Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಶರಣರ ವಚನಸಾಹಿತ್ಯ

Thursday, 12.07.2018, 3:01 AM       No Comments

ಜನಸಾಮಾನ್ಯರಲ್ಲೂ ಹೊಸ ಚಿಂತನೆ, ಹುರುಪು ತುಂಬಿ ಆಧ್ಯಾತ್ಮಿಕ ಅನುಭೂತಿಯನ್ನು ಮೂಡಿಸಿದ್ದು ವಚನಸಾಹಿತ್ಯ. ಆದರೆ ಇಂದು ವಚನಸಾಹಿತ್ಯವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ, ಒಂದು ಪ್ರದೇಶಕ್ಕೆ ಕಟ್ಟಿಹಾಕುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ವಚನಸಾಹಿತ್ಯದ ಪರಿಶೀಲನಾತ್ಮಕ ನೋಟ ಇಲ್ಲಿದೆ.

| ಪ್ರಶಾಂತ್ ರಿಪ್ಪನ್​ಪೇಟೆ

ಕನ್ನಡಸಾಹಿತ್ಯಕ್ಕೆ ವಿಶ್ವಮಾನ್ಯತೆ ದೊರೆಯುವಲ್ಲಿ ವಚನ ಸಾಹಿತ್ಯದ ಪಾತ್ರ ಪ್ರಮುಖವಾಗಿದೆ. ಇದನ್ನು ಎಲ್ಲರೂ ಒಪ್ಪುತ್ತಾರೆ. ಕನ್ನಡಭಾಷೆ, ಸಂಸ್ಕೃತಿ, ಪರಂಪರೆ, ಧಾರ್ವಿುಕತೆ, ಜನಪದ, ವಿಡಂಬನೆ, ವಿಶ್ಲೇಷಣೆ, ಬೆಡಗು, ವೈರುಧ್ಯ – ಹೀಗೆ ಹಲವು ಪ್ರಕಾರಗಳಲ್ಲಿ ವಚನಗಳನ್ನು ನೋಡಬಹುದು. ವಚನಸಾಹಿತ್ಯ ಅತ್ಯಂತ ಶ್ರೇಷ್ಠ ಮತ್ತು ಜನಪ್ರಿಯವಾಗಲು ಇರುವ ಮುಖ್ಯ ಕಾರಣ; ಇದು ಅನುಭವ ಮತ್ತು ಅನುಭಾವದ ಸಮ್ಮಿಲನ!

ವಚನ ಎಂದಕೂಡಲೇ ನಮ್ಮ ಮನದ ಮುಂದೆ ಬರುವ ಚಿತ್ರ ಬಸವಣ್ಣನವರದ್ದು. ಬಸವಣ್ಣ ಈ ನಾಡು ಕಂಡ ಅತ್ಯಂತ ದೊಡ್ಡ ದಾರ್ಶನಿಕ, ಸಮಾಜಸುಧಾರಣೆಯ ಹರಿಕಾರ. ತಮ್ಮ ವಚನಗಳ ಮೂಲಕ ಸಮಾಜಕ್ಕೆ ಹೊಸತೊಂದು ಮಾರ್ಗ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ನೂರಾರು ವಚನಕಾರರ ಲಭ್ಯವಿರುವ ಸಾವಿರಾರು ವಚನಗಳ ಪೈಕಿ ಬಸವಣ್ಣನವರ ವಚನಗಳು ವಿಭಿನ್ನವಾಗಿ ನಿಲ್ಲುತ್ತವೆ. ಸಾಹಿತ್ಯದ ದೃಷ್ಟಿಯಿಂದ, ಅಧ್ಯಾತ್ಮದ ದೃಷ್ಟಿಯಿಂದ, ಸಮಾಜದ ಮೇಲಿನ ಕಳಕಳಿಯ ದೃಷ್ಟಿಯಿಂದಲೂ ಬಸವಣ್ಣನವರ ವಚನಗಳು ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತವೆ.

