ಸ್ಟ್ರಾಂಗ್ ಆಗೋದು ಹೆಂಗೆ ಗೊತ್ತಾ ಮಕ್ಕಳೇ?

ಸೆಪ್ಟೆಂಬರ್ 1ರಿಂದ 7ರವರೆಗೆ ಭಾರತದಾದ್ಯಂತ ರಾಷ್ಟ್ರೀಯ ಪೋಷಣಾ ದಿನ (ನ್ಯಾಷನಲ್ ನ್ಯೂಟ್ರಿಷನ್ ವೀಕ್)ಆಚರಿಸಲಾಗುತ್ತದೆ.ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬುದರಲ್ಲೇ ಮನುಷ್ಯನ ದೈಹಿಕ ಸಬಲತೆಯ ಗುಟ್ಟು ಅಡಗಿದೆ. ಇದನ್ನು ಮಕ್ಕಳಿದ್ದಾಗಲೇ ಅಭ್ಯಾಸ ಮಾಡಿಬಿಟ್ಟರಂತೂ ರೋಗಗಳು ಹತ್ತಿರ ಸುಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳ ಅರಿವು ಹೆಚ್ಚಿಸುವುದಕ್ಕೋಸ್ಕರ ಇದೊಂದು ಆಪ್ತ ಬರಹ.

| ಡಾ. ಪೂರ್ಣಿಮಾ ಶಶಿಧರ್ ಬಾವಿ

ಮಗಳು ‘ರಿಧಿ’ಯ ಶಾಲೆಯಲ್ಲಿ ಮೊನ್ನೆ ಪಾಲಕರ ಕ್ರೀಡಾಕೂಟ ಇತ್ತು. ಪ್ರತಿ ವರ್ಷದಂತೆ ನಾನು ಕೂಡ ಹಾಗೆ ಹೋಗಿ, ಹೀಗೆ ಬಂದು ಬಿಡೋ ನೇಮ ಮಾಡ್ತಿದ್ದೆ. ಆದ್ರೆ ಈ ಬಾರಿ ಮಗಳು ಜೋರು ಮಾಡಿದಳು. ‘‘ಅಮ್ಮಾ ನೀ ಯಾವಾಗ್ಲೂ ಬರ್ತೀಯಾ, ಹಾಗೇ ಹೊರಟು ಹೋಗ್ತೀಯ, ಆಡೋದೇ ಇಲ್ಲ, ನನ್ನ ಫ್ರೆಂಡ್ಸ್ ಅಪ್ಪ-ಅಮ್ಮ ಬಂದು ಆಟ ಆಡಿ ಪ್ರೖೆಜ್ ಗೆಲ್ತಾರೆ. ಈ ಸಲ ನೀ ಬಂದು ಆಟ ಆಡಿ ಪ್ರೖೆಜ್ ಗೆಲ್ಲಲೇ ಬೇಕು. ನನ್ನ ಫ್ರೆಂಡ್ಸ್ ಹತ್ರ ಚಾಲೆಂಜ್ ಮಾಡಿದೀನಿ. ಪ್ಲೀಸ್… ಮಾ…’’ ಅಂತ ಗೋಗರೆದಳು. ಆಗ ನನ್ನ ಮೇಲೆ ನನಗೇ ಒಂದು ಕ್ಷಣ ಬೇಜಾರಾಯ್ತು. ‘‘ಸಾರಿ ಪುಟ್ಟಿ… ನನ್ನ ಕೆಲ್ಸಕ್ಕೆ ರಜೆ ಹಾಕಿ, ಪೂರ್ತಿ ದಿವಸ ನಿಮ್ಮ ಶಾಲೆಯಲ್ಲೇ ನಿನ್ನ ಜತೆ ಇರ್ತೀನಿ’’ ಅಂತ ಹೇಳಿದೆ. ಹಾಗೆ ಹೇಳಿದ್ದೇ ತಡ, ಇಷ್ಟಗಲ ಮುಖವರಳಿಸಿ ಜಿಂಕೆಮರಿ ತರಹ ಓಡಿ ಹೋದಳು. ಆ ದೃಶ್ಯವನ್ನ ಕಣ್ತುಂಬಿಕೊಳ್ಳೋದೆ ಚೆಂದ ಅನ್ನಿಸಿತು.

