Friday, 16th November 2018  

Vijayavani

Breaking News

ಮಣ್ಣೆತ್ತಿನ ಅಮಾವಾಸ್ಯೆ

Thursday, 12.07.2018, 3:02 AM       No Comments

ಮಣ್ಣೆತ್ತಿನ ಅಮಾವಾಸ್ಯೆ ಎಂಬುದು ರೈತರ ಹಬ್ಬ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಕೆರೆಯಿಂದ ತಂದ ಮಣ್ಣಿನಿಂದ ಎತ್ತುಗಳ ಪ್ರತಿರೂಪ ಮಾಡಿ ಪೂಜಿಸುವುದು ವಿಶೇಷ. ಮಣ್ಣಿಗೂ, ಎತ್ತಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಹಬ್ಬದ ಪರಿಚಯಾತ್ಮಕ ಬರಹವಿದು.

| ಗುರುಶಾಂತಸ್ವಾಮಿ ಹಿರೇಮಠ ನೆಗಳೂರ

ಭಾರತ ಹಬ್ಬಹರಿದಿನಗಳ ನಾಡು. ಇಲ್ಲಿ ಸಂಸ್ಕೃತಿ ಸಂಸ್ಕಾರಗಳಿಗೆ ವಿಶೇಷ ಮಹತ್ವವಿದೆ. ನಾವೆಲ್ಲ ಕಲ್ಲು ಮಣ್ಣಿನಲ್ಲಿ, ಪ್ರಕೃತಿಯಲ್ಲಿ ದೈವತ್ವವನ್ನು ಕಾಣುತ್ತೇವೆ. ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಇದು ಮುಂಗಾರಿನ ಆರಂಭದ ಹಬ್ಬ ಕೂಡ.

ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ. ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣಿನ ಪೂಜೆಯ ದ್ಯೋತಕಗಳಾಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ – ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ. ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು ಕಾರಹುಣ್ಣಿಮೆಯಲ್ಲಿ ವಿಶೇಷವಾಗಿ ಮೈತೊಳೆದು, ಬಣ್ಣ ಹಚ್ಚಿ, ವಿವಿಧ ಪರಿಕರಗಳಿಂದ ಸಿಂಗಾರ ಮಾಡುತ್ತಾರೆ. ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು. ದನಕರುಗಳನ್ನು ಮನಬಂದಂತೆ ಓಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿಕಾಯಕಕ್ಕೆ ಸಜ್ಜು ಮಾಡುತ್ತಾರೆ.

ಕಾರ ಹುಣ್ಣಿಮೆ ಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮಾವಾಸ್ಯೆ. ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ಸಣ್ಣ-ದೊಡ್ಡ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ಖರೀದಿಸಿ ತರುತ್ತಾರೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬೇಗಡೆಯ ಚೂರು, ಬಣ್ಣದಲ್ಲಿ ತೋಯಿಸಿದ ಜೋಳ, ಕುಸುಬಿ ಕಾಳುಗಳಿಂದ ಎತ್ತುಗಳನ್ನು ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರಗಳನ್ನು ತೊಡಿಸಿ ಸಿಂಗರಿಸುತ್ತಾರೆ.

ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣುಮಕ್ಕಳು ಹೋಳಿಗೆ, ಕಡಬು ಮುಂತಾದ ಸವಿಸವಿ ಅಡುಗೆ ಸಿದ್ಧಪಡಿಸಿರುತ್ತಾರೆ. ಮನೆಯ ದನಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪರ, ಊದುಬತ್ತಿ, ಲೋಭಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಿನಲ್ಲಿ ದೇವಸ್ಥಾನಗಳಿಗೆ ಕಾಯಿ, ಕರ್ಪರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.

ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ, ‘ಎಂಟತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ’ ಎಂದು ತಿರುಗುತ್ತಾರೆ. ಮನೆಯವರು ಜೋಳ, ಗೋಧಿ, ಸಜ್ಜೆ, ಅಕ್ಕಿ, ಹಣ ನೀಡಿ ಕಳಿಸುತ್ತಾರೆ. ಸಂಗ್ರಹಿಸಿದ ದವಸಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ವಿಭೂತಿ, ತೆಂಗಿನಕಾಯಿ, ಬೆಲ್ಲ, ಚುರಮುರಿ ಖರೀದಿಸುತ್ತಾರೆ. ಹೊಳೆ, ಕೆರೆ, ಹಳ್ಳದ ದಂಡೆಗೆ ಹೋಗಿ ಅಲ್ಲಿ ಎಲ್ಲ ಮಣ್ಣೆತ್ತುಗಳ ಮುಖ ತೊಳೆದು ವಿಭೂತಿ, ಕುಂಕುಮ ಹಚ್ಚಿ ಊದಬತ್ತಿ ಬೆಳಗಿ ಪಂಚ ಪಳಾರ ಹಾಕಿ, ಕಾಯಿ ಒಡೆಯುತ್ತಾರೆ. ಕೈಮುಗಿದು ಊರ ಸಮೃದ್ಧಿಗೆ ಬೇಡಿಕೊಂಡು ಎತ್ತುಗಳನ್ನು ಹೊಳೆಗೆ ಬಿಡುತ್ತಾರೆ. ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರು ಹಂಚುತ್ತಾರೆ. ಇದು ಹಳ್ಳಿಯ ಮಕ್ಕಳ ಮಣ್ಣೆತ್ತಿನ ಅಮಾವಾಸ್ಯೆಯ ಸಂಭ್ರಮ. ಭೂತಾಯಿಗೆ ರೈತಾಪಿ ಜನ ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿ ವರ್ಷಾರಂಭದಲ್ಲಿ ಬೇಡಿಕೊಳ್ಳುವ ಹಬ್ಬವಾಗಿದೆ.

ಅರಳೆಲೆ ಬಸವನ ಪೂಜೆ

ಉತ್ತರ ಕರ್ನಾಟಕದಲ್ಲಿ ಜ್ಯೇಷ್ಠ ಬಹುಳ ಅಮಾವಾಸ್ಯೆಗೆ ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯುತ್ತಾರೆ. ಹಳ್ಳಿಯ ಹೆಣ್ಣುಮಕ್ಕಳು ಅರಳೆಲೆ ಬಸವನನ್ನು ಎಲೆಯ ಮಂಟಪದಲ್ಲಿ ಸಿಂಗಾರ ಮಾಡಿ ಊರ ಮಠದಲ್ಲಿಟ್ಟು ಪೂಜೆ ಮಾಡಿ ಹಾಡು ಹೇಳುತ್ತಾರೆ.

ಒಟ್ಟಿನಲ್ಲಿ ಈ ಹಬ್ಬದ ಮೂಲ ಉದ್ದೇಶವೇ ಮಳೆಗಾಲ ಚೆನ್ನಾಗಿ ಆಗಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎನ್ನುವುದು. ಯಾಂತ್ರಿಕ ಬದುಕಿನಲ್ಲಿ ಹೊಸ ಪೀಳಿಗೆಯ ಮಕ್ಕಳಿಗೆ ಹಬ್ಬದ ಪರಿಕಲ್ಪನೆಯು ತಿಳಿಯುವುದು ಆವಶ್ಯಕವಾಗಿದೆ.

Leave a Reply

Your email address will not be published. Required fields are marked *

Back To Top