ವಚನಸಾಹಿತ್ಯದ ಅತ್ಯಂತ ಮುಖ್ಯ ಗುಣವೆಂದರೆ – ಅದರಲ್ಲಿ ಬರಹಗಾರನ ಅನುಭವವಿದೆ. ಜೊತೆಗೆ ಆತನ ಇಷ್ಟದೇವತೆಯೊಂದಿಗಿನ ಅನುಭಾವವಿದೆ. ಅನುಭವವು ನಿತ್ಯಜೀವನದಲ್ಲಿನ ಕಾಯಕ, ಕರ್ತವ್ಯಕ್ಕೆ ಸಂಬಂಧಿಸಿದ್ದರೆ; ಅನುಭಾವ ಭಗವಂತನೊಂದಿಗಿನ ಪಾರಮಾರ್ಥಿಕ ಸಂಬಂಧ ಮತ್ತು ಸಂವಹನಕ್ಕೆ ಸಂಬಂಧಿಸಿದ್ದು. ಇದರಲ್ಲಿ ಅತ್ಯಂತ ಸೂಕ್ಷ್ಮ ವಿಷಯವಿದೆ. ವಚನಕಾರರು ತಾವು ನಡೆದಂತೆ ನುಡಿದಿದ್ದಾರೆ, ನುಡಿದಂತೆ ನಡೆದಿದ್ದಾರೆ.

ಸ್ವಯಂ ಆಚರಿಸದೆ ಬೋಧಿಸುವ ಉಪದೇಶ

ನಿಗ್ರಹಿಸಿಕೊಳ್ಳದೆ ನುಡಿಯುವ ನೀತಿ,

ಸತ್ಯವಿಲ್ಲದೆ ಸಾರುವ ಸಿದ್ಧಾಂತ

ಭಕ್ತಿ ಇಲ್ಲದೆ ಹೇಳುವ ತತ್ವ

ಜ್ಞಾನವಿಲ್ಲದೆ ಬರೆಯುವ ಸಾಹಿತ್ಯ

ಇವುಗಳ ಧಿಕ್ಕರಿಸುವ ಧೈರ್ಯ ನೀಡೋ ಕಾನ್ ಮಲ್ಲೇಶ್ವರ ||

ವಚನಸಾಹಿತ್ಯ ರಚನೆಗೊಂಡು ಸುಮಾರು 900 ವರ್ಷಗಳು ಗತಿಸಿದ್ದರೂ ಅವು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ. ಯಾವುದೇ ಸಾಹಿತ್ಯದ ಆಯುಸ್ಸು ಮತ್ತು ಮೌಲ್ಯ ಹೆಚ್ಚಾಗುವುದಕ್ಕೆ ಅದರ ಪ್ರಸ್ತುತತೆಯೇ ಕಾರಣವಾಗಿರುತ್ತದೆ. ಅಂತಹ ಪ್ರಸ್ತುತತೆ ವಚನ ಸಾಹಿತ್ಯದ ಪ್ರಮುಖ ಮೌಲ್ಯ. ಎಲ್ಲ ಕಾಲ, ವರ್ಗ, ಪ್ರದೇಶಗಳಿಗೂ ಹೊಂದಿಕೆಯಾಗುವ ಸಾಹಿತ್ಯದ ಪ್ರತಿರೂಪ ವಚನಸಾಹಿತ್ಯ.

ಅನುಸಂಧಾನಕ್ಕೆ ವಚನಗಳೇ ವಾಹಿನಿ

ತಮ್ಮ ಸಾಹಿತ್ಯಪ್ರಕಾರವೇ ಅಂದಿನ ಮಟ್ಟಿಗೆ ಹೊಸದಾಗಿದ್ದು, ಅದನ್ನು ಜನಗಳ ಮುಂದಿಡುವುದಕಿಂತ ಹೆಚ್ಚಾಗಿ, ಅವರಿಗೆ ಇದ್ದಿದ್ದು ತಮ್ಮ ಮತ್ತು ಭಗವಂತನ ನಡುವಿನ ಸಂವಹನಕ್ಕೆ ವಚನಗಳ ಮೂಲಕ ಒಂದು ವಾಹಿನಿಯನ್ನು ಕಂಡುಕೊಂಡಿದ್ದರು ಎನಿಸುತ್ತದೆ. ಭಗವಂತನಿಗೆ ಕೇಳಬೇಕಾದ ಪ್ರಶ್ನೆಗಳನ್ನು, ಮಾಡಬೇಕಾದ ಅರಿಕೆಗಳನ್ನು, ನೀಡಬೇಕಾದ ಮನವಿಗಳನ್ನು, ತೋಡಿಕೊಳ್ಳಬೇಕಾದ ಕಷ್ಟಗಳನ್ನು, ಜೊತೆಗೆ ಹೊಂದಬೇಕಾದ ಅನುಸಂಧಾನವನ್ನೂ ವಚನಗಳ ಮೂಲಕ ಮಾಡಿದ್ದಾರೆ. ಇವೆಲ್ಲವೂ ವಚನಕಾರರ ಅನುಭಾವಕ್ಕೆ ಹಿಡಿದ ಕೈಗನ್ನಡಿ.

