕಾಮ ಕರ್ಮ ಮಾಡುವಾಗ ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ. ಪ್ರಾರಂಭಿಸಿದ ಮೇಲೆ ಮುಗಿಸಲೇಬೇಕು. ಆಸೆಯಿಂದ ಸಕಾಮಕರ್ಮ ಮಾಡುವಾಗ, ಪೂರ್ವಜನ್ಮದ ಪುಣ್ಯದ ಫಲವಾಗಿ ಇದು ಪ್ರಯೋಜನವಿಲ್ಲ; ಭಗವಂತನೇ ಸರ್ವಸ್ವವೆಂಬ ವೈರಾಗ್ಯ ಬಂದು ಆಸೆ ಹೋದರೂ, ಅದು ಸುಟ್ಟ ಬೀಜದಂತೆ ಫಲ ಕೊಡದಿದ್ದರೂ ಮಧ್ಯದಲ್ಲಿ ಬಿಡುವಂತಿಲ್ಲ. ಬಿಟ್ಟರೆ ತಪ್ಪಾಗುವುದು. ಹಿಡಿದ ಕರ್ತವ್ಯ ಪೂರ್ಣಗೊಳಿಸಲೇಬೇಕು. ಒಟ್ಟಿನಲ್ಲಿ ಇಷ್ಟೆಲ್ಲ ಸಾಹಸಗೈದ ಅರ್ಜುನ ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಯುದ್ಧ ತ್ಯಜಿಸಿದರೆ ಮಹಾಪಾಪವೆಸಗಿದಂತಾಗುವುದು.

ಶ್ರೀಕೃಷ್ಣಪರಮಾತ್ಮನು ಈಗ ದೈನಂದಿನ ಜೀವನದಲ್ಲಿ ಪ್ರಾಯೋಗಿಕ ದೃಷ್ಟಿಯಿಂದ ಮಾಡಬೇಕಾದ್ದನ್ನು ಉಪದೇಶಿಸುತ್ತಿದ್ದಾನೆ. ಈ ದಿಕ್ಕಿನಲ್ಲಿ ಮತ್ತೊಂದು ಕಾರಣ ಕೊಡುತ್ತಿದ್ದಾನೆ. (ಅಕೀರ್ತಿಂ ಚಾಪಿ ಭೂತಾನಿ… ಭ.ಗೀ.: 2.34). ಶ್ರೀಕೃಷ್ಣ, ‘ಅರ್ಜುನ, ನೀನೀಗ ಯುದ್ಧ ಮಾಡುವುದಿಲ್ಲ ಎಂದರೆ ಜಗತ್ತು ನಿನ್ನ ಅಪಕೀರ್ತಿಯನ್ನು ಸದಾಕಾಲ ಆಡಿಕೊಳ್ಳುವುದು. ಸಂಭಾವಿತನಾದ ಮನುಷ್ಯನಿಗೆ ಆಕಸ್ಮಿಕವಾಗಿ ಅಪಕೀರ್ತಿ ಬಂದರೆ ಅದು ಮರಣಕ್ಕಿಂತಲೂ ಹೀನ, ಭಯಂಕರ’ ಎನ್ನುವನು. ‘ಹೇಗಿದ್ದವನು ಹೀಗಾದನೇ?’ ಎಂದು ಜನರು ಆಡಿಕೊಳ್ಳುವುದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ.

