Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಹೆಮ್ಮರಗಾಲದ ಸಂತಾನ ವೇಣುಗೋಪಾಲ

Thursday, 12.07.2018, 3:00 AM       No Comments

| ಹೇಮಮಾಲಾ ಬಿ.

ಬಹಳ ಹಿಂದೆ ನಂಜನಗೂಡಿನ ಬಳಿ ರಾಜ್ಯವಾಳುತ್ತಿದ್ದ ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ ಸ್ವಪ್ನದಲ್ಲಿ ವೇಣುಗೋಪಾಲಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದುಬೀಳುವುದೆಂದೂ, ಆ ಸ್ಥಳದಲ್ಲಿ ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ. ಕನಸಿನಂತೆಯೇ ಘಟನೆಗಳು ನಡೆದು ಮೂರ್ತಿ ಪ್ರತಿಷ್ಠಾಪಿತವಾಯಿತು. ಅದೇ ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿರುವ ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯ.

ಸಂತಾನಗೋಪಾಲನಾದ ಕೃಷ್ಣ

ಈಗಿನ ಹೆಮ್ಮರಗಾಲದಲ್ಲಿ ಗಂಗರಸನಿಂದ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತಷ್ಟೆ. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ ದೇವಸ್ಥಾನವನ್ನು 13ನೇ ಶತಮಾನದಲ್ಲಿ ಕಟ್ಟಲಾಯಿತು. ಗರ್ಭಗುಡಿಯಲ್ಲಿರುವ ಕೊಳಲನ್ನೂದುತ್ತಿರುವ ವೇಣುಗೋಪಾಲನ ವಿಗ್ರಹವು ತುಂಬ ಸುಂದರವಾಗಿದೆ. ಈ ದೇವರ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ. ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿವೆ.

ಹುಚ್ಚು ಗೋಪಾಲ ನಾಮಧೇಯ!: ಇದಲ್ಲದೆ ಈ ಸ್ವಾಮಿಗೆ ‘ಹುಚ್ಚು ಗೋಪಾಲ’ ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ 12 ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರಾಕಾಂಕ್ಷಿಯಾಗಿ ವೇಣುಗೋಪಾಲನನ್ನು ಭಕ್ತಿಯಿಂದ ಪೂಜಿಸಿದರೂ ಆತನ 13ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿದರು. ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡುಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು ‘ಹುಚ್ಚು ಗೋಪಾಲ’ನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.

ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ ಕೌಂಡಿನ್ಯ ಮಹರ್ಷಿಗಳ ದಂಡ. ನಂಬಿಕೆಯ ಪ್ರಕಾರ, ಇಲ್ಲಿ ವಾಸವಾಗಿದ್ದ ಕೌಂಡಿನ್ಯ ಋಷಿಗಳು ಸದ್ಗತಿ ಹೊಂದುವ ಸಮಯದಲ್ಲಿ ತಪಶ್ಶಕ್ತಿಯನ್ನು ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ ‘ದಂಡದರ್ಶನಂ ಪಾಪನಾಶನಂ, ದಂಡಸ್ಪರ್ಶನಂ ಪುಣ್ಯವರ್ಧನಂ’. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತ್ತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ರ್ಸ³ಸುತ್ತಾರೆ. ಶನಿವಾರ ಹಾಗೂ ಭಾನುವಾರ ಬೆಳಗ್ಗೆ

6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ದಂಡ ಸ್ಪರ್ಶನ ಮಾಡಲು ಅವಕಾಶವಿರುತ್ತದೆ.

ಹೆಮ್ಮರಗಾಲದ ದಾರಿ: ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಹೊರಟು ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಾದರೆ ದೇವಸ್ಥಾನದವರೆಗೂ ಹೋಗಬಹುದು. ಹಳ್ಳಿಯ ಮಾರ್ಗದಲ್ಲಿ ಸುಮಾರು ಐದು ಕಿ.ಮೀ. ಪ್ರಯಾಣಿಸಬೇಕು.

Leave a Reply

Your email address will not be published. Required fields are marked *

Back To Top