ವಚನಸಾಹಿತ್ಯದ ಮೂಲಕ ಶರಣರು ತಮ್ಮ ಬದುಕಿನ ಪ್ರತಿ ಹಂತವನ್ನು ವಿವರಿಸಿದ್ದಾರೆ. ಅಲ್ಲಿನ ಏಳುಬೀಳು, ಕಷ್ಟ-ಸುಖ, ನ್ಯಾಯ-ಅನ್ಯಾಯ, ವ್ಯವಸ್ಥೆ-ಅವ್ಯವಸ್ಥೆ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ನಮ್ಮ ಬದುಕಿಗೆ ಬೇಕಾದ ಅತ್ಯಂತ ಮೂಲಭೂತ ಅಂಶವನ್ನು ಕಂಡುಕೊಂಡಿದ್ದ ವಚನಕಾರರು; ಅದಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಅದರ ವಿರುದ್ಧ ಸೆಟೆದೆದ್ದು, ನಾವಿಂದು ಏನು ಬಂಡಾಯಸಾಹಿತ್ಯವೆಂಬ ಒಂದು ವಿಂಗಡಣೆಯನ್ನು ಗುರುತಿಸಿಕೊಂಡಿದ್ದೇವೋ ಅಂತಹ ಬಂಡಾಯದ ರೂಪವನ್ನು ಅಂದೇ ನೀಡಿದ್ದಾರೆ. ಹಾಗೆ ನೋಡಿದರೆ ವಚನಸಾಹಿತ್ಯದಲ್ಲಿ ಬಂಡಾಯ, ಶೋಷಿತರ ಧ್ವನಿ, ಕಾವ್ಯರೂಪದ ಶಿಷ್ಟಸಾಹಿತ್ಯ, ಛಂದೋಬದ್ಧ – ಹೀಗೆ ಎಲ್ಲ ರೀತಿಯ ಸಾಹಿತ್ಯದ ಪ್ರಕಾರಗಳು ಕೂಡ ವಚನಸಾಹಿತ್ಯದಲ್ಲಿ ಸಮ್ಮಿಲಿತಗೊಂಡಿವೆ.

ಶರಣ ಸಾಹಿತ್ಯ ಪರಿಷತ್ತಿನ ಶ್ರಮ

ಇಂತಹ ವಚನ ಸಾಹಿತ್ಯವನ್ನು ಇಂದು ಒಂದು ವರ್ಗಕ್ಕೆ ಸೀಮಿತಗೊಳಿಸುವ, ಒಂದು ಪ್ರದೇಶಕ್ಕೆ ಕಟ್ಟಿಹಾಕುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಅದರ ಪರಿಣಾಮವಾಗಿ ವಿಶ್ವ ಮಟ್ಟದಲ್ಲಿ ವಚನ ಸಾಹಿತ್ಯ ಪರಿಣಾಮಕಾರಿಯಾಗಿ ಜನರನ್ನು ತಲುಪಲು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಸುತ್ತೂರು ಸಂಸ್ಥಾನದ ಹಿರಿಯ ಶ್ರೀಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಕಳೆದ ಮೂವತ್ತು ವರ್ಷಗಳ ಹಿಂದೆಯೇ ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು’ ಹುಟ್ಟುಹಾಕಿ ಅದರ ಮೂಲಕ ಅನೇಕ ಅರ್ಥಗರ್ಭಿತ ಕಾರ್ಯಕ್ರಮ ನಡೆಯಲು ಬುನಾದಿ ಹಾಕಿದರು. ಇದನ್ನು ಸಮಸ್ತ ವಚನ ಸಾಹಿತ್ಯಾಭಿಮಾನಿಗಳು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಹಿರಿಯ ಶ್ರೀಗಳ ಆಶಯವನ್ನು ಪ್ರಸ್ತುತ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ವಚನ ಸಾಹಿತ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅದರಂತೆ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೊ.ರು. ಚನ್ನಬಸಪ್ಪ ಅವರ ಪರಿಶ್ರಮ ವಚನಸಾಹಿತ್ಯದ ಜನಪ್ರಿಯತೆಗೆ ಮತ್ತಷ್ಟು ಪೂರಕವಾಯಿತು ಎಂಬುದು ಅವಿಸ್ಮರಣೀಯ.

Leave a Reply

Your email address will not be published. Required fields are marked *

Back To Top