ಅಂದಿನ ಕ್ರೀಡಾಕೂಟದ ದಿನ ಬಹುತೇಕ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಕೆಲವದರಲ್ಲಿ ಬಹುಮಾನ ಗಿಟ್ಟಿಸಿ, ಮಗಳ ಮಾತು ಉಳಿಸಿದ್ದಾಯ್ತು. ಹೀಗೆ ವಿರಾಮದ ವೇಳೆ ಎಲ್ಲ ಪಾಲಕರು ಒಂದೆಡೆ ಕೂತಿದ್ವಿ, ಗೌರಕ್ಕನ ಮಗಳು ಸಾಕ್ಷಿ 4ನೇ ತರಗತಿ ಓದ್ತಾ ಇದಾಳೆ. ಸಾಕ್ಷಿ ಬಂದು ಅವರ ಅಮ್ಮನ ಹತ್ರ 2 ಚಿಪ್ಸ್ ಪಾಕೆಟ್ ತಗೊಂಡ್ಲು, ತಿಂದ್ಲು. ನಂತರ 1 ಬಿಸ್ಕೆಟ್ ಪ್ಯಾಕ್ ಖಾಲಿ ಮಾಡಿದ್ಲು. ಅದಾದ ನಂತರ ಚಾಕಲೇಟ್ ಚೀಪಲು ಪ್ರಾರಂಭ ಮಾಡಿದ್ಲು, ನಂತ್ರ 2 ತುಂಡು ಕೇಕ್… ಹೀಗೆ ಅವಳ ತಿನ್ನೋ ಆಟ ಭರದಿಂದ ಸಾಗಿತ್ತು. ಬಹಳ ಹೊತ್ತಿನಿಂದ ಅವಳನ್ನೇ ಗಮನಿಸ್ತಾ ಇದ್ದ ನಾನು ಆಶ್ಚರ್ಯದಿಂದ ‘‘ಏನ್ರಿ ಗೌರಕ್ಕ, ಇಡೀ ಅಂಗಡಿನೇ ಮನೆಗೆ ತಂದ್ಹಾಂಗಿದೆ. ಅಷ್ಟೊಂದು ಕೊಡ್ತಾ ಇದೀರಲ್ಲ, ಅವಳ ಹೊಟ್ಟೆ ಹಾಳಾಗಲ್ವ?’’ ಅಂತ ಕೇಳಿದೆ. ‘‘ಅಯ್ಯೋ ನಾನೇನ್ ದಿನಾ ಕೊಡಲ್ಲಪ್ಪಾ, ವಾರದಲ್ಲಿ 3-4 ಸಲ ಈ ರೀತಿ ತಿಂತಾಳೆ ಅಷ್ಟೆ. ಮಕ್ಕಳಿಗೂ ಚೇಂಜ್ ಬೇಕಲ್ವೇನ್ರಿ?’’ ಅಂದರು. ಅವರು ಹಾಗೆ ಹೇಳೋವಾಗ್ಲೆ ಗೀತಾ ಅವರ ತಾಯಿ ತಮ್ಮ ಮಾತನ್ನು ಸೇರಿಸಿದ್ರು, ‘‘ಹೌದು ರೀ.. ನನ್ನ ಮಗನಿಗೆ ಕ್ಯಾರೆಟ್, ಕಾಳು ದಿನಾ ತಿನ್ನಬೇಕು ಅಂತ ಹೇಳಿದೀನಿ, ಅದಕ್ಕೆ ಅವನು ತಿನ್ನಲ್ಲಾ ಅಂದಾಗ 1 ಕ್ಯಾರೆಟ್, ಚಿಪ್ಸ್ ಪ್ಯಾಕೆಟ್ ಅಂತ ಹೇಳಿದ್ದೆ ತಡ ಎಲ್ಲ ಖಾಲಿ ಮಾಡ್ತಾನೆ. ಒಂದು ಚಾಕಲೇಟ್​ಗೆ 1 ಸಣ್ಣ ಕಪ್ ಕಾಳು ಹೀಗೆ ರೂಲ್ಸ್ ಮಾಡಿದೀನಿ ಮಕ್ಕಳ ಆರೋಗ್ಯ ಚೆನ್ನಾಗಿರಬೇಕಲ್ವಾ?’’ ಅಂತ ನನ್ನ ಕಡೆ ಪ್ರಶ್ನೆ ಎಸೆದು ಉತ್ತರಕ್ಕೂ ಕಾಯದೆ, ಬ್ಯಾಗಿನಲ್ಲಿದ್ದ ಚಿಪ್ಸ್ ಗಾಗಿ ತಡಕಾಡ್ತಾ ಇದ್ರು.

