Friday, 16th November 2018  

Vijayavani

Breaking News

ಕಾನನದೊಳಗೆ ಜಲೋದ್ಭವ ಗಣಪತಿ

Thursday, 12.07.2018, 3:00 AM       No Comments

| ವೃಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ

ಮಲೆನಾಡಿನಲ್ಲಿ ಪ್ರಕೃತಿಸೌಂದರ್ಯದ ಮಧ್ಯೆ ಕಂಗೊಳಿಸುವ ಅನೇಕ ದೇವಾಲಯಗಳಿವೆ. ಪ್ರತಿಯೊಂದು ಕ್ಷೇತ್ರವೂ ತನ್ನದೇ ಆದ ವೈಶಿಷ್ಟ್ಯ ಮೂಲಕ ಭಕ್ತರನ್ನು ಆಕರ್ಷಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಕಸವೆ ಎಂಬಲ್ಲಿ ದಟ್ಟ ಕಾಡಿನ ಮಧ್ಯೆ ಶ್ರೀ ಕ್ಷೇತ್ರ ಕಮಂಡಲ ಗಣಪತಿ ದೇವಸ್ಥಾನವಿದೆ. ದೇವರ ಮೂರ್ತಿಯ ಚರಣಗಳಲ್ಲಿ ಜಲೋದ್ಭವವಾಗಿ ತೀರ್ಥದ ರೂಪದಲ್ಲಿ ನಿರಂತರವಾಗಿ ಹರಿಯುತ್ತಿದೆ. ಬ್ರಾಹ್ಮೀನದಿಯ ಉಗಮಸ್ಥಾನವೂ ಇದಾಗಿರುವುದು ಇಲ್ಲಿನ ವಿಶೇಷ.

ಕ್ಷೇತ್ರದ ಹಿನ್ನೆಲೆ: ಪುರಾಣಕಾಲದಲ್ಲಿ ಪಾರ್ವತಿದೇವಿಗೆ ಶನಿದಶೆಯು ಪ್ರಾರಂಭವಾಯಿತು. ಈ ಗ್ರಹಚಾರ ದೋಷಗಳಿಂದ ಮುಕ್ತಿ ಪಡೆಯಲು ಮೃಗವಧೆಯಲ್ಲಿ ತಪಸ್ಸು ಮಾಡುವಂತೆ ಶಿವನು ಪಾರ್ವತಿಗೆ ತಿಳಿಸಿದನಂತೆ. ತಪಸ್ಸಿಗೆ ಮೊದಲು ಸ್ನಾನ ಮಾಡಲು ಹಾಗೂ ಗಣಪತಿಯ ಪೂಜೆ ಮಾಡಲೆಂದು ಈ ದೇಗುಲವಿರುವ ಜಾಗದಲ್ಲಿದ್ದ ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ಬಂದಳಂತೆ. ಅಲ್ಲಿ ಪೂಜೆಗೆ ಮೊದಲು ಪಾರ್ವತಿಯ ಸ್ನಾನಕ್ಕಾಗಿ ಬ್ರಹ್ಮದೇವನು ಕಮಂಡಲದಿಂದ ನೀರು ಚಿಮುಕಿಸಿದ್ದು ತೀಥೋದ್ಭವವಾಯಿತು. ಅಂದಿನಿಂದ ಇಲ್ಲಿಯವರೆಗೂ ಇಲ್ಲಿ ನೀರು ಸದಾ ಜಿನುಗುತ್ತಿದ್ದು ಈ ಪುಣ್ಯಕ್ಷೇತ್ರವು ಬ್ರಾಹ್ಮೀನದಿಯ ಉಗಮಸ್ಥಾನವಾಗಿ ಹಾಗೂ ಗಣಪತಿಯ ಆರಾಧನೆಯ ಸ್ಥಾನವಾಗಿ ಪ್ರಸಿದ್ಧವಾಗಿದೆ. ಕಳೆದ ಮೂವತ್ತೈದು ವರ್ಷಗಳ ಹಿಂದೆ ದೇವಳದ ಜೀಣೋದ್ಧಾರ ಮಾಡಲಾಗಿದೆ.

ವೈಶಿಷ್ಟ್ಯಳ ತಾಣ: ಬಹಳ ಕಾರಣಿಕ ಗುಣವನ್ನು ಹೊಂದಿರುವ ಈ ದೇವಸ್ಥಾನದ ಮುಂಭಾಗದಲ್ಲಿ ಸಣ್ಣ ಕೊಳವಿದ್ದು ದೇವರ ಪಾದದ ಬಳಿ ಚಿಮ್ಮುವ ನೀರು ಹರಿದುಬಂದು ಇದರಲ್ಲಿ ಸಂಗ್ರಹವಾಗುತ್ತದೆ. ಗ್ರಹಚಾರಾದಿ ಯಾವುದಾದರೂ ದೋಷಗಳಿದ್ದವರು ಈ ತೀರ್ಥದಲ್ಲಿ ಸ್ನಾನವನ್ನು ಮಾಡಿದರೆ ದೋಷಗಳು ಪರಿಹಾರವಾಗುತ್ತವೆ. ಉತ್ತಮ ಆರೋಗ್ಯವನ್ನು ಕರುಣಿಸುವಂತೆ ದೇವರನ್ನು ಪ್ರಾರ್ಥಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ದೇವಸ್ಥಾನದ ಪಕ್ಕದಲ್ಲಿ ನವಗ್ರಹಗಳ ವಿಗ್ರಹಗಳಿದ್ದು ಹಿಂಭಾಗದಲ್ಲಿ ಹೋಮ, ಹವನಾದಿಗಳನ್ನು ನಡೆಸಲು ಯಾಗಶಾಲೆಯಿದೆ. ಕೊಳದ ಬಳಿಯಲ್ಲಿ ನಾಗಬನವಿದೆ.