ಬುದ್ಧ ಕಥೆಯೊಂದನ್ನು ಹೇಳಿದ್ದಾನೆ. ಸಂನ್ಯಾಸಿಯೊಬ್ಬ ತಿರುಗಾಡುತ್ತ ತಿಳಿನೀರಿನ ಸರೋವರದ ಬಳಿ ಬಂದ. ಅದರ ದಂಡೆಯಲ್ಲಿ ಕುಳಿತ. ಸ್ವಲ್ಪ ಸಮಯ ಧ್ಯಾನ ಮಾಡಿದ. ಮನಸ್ಸು ಪ್ರಶಾಂತವಾಯಿತು. ಕಣ್ಣು ತೆರೆದ. ಕೈಗೆಟಕುವಂತೆ ಸುಂದರ ತಾವರೆ ಅರಳಿದೆ. ಅದರ ಪರಿಶುದ್ಧ ಪರಿಮಳ ಪಸರಿಸಿದೆ. ಪರಿಮಳ ಸವಿಯಲು ಅದನ್ನು ಮೂಗಿನ ಬಳಿಗೆ ಹಿಡಿದೆಳೆದ. ಸುಗಂಧ ಆಘ್ರಾಣಿಸಲು ಯತ್ನಿಸಿದ. ಆಗ ‘ವಾಸನೆ ಕಳ್ಳ’ ಎಂಬ ಅಶರೀರವಾಣಿಯಾಯಿತು. ಇವನಿಗೆ ಹೆದರಿಕೆಯಾಯಿತು. ಆ ಬಳ್ಳಿಯನ್ನು ತೊರೆದ. ಬೈದವರು ಯಾರೆಂದು ತಿಳಿಯಲಿಲ್ಲ. ಅಲ್ಲಿ ಯಾರೂ ಇರಲಿಲ್ಲ. ಹೀಗೇಕಾಯಿತೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಬೇಡನೊಬ್ಬ ನಾಯಿಗಳೊಡನೆ ಬುಟ್ಟಿ ಸಮೇತನಾಗಿ ಬಂದ. ನಾಯಿಗಳಿಗೆ ಸ್ನಾನ ಮಾಡಿಸಿ ತಾನೂ ಸ್ನಾನ ಮಾಡಿದ. ಹತ್ತಾರು ತಾವರೆಗಳಿದ್ದ ಬಳ್ಳಿಯನ್ನು ಬುಡಸಮೇತ ಕಿತ್ತ. ಹೂಗಳನ್ನು ಬುಟ್ಟಿಯಲ್ಲಿ ಬಿಡಿಸಿ ತುಂಬಿಕೊಂಡ. ಬಂದಂತೆಯೇ ನಾಯಿಗಳೊಡನೆ ಹೊರಟೇಬಿಟ್ಟ. ಇಷ್ಟೆಲ್ಲ ಆದರೂ, ‘ವಾಸನೆ ಕಳ್ಳ’ ಎಂಬ ಧ್ವನಿ ಬರಲಿಲ್ಲ. ಆಗ ಸಂನ್ಯಾಸಿ ಸಿಟ್ಟಿನಿಂದ ತನ್ನನ್ನು ಬೈದ ಅದೃಷ್ಟದೇವತೆಗೆ ‘ಅಯ್ಯಾ ನೀನು ಯಾರು? ಮರೆಯಿಂದ ನನ್ನನ್ನು ವಾಸನೆ ಕಳ್ಳ ಎಂದು ಬೈದೆ. ಆದರೆ, ಆ ಬೇಡನ ಕೆಲಸ ನೋಡಿ ನೀನು ಬೈಯುವುದಿರಲಿ, ಮಾತೂ ಕೂಡ ಆಡಲಿಲ್ಲ. ನಿನಗೆ ಅವನನ್ನು ಕಂಡರೆ ಹೆದರಿಕೆ. ಸಾಧುವಾದ ನನಗೆ ಮಾತ್ರ ಬೈದೆ’ ಎಂದನು. ಆಗ ಅದೃಶ್ಯವಾಗಿದ್ದ ದೇವತೆ ಪ್ರತ್ಯಕ್ಷವಾಯಿತು. ಅದು, ‘ನೋಡು, ನಿನ್ನದು ಪರಿಶುದ್ಧ ಜೀವನ. ನಿನ್ನ ಬದುಕು ಶುಭ್ರವಾದ ಬಿಳಿಬಟ್ಟೆಯಂತೆ. ಅದರ ಮೇಲೆ ಒಂದು ಬಿಂದು ಕರಿಮಸಿ ಬಿದ್ದರೂ ಅಸಹ್ಯವಾಗುವುದು. ಇದಕ್ಕಾಗಿ ನಿನ್ನನ್ನು ಎಚ್ಚರಿಸಿದೆ. ಆ ಬೇಡನ ಬದುಕು ಕರಿಬಟ್ಟೆಯಂತೆ. ಅದರೆ ಮೇಲೆ ಹಂಡೆ ಮಸಿ ಸುರಿದರೂ ಯಾವುದೇ ವ್ಯತ್ಯಾಸವಾಗದು. ಆದ್ದರಿಂದ ನೀನು ಅವನ ಬಗ್ಗೆ ಚಿಂತಿಸದಿರು’ ಎಂದಿತು. ಶುದ್ಧ ಜೀವನ ನಡೆಸಲು ಪ್ರಯತ್ನಿಸುತ್ತಿರುವವರು ಎಚ್ಚರದಿಂದಿರಬೇಕು. ಅವರು ಅತಿ ಸಣ್ಣದಾದ ತಪ್ಪನ್ನೂ ಮಾಡಬಾರದು. ಈ ಜಾಗ್ರತೆಯಿದ್ದಲ್ಲಿ ಮಾತ್ರ ಅವರು ಜೀವನದಲ್ಲಿ ಗುರಿ ಸೇರುವರು.