ಇತ್ತ ಮಗಳು ನನ್ನನ್ನೇ ನೋಡ್ತಾ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳ ಮೂಟೆಗಳನ್ನು ಹೊತ್ತು ಮನೆಗೆ ಹೋಗೋದನ್ನೇ ಕಾಯ್ತಾ ಇದ್ಲು. ಮನೆಗೆ ಬಂದದ್ದೆ ತಡ ಶುರು ಮಾಡಿದ್ಲು, ‘‘ನೋಡಮ್ಮ ಸಾಕ್ಷಿ ಅವರಪ್ಪ ಡಾಕ್ಟರ್ ಆದ್ರೂ ಅವು› ಚಿಪ್ಸ್, ಚಾಕಲೇಟ್ ಎಲ್ಲ ತಿನ್ನೋಕೆ ಬಿಡ್ತಾರೆ. ನೀ ಮಾತ್ರ ಜಾಸ್ತಿ ಕೊಡೋದೆ ಇಲ್ಲ? ಚಿಪ್ಸ್ ಆಲೂಗಡ್ಡೆಯಿಂದ ಮಾಡ್ತಾರೆ, ಬಿಸ್ಕೆಟ್ ಗೋಧಿಯಿಂದ ಮಾಡ್ತಾರೆ. ಆಲೂಗಡ್ಡೆ, ಗೋಧಿ ಅವೂ ಫುಡ್ ತಾನೆ, ಆದ್ರೂ ಯಾಕೆ ತಿನ್ನಬಾರದು? ಅವೆಲ್ಲ ತಿಂದ್ರೆ ಏನಾಗುತ್ತೆ? ಜೂಸ್ ಪ್ಯಾಕೆಟ್ ಮೇಲೆ, ಚಿಪ್ಸ್ ಪ್ಯಾಕೆಟ್ ಮೇಲೆ ಎನರ್ಜಿ ಫುಡ್, ಎನರ್ಜಿ ಡ್ರಿಂಕ್ ಅಂತೆಲ್ಲ ಬರದಿರ್ತಾರೆ, ಎನರ್ಜಿ ಸಿಗುತ್ತೆ ಅಂದ್ರೆ ಅದು ಒಳ್ಳೇದೆ ಅಲ್ವಾ?’’