ಪೂಜೆ, ಉತ್ಸವಗಳು: ಪ್ರತಿನಿತ್ಯ ಬೆಳಗ್ಗೆ ಅಭಿಷೇಕ ಪೂಜೆ, ಎರಡು ಹೊತ್ತು ಆರಾಧನೆ ನಡೆಯುತ್ತದೆ. ಗಣಪತಿಗೆ ಪಂಚಾಮೃತ ಅಭಿಷೇಕ ಮತ್ತು ಜೇನುತುಪ್ಪದ ಅಭಿಷೇಕ ವಿಶೇಷ ಸೇವೆಗಳು. ಸಂಕಷ್ಟಿ, ಗಣೇಶ ಚತುರ್ಥಿಯಂದು ವಿಶೇಷ ಅರ್ಚನೆ, ಪೂಜೆ ನಡೆಯುತ್ತಿದೆ. ಫಾಲ್ಗುಣ ಚೌತಿಯಂದು ವಾರ್ಷಿಕ ವರ್ಧಂತಿ ಪೂಜೆ ನಡೆಯುತ್ತಿದ್ದು ನಾಡಿನ ನಾನಾ ಕಡೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ.

ಬ್ರಾಹ್ಮೀ ನದಿಯ ಜೀವಸೆಲೆ: ಈ ದೇವಸ್ಥಾನದಲ್ಲಿ ತೀಥೋದ್ಭವವಾಗಿ ಬ್ರಾಹ್ಮೀನದಿ ಉಗಮಿಸಿದರೂ ಜನರು ಇಲ್ಲಿ ಅದಕ್ಕೆ ಮುಸುರೆಹಳ್ಳ ಎಂದೇ ಕರೆಯುತ್ತಾರೆ. ಇಲ್ಲಿಂದ ಹದಿನೆಂಟು ಕಿ.ಮೀ. ದೂರದಲ್ಲಿರುವ ಮೃಗವಧೆ ಎಂಬ ಸ್ಥಳದಿಂದ ಈ ನದಿಯು ‘ಬ್ರಾಹ್ಮೀ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ರಾಮನು ಮಾರೀಚನೆಂಬ ರಾಕ್ಷಸನನ್ನು ಕೊಂದ ಸ್ಥಳವೇ ಮುಂದೆ ಮೃಗವಧೆ ಎಂಬ ಹೆಸರಿನಿಂದ ಖ್ಯಾತಿಯಾಯಿತು. ಇಲ್ಲಿನ ಮರದ ಕೆಳಗೆ ಪಾರ್ವತಿಯು ತಪಸ್ಸು ಕೈಗೊಂಡಿದ್ದರಿಂದ ‘ಮರವಸೆ’ ಎಂದೂ ಕರೆಯಲಾಗುತ್ತಿದೆ.

ಕ್ಷೇತ್ರಕ್ಕೆ ಹೀಗೆ ಬನ್ನಿ

ಕೊಪ್ಪ ಬಸ್ಸು ನಿಲ್ದಾಣದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ ಈ ದೇವಸ್ಥಾನ. ಕೊಪ್ಪದಿಂದ ಮೃಗವಧೆಗೆ ತೆರಳುವ ರಸ್ತೆಯಲ್ಲಿ ಸಿದ್ದರಮಠ ಎಂಬಲ್ಲಿ ಬಲಬದಿಗೆ ಕಚ್ಚಾ ರಸ್ತೆಯಿದ್ದು ಅಲ್ಲಿಂದ ಅರ್ಧ ಕಿ.ಮೀ. ಪ್ರಯಾಣಿಸಿದರೆ ದೇವಳವನ್ನು ತಲುಪಬಹುದು. ಕೊಪ್ಪದಿಂದ ಮೃಗವಧೆಗೆ ನಿಗದಿತ ವೇಳೆಯಲ್ಲಿ ಮಾತ್ರ ಖಾಸಗಿ ಬಸ್ಸುಗಳ ಸೌಕರ್ಯವಿದೆ. ಕೊಪ್ಪದಿಂದ ಬಾಡಿಗೆ ರಿಕ್ಷಾದಲ್ಲೂ ಹೋಗಬಹುದಾಗಿದೆ.

Leave a Reply

Your email address will not be published. Required fields are marked *

Back To Top