‘ಹೇ ಸಂಭಾವಿತನಾದ ಅರ್ಜುನ, ನೀನು ಅನೇಕ ಕೀರ್ತಿಗಳನ್ನು ಪಡೆದಿರುವೆ. ಅಪಕೀರ್ತಿ ಬಂದರೆ ಅದು ಮರಣಕ್ಕಿಂತಲೂ ಹೆಚ್ಚು’ ಎಂದು ಶ್ರೀಕೃಷ್ಣ ಹೇಳುವನು. ಶಂಕರಾನಂದರು, ‘ಮರಣದುಃಖವು ಒಮ್ಮೆ ಮಾತ್ರ. ಸತ್ತವನಿಗಾಗಲೀ, ಅವನ ಬಂಧುಗಳಿಗಾಗಲೀ ಆ ದುಃಖ ತಾತ್ಕಾಲಿಕ. ದೇಹ ತೊರೆದವನಿಗೆ ಪುನರ್ಜನ್ಮ. ಅದರ ಮೂಲಕ ಮತ್ತೊಂದು ದೇಹಪ್ರಾಪ್ತಿ. ಬಂಧುಬಳಗವು ಕ್ರಮೇಣ ದುಃಖವನ್ನು ಮರೆಯುವುದು. ಕೀರ್ತಿಹಾನಿಯ ದುಃಖವು ವ್ಯಕ್ತಿ ಬದುಕುವವರೆಗೂ ಇರುವುದು. ಅದು ಸದಾ ಅವನ ಮನಸ್ಸಿನ ಮೇಲೆ ಭಾರ ಹಾಕುತ್ತಿರುವುದು’ ಎನ್ನುವರು.

ಬ್ರಹ್ಮಾನಂದ ಗಿರಿ (ವೆಂಕಟನಾಥ) ಅವರು ತಮಾಷೆಗಾಗಿ, ‘ಬಹಳ ಹಣ್ಣುಗಳಿರುವ ಮರವನ್ನು ನೋಡಿ ಸಂತೋಷಪಡುವಂತಿಲ್ಲ. ಕಾರಣವೆಂದರೆ ಹಣ್ಣುಗಳನ್ನು ನೋಡಿದೊಡನೆಯೇ ಜನರು ಕಲ್ಲೆಸೆಯುವರು’ ಎನ್ನುವರು. ಉತ್ತಮರಾದವರು ತಾವು ಶ್ರೇಷ್ಠರೆಂದು ತಿಳಿದಿದ್ದರೂ ಬಯ್ಯುವರು ಬೈದೇ ಬಯ್ಯುವರು.