ಹೀಗೆ ಹತ್ತು ಹಲವು ಪ್ರಶ್ನೆಗಳ ಬಾಣಗಳು ಒಂದರ ಹಿಂದೊಂದು ಬರತೊಡಗಿದವು. ಈ 4ರಿಂದ 12 ವರ್ಷದೊಳಗಿನ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದೇ ಒಂದು ಸವಾಲು. ಅದ್ರಲ್ಲೂ ಆಹಾರ ವಿಚಾರದಲ್ಲಂತೂ ಇನ್ನೂ ಕಷ್ಟ. ಈ ಪ್ರೊಟೀನ್, ಕ್ಯಾಲ್ಸಿಯಂ, ಐರನ್, ಝಿಂಕ್, ವಿಟಮಿನ್ ನಮ್ಮ ದೇಹಕ್ಕೆ ಬೇಕು ಮಕ್ಕಳೇ. ಅದಕ್ಕೆ ತರಕಾರಿ, ಸೊಪು್ಪ ತಿನ್ನಬೇಕು ಅಂತ ಭಾಷಣ ಹೇಳಿದ್ರೆ, ಕೇಳುವ, ಕೇಳಿದ್ದನ್ನ ಅರ್ಥ ಮಾಡಿಕೊಳ್ಳುವ ವಯಸ್ಸು ಅವರದಲ್ಲ. ಅವಕ್ಕೆ ರುಚಿ ಬೇಕಷ್ಟೆ. ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ನಮ್ಮ ಆರೋಗ್ಯವನ್ನೆ ಮಾರಾಟ ಮಾಡಹೊರಟಿರುವ ಅಸಂಖ್ಯ ಕಂಪನಿಗಳ ಬಗ್ಗೆ ಮಕ್ಕಳಿಗೆ ಅರ್ಥೈಸುವುದು ಬಹುಕಷ್ಟದ ಕೆಲಸ. ಆ ಕ್ಷಣಕ್ಕೆ ಖಲೀಲ್ ನಿಬ್ರಾನ್ ಮಾತು ಕಣ್ಮುಂದೆ ಬಂತು. ‘‘ನಿಮ್ಮ ಮಕ್ಕಳಿಗೆ ನಿಮ್ಮ ಪ್ರೀತಿ ಕೊಡಿ, ನಿಮ್ಮ ಆಲೋಚನೆಗಳನ್ನಲ್ಲ. ಏಕೆಂದರೆ ಅವರಿಗೆ ಸ್ವಂತ ಆಲೋಚನೆಗಳಿವೆ.’’ ಸಾಧ್ಯವಾದಷ್ಟೂ ಮಕ್ಕಳಿಗೆ ಉತ್ತಮ ಆಹಾರಾಭ್ಯಾಸ, ಪೋಷಕಾಂಶಗಳ ಮಹತ್ವ, ಅವುಗಳ ಅವಶ್ಯಕತೆಗಳ ಬಗ್ಗೆ ಅರಿವನ್ನು ಮೂಡಿಸಬೇಕೆ ಹೊರತು, ಅದು ತಿನ್ನಬೇಡ, ಇದು ತಿನ್ನಬೇಡ ಎಂದು ಹೇಳೋದ್ರಲ್ಲಿ ಅರ್ಥವಿಲ್ಲವೆನಿಸಿತು.

ಇತ್ತ ಮಗಳಿಗೆ ಕೇಳ್ದೆ. ‘‘ಪುಟ್ಟಿ, ನಿಂಗೆ ನೀನು ಅಂದ್ರೆ ಇಷ್ಟನಾ?’’. ಅವಳ ಮುಖದಲ್ಲೊಂದು ಪ್ರಶ್ನಾರ್ಥಕ ಚಿಹ್ನೆ ಮೂಡಿ ‘‘ಅಯ್ಯೋ ಹೂಂ..ಮಾ..’’ ಅಂದ್ಲು. ‘‘ಸರಿ ನೀನು ದೊಡ್ಡವಳಾದ ಮೇಲೆ ಕುಸ್ತಿ ಪಟು ಗೀತಾ ಪೊಗಟ್ ಥರ ಆಗಬೇಕು ಅಂತ ಅಂತಿದ್ದೆ ಅಲ್ವಾ? ಆ ಆಸೆ ಇನ್ನೂ ಇದೆಯಾ?’’ ಅಂತ ಕೇಳ್ದೆ. ಅವ್ಳು ‘‘ಓ ಮತ್ತೆ… ಕುಸ್ತಿ ಅಷ್ಟೇ ಅಲ್ಲ. ಎಲ್ರೂನೂ ಸೋಲ್ಸಿ, ಎಲ್ರಿಗಿಂತ ಸ್ಟ್ರಾಂಗ್ ಆಗಬೇಕು’’ ಅಂದ್ಳು. ‘‘ಹಾಗಾದ್ರೆ ಅವರೆಲ್ಲ ಏನೇನು ಊಟ ಮಾಡ್ತಾರೆ, ಎಷ್ಟು ಲೀಟರ್ ನೀರು ಕುಡೀತಾರೆ ಅಂತ ತಿಳುಕೊಂಡಿದೀಯಾ?’’ ಅಂದೆ. ‘‘ಹಾಂ ಸ್ವಲ್ಪ ಸ್ವಲ್ಪ ಗೊತ್ತು, ಅಷ್ಟೆ’’ ಅಂದಳು. ‘‘ಹಾಗಾದ್ರೆ ಚಿಕ್ಕದಾಗಿ ನಿನ್ನ ದೇಹಕ್ಕೆ ಏನು ಬೇಕು, ಏನು ಬೇಡ ಅಂತ ಹೇಳ್ತೆನೆ ಕೇಳು’’ ಅಂದೆ. ಸರಿ ಎಂದು ಕಣ್ಣರಳಿಸಿದಳು.

ಒಂದು ಮನೆಗೆ ಬುನಾದಿ, ನಾಲ್ಕು ಕಂಬಗಳು ಹೇಗೆ ಮುಖ್ಯನೋ ಹಾಗೆ ನಮ್ಮ ದೇಹಕ್ಕೆ ಕೆಲವು ಪೋಷಕಾಂಶಗಳೂ ಅಷ್ಟೇ ಮುಖ್ಯ. ಅದ್ರಲ್ಲೂ ಪ್ರೊಟೀನ್, ಕಾರ್ಬೆಹೈಡ್ರೇಟ್, ಕ್ಯಾಲ್ಸಿಯಂ, ಐರನ್, ವಿಟಮಿನ್ ಹಾಗೂ ಸಾಕಷ್ಟು ನೀರು ಬೇಕೇಬೇಕು.

ಪ್ರೊಟೀನ್: ಇದು ಏನು ಕೆಲ್ಸ ಮಾಡುತ್ತಪ್ಪ ಅಂದ್ರೆ ನಿನ್ನ ಬಾಡಿನ ಗಟ್ಟಿಯಾಗಿರೋಕೆ ಹೆಲ್ಪ್ ಮಾಡುತ್ತೆ. ಅಕಸ್ಮಾತ್ ಬಿದ್ದು ಏಟಾದಾಗ, ನೋವಾಗ್ದೆ ಇರೋ ಥರ ತಡಿಯುತ್ತೆ. ಇದು ಬೇಳೆಕಾಳು, ಬೇಳೆ, ಮೊಟ್ಟೆ, ಮಾಂಸದಲ್ಲಿ ಜಾಸ್ತಿ ಇರುತ್ತೆ.

ಕಾರ್ಬೆಹೈಡ್ರೇಟ್: ನೀನು ಎಷ್ಟೇ ಆಟ ಆಡಿದ್ರೂ ಸುಸ್ತು ಆಗಬಾರದು ಅಲ್ವಾ? ಅದಕ್ಕೆ ಇದು ನಿಂಗೆ ಎನರ್ಜಿ ಕೊಡುತ್ತೆ. ಅನ್ನ ಗೋಧಿ ಬ್ರೆಡ್, ಆಲೂ, ಬಾಳೆಹಣ್ಣು ಇದರಲ್ಲಿ ಜಾಸ್ತಿ ಇರತ್ತೆ.