ರಾಮಾಯಣದ ಉತ್ತರಕಾಂಡದಲ್ಲಿ ಬಂದಿರುವ ಅವಮಾನವನ್ನು ಗೂಢಚಾರರಿಂದ ರಾಮ ತಿಳಿದಿದ್ದಾನೆ. ಗೂಢಚಾರರು ಹೆದರುತ್ತಾ ರಾಮನಿಗೆ, ‘ಸೀತೆ ಒಂದು ವರ್ಷ ಶತ್ರುವಿನ ಮನೆಯಲ್ಲಿದ್ದರೂ ಶ್ರೀರಾಮ ಪರೀಕ್ಷಿಸದೆ ಏಕಾಏಕಿ ಸ್ವೀಕರಿಸಿದ. (ಅವರಿಗೆ ಅಗ್ನಿಪರೀಕ್ಷೆ ತಿಳಿದಿರಲಿಲ್ಲ. ತಿಳಿದಿದ್ದರೂ ನಂಬುತ್ತಿರಲಿಲ್ಲ) ಎಂದು ಜನ ಮಾತನಾಡುತ್ತಿದ್ದಾರೆ’ ಎಂದು ವರದಿ ಒಪ್ಪಿಸಿದರು. ಆಗ ಶ್ರೀರಾಮಚಂದ್ರ ತಮ್ಮಂದಿರನ್ನು ಕರೆಸುವನು. ನಡೆದ ವಿಷಯ ತಿಳಿಸುವನು. ಸೀತಾಪರಿತ್ಯಾಗದ ವಿಚಾರ ಹೇಳುತ್ತಾ, ‘ಕೀರ್ತಿ ಇದ್ದವನಿಗೆ ಅಪಕೀರ್ತಿ ಬಂದಾಗ ಅದು ದೀರ್ಘಕಾಲ ಇರುವುದು. ಫಲವಾಗಿ ಅವನು ಉತ್ತಮ ಲೋಕಗಳನ್ನು ಕಳೆದುಕೊಳ್ಳುವನು. ಕೆಳಗಿನ ಲೋಕಗಳಲ್ಲಿ ಬೀಳುವನು. ಜನರು ಅಪಕೀರ್ತಿ ಮಾತನಾಡುವವರೆಗೂ ಅವನು ನರಕಾದಿಲೋಕಗಳಿಗೆ ಹೋದಂತೆಯೇ. ಯಾರ ವಿಷಯದಲ್ಲಿ ಅಪಕೀರ್ತಿ ಉಂಟಾಗುವುದೋ, ಅವರು ಅಪಕೀರ್ತಿ ಇರುವವರೆಗೂ ದುರ್ಗತಿಯಲ್ಲಿ ಬೀಳುವರು’ ಎನ್ನುವನು.

‘ನೀನು ಕರುಣೆಯಿಂದ ಯುದ್ಧ ನಿವೃತ್ತನಾಗುವೆಯಾದರೂ ಕೌರವರು ನಿನ್ನನ್ನು ನಂಬುವುದಿಲ್ಲ. ಬದಲಾಗಿ ನೀನು ಹೆದರಿಕೆಯಿಂದ ಓಡಿ ಹೋಗುತ್ತಿರುವೆ ಎಂದು ಭಾವಿಸಿ, ಅವರು ಆಕ್ರಮಿಸಿ ನಿನ್ನನ್ನು ಕೊಲ್ಲಲು ಯತ್ನಿಸುವರು’ ಎನ್ನುವರು ಸಂತ ಜ್ಞಾನೇಶ್ವರರು ತಮ್ಮ ಜ್ಞಾನೇಶ್ವರೀ ಗ್ರಂಥದಲ್ಲಿ.

Leave a Reply

Your email address will not be published. Required fields are marked *

Back To Top