ಕ್ಯಾಲ್ಸಿಯಂ: ನಿನ್ನ ಫ್ರೆಂಡ್ ಸಾಕ್ಷಿ ಪದೇ ಪದೆ ಬಿದ್ದು ಕೈಕಾಲು ಮುರುಕೋತಾಳೆ. ಆದ್ರೆ ಅವಳು ಏನೇನೆಲ್ಲ ಚೆನ್ನಾಗಿ ತಿಂತಾಳೆ. ಆದ್ರೂ ಸ್ಟ್ರಾಂಗ್ ಇಲ್ಲ. ಯಾಕೆ ಹೇಳು? ಅವಳು ತಿನ್ನೋ ಚಿಪ್ಸ್, ಚಾಕಲೇಟ್​ಗಳಲ್ಲಿ ಕ್ಯಾಲ್ಸಿಯಂ ಇರಲ್ಲ. ಆರ್ಟಿಫಿಶಿಯಲ್ ಕಲರ್ಸ್ ಬೇರೆ ಹಾಕಿರ್ತಾರೆ. ಒಳ್ಳೆ ಎಣ್ಣೆಯಲ್ಲಿ ಕರಿದಿರೋಲ್ಲ, ಮತ್ತೆ ಕೆಡಬಾರ್ದು ಅಂತ ಪ್ರಿಸರ್ವೆಟಿವ್ಸ್ ಹಾಕಿರ್ತಾರೆ. ಇದ್ಯಾವುದೂ ದೇಹಕ್ಕೆ ಒಳ್ಳೇದಲ್ಲ. ಕ್ಯಾಲ್ಸಿಯಂ ಇರೋ ಊಟ ತಿಂದ್ರೆ ನಿನ್ನ ಮೂಳೆ, ಹಲ್ಲು, ಕೂದಲು ಚೆನ್ನಾಗಿ ಆರೋಗ್ಯವಾಗಿರುತ್ತವೆ. ಇದು ಹಾಲು, ಮೊಸರು, ಬೆಣ್ಣೆ, ಮೊಟ್ಟೆ, ರಾಗಿ, ನುಗ್ಗೆಕಾಯಿ ತಿನ್ನೋದ್ರಿಂದ ಕ್ಯಾಲ್ಸಿಯಂ ಸಿಗುತ್ತೆ.

ಐರನ್: ನಿಂಗೆ ಪದೇಪದೆ ಜ್ವರ, ಕೆಮ್ಮು, ಸುಸ್ತು, ನೆಗಡಿ ಯಾಕಾಗಲ್ಲ ಹೇಳು? ಯಾಕಂದ್ರೆ ನಿನ್ನ ರಕ್ತದಲ್ಲಿ ಐರನ್ ಅಂಶ ಚೆನ್ನಾಗಿದೆ ಅಂತ ಅರ್ಥ. ದಿನಾಲೂ ನೀನು ರಾಗಿ, ಗಂಜಿ, ತರಕಾರಿ, ಸೊಪ್ಪು, ತಿಂತೀಯಲ್ಲ ಅದಕ್ಕೆ ನೀನು ಸ್ಟ್ರಾಂಗ್ ಆಗಿ ಇರೋದು.

ಇನ್ನು ದಿನಾಲೂ ಸ್ನಾನ ಮಾಡಿ ಸ್ವಚ್ಛವಾಗಿ ಇರ್ತೀಯಲ್ಲ ಹಾಗೆ ನಿನ್ನ ದೇಹದ ಒಳಗೂ ಸ್ನಾನ ಮಾಡಿಸಬೇಕು ಗೊತ್ತಾ? ಅಂದೆ. ಅವ್ಳು ‘‘ಅಯ್ಯೋ ಅಮ್ಮ ಬಾಡಿ ಒಳಗಡೆ ಸ್ನಾನಾನಾ? ಏನಿದು?’’ ಅಂದ್ಳು. ‘‘ಹೌದು ಪುಟ್ಟಿ, ನೀನು ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಒಳಗೆ ಇರೋ ಕಲ್ಮಷ ಅಂದ್ರೆ ಡರ್ಟಿ ಥಿಂಗ್ಸ್ ಎಲ್ಲ ಮೂತ್ರದ ಮುಖಾಂತರ ಹೊರ ಹೋಗುತ್ತೆ. ಅದಕ್ಕೆ ಶಾಲೆಯಲ್ಲೂ, ಮನೆಯಲ್ಲೂ ಚೆನ್ನಾಗಿ ನೀರು ಕುಡಿಯಬೇಕು, ಗೊತ್ತಾಯ್ತಾ?’’ ಎಂದೆ. ಅವ್ಳು ಓಹೋ ಹೌದಾ ಎನ್ನುತ್ತ ಹೂಂ ಗುಟ್ಟಿದಳು.

ನಿಂಗೆ ನೆನಪಿದೆಯಾ? ಅಜ್ಜಿ ಚಾಕಲೇಟ್ ಬದಲಾಗಿ ಯಾವಾಗಲೂ ಶೇಂಗಾ ಚಿಕ್ಕಿ, ಎಳ್ಳುಂಡೆ, ಹೆಸರುಬೇಳೆ ಉಂಡೆ ಮಾಡಕೊಂಡು ಬರೋರು. ಅದರಲ್ಲಿ ನಾ ಹೇಳಿದ ಕ್ಯಾಲ್ಸಿಯಂ, ಪ್ರೊಟೀನ್ಸ್ ಎಲ್ಲ ಸಖತ್ ಆಗಿ ಇರುತ್ತೆ. ಅದಕ್ಕೆ ಆಗಿನ ಕಾಲದ ಅಜ್ಜ, ಅಜ್ಜಿ ಯಾಕೆ ಸ್ಟ್ರಾಂಗ್ ಅಂದ್ರೆ ಹೊರಗಿನ ತಿಂಡಿ, ಊಟಗಳ ಬಗ್ಗೆ ಗಮನ ಕೊಡದೆ, ಮನೆಯಲ್ಲಿ ತಯಾರಿಸಿದ್ದ ಊಟ ಮಾಡ್ತಾ, ಗಟ್ಟಿಯಾಗಿರೋದು. ಅದಕ್ಕೆ ಕಾಳು, ತರಕಾರಿ, ಸೊಪ್ಪು ಚೆನ್ನಾಗಿ ತಿಂದ್ರೆ ನೀನು ಅವರಿಗಿಂತ ಸ್ಟ್ರಾಂಗ್ ಆಗ್ತೀಯಾ. ಯಾವಾಗನಾದ್ರೂ ಬೇಜಾರಾದಾಗ ಚಿಪ್ಸ್, ಚಾಕಲೇಟ್ ತಿಂದ್ರೂ ಪರವಾಗಿಲ್ಲ. ಆದರೆ ನೆನಪಿರಲಿ, ಅದೇ ಊಟವಾಗಬಾರದು, ಪದೇಪದೆ ಅದನ್ನೇ ತಿನ್ನೋ ರೂಢಿ ಆಗಬಾರದು ಅಂದೆ.

ನನ್ನ ಮಾತು ಮುಗಿಯೊದರೊಳಗಡೆ ಅಮ್ಮಾ ನಾನು ನಾಳೆ ನನ್ನ ಬೇರೆ ಫ್ರೆಂಡ್ಸ್​ಗೂ ಹೇಳ್ತೇನೆ. ಪ್ಯಾಕ್ಡ್​ಫುಡ್ ಒಳ್ಳೇದಲ್ಲ, ಜಾಸ್ತಿ ತಿನ್ನಬೇಡಿ ಅಂತ ಎಂದಾಗ್ಲಂತೂ ಇಷ್ಟು ಹೇಳಿದ್ದಕ್ಕೂ ಸಾರ್ಥಕವಾಯ್ತು ಎನಿಸಿತು.